Site icon Vistara News

ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಪಾಲಿಕೆಯಿಂದ ಅನುಮತಿ

ಹುಬ್ಬಳ್ಳಿ

ಹುಬ್ಬಳ್ಳಿ: ನಗರದ ಈದ್ಗಾ‌ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಅವಕಾಶ ನೀಡಲಾಗಿದೆ ಎಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮೇಯರ್ ಈರೇಶ ಅಂಚಟಗೇರಿ ತಿಳಿಸಿದ್ದಾರೆ.

ಗಣೇಶ ಪ್ರತಿಷ್ಠಾಪನೆಗೆ ಅನುಮತಿಗಾಗಿ ಒಟ್ಟು 6 ಹಿಂದೂ ಸಂಘಟನೆಗಳಿಂದ ಮನವಿ ಸಲ್ಲಿಕೆಯಾಗಿತ್ತು. ಈ ಹಿನ್ನೆಲೆಯಲ್ಲಿ ಸದನ ಸಮಿತಿಯನ್ನು ರಚನೆ ಮಾಡಲಾಗಿತ್ತು. ಸಮಿತಿ ಗಣೇಶ ಪ್ರತಿಷ್ಠಾಪನೆ ಅವಕಾಶ ಮಾಡಿಕೊಡುವಂತೆ ವರದಿ‌ ನೀಡಿದೆ. ಹೀಗಾಗಿ ಗಜಾನನ ಉತ್ಸವ ಸಮಿತಿಗೆ ಮೂರ್ತಿ ಪ್ರತಿಷ್ಠಾಪಿಸಲು ಅವಕಾಶ ನೀಡಲಾಗುತ್ತದೆ ಎಂದು ಹೇಳಿದ್ದಾರೆ.

ಒಟ್ಟು ಮೂರು ದಿನ ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆಗೆ ಅವಕಾಶ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಎಡಿಜಿಪಿ ಅಲೋಕ್‌ಕುಮಾರ್, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಜತೆ ಸುದೀರ್ಘ ಚರ್ಚೆಯ ನಂತರ ತೀರ್ಮಾನ ಕೈಗೊಳ್ಳಲಾಗಿದೆ ಎಂದು

ಪಾಲಿಕೆಯಿಂದ ಒಳ್ಳೆಯ ನಿರ್ಣಯ
ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ನೀಡಿರುವ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಪ್ರತಿಕ್ರಿಯಿಸಿ, ಮೈದಾನದಲ್ಲಿ ಗಣೇಶ ಉತ್ಸವಕ್ಕೆ ಅವಕಾಶ ನೀಡಿರುವುದು ಒಳ್ಳೆಯ ನಿರ್ಣಯ. ಪಾಲಿಕೆಯ ನಿರ್ಧಾರವನ್ನು ನಾನು ಸ್ವಾಗತಿಸುತ್ತೇನೆ. ಎಲ್ಲರೂ ಸೌಹಾರ್ದತೆಯಿಂದ ಗಣೇಶೋತ್ಸವ ಆಚರಣೆ ಮಾಡಬೇಕು, ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮ ವಹಿಸಲು ಎಡಿಜಿಪಿಗೆ ತಿಳಿಸಲಾಗಿದೆ ಎಂದು ಹೇಳಿದರು.

ಈಗಾಗಲೇ ಎಲ್ಲ ರೀತಿಯ ಕಾನೂನು ಸುವ್ಯವಸ್ಥೆ ಕಾಪಾಡಲು ಎಡಿಜಿಪಿ ಅಲೋಕ್ ಕುಮಾರ್ ಅವರ ನೇತೃತ್ವದಲ್ಲಿ ಭದ್ರತೆ ಕಾರ್ಯ ನಡೆಯುತ್ತಿದೆ. ಗಣೇಶ ಹಬ್ಬವನ್ನು ಸೌಹಾರ್ದತೆಯಿಂದ ಆಚರಿಸೋಣ, ಇದರಿಂದ ಕಳೆದುಕೊಳ್ಳುವುದೇನೂ ಇಲ್ಲ. ಎಲ್ಲ ಶಾಸಕರು, ಸದಸ್ಯರು, ಅಧಿಕಾರಿಗಳ ಗಮನಕ್ಕೆ ತಂದು ಸಮಿತಿ ಈ ನಿರ್ಧಾರ ಕೈಗೊಂಡಿದೆ. ಜನ ಯಾವುದೇ ಉದ್ವೇಗಕ್ಕೊಳಗಾಗದೇ ಸೌಹಾರ್ದತೆಯಿಂದ ಹಬ್ಬ ಆಚರಿಸಬೇಕು ಎಂದು ಕರೆ ನೀಡಿದರು.

ಇದನ್ನೂ ಓದಿ | Ganesh Chaturthi 2022 | ಲಂಬೋದರ; ನಿನ್ನ ನಾಮದ ಮಹಿಮೆ ಅಪಾರ

Exit mobile version