| ಪರಶುರಾಮ್ ತಹಶೀಲ್ದಾರ್, ಹುಬ್ಬಳ್ಳಿ
ಏಕಬಳಕೆ ಪ್ಲಾಸ್ಟಿಕ್ ಮಾರಾಟಕ್ಕೆ ದೇಶಾದ್ಯಂತ ನಿಷೇಧ ಹೇರಲಾಗಿದ್ದರೂ ಹುಬ್ಬಳ್ಳಿಯಲ್ಲಿ ಮಾತ್ರ ಅವ್ಯಾಹತವಾಗಿ ನಡೆಯುತ್ತಿದೆ. ಈ ಮಾದರಿಯ ಪ್ಲಾಸ್ಟಿಕ್ ಬಳಕೆ ಮತ್ತು ಉತ್ಪಾದನೆಗೆ (Plastic Ban) ಕೇಂದ್ರ ಸರ್ಕಾರ ಬ್ರೇಕ್ ಹಾಕಿದ ಮೇಲೂ ಇಲ್ಲಿ ಕಾಣಿಸಿಕೊಳ್ಳುವುದರ ಹಿಂದೆ ದೊಡ್ಡ ಜಾಲವೇ ಇದೆ ಎಂಬ ಅಸಲಿ ಕಹಾನಿ ಈಗ ಬಹಿರಂಗವಾಗಿದೆ.
ಕಠಿಣ ಕಾನೂನಿನ ಮಧ್ಯೆಯೂ ರಾಜಾರೋಷವಾಗಿ ಪ್ಲಾಸ್ಟಿಕ್ ದಂಧೆ ನಡೆಯುತ್ತಿರುವ ಬಗ್ಗೆ ಮಾಹಿತಿ ತಿಳಿಯಲು “ವಿಸ್ತಾರ ನ್ಯೂಸ್” ಮುಂದಾದಾಗ ಆತಂಕಕಾರಿ ವಿಷಯವೊಂದು ಬಹಿರಂಗವಾಗಿದ್ದು, ಹೊರ ರಾಜ್ಯಗಳಿಂದ ಕೊರಿಯರ್ ಮೂಲಕ ಪ್ಲಾಸ್ಟಿಕ್ ಉತ್ಪನ್ನಗಳು ರಾಜ್ಯವನ್ನು ತಲುಪುತ್ತಿವೆ ಎಂಬ ಅಂಶ ಬೆಳಕಿಗೆ ಬಂದಿದೆ. ಆದರೆ, ಯಾವ ರಾಜ್ಯದಿಂದ ಬರುತ್ತಿದೆ ಎಂಬ ಬಗ್ಗೆ ಸೂಕ್ತ ತನಿಖೆ ಮೂಲಕ ಕಂಡುಕೊಳ್ಳಬೇಕಿದೆ.
ನಿಷೇಧಿತ ಪ್ಲಾಸ್ಟಿಕ್ ಮಾರಾಟವನ್ನು ಲಾಭಕರ ದಂಧೆಯನ್ನಾಗಿ ಮಾಡಿಕೊಂಡಿರುವ ಕೆಲವರು ಹೊರ ರಾಜ್ಯಗಳಿಂದ ಪ್ಲಾಸ್ಟಿಕ್ ಉತ್ಪನ್ನಗಳನ್ನು ತರಿಸುತ್ತಿದ್ದಾರೆ. ಇದಕ್ಕಾಗಿ ಅವರು ಕೊರಿಯರ್ ಮಾರ್ಗವನ್ನು ಅನುಸರಿಸುತ್ತಿದ್ದಾರೆ. ಇಲ್ಲಾದರೆ ಅಷ್ಟಾಗಿ ಅನುಮಾನ ಬಾರದು, ಜತೆಗೆ ಚೆಕ್ಕಿಂಗ್ ಸಹ ನಡೆಯದು ಎಂಬ ನಿಟ್ಟಿನಲ್ಲಿ ಈ ತಂತ್ರವನ್ನು ಅನುಸರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕೊರಿಯರ್ ಸರ್ವಿಸ್ ಸಾಥ್?
ಈ ಅಕ್ರಮ ಪ್ಲಾಸ್ಟಿಕ್ ದಂಧೆಗೆ ಕೆಲವು ಕೊರಿಯರ್ ಸರ್ವಿಸ್‌ಗಳು ಸಾಥ್ ನೀಡುತ್ತಿವೆ ಎಂಬ ಗುಮಾನಿ ವ್ಯಕ್ತವಾಗಿದೆ. ವಸ್ತುಗಳ ಪ್ಯಾಕ್ ಮಾಡಲು ಬೇಕಾದ ಪ್ಲಾಸ್ಟಿಕ್ ಸಾಮಗ್ರಿ ಎಂದು ಬಿಲ್ ಮಾಡಿಸಿ ಲಾರಿಗಳಲ್ಲಿ ಸಾಗಾಟ ನಡೆಸಲಾಗುತ್ತಿದೆ. ಪ್ರತಿನಿತ್ಯ ನೂರಾರು ಟನ್ ನಿಷೇಧಿತ ಪ್ಲಾಸ್ಟಿಕ್ ಅನ್ನು ರಾಜ್ಯಕ್ಕೆ ತಂದು ಸುರಿಯಲಾಗುತ್ತಿದೆ. ಅವುಗಳನ್ನು ತಮ್ಮ ಗೋದಾಮುಗಳಲ್ಲೇ ಇರಿಸಿಕೊಳ್ಳುತ್ತಿದ್ದು, ನಂತರ ಅಲ್ಲಿಂದ ಸಾಗಾಟ ಆಗುತ್ತದೆ ಎಂದು ಹೇಳಲಾಗುತ್ತಿದೆ. ಹುಬ್ಬಳ್ಳಿ- ಕಾರವಾರ ರಸ್ತೆಯಲ್ಲಿರುವ ಕೆಲವು ಕೊರಿಯರ್ ಸರ್ವಿಸ್‌ನಲ್ಲಿ ಇಂತಹ ಪ್ಲಾಸ್ಟಿಕ್ ಸ್ಟಾಕ್ ಇರಿಸಲಾಗುತ್ತಿದೆ ಎಂಬ ಶಂಕೆ ವ್ಯಕ್ತವಾಗಿದೆ. ಹೀಗೆ ಕೊರಿಯರ್‌ನಲ್ಲಿ ಪ್ಲಾಸ್ಟಿಕ್ ಭೂತ ಕಾಡುತ್ತಿದೆ.
ಹುಬ್ಬಳ್ಳಿಯ ಎಲ್ಲೆಲ್ಲಿ ಬಳಕೆ?
ಹುಬ್ಬಳ್ಳಿಯ ಕೋರ್ಟ್ ಸರ್ಕಲ್, ಚೆನ್ನಮ್ಮ ವೃತ್ತ, ಜನತಾ ಬಜಾರ್, ದುರ್ಗದ ಬೈಲ್, ಸಿಬಿಟಿ, ರೈಲ್ವೆ ಸ್ಟೇಶನ್, ಬಸ್ ಸ್ಟ್ಯಾಂಡ್, ಅಕ್ಕಿ ಪೇಟ್ ಸೇರಿದಂತೆ ವಿವಿಧೆಡೆ ಪ್ಲಾಸ್ಟಿಕ್ ಕವರ್‌ಗಳ ಬಳಕೆಯಾಗುತ್ತಿದೆ. ಗ್ರಾಹಕರು ಮಾರುಕಟ್ಟೆಯಲ್ಲಿ ನಿಷೇಧಿತ ಪ್ಲಾಸ್ಟಿಕ್ ಹಿಡಿದು ಓಡಾಡುವುದು ಸಾಮಾನ್ಯವಾಗಿದೆ.
ಈ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ ಹೇಳುವುದೇ ಬೇರೆ. ತಾವು ಸಹ ಅಲ್ಲಲ್ಲಿ ದಾಳಿ ನಡೆಸಿ ದಂಡ ಹಾಕುತ್ತಿದ್ದೇವೆ. ಲಕ್ಷಾಂತರ ರೂಪಾಯಿಯನ್ನು ದಂಡವನ್ನೂ ಸಂಗ್ರಹಿಸಲಾಗಿದೆ. ಆದರೆ, ನಮಗೆ ಎಲ್ಲಿಂದ ಪ್ಲಾಸ್ಟಿಕ್ ಬರುತ್ತಿದೆ ಎಂಬುದು ತಿಳಿಯುತ್ತಿಲ್ಲ. ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಮೂಲ ಪತ್ತೆಯಾದರೆ ಕ್ರಮ ತೆಗೆದುಕೊಳ್ಳುತ್ತೇವೆ ಎಂಬ ಹೇಳಿಕೆ ನೀಡುತ್ತಿದ್ದಾರೆ.
ಪರಿಸರ ರಕ್ಷಣೆಗೆ ಕೊಡಲಿ ಪೆಟ್ಟು
ಪ್ಲಾಸ್ಟಿಕ್ ಬಳಕೆಯಿಂದ ಪರಿಸರಕ್ಕೆ ಆಗುತ್ತಿರುವ ತೀವ್ರ ಹಾನಿ ತಡೆಗಟ್ಟಲು ಕೇಂದ್ರ ಸರ್ಕಾರ ಮುತುವರ್ಜಿ ವಹಿಸಿ, 50 ಮೈಕ್ರಾನ್ ಗೇಜ್‌ಗಿಂತ ಕಡಿಮೆ ಇರುವ ಪ್ಲಾಸ್ಟಿಕ್ ಕವರ್ ಸಹಿತ ಉತ್ಪನ್ನಗಳನ್ನು ನಿಷೇಧ ಮಾಡಿ ಆದೇಶಿಸಿದೆ. ಜುಲೈ 1ರಿಂದಲೇ ಈ ಆದೇಶ ಜಾರಿಗೆ ಬಂದಿದ್ದು, ಈಗಾಗಲೇ ಕೆಲವು ಕಡೆಗಳಲ್ಲಿ ದಂಡ ಪ್ರಯೋಗವೂ ನಡೆದಿದೆ. ಆದರೆ, ಹುಬ್ಬಳ್ಳಿಯಲ್ಲಿ ಇವು ಯಾವುದೂ ಲೆಕ್ಕಕ್ಕೇ ಇಲ್ಲ ಎಂಬಂತೆ ಆಗಿದೆ. ಹೀಗಾಗಿ ಮೂಲವನ್ನು ಕಂಡುಹಿಡಿದು ಟ್ರೇಡ್ ಲೈಸೆನ್ಸ್ ರದ್ದುಪಡಿಸುವುದಲ್ಲದೆ, ಕ್ರಿಮಿನಲ್ ಮೊಕದ್ದಮೆಯನ್ನು ಹೂಡಬೇಕು ಎಂಬ ಆಗ್ರಹಗಳು ವ್ಯಕ್ತವಾಗಿವೆ.