Site icon Vistara News

Physical Abuse : ಅವನಿಗೆ 42, ಅವಳಿಗೆ 24 : ಸಂಸದ ದೇವೇಂದ್ರಪ್ಪ ಪುತ್ರನಿಂದ ಯುವತಿಗೆ ವಂಚನೆ; ಏನಿದು ಲವ್ವಿಡವ್ವಿ?

Son of MP Devendrappa Professor Ranganath

ಮೈಸೂರು/ ಬೆಂಗಳೂರು: ಬಳ್ಳಾರಿ ಸಂಸದ ದೇವೇಂದ್ರಪ್ಪ (Ballary MP Devendrappa) ಅವರ ಪುತ್ರ, ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಉಪನ್ಯಾಸಕರಾಗಿರುವ ಪ್ರೊ. ರಂಗನಾಥ್‌ (Professor Ranganath) ಅವರ ಮೇಲೆ ಯುವತಿಗೆ ವಂಚನೆ (Physical Abuse) ಮಾಡಿದ ಆರೋಪದಲ್ಲಿ ಪ್ರಕರಣದ ದಾಖಲಾಗಿದೆ. ಇದೇ ವೇಳೆ ಪ್ರೊ. ರಂಗನಾಥ್‌ ಅವರು ಯುವತಿಯ ಮೇಲೆ ಹನಿಟ್ರ್ಯಾಪ್‌ (Honey trap) ಆರೋಪ ಮಾಡಿ ಕೇಸು ದಾಖಲಿಸಿದ್ದಾರೆ. ಯುವತಿ ಸ್ವತಃ ಸಂಸದ ದೇವೇಂದ್ರಪ್ಪ ಅವರಿಗೂ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದ್ದಾಳೆ.

ಪ್ರೊ. ರಂಗನಾಥ್‌ಗೆ 42 ವರ್ಷ ಆಗಿದ್ದರೆ ವಂಚನೆಗೆ ಒಳಗಾಗಿದ್ದೇನೆ ಎಂದು ಹೇಳುತ್ತಿರುವ ಯುವತಿಗೆ 24 ವರ್ಷ ವಯಸ್ಸು. ಪ್ರೊ. ರಂಗನಾಥ್‌ ಮೈಸೂರಿನಲ್ಲಿ ಲೆಕ್ಚರರ್‌ ಆಗಿದ್ದರೆ ಯುವತಿ ಬೆಂಗಳೂರಿನಲ್ಲಿ ವಾಸವಾಗಿದ್ದಾಳೆ. ಒಂದೂವರೆ ವರ್ಷದ ಹಿಂದೆ ಕಾಮನ್‌ ಫ್ರೆಂಡ್ಸ್‌ ಮೂಲಕ ಪರಿಚಯವಾದ ಯುವತಿ ಬಳಿಕ ರಂಗನಾಥ್‌ಗೆ ಕ್ಲೋಸ್‌ ಆಗಿದ್ದಳು ಎನ್ನಲಾಗಿದೆ. ಪ್ರೊ. ರಂಗನಾಥ್‌ಗೆ ಮದುವೆಯಾಗಿ ಮಕ್ಕಳಿದ್ದರೂ ಯುವತಿ ಜತೆ ಅನುರಕ್ತನಾಗಿದ್ದು ಮಾತ್ರವಲ್ಲ, ಆಕೆಯನ್ನು ಮೈಸೂರಿನ ಖಾಸಗಿ ಹೋಟೆಲ್‌ಗೆ ಕರೆಸಿಕೊಂಡು ದೈಹಿಕ ಸಂಪರ್ಕ ಬೆಳೆಸಿದ್ದರೆನ್ನಲಾಗಿದೆ.

ಯುವತಿ ನೀಡಿದ ದೂರಿನಲ್ಲಿರುವುದೇನು?

2022ರಲ್ಲಿ ಪಾರ್ಟಿಯೊಂದರಲ್ಲಿ ಪ್ರೊ. ರಂಗನಾಥ್‌ ಅವರು ಪರಿಚಯವಾಗಿದ್ದರು. ಬಳಿಕ ಆಗಾಗ ಕರೆ ಮಾಡುತ್ತಿದ್ದರು. ತಾನು ಮೈಸೂರಿನ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದು ಮದುವೆಯಾದರೆ ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ಹೇಳುತ್ತಿದ್ದರು. 2023ರ ಜನವರಿ 13ರಂದು ಕೆಲಸದ ನಿಮಿತ್ತ ಬೆಂಗಳೂರಿಗೆ ಬಂದಿದ್ದ ಅವರು ಬೆಂಗಳೂರಿನ ಒಂದು ಹೋಟೆಲ್‌ಗೆ ಕರೆಸಿಕೊಂಡು ಬಳಿಕ ಮೈಸೂರಿಗೆ ಕರೆದುಕೊಂಡು ಹೋದರು. ಅಲ್ಲಿ ರಾತ್ರಿ ತನ್ನ ಜತೆಗೇ ಇದ್ದು ದೈಹಿಕ ಸಂಪರ್ಕ ಬೆಳೆಸಿದರು. ಮದುವೆಯಾಗುತ್ತೇನೆ ಎಂದು ನಂಬಿಸಿದ್ದ ಅವರು ಬಳಿಕ ನನ್ನ ಜತೆ ಸರಿಯಾಗಿ ಮಾತನಾಡುತ್ತಿಲ್ಲ. ಮದುವೆ ಮಾಡಿಕೊಳ್ಳದೆ ಮೋಸ ಮಾಡಿದ್ದಾರೆ. ಮದುವೆಯಾಗು ಎಂದರೆ ಕೊಲೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಬೆಂಗಳೂರಿನ ವಿಜಯನಗರ ನಿವಾಸಿಯಾಗಿರುವ ಈ ಯುವತಿ ದೂರಿನಲ್ಲಿ ಹೇಳಿದ್ದಾರೆ. ರಂಗನಾಥ್‌ ವಿರುದ್ಧ ಬೆಂಗಳೂರಿನ ಬಸವನಗುಡಿ ಮಹಿಳಾ ಠಾಣೆಯಲ್ಲಿ ಐಪಿಸಿ ಸೆಕ್ಷನ್ 420, 417, 506 ಅಡಿಯಲ್ಲಿ ಎಫ್ಐಆರ್‌ ದಾಖಲಾಗಿದೆ.

ರಂಗನಾಥ್‌ ಮತ್ತು ಯುವತಿ ನಡುವಿನ ಜಗಳದ ಆಡಿಯೊ ಇಲ್ಲಿದೆ

https://vistaranews.com/wp-content/uploads/2023/11/WhatsApp-Audio-2023-11-17-at-09.44.07.mp3

ದೇವೇಂದ್ರಪ್ಪ ಅವರಿಗೂ ಫೋನ್‌ ಮಾಡಿದ ಯುವತಿ

ಈ ನಡುವೆ, ಯುವತಿ ಸಂಸದ ದೇವೇಂದ್ರ ಅವರಿಗೂ ಕರೆ ಮಾಡಿರುವ ಯುವತಿ ತನಗೆ ಅನ್ಯಾಯವಾಗಿದೆ, ನ್ಯಾಯ ಕೊಡಿಸಿ ಎಂದು ಮನವಿ ಮಾಡಿದ್ದಾಳೆ. ಆಗ ದೇವೇಂದ್ರ ಅವರು ನಿನಗೆ ವಯಸ್ಸೆಷ್ಟು ಎಂದು ಕೇಳಿದ್ದಾರೆ. ಆಕೆ ಹೇಳಿಲ್ಲ. ನೀವು ನಿಮ್ಮ ಪಾಡಿಗೆ ಎಲ್ಲವನ್ನೂ ಮಾಡಿಕೊಂಡಿದ್ದೀರಿ, ಇನ್ನು ನನ್ನನ್ನು ಕೇಳುವುದೇನಿದೆ ಎಂದು ದೇವೇಂದ್ರ ಹೇಳಿದ್ದಾರೆ. ರಂಗನಾಥ್‌ಗೆ ಮದುವೆಯಾಗಿರುವ ವಿಷಯ ತನಗೆ ಗೊತ್ತೇ ಇಲ್ಲ ಎಂದು ಯುವತಿ ಹೇಳಿದ್ದಾಳೆ.

ಆಗ ದೇವೇಂದ್ರಪ್ಪ ಅವರು ಕಾನೂನು ಪ್ರಕಾರ ನೀನು ಏನು ಮಾಡುವುದಿದ್ದರೂ ಮಾಡಬಹುದು ಎಂದು ಹೇಳಿದ್ದಾರೆ. ನಿಮ್ಮ ಘನತೆ ಗೌರವಗಳಿಗೆ ತೊಂದರೆಯಾಗುತ್ತದೆ ಎಂದು ಯುವತಿ ಹೇಳಿದರೂ ದೇವೇಂದ್ರಪ್ಪ ಅವರು ಅದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ.

ಯುವತಿ ಮತ್ತು ಸಂಸದ ದೇವೇಂದ್ರಪ್ಪ ಅವರ ನಡುವಿನ ಮಾತುಕತೆಯ ಆಡಿಯೊ ಇಲ್ಲಿದೆ

https://vistaranews.com/wp-content/uploads/2023/11/WhatsApp-Audio-2023-11-17-at-09.44.07-1.mpeg-1.mp3

ಹನಿಟ್ರ್ಯಾಪ್‌ ಆರೋಪ ಮಾಡಿದ ಪ್ರೊ. ರಂಗನಾಥ್‌

ಈ ನಡುವೆ ಪ್ರೊ. ರಂಗನಾಥ್‌ ಅವರು, ಮೂರು ದಿನಗಳ ಹಿಂದೆ ಮೈಸೂರಿನ ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಯುವತಿಯೊಬ್ಬಳು ಹಣಕ್ಕಾಗಿ ಪೀಡಿಸುತ್ತಿದ್ದಾಳೆ, ಹನಿ ಟ್ರ್ಯಾಪ್‌ಗೆ ಪ್ರಯತ್ನಿಸುತ್ತಿದ್ದಾಳೆ ಎಂದು ದೂರಿನಲ್ಲಿ ಹೇಳಿದ್ದಾರೆ.

ಒಂದುವರೆ ವರ್ಷದ ಹಿಂದೆ ಸ್ನೇಹಿತರ ಮೂಲಕ ಯುವತಿಯ ಪರಿಚಯವಾಗಿತ್ತು. ಬಳಿಕ ಆಕೆ ನನ್ನನ್ನು ಪ್ರೀತಿಸುತ್ತಿರುವುದಾಗಿ ಹೇಳಿದಾಗ ವಿರೋಧಿಸಿದ್ದೆ. ಕಳೆದ ಅಕ್ಟೋಬರ್‌ ತಿಂಗಳ ಆರಂಭದಲ್ಲಿ ಯುವತಿ ಬೆಂಗಳೂರಿನ ಸ್ಯಾಟಲೈಟ್‌ ಬಸ್‌ ನಿಲ್ದಾಣದ ಬಳಿ ನನ್ನನ್ನು ಭೇಟಿಯಾಗಿ ಅವಾಚ್ಯ ಶಬ್ದಗಳಿಂದ ಬೈದಿದ್ದಾಳೆ. ಮೇಲ್ಜಾತಿಯವಳಾದ ನಾನು ಪರಿಶಿಷ್ಟ ಜಾತಿಯ ವ್ಯಕ್ತಿಯಾಗಿರುವ ನಿನ್ನನ್ನು ಮದುವೆ ಮಾಡಿಕೊಳ್ಳುವಂತೆ ಕೇಳಿದರೂ ಆಗುವುದಿಲ್ಲವೇ ಎಂದು ಜಾತಿನಿಂದನೆಯನ್ನೂ ಮಾಡಿದ್ದಾಳೆ ಎಂದು ದೂರಿನಲ್ಲಿ ಪ್ರೊ. ರಂಗನಾಥ್‌ ಹೇಳಿದ್ದಾರೆ.

ನಾನು ಮತ್ತು ಅಕೆ ಜತೆಗಿರುವ ಚಿತ್ರಗಳನ್ನು, ಸಂಭಾಷಣೆಯ ಆಡಿಯೋಗಳನ್ನು ನನ್ನ ಪತ್ನಿಗೆ ಕಳುಹಿಸುವುದಾಗಿ ಬೆದರಿಕೆ ಒಡ್ಡುವ ಜತೆಗೆ ಪದೇಪದೆ ಕರೆ ಮಾಡಿ ಹಣಕ್ಕೆ ಬೇಡಿಕೆ ಇಡಲಾಗುತ್ತಿದೆ. ಈ ಬೆದರಿಕೆಗಳಿಗೆ ಹೆದರಿ ನನ್ನ ಖಾತೆಯಿಂದಲೇ 32,500 ರೂ. ವರ್ಗಾವಣೆ ಮಾಡಿದ್ದೇನೆ.

ಈ ನಡುವೆ, ಕಳೆದ ಅಕ್ಟೋಬರ್‌ 28ರಂದು ಯುವತಿಯು ಶ್ರೀನಿವಾಸ್‌ ಎಂಬ ವ್ಯಕ್ತಿಯನ್ನು ಮೈಸೂರಿಗೆ ಕಳುಹಿಸಿದ್ದು ಹೋಟೆಲ್‌ ಒಂದರಲ್ಲಿ ಮಾತುಕತೆ ನಡೆಸಲಾಯಿತು. ಆಗ ಆ ವ್ಯಕ್ತಿ 15 ಲಕ್ಷ ರೂ.ಗಳಿಗೆ ಬೇಡಿಕೆ ಇಟ್ಟಿದ್ದ. ಬಳಿಕ ಈ ಮೊತ್ತವನ್ನು 10 ಲಕ್ಷಕ್ಕೆ ಇಳಿಸಲಾಗಿತ್ತು. ಹೀಗೆ ಹಣಕ್ಕಾಗಿ ಬೇಡಿಕೆ, ಜಾತಿ ನಿಂದನೆ, ಮಾನಸಿಕ ಹಿಂಸೆಯನ್ನು ನೀಡಲಾಗುತ್ತಿದೆ ಎಂದು ಪ್ರೊ. ರಂಗನಾಥ್‌ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.

ಪ್ರೊ. ರಂಗನಾಥ್‌ ನಿಗೂಢ ನಾಪತ್ತೆ

ಈ ನಡುವೆ, ಉಪನ್ಯಾಸಕ ಪ್ರೊ. ರಂಗನಾಥ್‌ ತಲೆಮರೆಸಿಕೊಂಡಿದ್ದಾರೆ. ಮನೆಗೂ ಬಾರದೆ ಅವರು ಎಲ್ಲಿ ಹೋಗಿದ್ದಾರೆ ಎನ್ನುವುದು ತಿಳಿದಿಲ್ಲ. ತಮ್ಮ ಬಂಧನವಾಗಬಹುದು ಎಂಬ ಭಯದಿಂದ ಅವರು ತಲೆಮರೆಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಮಗ-ಸೊಸೆ ಚೆನ್ನಾಗಿದ್ದಾರೆ, ಇದು ಹನಿಟ್ರ್ಯಾಪ್‌ ಎಂದ ಸಂಸದ ದೇವೇಂದ್ರಪ್ಪ

ದಾವಣಗೆರೆ: ಆ ಯುವತಿ ಬ್ಲ್ಯಾಕ್‌ ಮೇಲ್‌ ಮಾಡುತ್ತಿದ್ದಾಳೆ. ನನ್ನ ಮಗ ಸಾಕಷ್ಟು ಹಣ ಕಳೆದುಕೊಂಡಿದ್ದಾನೆ ಎಂದು ಪ್ರಕರಣದ ಬಗ್ಗೆ ಸಂಸದ ಆರ್‌ ದೇವೇಂದ್ರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.

ಹರಪನಹಳ್ಳಿ ತಾಲೂಕಿನ ಅರಸಿಕೆರೆ ನಿವಾಸದಲ್ಲಿ ಹೇಳಿಕೆ ನೀಡಿರುವ ಅವರು, ಸಾಮಾಜಿಕ ನ್ಯಾಯ ಸಮಿತಿ ಸಭೆಗಾಗಿ ಕಾರಿನಲ್ಲಿ ಹೋಗುವಾಗ ಯುವತಿಯ ಕರೆ ಬಂದಿತ್ತು. ನಿಮ್ಮ ಮಗ ಮದುವೆ ಆಗುತ್ತೇನೆ ಎಂದು ಹೇಳಿ ಒಂದೂವರೆ ವರ್ಷದಿಂದ ವಂಚನೆ ಮಾಡಿದ್ದಾನೆ. ನೀವು ದೊಡ್ಡವರು ಅಂತ ಕರೆ ಮಾಡಿದ್ದೇನೆ ಎಂದಳು. ನಾನು ಕಾನೂನು ಪ್ರಕಾರ ಹೋಗು ಅಂತ ಹೇಳಿದ್ದೇನೆ ಎಂದು ತಿಳಿಸಿದರು.

ಚಿತ್ರದುರ್ಗ ಜಿಲ್ಲೆ, ಭರಮಸಾಗರ ಸಮೀಪದ ಕೊಳಹಾಳ್ ಗ್ರಾಮದ ಕಲ್ಲೇಶ್ ಎಂಬಾತನ ಮೂಲಕ ಈ ಯುವತಿ ರಂಗನಾಥ್‌ಗೆ ಪರಿಚಯವಾಗಿದ್ದಾಳೆ. ಇದೊಂದು ಬ್ಲ್ಯಾಕ್‌ಮೇಲಿಂಗ್‌ ಟೀಮ್‌ ಅನಿಸುತ್ತದೆ. ಕಲ್ಲೇಶ್ ಅಂಡ್ ಟೀಂ ಮಾಡಿರಬಹುದು ಅಂತ ಅನುಮಾನ ಇದೆ ಎಂದು ದೇವೇಂದ್ರಪ್ಪ ಹೇಳಿದ್ದಾರೆ.

ʻʻಆ ಯುವತಿ ಬ್ಲಾಕ್ ಮೇಲ್ ಮಾಡ್ತಿದ್ದಾಳೆ. ಚೈನು, ಉಂಗುರ ಎಲ್ಲ‌ ಕಳೆದುಕೊಂಡಿದ್ದೇನೆ ಎಂದು ಮಗ ಹೇಳಿದ್ದಾನೆ. ನನ್ನ ಮಗನಿಗೆ ಮದ್ವೆ ಮಾಡಿ 10-12 ವರ್ಷ ಆಯ್ತು. ಮಗ-ಸೊಸೆ ಚನ್ನಾಗಿದ್ದಾರೆʼʼ ಎಂದು ಹೇಳಿರುವ ದೇವೇಂದ್ರಪ್ಪ, ʻʻಕಾನೂನು ಪ್ರಕಾರ ಎಲ್ಲರೂ ಒಂದೇ, ಹೆಣ್ಣು, ಗಂಡು ಎರಡೂ ಒಂದೇʼʼ ಎಂದರು.

ಈ ಪ್ರಕರಣದಲ್ಲಿ ರಾಜಕಾರಣ ಕೂಡ ಮಿಕ್ಸ್ ಆದ ಹಾಗೆ ಕಾಣಿಸುತ್ತಿದೆ. ಯಾರೋ ಬೇಕು ಅಂತ ಪ್ಲಾನ್ ಮಾಡಿ ಟ್ರಾಪ್ ಮಾಡಿದ್ದಾರೆ ಎನ್ನುವುದು ದೇವೇಂದ್ರಪ್ಪ ಅವರ ಆಪಾದನೆ.

Exit mobile version