ಮೈಸೂರು: ದೇಶಾದ್ಯಂತ ಪಿಎಫ್‌ಐ ಸಂಘಟನೆ ಬ್ಯಾನ್ (PFI Banned) ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರ ಕ್ರಮಕ್ಕೆ ಧನ್ಯವಾದ ತಿಳಿಸುವೆ. ಆರ್‌ಎಸ್‌ಎಸ್ ಬಗ್ಗೆ ಮಾತನಾಡಿರುವ ಮಾಜಿ ಸಿಎಂ ಸಿದ್ದರಾಮಯ್ಯ ರಾಜ್ಯ ಹಾಗೂ ದೇಶದ ಜನರ ಕ್ಷಮೆ ಕೇಳಬೇಕು ಎಂದು ಸಂಸದ ಪ್ರತಾಪ್ ಸಿಂಹ ಪ್ರತಿಕ್ರಿಯೆ ನೀಡಿದರು.
ಆರ್‌ಎಸ್‌ಎಸ್ ಬ್ಯಾನ್ ಮಾಡಬೇಕು. ನೆಹರು ಒಂದು ಸಲ ಬ್ಯಾನ್ ಮಾಡಿದ್ದರು. ಕೊನೆಗೆ ಏನಾಯಿತು? ಕೋರ್ಟ್ ನಿಷೇಧವನ್ನು ಹಿಂತಗೆಯಿತು. ಚೀನಾ ಯುದ್ಧದ ನಂತರ ನೆಹರು ಅವರೇ ಆರ್‌ಎಸ್‌ಎಸ್ ಪಂಥಸಂಚಲನಕ್ಕೆ ಆಹ್ವಾನ ಕೊಟ್ಟಿದ್ದರು. ಆರ್‌ಎಸ್‌ಎಸ್ ಎಲ್ಲಿಯಾದರೂ ಬಾಂಬ್ ಬ್ಲಾಸ್ಟ್ ಮಾಡಿದಂತಹ ಇಲ್ಲವೇ ದೇಶದ್ರೋಹದ ಕೆಲಸ ಮಾಡಿದಂತಹ ಉದಾಹರಣೆ ಇದ್ದರೆ ಕೊಡಲಿ ಎಂದು ಸವಾಲು ಹಾಕಿದರು.
ಸುದ್ದಿಗಾರರ ಜತೆ ಮಾತನಾಡಿದ ಅವರು, ಹತ್ತಾರು ವರ್ಷಗಳಿಂದ ಸರಣಿ ಕೊಲೆಗಳಲ್ಲಿ ತೊಡಗಿದ್ದ ಕೆಎಫ್‌ಡಿ, ಪಿಎಫ್‌ಐ ವಿರುದ್ಧ ದನಿ ಎತ್ತಿದರೂ ಯಾರೂ ಸ್ಪಂದಿಸಿರಲಿಲ್ಲ. ಮೈಸೂರಿನಲ್ಲಿಯೇ ರಾಜು ಹತ್ಯೆ ಆಯ್ತು. ದೀಪಕ್ ರಾವ್, ಪ್ರವೀಣ್ ಪೂಜಾರಿ, ಪ್ರಶಾಂತ್ ಪೂಜಾರಿ, ಕುಟ್ಟಪ್ಪ, ರುದ್ರೇಶ್ ಹತ್ಯೆ ಆಯಿತು. ಕರ್ನಾಟಕದಲ್ಲೂ ಸಾಲು ಸಾವು ಹಿಂದು ಕಾರ್ಯಕರ್ತರ ಹತ್ಯೆ ಆಯಿತು. ಅದರ ನಡುವೆಯೂ ಕೆಎಫ್‌ಡಿ, ಪಿಎಫ್‌ಐ ಮೇಲಿನ 175 ಪ್ರಕರಣಗಳನ್ನು 2015ರಲ್ಲಿ ಕೈ ಬಿಡುವ ಮೂಲಕ ಪಿಎಫ್‌ಐ, ಕೆಡಿಎಫ್‌ಗೆ ಆತ್ಮಸ್ಥೈರ್ಯ ತುಂಬಲಾಯಿತು. ಆದರೆ, ಇಂದು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇವುಗಳನ್ನು ಬ್ಯಾನ್ ಮಾಡುವ ಮೂಲಕ ತಕ್ಕ ಪಾಠ ಕಲಿಸಿದೆ ಎಂದು ಹೇಳಿದರು.
ಇದನ್ನೂ ಓದಿ | PFI Banned | ಮಾಜಿ ಸಿಎಂ ಸಿದ್ದರಾಮಯ್ಯ ತಲೆತಿರುಕ ಮಾತನಾಡೋದು ಸ್ವಾಭಾವಿಕ: ಬಿ.ಎಸ್.ಯಡಿಯೂರಪ್ಪ
ತನ್ವೀರ್ ಸೇಠ್ ಚುನಾವಣೆ ಹತ್ತಿರ ಬರುತ್ತಿರುವ ಹಿನ್ನೆಲೆಯಲ್ಲಿ ಆತ್ಮದ್ರೋಹದ ಮಾತುಗಳನ್ನು ಆಡುತ್ತಿದ್ದಾರೆ. ತನ್ವೀರ್ ಸೇಠ್ ಮೇಲೆ ಹಲ್ಲೆ ಮಾಡಿದವರು ಯಾವ ಸಂಘಟನೆಗೆ ಸೇರಿದವರು ಎಂಬುದನ್ನು ಅವರಿಗೆ ತಿಳಿಸಬೇಕು ಎಂದು ಹೇಳಿದರು.
ಕೇಂದ್ರದ ಕ್ರಮ ಸ್ವಾಗತಿಸುವೆ- ಸಿದ್ದೇಶ್ವರ
ಚಿತ್ರದುರ್ಗ: ಕೇಂದ್ರ ಸರ್ಕಾರ ಪಿಎಫ್‌ಐ ಬ್ಯಾನ್ ಮಾಡಿರುವ ಕ್ರಮವನ್ನು ಸ್ವಾಗತಿಸುತ್ತೇನೆ. ಪಿಎಫ್ಐ ವಿದೇಶಗಳ ಜತೆ ಸಂಪರ್ಕ ಹೊಂದಿತ್ತು. ಭಯೋತ್ಪಾದಕ ಚಟುವಟಿಕೆಯಲ್ಲಿ ತೊಡಗಿದ್ದನ್ನು ಗಮನಿಸಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ ಹೇಳಿದರು.
ಆರ್‌ಎಸ್‌ಎಸ್‌ನಿಂದ ಈವರೆಗೆ ದೇಶದ್ರೋಹಿ ಕೆಲಸ ನಡೆದಿಲ್ಲ. ಆರ್‌ಎಸ್‌ಎಸ್ ಕಾರ್ಯಕರ್ತರ ಬಳಿ ಬಂದೂಕು, ಬಾಂಬ್, ಚೂರಿ ಇರಲಾರದು. ಶಿಸ್ತುಬದ್ಧವಾಗಿ ಒಂದು ಲಾಠಿ ಮಾತ್ರ ಇರುತ್ತದೆ. ಈವರೆಗೆ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಕಾಂಗ್ರೆಸ್ ಜಾತಿ-ಜಾತಿಗಳ ನಡುವೆ ವಿಷ ಬೀಜ ಬಿತ್ತುತ್ತದೆ ಎಂದು ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದರು.
ಸರಿಯಾದ ಮಾಹಿತಿ ಸಿಕ್ಕ ಹಿನ್ನೆಲೆ ಕ್ರಮ- ತಿಪ್ಪಾರೆಡ್ಡಿ
ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಅಶಾಂತಿ ಮೂಡಿಸುವ ಕೆಲಸವನ್ನು ಪಿಎಫ್‌ಐ ಮಾಡಿದೆ. ಬಿಹಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಹೋದಾಗ ಅವರ ಮೇಲೆ ಅಟ್ಯಾಕ್ ಮಾಡುವ ಪ್ಲ್ಯಾನ್ ನಡೆದಿತ್ತು. ಮಾಹಿತಿ ಸಿಕ್ಕ ಕೂಡಲೇ ಎನ್‌ಐಎ ದೇಶದಲ್ಲಿ ಏಕಕಾಲದಲ್ಲಿ ದಾಳಿ ನಡೆಸಿತು. ಬಿಜೆಪಿ ಮಾತ್ರವಲ್ಲ, ಕೇರಳದ ಸಿಪಿಎಂ ಸೇರಿದಂತೆ ಕಾಂಗ್ರೆಸ್ ಕೂಡ ಸಾಕಷ್ಟು ಬಾರಿ ಪಿಎಫ್‌ಐ ಬ್ಯಾನ್‌ಗೆ ಒತ್ತಾಯಿಸಿದ್ದವು ಎಂದು ಚಿತ್ರದುರ್ಗದ ಬಿಜೆಪಿ ಹಿರಿಯ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಹೆಳಿದರು.
ಚಿತ್ರದುರ್ಗದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಕೇಂದ್ರ ಸರ್ಕಾರವು ಯಾವುದೇ ಸಂಘಟನೆಯನ್ನು ಏಕಾಏಕಿ ಬ್ಯಾನ್ ಮಾಡುವುದಿಲ್ಲ. ಸರಿಯಾದ ಮಾಹಿತಿ ಕಲೆಹಾಕಿ, ಸೂಕ್ತ ಕ್ರಮ ಕೈಗೊಂಡಿದೆ. ಈ ಕ್ರಮವನ್ನು ದೇಶದ ಜನ ಸ್ವಾಗತ ಮಾಡಿದ್ದಾರೆ ಎಂದರು.
ತುಮಕೂರಲ್ಲಿ ಸ್ಲೀಪರ್ ಸೆಲ್ ಇದೆ- ಜ್ಯೋತಿ ಗಣೇಶ್
ತುಮಕೂರು: ಪಿಎಫ್‌ಐ ಸಂಘಟನೆಯನ್ನು 5 ವರ್ಷ ಬ್ಯಾನ್ ಮಾಡುವುದಲ್ಲ. ಸಂಪೂರ್ಣ ನಿಷೇಧ ಮಾಡಬೇಕು. ಇವರು ದೇಶದ ಒಳಗೆ ಇರುವ ವೈರಿಗಳಾಗಿದ್ದಾರೆ. ನಮ್ಮ ದೇಶದ ಅನ್ನ ತಿಂದು, ನಮ್ಮ ಮಣ್ಣಿನಲ್ಲಿದ್ದು, ನಮ್ಮ ದೇಶವನ್ನೇ ಛಿದ್ರ ಮಾಡಲು ಹೊರಟಿದ್ದಾರೆ. ಇಂಥವರ ಮೇಲೆ ನಿರ್ಧಾಕ್ಷಿಣ್ಯ ಕ್ರಮ ತೆಗೆದುಕೊಳ್ಳಬೇಕು. ಈ ಹಿಂದೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆದ ಬಾಂಬ್ ಬ್ಲಾಸ್ಟ್‌ನ ಕವರ್‌ನಲ್ಲಿ ತುಮಕೂರಿನ ಎಡಿಷನ್ ಪೇಪರ್ ಇತ್ತು. ಅಂದರೆ, ಇಲ್ಲಿಯೂ ಸ್ಲೀಪರ್ ಸೆಲ್‌ಗಳು ಕೆಲಸ ಮಾಡುತ್ತಿವೆ. ಇದನ್ನು ತಡೆಯಬೇಕು ಎಂದು ತುಮಕೂರಿನಲ್ಲಿ ಶಾಸಕ ಜಿ.ಬಿ.ಜ್ಯೋತಿ ಗಣೇಶ್ ಹೇಳಿದರು.