ಕೋಲಾರ: ಪಾರಿವಾಳ ವಿಷಯಕ್ಕೆ ಸಂಬಂಧಿಸಿದ ಜಗಳವೊಂದು ಐವರ ಮೇಲೆ ಚಾಕುವಿನಿಂದ ಇರಿಯುವ ಮಟ್ಟಕ್ಕೆ ಹೋಗಿದೆ. ಇಬ್ಬರು ಪುರುಷರು ಮತ್ತು ಮೂವರು ಮಹಿಳೆಯರು ಚಾಕು ಇರಿತಕ್ಕೆ ಗುರಿಯಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಘಟನೆ ನಡೆದಿರುವುದು ಕೋಲಾರ ಜಿಲ್ಲೆಯ ಮಾಲೂರು ಪಟ್ಟಣದ ಗಾಂಧಿ ಸರ್ಕಲ್ನಲ್ಲಿ. ಇಮ್ರಾನ್ ಖಾನ್ ಎಂಬಾತ ರಾಮು ಮತ್ತು ಅವರ ಕುಟುಂಬಿಕರ ಮೇಲೆ ಹಲ್ಲೆ ಮಾಡಿದ್ದಾರೆ. ರಾಮು, ಅವರ ಸಹೋದರ ನಾಗರಾಜ್, ಮನೆಯ ಮಹಿಳೆಯರಾದ ರಾಜೇಶ್ವರಿ, ನಾಗವೇಣಿ ಹಾಗೂ ಚಂದ್ರಕಲಾ ಎಂಬವರಿಗೆ ಗಾಯಗಳಾಗಿವೆ.
ಕೊಟ್ಟ ಪಾರಿವಾಳ ಕೇಳಲು ಹೋದಾಗ…
ಇಮ್ರಾನ್ ಖಾನ್ ಪಾರಿವಾಳ ವ್ಯಾಪಾರಿ. ಅವನಿಂದ ರಾಮು ಎಂಬವರು ಬಾಡಿಗೆಗೆ ಪಾರಿವಾಳ ತೆಗೆದುಕೊಂಡಿದ್ದರು. ಅವರು ತೆಗೆದುಕೊಂಡಿದ್ದ ಪಾರಿವಾಳವನ್ನು ಮರಳಿ ಕೊಡಬೇಕಾಗಿತ್ತು. ಯಾಕೆ ವಾಪಸ್ ಕೊಟ್ಟಿಲ್ಲ ಎಂದು ಇಮ್ರಾನ್ ರಾಮು ಅವರ ಮನೆ ಬಳಿ ಹೋಗಿದ್ದಾನೆ.
ಆದರೆ ಆತ ಕೇಳಲು ಹೋದ ರೀತಿ ಸರಿ ಇರಲಿಲ್ಲ. ಗಾಂಜಾ ಮತ್ತೇರಿಸಿಕೊಂಡು ಹೋಗಿದ್ದ ಇಮ್ರಾನ್ ಖಾನ್ ಹೋಗುತ್ತಿದ್ದಂತೆಯೇ ಮನೆಯವರ ಜತೆ ಜಗಳ ತೆಗೆದಿದ್ದಾನೆ. ಮಾತ್ರವಲ್ಲ ಮನೆಯವರ ಮೇಲೆ ಚಾಕುವಿನಿಂದ ಮನಬಂದಂತೆ ಹಲ್ಲೆ ಮಾಡಿದ್ದಾನೆ. ಒಟ್ಟು ಏಳು ಜನರ ಮೇಲೆ ಆತ ಹಲ್ಲೆ ಮಾಡಿದ್ದು ಯದ್ವಾತದ್ವಾ ಚುಚ್ಚಿದ್ದಾನೆ.
ರಾಮು ಅವರ ಸಹೋದರ ನಾಗರಾಜ್ಗೆ ಗಂಭೀರ ಗಾಯವಾಗಿದೆ. ಅವರ ಮುಖ, ಕೈ ಕಾಲು ಹಾಗೂ ಎದೆ ಭಾಗಕ್ಕೆ ಚಾಕುವಿನಿಂದ ಇರಿಯಲಾಗಿದೆ. ಮೊದಲು ಇಮ್ರಾನ್ ಖಾನ್ ರಾಮು ಮೇಲೆ ಹಲ್ಲೆ ಮಾಡಿದ್ದ. ಆಗ ಜಗಳ ಬಿಡಿಸಲು ಹೋದ ರಾಮು ಸಹೋದರ ನಾಗರಾಜ್ ಮೇಲೆ ಮನಬಂದಂತೆ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ.
ಕೊನೆಗೂ ಗಾಂಜಾ ಮತ್ತಿನಲ್ಲಿದ್ದ ಆರೋಪಿ ಇಮ್ರಾನ್ ಖಾನ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗಾಯಾಳುಗಳನ್ನು ಮಾಲೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮಾಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ | ಕುಡಿದ ಮತ್ತಿನಲ್ಲಿ ಯುವತಿಯ ಬೀದಿ ರಂಪಾಟ; ಸಾರ್ವಜನಿಕರ ಮೇಲೆ ಹಲ್ಲೆಗೆ ಯತ್ನ