ಶಿವಮೊಗ್ಗ: ಮಲೆನಾಡು ಶಿವಮೊಗ್ಗಕ್ಕೆ ಇಂದು ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಲಿದ್ದು, ಶಿವಮೊಗ್ಗದ ಸೋಗಾನೆ ಬಳಿ ವಿಮಾನ ನಿಲ್ದಾಣವನ್ನು ಲೋಕಾರ್ಪಣೆ ಮಾಡಲಿದ್ದಾರೆ.
ಶಿವಮೊಗ್ಗ ಜನತೆಯ ಹಾಗೂ ಮಾಜಿ ಸಿಎಂ ಯಡಿಯೂರಪ್ಪನವರ ಕನಸಿನ ಯೋಜನೆ ಯಡಿಯೂರಪ್ಪ ಅವರ ಹುಟ್ಟು ಹಬ್ಬದ ದಿನವೇ ಲೋಕಾರ್ಪಣೆಯಾಗಲಿದೆ. ಬೆಳಗ್ಗೆ 11.30ಕ್ಕೆ ದೆಹಲಿಯಿಂದ ವಿಶೇಷ ವಿಮಾನದ ಮೂಲಕ ಆಗಮಿಸಲಿರುವ ಮೋದಿ ವಿಮಾನ ನಿಲ್ದಾಣ ಲೋಕಾರ್ಪಣೆ ಹಾಗೂ ಸಾವಿರಾರು ಕೋಟಿ ರೂಪಾಯಿ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ವಿಮಾನ ನಿಲ್ದಾಣದ ಹೊರ ಭಾಗ ನಿರ್ಮಾಣವಾದ ಬೃಹತ್ ವೇದಿಕೆಗೆ ಆಗಮಿಸಲಿರುವ ಪ್ರಧಾನಿ, 1.15ರ ವರೆಗೆ ವೇದಿಕೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದು, 1.30ಕ್ಕೆ ಬೆಳಗಾವಿಗೆ ಪ್ರಯಾಣ ಬೆಳೆಸಲಿದ್ದಾರೆ. ಮೋದಿ ಜೊತೆ ಮಾಜಿ ಸಿಎಂ ಯಡಿಯೂರಪ್ಪ, ಸಿಎಂ ಬಸವರಾಜ್ ಬೊಮ್ಮಯಿ, ಕಟೀಲ್ ಸೇರಿದಂತೆ ಹಲವು ಗಣ್ಯರು ವೇದಿಕೆ ಹಂಚಿಕೊಳ್ಳಲಿದ್ದಾರೆ.
ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಹೈ ಅಲರ್ಟ್ ಜಾರಿ ಮಾಡಲಾಗಿದ್ದು, ಜಿಲ್ಲಾದ್ಯಂತ ಪೊಲೀಸ್ ಸರ್ಪಗಾವಲು ವಿಧಿಸಲಾಗಿದೆ. ಎಸ್ಡಿಐಪಿ ಹಾಗೂ ಸಹ ಸಂಘಟನೆಗಳ ಮೇಲೆ ಗುಪ್ತಚರ ನಿಗಾ ಇಡಲಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಶಂಕಿತ ಉಗ್ರರ ನೆಟ್ವರ್ಕ್ ಹಿನ್ನೆಲೆಯಲ್ಲಿ ಹೈ ಅಲರ್ಟ್ ಜಾರಿ ಮಾಡಲಾಗಿದೆ. ಮಂಗಳೂರಿನ ಕುಕ್ಕರ್ ಬಾಂಬ್, ಶಿವಮೊಗ್ಗ ನಗರದ ಬಾಂಬ್ ಟ್ರಯಲ್, ತೀರ್ಥಹಳ್ಳಿ ವ್ಯಾಪ್ತಿಯಲ್ಲಿ ಸ್ಯಾಟಲೈಟ್ ಸಿಗ್ನಲ್ ಪತ್ತೆ ಹಿನ್ನೆಲೆಯಲ್ಲಿ ಹೈ ಅಲರ್ಟ್ ತೆಗೆದುಕೊಳ್ಳಲಾಗಿದ್ದು, ಪೊಲೀಸ್ ಪಡೆ ನಗರಕ್ಕೆ ಗಸ್ತು ಹಾಕುತ್ತಿದೆ.
ರಾತ್ರಿ 10 ಗಂಟೆಗೆ ಹೋಟೆಲ್, ಅಂಗಡಿ ಮುಂಗಟ್ಟು ಬಾಗಿಲು ಹಾಕಿಸಿದ್ದು, ಜಿಲ್ಲೆಯ ಎಲ್ಲ ಲಾಡ್ಜ್, ವಸತಿ ಗೃಹಗಳಲ್ಲಿ ವಾಸ್ತವ್ಯ ಹೂಡಿದವರ ಮಾಹಿತಿಯನ್ನು ಪೊಲೀಸ್ ಇಲಾಖೆ ಕಲೆ ಹಾಕಿದೆ. ನೂತನ ವಿಮಾನ ನಿಲ್ದಾಣದ 1 ಕಿಲೋಮೀಟರ್ ಸುತ್ತಳತೆಯಲ್ಲಿ ಜಾಮರ್ ಅಳವಡಿಸಲಾಗಿದ್ದು, ಕಾರ್ಯಕ್ರಮಕ್ಕೆ ಮೊಬೈಲ್, ಪರ್ಸ್ ಹೊರತುಪಡಿಸಿ ಇತರೆ ಎಲ್ಲ ಎಲೆಕ್ಟ್ರಾನಿಕ್ ಗ್ಯಾಜೆಟ್ಸ್ ನಿರ್ಬಂಧ ಹಾಕಲಾಗಿದೆ.
ಇದನ್ನೂ ಓದಿ: PM Modi: ಇಂದು ರಾಜ್ಯಕ್ಕೆ ಮೋದಿ; ಎಲ್ಲೆಲ್ಲಿ, ಏನೇನು ಕಾರ್ಯಕ್ರಮ? ಇಲ್ಲಿದೆ ಸಂಪೂರ್ಣ ಮಾಹಿತಿ