ಶಿವಮೊಗ್ಗ: ಎಸ್‌ಸಿ-ಎಸ್‌ಟಿ ಮೀಸಲಾತಿಯಲ್ಲಿ (SC ST Reservation) ಒಳ ಮೀಸಲಾತಿ ನಿಗದಿಪಡಿಸಿರುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ರಾಜ್ಯದೆಲ್ಲೆಡೆ ವ್ಯಾಪಕ ವಿರೋಧ ವಿರೋಧ ವ್ಯಕ್ತವಾಗಿದೆ. ಸೋಮವಾರ (ಮಾ. 27) ಶಿಕಾರಿಪುರದಲ್ಲಿ ಬಂಜಾರ ಸಮುದಾಯದವರು ನಡೆಸಿದ ಪ್ರತಿಭಟನೆ ವೇಳೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮನೆ ಮೇಲೆ ಕಲ್ಲು, ಚಪ್ಪಲಿ ತೂರಾಟ ನಡೆಸಲಾಗಿತ್ತು. ಈ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಆರೋಪಿಯು ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಜತೆಗೆ ತೆಗೆಸಿಕೊಂಡಿರುವ ಫೋಟೊ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral) ಆಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ, ಯಾರು ಯಾರೋ ಫೋಟೊ ತೆಗೆಸಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ.
ಬಿ.ಎಸ್. ಯಡಿಯೂರಪ್ಪ ಅವರ ಮನೆ ಮೇಲೆ ಕಲ್ಲು ತೂರಾಟ ನಡೆಸಿದ ಪ್ರಕರಣದಲ್ಲಿ ಬಂಧಿತನಾಗಿರುವ ಆರೋಪಿಗಳಲ್ಲಿ ಒಬ್ಬನಾಗಿರುವ ಪುನೀತ್ ನಾಯ್ಕ್ ಕಾಂಗ್ರೆಸ್ ಕಾರ್ಯಕರ್ತನಾಗಿದ್ದಾನೆ. ಈತ ಸಿದ್ದರಾಮಯ್ಯ ಅವರ ಜತೆ ತೆಗೆಸಿಕೊಂಡಿರುವ ಫೋಟೊವೊಂದು ಈಗ ವೈರಲ್ ಆಗಿದೆ.
ರಾಜಕೀಯಕ್ಕಾಗಿ ಏನೇನೋ ಹೇಳುತ್ತಿದ್ದಾರೆ
ಈ ಬಗ್ಗೆ ಎಚ್.ಡಿ. ಕೋಟೆಯಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ಯಾರೋ ಬರ್ತಾರೆ, ಫೋಟೋ ತೆಗೆದುಕೊಳ್ಳುತ್ತಾರೆ. ಅವರು ಒಳ್ಳೆಯವರಾ, ಕೆಟ್ಟವರಾ ಅಂತ ನನಗೆ ಏನು ಗೊತ್ತು? ಎಂದು ಮುಗುಳು ನಕ್ಕು ಸುಮ್ಮನಾದರು. ಕಲ್ಲು ತೂರಾಟದ ಬಗ್ಗೆ ಯಡಿಯೂರಪ್ಪ ಏನು ಹೇಳಿದ್ದಾರೆ? ಇದಕ್ಕೂ ಕಾಂಗ್ರೆಸ್‌ನವರಿಗೂ ಸಂಬಂಧ ಇಲ್ಲ ಅಂದಿದ್ದಾರೆ. ಅಂದ ಮೇಲೂ ರಾಜಕೀಯಕ್ಕಾಗಿ ಏನೇನೋ ಹೇಳುತ್ತಿದ್ದಾರೆ ಎಂದರ್ಥ ಎಂದು ಹೇಳಿದ್ದಾರೆ.
ಇದನ್ನೂ ಓದಿ: SC ST Reservation: ಬಿಜೆಪಿಯವರಿಂದಲೇ ಮನೆ ಮೇಲೆ ದಾಳಿ: ಬಿ.ಎಸ್. ಯಡಿಯೂರಪ್ಪ ಪರವಾಗಿ ಕಾಂಗ್ರೆಸ್ ಬ್ಯಾಟಿಂಗ್
ಸಿಎಂ ಬೊಮ್ಮಾಯಿಗೆ ಸಿದ್ದರಾಮಯ್ಯ ತಿರುಗೇಟು
ಕಾಂಗ್ರೆಸ್‌ನವರು ಅಲ್ಲ ಎಂದು ಯಡಿಯೂರಪ್ಪನವರೇ ಹೇಳಿದ್ದಾರೆ. ಯಡಿಯೂರಪ್ಪಗಿಂತ ಬೊಮ್ಮಾಯಿಗೆ ಹೆಚ್ಚು ಗೊತ್ತಾ? ಬೊಮ್ಮಾಯಿಗಿಂತ ಹೆಚ್ಚಿನ ಮಾಹಿತಿ ಯಡಿಯೂರಪ್ಪ ಅವರಿಗೆ ಹೋಗಿರುತ್ತಾ? ಮೀಸಲಾತಿಗೆ ಕಾಂಗ್ರೆಸ್ ವಿರೋಧ ಇರಲಿಲ್ಲ. ಆದರೆ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮಾಡಬೇಕಿತ್ತು. ಮೂರೂವರೆ ವರ್ಷ ಬಿಜೆಪಿ ಏನು ಮಾಡುತ್ತಿದ್ದು. ಒಳಮೀಸಲಾತಿಗೆ ಕಾಂಗ್ರೆಸ್ ಒಲವು ತೋರಿಸಿತ್ತು ಎಂದು ಸಿದ್ದರಾಮಯ್ಯ ಹೇಳಿದರು.
2B ಪ್ರವರ್ಗ ಹಿಂತೆಗೆತಕ್ಕೆ ಸಿಡಿದ ಮುಸ್ಲಿಮರು
ಬೆಂಗಳೂರು: ಎಸ್‌ಸಿ-ಎಸ್‌ಟಿ ಮೀಸಲಾತಿ (SC ST Reservation) ಜಾರಿಯಲ್ಲಿ ಒಳ ಮೀಸಲಾತಿ ನಿಗದಿಪಡಿಸಿರುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಎಸ್‌ಸಿ ಸಮುದಾಯದ ಒಳಮೀಸಲಾತಿಗೆ ಬಂಜಾರ ಸಮುದಾಯದವರು ರಾಜ್ಯದ ಹಲವೆಡೆ ಪ್ರತಿಭಟನೆ ನಡೆಸುತ್ತಿದ್ದಾರೆ. ಈಗ ಒಳ ಮೀಸಲಾತಿ ಮಾಡುವ ವೇಳೆ ಮುಸ್ಲಿಂ ಸಮುದಾಯಕ್ಕೆ ಇದ್ದ 2ಬಿ (2B) ಪ್ರವರ್ಗವನ್ನು ತೆಗೆದು ಹಾಕಿರುವ ಸಂಬಂಧ ಮುಸ್ಲಿಂ ಸಮುದಾಯದವರು ತಿರುಗಿಬಿದ್ದಿದ್ದು, ರಾಜ್ಯದ ಹಲವು ಕಡೆ ಪ್ರತಿಭಟನೆ ನಡೆಸಿದ್ದಾರೆ. ಹಳೇ ಮೀಸಲಾತಿ ಪದ್ಧತಿಯೇ ಜಾರಿಯಲ್ಲಿರಲಿ ಎಂದು ಆಗ್ರಹಿಸಿದ್ದಾರೆ.
ಬೆಳಗಾವಿಯಲ್ಲಿ ಮುಸ್ಲಿಮರ ಆಕ್ರೋಶ
ಬೆಳಗಾವಿ: ಮುಸ್ಲಿಂ ಸಮುದಾಯಕ್ಕಿದ್ದ 2ಬಿ ಪ್ರವರ್ಗದಡಿ ಇದ್ದ ಮೀಸಲಾತಿಯನ್ನು ರಾಜ್ಯ ಸರ್ಕಾರ ರದ್ದು ಮಾಡಿದೆ ಎಂದು ಆರೋಪಿಸಿ ಬೆಳಗಾವಿಯಲ್ಲಿ ಮುಸ್ಲಿಂ ಸಮುದಾಯದವರು ಪ್ರತಿಭಟನೆ ನಡೆಸಿದ್ದಾರೆ. ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ವತಿಯಿಂದ ಚೆನ್ನಮ್ಮ ವೃತ್ತದಿಂದ ಡಿಸಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಗಿದೆ. ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶವನ್ನು ವ್ಯಕ್ತಪಡಿಸಲಾಗಿದೆ. ತಕ್ಷಣವೇ ಸಚಿವ ಸಂಪುಟ ಸಭೆಯ ನಿರ್ಧಾರವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಲಾಗಿದೆ. ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮನವಿ ಮಾಡಲಾಗಿದೆ.
ಚಿತ್ರದುರ್ಗದಲ್ಲಿ ರಸ್ತೆ ಮೇಲೇ ಕುರ್ಚಿ ಹಾಕಿ ಪ್ರತಿಭಟನೆ
ಚಿತ್ರದುರ್ಗ: ರಾಜ್ಯ ಸರ್ಕಾರವು 2ಬಿ ಮೀಸಲಾತಿ ಕಡಿತಗೊಳಿಸಿದ ಹಿನ್ನೆಲೆಯಲ್ಲಿ ನಗರದಲ್ಲಿ ಎಸ್‌ಡಿಪಿಐ ಕಾರ್ಯಕರ್ತರಿಂದ ಪ್ರತಿಭಟನೆ ನಡೆಸಲಾಗಿದೆ. ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶವನ್ನು ಹೊರಹಾಕಲಾಗಿದೆ. ನಗರದ ಡಿಸಿ ಸರ್ಕಲ್ ಬಳಿ ಪ್ರತಿಭಟನೆಗೆ ವೇದಿಕೆಯನ್ನು ಹಾಕಲಾಗಿತ್ತು. ಆದರೆ, ಅನುಮತಿ ಪಡೆಯದ ಹಿನ್ನೆಲೆಯಲ್ಲಿ ವೇದಿಕೆಯನ್ನು ಬಳಸದಂತೆ ಎಸ್‌ಡಿಪಿಐ ಕಾರ್ಯಕರ್ತರನ್ನು ಪೊಲೀಸರು ತಡೆದಿದ್ದಾರೆ. ಇದರಿಂದ ಕೆಲ ಕಾಲ ವಾಗ್ವಾದ ನಡೆದಿದೆ. ಬಳಿಕ ಪೊಲೀಸರು ಕಾರ್ಯಕ್ರಮದ ವೇದಿಕೆಯನ್ನು ತೆರವುಗೊಳಿಸಿದ್ದಾರೆ. ವೇದಿಕೆ ತೆರವು ಹಿನ್ನೆಲೆಯಲ್ಲಿ ರಸ್ತೆ ಮೇಲೆಯೇ ಕುರ್ಚಿ ಹಾಕಿ ಕುಳಿತ ಎಸ್‌ಡಿಪಿಐ ಕಾರ್ಯಕರ್ತರು ಪ್ರತಿಭಟನೆಯನ್ನು ಮುಂದುವರಿಸಿದರು.
ಮಂಡ್ಯದಲ್ಲಿ ಎಸ್‌ಡಿಪಿಐ ವತಿಯಿಂದ ಮುಸ್ಲಿಂರ ಪ್ರತಿಭಟನೆ
ಮಂಡ್ಯ: ಮುಸ್ಲಿಂ ಸಮುದಾಯದವರಿಗೆ 2ಬಿ ಮೀಸಲಾತಿ ರದ್ದು ಹಿನ್ನೆಲೆಯಲ್ಲಿ ಮಂಡ್ಯದಲ್ಲಿ ಭುಗಿಲೆದ್ದ ಸಮುದಾಯದವರ ಆಕ್ರೋಶ ಭುಗಿಲೆದ್ದಿದೆ. ಎಸ್‌ಡಿಪಿಐ ನೇತೃತ್ವದಲ್ಲಿ ಹಲವು ಮುಸ್ಲಿಂ ಒಕ್ಕೂಟದಿಂದ ಪ್ರತಿಭಟನೆ ನಡೆಸಲಾಗಿದೆ. ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಸೇರಿದ ಮುಸ್ಲಿಂ ಸಮುದಾಯದವರು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶವನ್ನು ಹೊರಹಾಕಿದರು. ಹೊಸ ಮೀಸಲಾತಿ ಕ್ರಮವನ್ನು ರದ್ದು ಮಾಡಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ: Karnataka Elections : ಶಿಗ್ಗಾಂವಿ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಮಂಜುನಾಥ್ ಕುನ್ನೂರುಗೆ ಇಲ್ಲ, ವಿನಯ ಕುಲಕರ್ಣಿಯೇ ಪಕ್ಕಾ?
ಹೊಸಪೇಟೆಯಲ್ಲಿಯೂ ಮುಸ್ಲಿಂರ ಆಕ್ರೋಶ
ಒಳ ಮೀಸಲಾತಿ ರದ್ದುಪಡಿಸಿರುವ ರಾಜ್ಯ ಸರ್ಕಾರ ಕ್ರಮವನ್ನು ಪ್ರಶ್ನಿಸಿ ಹೊಸಪೇಟೆಯಲ್ಲಿ ಮುಸ್ಲಿಂ ಸಮುದಾಯದಿಂದ ಪ್ರತಿಭಟನೆ ನಡೆಸಲಾಗಿದೆ. ಹೊಸಪೇಟೆಯ ತಹಸೀಲ್ದಾರ್ ಕಚೇರಿ ಎದುರು ಆಕ್ರೋಶ ವ್ಯಕ್ತಪಡಿಸಲಾಗಿದೆ.