Site icon Vistara News

Sameer Nigam: ಕನ್ನಡಿಗರ ಕ್ಷಮೆಯಾಚಿಸಿದ PhonePe ಸಿಇಒ ಸಮೀರ್‌ ನಿಗಮ್‌; ಬಾಯ್ಕಾಟ್‌ ಪೆಟ್ಟಿಗೆ ಥಂಡಾ

Sameer Nigam

PhonePe CEO Sameer Nigam Apologizes For Remarks On Kannadigas Reservation In Private Sector

ಬೆಂಗಳೂರು: ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ನೀಡುವ ಕರ್ನಾಟಕ ಸರ್ಕಾರದ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿ, ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದ ಫೋನ್ ಪೇ ಸಿಇಒ ಸಮೀರ್ ನಿಗಮ್ (Sameer Nigam) ಕೊನೆಗೂ ಕ್ಷಮೆಯಾಚಿಸಿದ್ದಾರೆ. ಮೀಸಲಾತಿ ತೀರ್ಮಾನವನ್ನು ವಿರೋಧಿಸಿದ ಕಾರಣ ಕರ್ನಾಟಕದಾದ್ಯಂತ ಬಾಯ್ಕಾಟ್‌ ಫೋನ್‌ ಪೇ (Boycott PhonePe) ಎಂಬ ಅಭಿಯಾನ ಆರಂಭವಾದ ಬೆನ್ನಲ್ಲೇ, ಸಮೀರ್‌ ನಿಗಮ್‌ ಅವರು ಎಕ್ಸ್‌ ಸಾಮಾಜಿಕ ಜಾಲತಾಣದ ಪೋಸ್ಟ್‌ ಮೂಲಕ ಕನ್ನಡಿಗರ ಕ್ಷಮೆಯಾಚಿಸಿದ್ದಾರೆ.

ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಸಮೀರ್‌ ನಿಗಮ್‌ ಅವರು ಪೋಸ್ಟ್‌ ಮಾಡಿದ್ದಾರೆ. “ಕಳೆದ ವಾರ ನಾನು ಉದ್ಯೋಗ ಮೀಸಲಾತಿ ವಿಧೇಯಕದ ಕುರಿತು ನೀಡಿದ ಹೇಳಿಕೆ ಬಗ್ಗೆ ವಿರೋಧ ವ್ಯಕ್ತವಾಗುತ್ತಿರುವ ಕುರಿತು ಮಾಧ್ಯಮಗಳ ಲೇಖನಗಳನ್ನು ಓದಿದೆ. ನನ್ನ ಬಗ್ಗೆ ವೈಯಕ್ತಿಕವಾಗಿ ಟೀಕಿಸಿದ್ದನ್ನು ಗಮನಿಸಿದೆ. ಆದರೆ, ನಾನೊಂದು ವಿಷಯವನ್ನು ಹೇಳಲು ಇಷ್ಟಪಡುತ್ತೇನೆ. ನನಗೆ ಕರ್ನಾಟಕ ಹಾಗೂ ಕರ್ನಾಟಕದ ಜನರನ್ನು ಅವಮಾನಿಸುವುದು ಎಂದಿಗೂ ನನ್ನ ಉದ್ದೇಶ ಆಗಿಲ್ಲ. ಇಷ್ಟಾದರೂ, ನನ್ನ ಹೇಳಿಕೆಯಿಂದ ಯಾರಿಗಾದರೂ ನೋವುಂಟಾಗಿದ್ದರೆ, ಅದಕ್ಕೆ ನಾನು ಕ್ಷಮೆ ಕೇಳುತ್ತೇನೆ” ಎಂದಿದ್ದಾರೆ.

ಕನ್ನಡದ ಮೇಲೆ ನನಗೆ ಗೌರವ ಎಂದ ಸಮೀರ್‌

“ಕನ್ನಡ ಸೇರಿ ದೇಶದ ಎಲ್ಲ ಭಾಷೆಗಳ ಮೇಲೆ ನನಗೆ ಹೆಚ್ಚು ಗೌರವ ಇದೆ. ಭಾಷಾ ವೈವಿಧ್ಯತೆಯು ಭಾರತದ ಶ್ರೀಮಂತ ಪರಂಪರೆಯಾಗಿದೆ. ದೇಶದ ಪ್ರತಿಯೊಬ್ಬರೂ ಸ್ಥಳೀಯ ಸಂಸ್ಕೃತಿ ಹಾಗೂ ಸಂಪ್ರದಾಯಗಳನ್ನು ಪಾಲಿಸಬೇಕು ಎಂಬುದು ನನ್ನ ಅಭಿಪ್ರಾಯವಾಗಿದೆ. ಬೆಂಗಳೂರಿನಲ್ಲಿ ಸ್ಥಾಪನೆಯಾದ ದೇಶದ ಸ್ಟಾರ್ಟಪ್‌ಗಳು, ಗೂಗಲ್‌, ಆಪಲ್‌, ಅಮೆಜಾನ್‌, ಮೈಕ್ರೋಸಾಫ್ಟ್‌ನಂತಹ ಕಂಪನಿಗಳು ಲಕ್ಷ ಡಾಲರ್‌ ಸಂಸ್ಥೆಗಳಾಗಿ ಹೊರಹೊಮ್ಮಿವೆ. ಕರ್ನಾಟಕ ಹಾಗೂ ಬೆಂಗಳೂರಿನಲ್ಲಿ ಲಕ್ಷಾಂತರ ಉದ್ಯೋಗ ಸೃಷ್ಟಿಸುವುದು ನನ್ನ ಗುರಿಯಾಗಿದೆ. ಇದಕ್ಕೆ ಎಲ್ಲರ ಸಹಕಾರವಿರಲಿ” ಎಂಬುದಾಗಿ ಪೋಸ್ಟ್‌ ಮಾಡಿದ್ದಾರೆ.

ಫೋನ್‌ ಪೇ ಹುಟ್ಟಿದ್ದೇ ಬೆಂಗಳೂರಿನಲ್ಲಿ; ಸಿಇಒ

“ಬೆಂಗಳೂರು ದೇಶದ ಅದ್ಭುತ ನಗರವಾಗಿದ್ದು, ಜಾಗತಿಕ ದರ್ಜೆಯ ತಂತ್ರಜ್ಞಾನ ಹಾಗೂ ಅದ್ಭುತ ವೈವಿಧ್ಯತೆಯನ್ನು ಹೊಂದಿದೆ. ಅಷ್ಟೇ ಏಕೆ, ಫೋನ್‌ ಪೇ ಹುಟ್ಟಿದ್ದೇ ಬೆಂಗಳೂರಿನಲ್ಲಿ. ಫೋನ್‌ ಪೇಅನ್ನು ಕಳೆದ ಒಂದು ದಶಕದಲ್ಲಿ ಸುಮಾರು 55 ಕೋಟಿ ಭಾರತೀಯರು ಬಳಸಲು ಬೆಂಗಳೂರು ಕೂಡ ಕಾರಣವಾಗಿದೆ. ಬೆಂಗಳೂರನ್ನು ದೇಶದ ಸಿಲಿಕಾನ್‌ ವ್ಯಾಲಿ ಎಂದೇ ಕರೆಯುತ್ತಾರೆ. ಇಲ್ಲಿನ ಇನೋವೇಷನ್‌ ಸಂಸ್ಕೃತಿಯು ಅದ್ಭುತವಾಗಿದ್ದು, ಜಗತ್ತನ್ನೇ ಆಕರ್ಷಿಸುತ್ತಿದೆ. ಕರ್ನಾಟಕ ಸರ್ಕಾರ ಹಾಗೂ ಕನ್ನಡಿಗರ ಸಹಕಾರದಿಂದಲೇ ಬೆಂಗಳೂರು ಜಾಗತಿಕ ತಂತ್ರಜ್ಞಾನದ ಸೂಪರ್‌ ಪವರ್‌ ಎನಿಸಿದೆ” ಎಂದು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಕರ್ನಾಟಕದ ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ಕುರಿತು ರಾಜ್ಯ ಸರ್ಕಾರ ವಿಧೇಯಕ ರಚಿಸುವ ಪ್ರಸ್ತಾಪ ಮುಂದಿಟ್ಟುಕೊಂಡಿದ್ದನ್ನು ಸಮೀರ್‌ ನಿಗಮ್‌ ವಿರೋಧಿಸಿದ್ದರು. ಹಾಗಾಗಿ, ಕರ್ನಾಟಕದಲ್ಲಿ ಕನ್ನಡಿಗರು ಫೋನ್‌ ಪೇ ವಿರುದ್ಧ ಅಭಿಯಾನ ಆರಂಭಿಸಿದ್ದರು. ಸಾವಿರಾರು ಜನ ಫೋನ್‌ಪೇ ಅಪ್ಲಿಕೇಶನ್‌ಅನ್ನು ಅನ್‌ ಇನ್‌ಸ್ಟಾಲ್‌ ಮಾಡಿಕೊಂಡು, ಆ ಫೋಟೊಗಳನ್ನು ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ರಾಜ್ಯದ ಕನ್ನಡ ಸಂಘಟನೆಗಳು ಕೂಡ ಫೋನ್‌ ಪೇ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದವು. ಇದರಿಂದಾಗಿ ಬೆಚ್ಚಿಬಿದ್ದ ಫೋನ್‌ ಪೇ ಸಿಇಒ ಈಗ ಕ್ಷಮೆಯಾಚಿಸಿದ್ದಾರೆ.

ಇದನ್ನೂ ಓದಿ: PhonePe : ಇ-ಕಾಮರ್ಸ್‌ಗೆ ಫೋನ್‌ಪೇ ಪ್ರವೇಶ, ಹೈಪರ್‌ಲೋಕಲ್‌ ಆ್ಯಪ್‌ ಪಿನ್‌ಕೋಡ್‌ ಬಿಡುಗಡೆ

Exit mobile version