Site icon Vistara News

PFI Banned | ಮಾಜಿ ಸಿಎಂ ಸಿದ್ದರಾಮಯ್ಯ ತಲೆತಿರುಕನಂತೆ ಮಾತನಾಡೋದು ಸ್ವಾಭಾವಿಕ: ಬಿ.ಎಸ್‌.ಯಡಿಯೂರಪ್ಪ

Karnataka Election 2023: Must defeat for Laxman Savadi in Athani, Says BS Yediyurappa

ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಲೆತಿರುಕ ಮಾತನಾಡೋದು ಸ್ವಾಭಾವಿಕ. ಅವರಿಗೆ ಯಾವುದು ಸರಿ, ಯಾವುದು ತಪ್ಪು ಎಂಬ ಕಲ್ಪನೆ ಇಲ್ಲದೆ ಮಾತನಾಡುತ್ತಾರೆ. ಆರ್‌ಎಸ್‌ಎಸ್‌ ಇಡೀ ದೇಶದಲ್ಲಿ ಹಿಂದುಗಳ ಸಂಘಟನೆ ಮಾಡುತ್ತಾ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಾ ಬಂದಿದೆ. ಇಂತಹ ಸಂಘಟನೆ ಬಗ್ಗೆ ದೇಶದಲ್ಲಿ ನೂರಕ್ಕೆ ತೊಂಭತ್ತರಷ್ಟು ಜನ ಅಭಿಮಾನ ಹೊಂದಿದ್ದಾರೆ. ಇದರ ಬಗ್ಗೆ ಹಗುರವಾಗಿ ಮಾತನಾಡುವ ಮೂಲಕ ಸಿದ್ದರಾಮಯ್ಯ ಯೋಗ್ಯತೆ ತೋರಿಸಿಕೊಟ್ಟಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಕಿಡಿಕಾರಿದರು. ಅಲ್ಲದೆ, ಪಿಎಫ್‌ಐ ನಿಷೇಧ (PFI Banned) ಕ್ರಮವನ್ನು ಸ್ವಾಗತಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಏನೇ ಮಾತನಾಡಿದರೂ ಅದಕ್ಕೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಅವರು ಈ ರೀತಿ ಹಗುರವಾಗಿ ಮಾತನಾಡಿ ಅವರ ಗೌರವವನ್ನು ಅವರೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಪಿಎಫ್‌ಐನಿಂದ ಏನೇನು ಅನಾಹುತ ಆಗಿದೆ ಎಂಬುದು ಇಡೀ ದೇಶಕ್ಕೆ ಗೊತ್ತಿರುವ ಸಂಗತಿ. ಏನೇನು ಅನಾಹುತ ಆಗಿ ನಮ್ಮ ಕಾರ್ಯಕರ್ತರ ಕೊಲೆ ಆಗಿದೆ ಎಂಬುದೂ ತಿಳಿದಿದೆ. ಕಾನೂನು ರೀತಿ ಏನೇನು ಕ್ರಮ ಕೈಗೊಳ್ಳಬಹುದೋ ಅದೆಲ್ಲವನ್ನೂ ತೆಗೆದುಕೊಳ್ಳುತ್ತಿದ್ದೇವೆ, ಮುಂದೆಯೂ ಕ್ರಮ ಕೈಗೊಳ್ಳುತ್ತೇವೆ. ಸರಿಯಾದ ಪಾಠ ಕಲಿಸುತ್ತೇವೆ. ಈ ಸಂಘಟನೆಗಳು ಬೇರೆ ಯಾವುದೇ ರೀತಿಯಲ್ಲಿ ತಲೆ ಎತ್ತಲು ಬಿಡುವುದಿಲ್ಲ. ಹಾಗೇನಾದರೂ ತಲೆ ಎತ್ತುವ ಪ್ರಯತ್ನ ಮಾಡಿದರೆ ಪ್ರಧಾನಿ, ಗೃಹ ಸಚಿವರು ಅದಕ್ಕೆ ತಕ್ಕಶಾಸ್ತಿ ಮಾಡುತ್ತಾರೆ ಎಂದು ಹೇಳಿದರು.

ಪಿಎಫ್‌ಐ ಸಂಘಟನೆ ಸುಮಾರು ವರ್ಷಗಳಿಂದ ಈ ರಾಷ್ಟ್ರದಲ್ಲಿ ಭಯೋತ್ಪಾದಕ ಕೆಲಸಗಳನ್ನು ಎಸಗುವ ಮೂಲಕ ದೇಶಕ್ಕೆ ಮಾರಕವಾಗಿತ್ತು. ಇದರ ನಿಷೇಧಕ್ಕೆ ಬಹುದಿನಗಳ ಬೇಡಿಕೆ ಇತ್ತು. ಸಂಘಟನೆ ನಿಷೇಧಕ್ಕೆ ಸತತ ಹೋರಾಟ ನಡೆದಿತ್ತು. ಅದರ ಫಲವಾಗಿ ಇಂದು ಜಯ ಸಿಕ್ಕಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೇಳಿದರು.

ಪಿಎಫ್‌ಐ ಸಂಘಟನೆ ಸೇರಿದಂತೆ ಹಲವು ಸಂಘಟನೆಗಳನ್ನು ನಿಷೇಧ ಮಾಡಿದ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರಿಗೆ ರಾಜ್ಯದ ಜನತೆ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ. ಬಹಳ ಹಿಂದೆಯೇ ಈ ಕೆಲಸ ಆಗಬೇಕಿತ್ತು. ಈಗಲಾದರೂ ಈ ತೀರ್ಮಾನ ತೆಗೆದುಕೊಂಡಿದ್ದು ಸ್ವಾಗತಾರ್ಹ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ಇದನ್ನೂ ಓದಿ | PFI Banned | ಬ್ಯಾನ್‌ ಕ್ರಮ ಒಪ್ಪಲಾರೆ; ನಿಷೇಧಿಸಿದರೆ ಅಂಡರ್‌ವರ್ಲ್ಡ್‌ ಥರ ಕೆಲಸ ಮಾಡ್ತಾರೆ: ನಟ ಚೇತನ್‌

Exit mobile version