Site icon Vistara News

PFI BANNED | ಮುಂದೇನು?: ಕಚೇರಿಗಳಿಗೆ ಬೀಗ, ಬ್ಯಾಂಕ್‌ ಖಾತೆಗಳು ಸೀಝ್‌, ಪದಾಧಿಕಾರಿಗಳಿಗೂ ಅರೆಸ್ಟ್‌ ಭೀತಿ

PFI

ನವ ದೆಹಲಿ: ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾವನ್ನು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆಯ (ಯುಎಪಿಎ) ಸೆಕ್ಷನ್‌ ಮೂರರ ಅಡಿಯಲ್ಲಿ ಐದು ವರ್ಷಗಳ ಕಾಲ ನಿಷೇಧ ಮಾಡಲಾಗಿದೆ. ಈ ಮೂಲಕ ಅದನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಲಾಗಿದೆ. ಹಾಗಿದ್ದರೆ ಈ ರೀತಿ ನಿಷೇಧಕ್ಕೆ ಒಳಗಾದ ಬಳಿಕ ಸಂಘಟನೆಗೆ, ಅದರ ಹಾಲಿ ಪದಾಧಿಕಾರಿಗಳಿಗೆ, ಕಾರ್ಯಕರ್ತರಿಗೆ, ಕಚೇರಿಗಳಿಗೆ ಏನಾಗುತ್ತದೆ ಎನ್ನುವ ಬಗ್ಗೆ ಚರ್ಚೆ ಹುಟ್ಟಿಕೊಂಡಿದೆ.

ರಾಜ್ಯಗಳಿಗೆ ಅಧಿಕಾರ ನೀಡಿದ ಕೇಂದ್ರ
ಕಾನೂನಾತ್ಮಕವಾಗಿ ಹೇಳುವುದಾದರೆ ಪಿಎಫ್ಐ ಮತ್ತು ಅದರ ಸಹವರ್ತಿ ಸಂಘಟನೆಗಳ ಮೇಲೆ ಕೇಂದ್ರ ಗೃಹ ಸಚಿವಾಲಯವು ನಿಷೇಧವನ್ನು ಹೇರಿದ ಬಳಿಕ ಮುಂದೇನು ಮಾಡಬೇಕು ಎನ್ನುವ ವಿಚಾರದಲ್ಲಿ ರಾಜ್ಯ ಸರಕಾರಗಳಿಗೆ ಮಾರ್ಗಸೂಚಿಯನ್ನು ನೀಡಿದೆ.

ಸಂಘಟನೆಯ ನಿಧಿ ಬಳಕೆಗೆ ನಿಷೇಧ, ಕಾನೂನು ಬಾಹಿರ ಚಟುವಟಿಕೆಗಳಿಗಾಗಿ ಬಳಸಲಾಗುತ್ತಿದ್ದ ಸ್ಥಳಗಳನ್ನು ಕಾಯಿದೆಯ ಸೆಕ್ಷನ್ 7ರ ಅಡಿ ಸೀಜ್‌ ಮಾಡುವಂತೆ ತಿಳಿಸಲಾಗಿದೆ. 1967ರ ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯಿದೆಯ ಸೆಕ್ಷನ್ 42ರ ಮೂಲಕ ನೀಡಲಾದ ಅಧಿಕಾರಗಳ ಅನುಗುಣವಾಗಿ ಕೇಂದ್ರ ಸರ್ಕಾರವು ಈ ಮೂಲಕ, ಸೆಕ್ಷನ್ 7 ಮತ್ತು ಸೆಕ್ಷನ್ 8 ರ ಅಡಿಯಲ್ಲಿ ಚಲಾಯಿಸಬಹುದಾದ ಎಲ್ಲಾ ಅಧಿಕಾರಗಳನ್ನು ಸಹ ಚಲಾಯಿಸಲು ಎಲ್ಲ ರಾಜ್ಯಾಡಳಿತಗಳಿಗೆ ನಿರ್ದೇಶನ ನೀಡುತ್ತದೆ. ಮೇಲಿನ ಕಾನೂನುಬಾಹಿರ ಸಂಘಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮತ್ತು ಕೇಂದ್ರಾಡಳಿತ ಪ್ರದೇಶಗಳ ಆಡಳಿತಗಳು ಈ ಬಗ್ಗೆ ಕ್ರಮ ತೆಗೆದುಕೊಳ್ಳಬಹುದು ಎಂದು ತನ್ನ ಅಧಿಸೂಚನೆಯಲ್ಲಿ ಕೇಂದ್ರ ಗೃಹ ಸಚಿವಾಲಯವು ತಿಳಿಸಿದೆ.

ಇದರ ಒಟ್ಟಾರೆ ಸಾರಾಂಶವೇನೆಂದರೆ, ಒಂದು ಸಂಘಟನೆಯ ನಿಷೇಧ ಎಂದರೆ ತಕ್ಷಣಕ್ಕೆ ಅದರ ಕಚೇರಿಗಳಿಗೆ ಬೀಗ ಹಾಕಲಾಗುತ್ತದೆ. ಅದರ ಹಣಕಾಸು ಖಾತೆಗಳನ್ನು ತಕ್ಷಣವೇ ಸೀಜ್‌ ಮಾಡಲಾಗುತ್ತದೆ, ಸಂಘಟನೆಗೆ ಯಾರನ್ನೂ ನೇಮಕ ಮಾಡಿಕೊಳ್ಳುವಂತಿಲ್ಲ. ಸಂಘಟನೆಯಲ್ಲಿ ಸಕ್ರಿಯರಾಗಿದ್ದು, ನಿಷೇಧದ ಬಳಿಕವೂ ಸಕ್ರಿಯವಾಗಿ ಕೆಲಸ ಮಾಡಬಹುದು ಎಂಬ ಸಂಶಯ ಇರುವ ಪದಾಧಿಕಾರಿಗಳನ್ನು ದೇಶದ ಯಾವುದೇ ಭಾಗದಲ್ಲೂ ಬಂಧಿಸಬಹುದಾಗಿದೆ. ಅವರ ಮೇಲೆ ಉಗ್ರ ಚಟುವಟಿಕೆ ನಿರ್ಬಂಧ ಕಾಯಿದೆಯಡಿ ಪ್ರಕರಣ ದಾಖಲಿಸಬಹುದು.

ಪ್ರತಿಭಟನೆ, ಸಮಾವೇಶ ನಡೆಸುವಂತಿಲ್ಲ
ಪಿಎಫ್‌ಐ ಮತ್ತು ಅದರ ನಿಷೇಧಿತ ಸಹವರ್ತಿ ಸಂಘಟನೆಗಳ ಪದಾಧಿಕಾರಿಗಳು ಇನ್ನು ಮುಂದೆ ಯಾವುದೇ ಪ್ರತಿಭಟನೆಯನ್ನು ಆಯೋಜಿಸುವಂತಿಲ್ಲ. ಸೆಮಿನಾರುಗಳು, ಸಮಾವೇಶಗಳು, ಸಂಘಟನೆ ಹೆಸರಿನಲ್ಲಿ ಯಾವುದೇ ಹಣಕಾಸು ವಿತರಣೆ ಮಾಡುವಂತಿಲ್ಲ. ಯಾವುದೇ ಪತ್ರಿಕಾ ಪ್ರಕಟಣೆ, ಪುಸ್ತಕ ಪ್ರಕಟಣೆ ಮಾಡುವಂತಿಲ್ಲ. ಇಂಥ ಯಾವುದೇ ಕೃತ್ಯಗಳನ್ನು ನಡೆಸಿದರೂ ಅವರನ್ನು ಬಂಧಿಸಬಹುದಾಗಿದೆ.

ಪ್ರಯಾಣ ನಿರ್ಬಂಧ ವಿಧಿಸಬಹುದು
ತಕ್ಷಣಕ್ಕೆ ಜಾರಿಗೆ ಬರುವ ಕ್ರಮಗಳೆಂದರೆ ಪಿಎಫ್‌ಐ ಮತ್ತು ಅದರ ಸಹವರ್ತಿ ಕಚೇರಿಗಳಿಗೆ ಬೀಗ ಹಾಕಿ ಬಂದ್‌ ಮಾಡಬಹುದು, ಬ್ಯಾಂಕ್‌ ಅಕೌಂಟ್‌ಗಳನ್ನು ಸೀಜ್‌ ಮಾಡುವುದು. ಅದರ ಜತೆಗೆ ಸಂಘಟನೆಗೆ ಸೇರಿದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಬಹುದು. ಸಂಘಟನೆಯಲ್ಲಿ ಸಕ್ರಿಯರಾಗಿರುವ ವ್ಯಕ್ತಿಗಳನ್ನು ಪೊಲೀಸರು ಕಚೇರಿಗೆ ಕರೆಸಿಕೊಂಡು ಮುಚ್ಚಳಿಕೆ ಬರೆಸಿಕೊಳ್ಳುವ ಸಾಧ್ಯತೆ ಇದೆ. ಜತೆಗೆ ಪದಾಧಿಕಾರಿಗಳು ತಾವು ಈಗ ಇರುವ ಜಾಗ ಬಿಟ್ಟು ಬೇರೆ ಕಡೆಗೆ ಹೋಗದಂತೆ ಪ್ರಯಾಣ ನಿರ್ಬಂಧ ವಿಧಿಸಲು ಅವಕಾಶವಿದೆ.

೨೨ ರಾಜ್ಯಗಳಲ್ಲಿ ಅಸ್ತಿತ್ವ
೧೨ ವರ್ಷಗಳ ಹಿಂದೆ ಜನ್ಮ ತಳೆದ ಪಿಎಫ್‌ಐ ಸಂಘಟನೆ ಅತ್ಯಂತ ವೇಗವಾಗಿ ದೇಶಾದ್ಯಂತ ಹರಡಿರುವುದನ್ನು ಎನ್‌ಐಎ ಗಮನಿಸಿದೆ. ಆರಂಭದಲ್ಲಿ ಕರ್ನಾಟಕ, ತಮಿಳುನಾಡು ಮತ್ತು ಕೇರಳದ ಮೂರು ಸಂಘಟನೆಗಳ ವಿಲೀನದಿಂದ ಹುಟ್ಟಿಕೊಂಡ ಸಂಘಟನೆ ಅತ್ಯಂತ ಕ್ಷಿಪ್ರ ಗತಿಯಲ್ಲಿ ೨೨ ರಾಜ್ಯಗಳಲ್ಲಿ ಹರಡಿ ತನ್ನ ಅಸ್ತಿತ್ವವನ್ನು ತೋರಿಸಿದೆ. ಅದರಲ್ಲೂ ಮುಖ್ಯವಾಗಿ ಕರ್ನಾಟಕ, ಕೇರಳ, ತಮಿಳುನಾಡು, ಬಿಹಾರ, ಉತ್ತರಪ್ರದೇಶ, ಗುಜರಾತ್‌, ಅಸ್ಸಾಂಗಳಲ್ಲಿ ಅಳವಾಗಿ ಬೇರುಬಿಟ್ಟಿದೆ. ಲಕ್ಷಾಂತರ ಜನ ಪದಾಧಿಕಾರಿಗಳು ಇದ್ದಾರೆ. ಹೀಗಾಗಿ ಇವುಗಳ ವಿರುದ್ಧ ಎಲ್ಲ ರಾಜ್ಯಗಳ ಪೊಲೀಸರು ಕ್ರಮ ಕೈಗೊಳ್ಳಬೇಕಾಗಿದೆ.

ಇದನ್ನೂ ಓದಿ | PFI Banned | ಭಾರತದಲ್ಲಿ ಮತ್ತ್ಯಾವ ಸಂಘಟನೆಗಳು ನಿಷೇಧವಾಗಿವೆ? ಇಲ್ಲಿದೆ ನೋಡಿ ಪಟ್ಟಿ

Exit mobile version