ಮೈಸೂರು : ಅನ್ಯ ಜಾತಿಯ ಯುವಕನನ್ನು ಪ್ರೀತಿಸಿದ ಕಾರಣಕ್ಕಾಗಿ ಪೋಷಕರೇ ತಮ್ಮ ಮಗಳನ್ನು ಮರ್ಯಾದೆ ಹತ್ತೆ (honor killing) ಮಾಡಿರುವ ಘಟನೆ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗುತ್ತಿದ್ದು, ಹತ್ಯೆಗೊಳಗಾದ ಬಾಲಕಿ ಶಾಲಿನಿ, ನಾನು ಮೃತಪಟ್ಟರೆ ಅದಕ್ಕೆ ನನ್ನ ತಂದೆ-ತಾಯಿಯೇ ಕಾರಣ ಎಂದು ಪ್ರಿಯಕರನಿಗೆ ತಿಳಿಸಿದ ಆಡಿಯೋ ಬಹಿರಂಗಗೊಂಡು, ವೈರಲ್ ಆಗಿದೆ.
ಪಿರಿಯಾಪಟ್ಟಣ ತಾಲೂಕಿನ ಕಗ್ಗುಂಡಿ ಗ್ರಾಮದ ನಿವಾಸಿಯಾಗಿರುವ ಶಾಲಿನಿ(17)ಯನ್ನು ಅವರ ಪೋಷಕರೇ ಹತ್ಯೆ ಮಾಡಿದ್ದರು. ಈ ಬಗ್ಗೆ ಪೊಲೀಸರು ತನಿಖೆ ಚುರುಕುಗೊಳಿಸಿರುವಾಗಲೇ ಬಾಲಕಿ ಶಾಲಿನಿ, ತನ್ನ ಪ್ರಿಯಕರನೊಂದಿಗೆ ಫೋನ್‌ನಲ್ಲಿ ಮಾತನಾಡಿರುವುದರ ಆಡಿಯೋ ಬಹಿರಂಗಗೊಂಡಿದೆ. ಶಾಲಿನಿಯೇ ತನ್ನ ಪ್ರಿಯಕರನಿಗೆ ಹೇಳಿ, ತಾನು ಮಾತನಾಡಿಸಿದ್ದನ್ನು ರೆಕಾರ್ಡ್ ಮಾಡಿಸಿದ್ದಳು ಎನ್ನಲಾಗಿದೆ. ಹೀಗಾಗಿ ಈ ಹತ್ಯೆ ಪ್ರಕರಣಕ್ಕೆ ಬಲವಾದ ಸಾಕ್ಷಿ ದೊರೆತಂತಾಗಿದೆ.
“ನಾನೇನಾದರೂ ಸತ್ತರೆ ಅದಕ್ಕೆ ನಮ್ಮ ಅಪ್ಪ ಅಮ್ಮನೇ ಕಾರಣ. ನನ್ನನ್ನು ಅಪಹರಣ ಮಾಡಿಸುವ ಪ್ಲ್ಯಾನ್ ಮಾಡಿದ್ದಾರೆ. ಬಾಲ ಮಂದಿರದಿಂದ ನೀನು ನಿನ್ನಷ್ಟದ ಹಾಗೇ ಇರು ಎಂದು ಕರೆದುಕೊಂಡು ಬಂದರು. ಪಾಂಡವಪುರದಲ್ಲಿ ಕೆಲಸಕ್ಕೆ ಕಳುಹಿಸುತ್ತಿದ್ದಾರೆ. ನಾನು ಮಾತನಾಡಿರುವುದನ್ನು ರೆಕಾರ್ಡ್ ಮಾಡಿಕೋ. ನಾನು ಸತ್ತರೆ ಅದನ್ನು ನಿನ್ನ ಮೇಲೆ ಹಾಕಲು ಪ್ಲ್ಯಾನ್ ಮಾಡಿದ್ದಾರೆ. ಈ ಆಡಿಯೋ ಪಿರಿಯಾಪಟ್ಟಣ ಪೊಲೀಸರಿಗೆ ಕೊಡುʼʼ. ಎಂದು ಪ್ರಿಯಕರ ಮಂಜುನಾಥ್ ಗೆ ಮೃತ ಶಾಲಿನಿ ಫೋನ್‌ನಲ್ಲಿ ಹೇಳಿದ್ದಾಳೆʼʼ.
ಈ ಸಂಷರ್ಭದಲ್ಲಿ ʼʼ18 ವರ್ಷ ಆಗುವವರೆಗೂ ನೀನು ಹುಷಾರಾಗಿರುʼʼ ಎಂದು ಪೋನ್‌ನಲ್ಲಿ ಮಂಜುನಾಥ್ ಶಾಲಿನಿಗೆ ಎಚ್ಚರಿಕೆಯನ್ನು ನೀಡಿದ್ದ.
ಏನಿದು ಪ್ರಕರಣ?
ದ್ವಿತಿಯ ಪಿಯುಸಿ ಓದುತ್ತಿದ್ದ ಶಾಲಿನಿ ಹಾಗೂ ಮೆಲ್ಲಹಳ್ಳಿಯ ಯುವಕ ಮಂಜುನಾಥ್ ಪರಸ್ಪರ ಪ್ರೀತಿಸುತ್ತಿದ್ದರು. ಇಬ್ಬರೂ ಮದುವೆ ಮಾಡಿಕೊಳ್ಳುವುದಾಗಿ ಪೋಷಕರಿಗೆ ತಿಳಿಸಿದ್ದರು. ಆದರೆ ಯುವಕ ಜಾತಿ ಕಾರಣಕ್ಕೆ ಯುವತಿ ಮನೆಯವರು ಒಪ್ಪಿರಲಿಲ್ಲ. ಪ್ರಿಯಕರ ಮಂಜುನಾಥ್‌ಗಾಗಿ ಶಾಲಿನಿ ಮನೆಬಿಟ್ಟು ಹೋಗಿದ್ದಳು. ಈ ಸಂದರ್ಭದಲ್ಲಿ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಶಾಲಿನಿ ಪೋಷಕರೊಂದಿಗೆ ತೆರಳಲು ನಿರಾಕರಿಸಿದ್ದಳು. ಪರಿಣಾಮ ಪೊಲೀಸರು ಬಾಲಕಿಯನ್ನು ಬಾಲಮಂದಿರಕ್ಕೆ ಕಳುಹಿಸಿದ್ದರು. ಇತ್ತೀಚೆಗೆ ತಂದೆ ಸುರೇಶ್ ಮನವೊಲಿಸಿ ಮನೆಗೆ ಕರೆದುಕೊಂಡು ಬಂದಿದ್ದರು.
ಇದನ್ನೂ ಓದಿ | ಕುಂದಾಪುರದ ಉದ್ಯಮಿ ಆತ್ಮಹತ್ಯೆ ಪ್ರಕರಣ, ಪ್ರಮುಖ ಆರೋಪಿಗೆ ಜಾಮೀನು ನಿರಾಕರಣೆ
ಮನೆಗೆ ಕರೆತಂದ ಮಗಳನ್ನು ತಂದೆ- ತಾಯಿಯೇ ಹೊಡೆದು ಕೊಲೆಗೈದಿದ್ದಾರೆ. ಬಳಿಕ ಬರೋಬ್ಬರಿ ಅರ್ಧ ಕಿಲೋಮೀಟರ್‌ವರೆಗೆ ಹೆಣವನ್ನು ಇಬ್ಬರೇ ಹೊತ್ತುಕೊಂಡು ಸಾಗಿಸಿ, ಜಮೀನಿನ ಸಮೀಪದಲ್ಲಿಟ್ಟು, ಮುಂದೇನು ಮಾಡಬೇಕೆಂದು ತೋಚದೆ ಪೊಲೀಸರಿಗೆ ಶರಣಾಗಿದ್ದಾರೆ. ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ಕೊಲೆ ಮಾಡಿರುವುದು ಮೇಲ್ನೋಟಕ್ಕೆ ಗೊತ್ತಾಗಿದೆ.
ಪೊಲೀಸರು ವಿಚಾರಣೆಗೆ ಒಳಪಡಿಸಿದಾಗ ಸುರೇಶ್ ತಪ್ಪೊಪ್ಪಿಕೊಂಡಿದ್ದಾನೆ. ತಾಯಿ ಬೇಬಿ ಕೊಲೆಗೆ ಸಹಕಾರ ನೀಡಿರುವುದಾಗಿ ಹೇಳಿಕೆ ನೀಡಿದ್ದಾನೆ. ಈ ಸಂಬಂಧ ಪಿರಿಯಾಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್ ಪ್ರಕರಣದ ಕುರಿತು ವಿವರಿಸಿದ್ದು, ʼʼಪಿರಿಯಾಪಟ್ಟಣ ಠಾಣೆಗೆ ಬಂದ ಸುರೇಶ್ ಮಗಳು ಶಾಲಿನಿಯನ್ನು ಕೊಲೆ ಮಾಡಿ ಶವವನ್ನು ಜಮೀನು ಪಕ್ಕದಲ್ಲಿ ಇಟ್ಟಿದ್ದೇನೆ ಎಂದು ವಿವರಿಸಿದ್ದಾನೆ. ಹೇಳಿಕೆ ಆಧರಿಸಿ ದೂರು ದಾಖಲಿಸಿಕೊಂಡ ಪೊಲೀಸರು, ಆರೋಪಿಯೊಂದಿಗೆ ಮೊಹಜರು ನಡೆಸಿದ್ದಾರೆ. ಶವ ಪತ್ತೆಯಾದ ಬಳಿಕ ಇಬ್ಬರೂ ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ನಡೆಸಿದ್ದಾರೆ. ತಂದೆ ಸುರೇಶ್ ಮತ್ತು ತಾಯಿ ಬೇಬಿ ಇಬ್ಬರೂ ಸೇರಿಕೊಂಡು ಕತ್ತು ಹಿಸುಕಿ ಕೊಲೆ ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಶವದ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ವರದಿ ಬರಬೇಕಿದೆʼʼ ಎಂದಿದ್ದಾರೆ.
ಮೃತ ಶಾಲಿನಿ ಮತ್ತು ಪಕ್ಕದ ಗ್ರಾಮದ ಯುವಕ ಪರಸ್ಪರ ಪ್ರೀತಿಸುತ್ತಿದ್ದರು. ಇಬ್ಬರೂ ಮದುವೆಯಾಗಲೂ ನಿಶ್ಚಯಿಸಿದ್ದರು. ಆದರೆ ಅನ್ಯಜಾತಿ ಎನ್ನುವ ಕಾರಣಕ್ಕೆ ಆರೋಪಿಗಳು ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು. ಇದರಿಂದಾಗಿ ಯುವತಿ ಪೊಲೀಸ್ ಠಾಣೆಗೆ ಆಗಮಿಸಿ ನನ್ನ ಪೋಷಕರು ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದಾರೆ ಎಂದು ದೂರು ನೀಡಿದ್ದರು. ಆಪ್ತ ಸಮಾಲೋಚನೆ ಸಂದರ್ಭದಲ್ಲೂ ಅದೇ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಮೈಸೂರಿನ ಬಾಲಮಂದಿರಕ್ಕೆ ಬಿಡಲಾಗಿತ್ತು. ಮಗಳನ್ನು ಚನ್ನಾಗಿ ನೋಡಿಕೊಳ್ಳುವುದಾಗಿ ಮುಚ್ಚಳಿಕೆ ಬರೆದುಕೊಟ್ಟು ಬಾಲಮಂದಿರದಿಂದ ಕರೆದುಕೊಂಡು ಹೋಗಿದ್ದ ಪೋಷಕರು, ಕೊಲೆ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ | ಜುಗುರಾಜ್ ಹತ್ಯೆ ಮಾಡಲು ಹೆಂಡತಿಯೇ ಕಾರಣ ಎಂದ ಆರೋಪಿ: ಹಾಗಿದ್ರೆ ಬಿಜುರಾಮ್ ಪತ್ನಿ ಮಾಡಿದ್ದೇನು?