ಬೆಂಗಳೂರು: ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DCM DK Shivakumar) ಅವರ ಅಕ್ರಮ ಆಸ್ತಿ (Illegal assets) ಗಳಿಕೆ ಪ್ರಕರಣದ ವಿಚಾರಣೆಗೆ ಸಂಬಂಧಿಸಿದ ತೀರ್ಪು ಇಂದು ಹೈಕೋರ್ಟ್‌ನಲ್ಲಿ (Karnataka high court) ಹೊರಬೀಳಲಿದೆ. ಇದು ಡಿಸಿಎಂ ಡಿಕೆಶಿ ರಾಜಕೀಯ ಭವಿಷ್ಯದಲ್ಲಿ ನಿರ್ಣಾಯಕವಾಗಲಿದ್ದು, ಕುತೂಹಲ ಮೂಡಿಸಿದೆ.
ಗೊತ್ತಾದ ಆದಾಯ ಮೂಲಕ್ಕಿಂತ ಹೆಚ್ಚು ಆಸ್ತಿ ಹೊಂದಿದ್ದಾರೆ ಎಂಬ ಆಪಾದನೆ ಸಂಬಂಧ ಸಿಬಿಐ ತನಿಖೆಗೆ ಶಿಫಾರಸ್ಸು ಮಾಡಿದ ರಾಜ್ಯ ಸರ್ಕಾರದ ಅಧಿಸೂಚನೆ ಪ್ರಶ್ನಿಸಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸಲ್ಲಿಸಿರುವ ಅರ್ಜಿ ವಿಚಾರಣೆ ಏಪ್ರಿಲ್‌ನಲ್ಲಿ ಪೂರ್ಣಗೊಂಡಿತ್ತು. ಕರ್ನಾಟಕ ಹೈಕೋರ್ಟ್ ಆದೇಶ ಕಾಯ್ದಿರಿಸಿತ್ತು. ಡಿಕೆ ಶಿವಕುಮಾರ್ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಕೆ ನಟರಾಜನ್ ಅವರ ನೇತೃತ್ವದ ಏಕಸದಸ್ಯ ಪೀಠ ನಡೆಸಿತ್ತು.
2014- 2018ರ ಸಮಯದಲ್ಲಿ ಆಸ್ತಿ ಗಳಿಕೆಯಲ್ಲಿ ಭಾರಿ ಅಕ್ರಮ ನಡೆದಿದೆ ಎಂದು ಡಿಕೆ ವಿರುದ್ಧ ಸಿಬಿಐ ಕೇಸ್ ದಾಖಲಿಸಿ ತನಿಖೆ ಆರಂಭಿಸಿತ್ತು. ಈ ಸಂಬಂಧ ಡಿಕೆಶಿ ಸಿಬಿಐ ತನಿಖೆ ರದ್ದು ಕೋರಿದ್ದರು. ಡಿಕೆ ಶಿವಕುಮಾರ್ ಪರ ಉದಯ್ ಹೊಳ್ಳ, ಸಂದೇಶ್ ಚೌಟ ಹಾಗೂ ಸಿಬಿಐ ಪರ ಪ್ರಸನ್ನ ಕುಮಾರ್ ವಾದ ಮಂಡಿಸಿದ್ದರು. ಇಂದು ಆದೇಶ ಹೊರಬೀಳಲಿದೆ.
ಸಿಬಿಐ ವಾದದ ಮುಖ್ಯಾಂಶವೇನು?
ಸಿಬಿಐ ಪರ ವಕೀಲ ಪಿ. ಪ್ರಸನ್ನ ಕುಮಾರ್ ಅವರು ಈ ಅರ್ಜಿ ಯಾಕೆ ಊರ್ಜಿತವಲ್ಲ ಎಂಬ ವಿಚಾರದಲ್ಲಿ ಹಲವು ಅಂಶಗಳನ್ನು ಮುಂದಿಟ್ಟಿದ್ದಾರೆ.
- ಇಂಥದ್ದೇ ತನಿಖಾ ಸಂಸ್ಥೆ ತನಿಖೆ ನಡೆಸಬೇಕು ಎಂದು ಹೇಳುವುದು ಅಥವಾ ಇಂಥದ್ದೇ ತನಿಖಾ ಸಂಸ್ಥೆಯಿಂದ ತನಿಖೆ ನಡೆಸಬೇಕು ಎಂದು ಆಗ್ರಹಿಸುವ ಹಕ್ಕನ್ನು ಆರೋಪಿ ಹೊಂದಿಲ್ಲ.
- ವಿಶೇಷ ಅಧಿನಿಯಮವಾದ, ದೆಹಲಿ ಪೊಲೀಸ್ ಸ್ಥಾಪನಾ ಕಾಯಿದೆ–1947ರ ಸೆಕ್ಷನ್ 6ರ ಅಡಿಯಲ್ಲಿ ತನಿಖೆಗೆ ನೀಡಲಾದ ಒಪ್ಪಿಗೆಯ ಕಾರಣಗಳನ್ನು ಸಿಬಿಐ ವಿವರಿಸುವ ಅಗತ್ಯವೇ ಇಲ್ಲ.
- ಈಗಾಗಲೇ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾಗಿದ್ದ ಇಂತಹುದೇ ಮೇಲ್ಮನವಿಯನ್ನು ರಾಜ್ಯ ಹೈಕೋರ್ಟ್ನ ವಿಭಾಗೀಯ ಪೀಠವು 2020ರಲ್ಲೇ ವಜಾಗೊಳಿಸಿದೆ. ಈ ಅರ್ಜಿಯನ್ನು 2020ರಲ್ಲೇ ಸಲ್ಲಿಸಿದ್ದರೂ ಇದಕ್ಕೆ ತಡೆ ಸಿಕ್ಕಿಲ್ಲ. ಆದಕಾರಣ ಕಾನೂನುರೀತಿಯಲ್ಲಿ ಶಿವಕುಮಾರ್ ಅವರ ಈ ಅರ್ಜಿ ಊರ್ಜಿತವಾಗುವುದಿಲ್ಲ.
- ಎರಡೂವರೆ ವರ್ಷಗಳಲ್ಲಿ ಸಿಬಿಐ ಈಗಾಗಲೇ ಶೇ 90ರಷ್ಟು ತನಿಖೆ ಪೂರ್ಣಗೊಳಿಸಿದೆ. ಈ ಕುರಿತಂತೆ ತನಿಖೆಯ ವಸ್ತುಸ್ಥಿತಿ ವರದಿಯನ್ನು ನ್ಯಾಯಾಲಯಕ್ಕೂ ಸಲ್ಲಿಸಲಾಗಿದೆ. ಇಷ್ಟೆಲ್ಲಾ ಸಮಯ ಕಳೆದ ಮೇಲೆ ಅರ್ಜಿದಾರರು ಅಧಿಸೂಚನೆ ಪ್ರಶ್ನಿಸುವುದಾಗಲೀ ಅಥವಾ ರದ್ದುಗೊಳಿಸಿ ಎಂದು ಕೋರುವುದಾಗಲಿ ಕಾನೂನು ಪ್ರಕಾರ ಸಾಧ್ಯವಿಲ್ಲ.
- ಇದು ಆದಾಯ ತೆರಿಗೆ ಕಾನೂನುಗಳ ಪ್ರಕಾರ ದಾಖಲಾಗಿಸಿರುವ ವಿಶೇಷ ಕ್ರಿಮಿನಲ್ ಪ್ರಕರಣ. ಹೀಗಾಗಿ, ಡಿ ಕೆ ಶಿವಕುಮಾರ್ ಸಿಬಿಐ ಮುಂದೆ ಹಾಜರಾಗಿ ಕೋಟ್ಯಂತರ ರೂಪಾಯಿಗಳನ್ನು ಎಲ್ಲಿಂದ, ಹೇಗೆ ಸಂಪಾದಿಸಿದರು ಎಂಬುದನ್ನು ವಿವರಿಸಲೇಬೇಕು.
ಡಿಕೆ ಶಿವಕುಮಾರ್ ಪರ ವಕೀಲರ ವಾದವೇನು?
ಶಿವಕುಮಾರ್ ಪರ ಹಿರಿಯ ವಕೀಲ ಉದಯ ಹೊಳ್ಳ ಅವರು ಉಲ್ಲೇಖಿಸಿದ ಅಂಶಗಳು ಹೀಗಿವೆ.
- ಈ ಪ್ರಕರಣವನ್ನು ದಾಖಲಿಸಿರುವ ಹಿಂದೆ ರಾಜಕೀಯ ಪಿತೂರಿ ಅಡಗಿದೆ.
- ಈಗಾಗಲೇ ಆದಾಯ ತೆರಿಗೆಗೆ ಸಂಬಂಧಿಸಿದ ಮೂರು ಪ್ರಕರಣಗಳಲ್ಲಿ ಶಿವಕುಮಾರ್ ಗೆದ್ದಿದ್ದಾರೆ. ಇದು ನಾಲ್ಕನೇ ಎಫ್ಐಆರ್.
- ಜನಪ್ರತಿನಿಧಿಗಳ ವಿರುದ್ಧದ ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣ ದಾಖಲಿಸುವ ಮುನ್ನ ವಿಧಾನಸಭೆಯ ಅಧ್ಯಕ್ಷರ ಅನುಮತಿ ಪಡೆಯಬೇಕಿತ್ತು.
- ತನಿಖೆಗೆ ನೀಡಲಾಗಿರುವ ಆಡಳಿತಾತ್ಮಕ ನಿರ್ಧಾರಕ್ಕೆ ಸಕಾರಣವೂ ಇಲ್ಲ. ಹೀಗಾಗಿ, ತನಿಖೆಗೆ ಶಿಫಾರಸ್ಸು ಮಾಡಲಾದ ಕ್ರಮವನ್ನು ರದ್ದುಗೊಳಿಸಬೇಕು.
ಎಷ್ಟಿದೆ ಆಸ್ತಿ?
ಕಳೆದ ಬಾರಿ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಯಾಗಿ ಡಿಕೆಶಿ ನಾಮಪತ್ರ ಸಲ್ಲಿಸಿದ ಸಂದರ್ಭ ಸಲ್ಲಿಸಿದ ಅಫಿಡವಿಟ್‌ನಲ್ಲಿ ಅವರು ತಮಗಿರುವ ಆಸ್ತಿ, ಕುಟುಂಬದ ಆಸ್ತಿ, ಅದರ ಮೌಲ್ಯಗಳ ಲೆಕ್ಕಾಚಾರಗಳನ್ನು ನೀಡಿದ್ದಾರೆ. 2018ರ ಚುನಾವಣೆಯ ವೇಳೆ 840 ಕೋಟಿ ರೂ. ಬಾಳುತ್ತಿದ್ದ ಅವರ ಆಸ್ತಿ ಮೌಲ್ಯ ಈಗ 1414 ಕೋಟಿ ರೂ. ಅದೇ ಹೊತ್ತಿಗೆ 225 ಕೋಟಿ ಮೊತ್ತದ ಲೋನ್ ಕೂಡಾ ಅವರಿಗಿದೆ.
ಇದನ್ನೂ ಓದಿ: DK Shivakumar: ಡಿಸಿಎಂ ಡಿ.ಕೆ. ಶಿವಕುಮಾರ್‌ಗೆ ತಾತ್ಕಾಲಿಕ ರಿಲೀಫ್; ಸಿಬಿಐಗೆ ಹೈಕೋರ್ಟ್ ನೋಟಿಸ್