Site icon Vistara News

PM Modi: ದೆಹಲಿ ಕನ್ನಡಿಗರಿಗೆ ಮೋಡಿ ಮಾಡಿದ ಮೋದಿ; ಕನ್ನಡದ ಅಸ್ಮಿತೆ, ಸಂಸ್ಕೃತಿ ಹೊಗಳಿದ ನಮೋ; ಹೇಗಿತ್ತು ಪ್ರಧಾನಿ ಮತಬೇಟೆ?

pm modi mesmerizes delhi kannadigas namo praises kannada identity culture plan for vote hunt

ವಿಕ್ರಂ ಕುಮಾರ್‌, ವಿಸ್ತಾರ ನ್ಯೂಸ್‌, ನವ ದೆಹಲಿ

ಸಮೀಪದಲ್ಲಿಯೇ ಇರುವ ಕರ್ನಾಟಕ ವಿಧಾನಸಭೆ ಚುನಾವಣೆಯನ್ನು (Karnataka Election 2023) ಬಿಜೆಪಿ ಹೈಕಮಾಂಡ್ ಗಂಭೀರವಾಗಿ ಪರಿಗಣಿಸಿದೆ. ಈಗಾಗಲೇ ರಾಜ್ಯಕ್ಕೆ ಕೇಂದ್ರ ನಾಯಕರು ಸರಣಿ ಭೇಟಿ ಕಾರ್ಯಕ್ರಮಗಳನ್ನು ನಡೆಸುತ್ತಲೇ ಬಂದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಸೇರಿದಂತೆ ಹಲವು ನಾಯಕರು ರಾಜ್ಯಕ್ಕೆ ಭೇಟಿ ನೀಡಿ ಸಮಾವೇಶಗಳನ್ನು ಹಮ್ಮಿಕೊಳ್ಳುತ್ತಲೇ ಇದ್ದಾರೆ. ಈ ನಡುವೆ ಪ್ರಧಾನಿ ನರೇಂದ್ರ ಮೋದಿ (PM Modi) ಅವರು ದೆಹಲಿಯಲ್ಲೇ ಕನ್ನಡಿಗರ ಮತ ಸೆಳೆಯಲು ಮಾಸ್ಟರ್‌ ಪ್ಲ್ಯಾನ್‌ ಮಾಡಿದ್ದು, ಆ ನಿಟ್ಟಿನಲ್ಲಿ ಯಶಸ್ವಿಯಾಗಿದ್ದಾರೆ.

ನವ ದೆಹಲಿಯ ಕರ್ನಾಟಕ ಸಂಘದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ದೆಹಲಿಯ ತಾಲಕಟೋರಾ ಸ್ಟೇಡಿಯಂನಲ್ಲಿ ಆಯೋಜಿಸಿದ್ದ ‘ಬಾರಿಸುವ ಕನ್ನಡ ಡಿಂಡಿಮವ ಸಾಂಸ್ಕೃತಿಕ ಸಂಭ್ರಮ’ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ಕನ್ನಡ ಭಾಷಣ, ರಾಜ್ಯದ ಸಂಸ್ಕೃತಿ, ಕನ್ನಡ ಅಸ್ಮಿತೆ ಬಗ್ಗೆ ಹಾಡಿ ಹೊಗಳುವ ಮೂಲಕ ಕನ್ನಡಿಗರ ಮನ ಗೆದ್ದಿದ್ದಾರೆ.

ಈ ಕಾರ್ಯಕ್ರಮದ ಮೂಲಕ ಬಿಜೆಪಿಯು ಕನ್ನಡಕ್ಕೆ ಮಹತ್ತರ ಆದ್ಯತೆ ನೀಡಿದೆ ಎಂಬ ಸಂದೇಶವನ್ನು ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ್ದಾರೆ. ಕೇಂದ್ರ ಬಿಜೆಪಿ ರಾಜ್ಯಕ್ಕೆ ನೀಡಿರುವ ಯೋಜನೆ, ಅನುದಾನ, ಕಾಂಗ್ರೆಸ್ ಮಾಡಿೃುವ ಲೋಪದೋಷಗಳ ಬಗ್ಗೆ ಮೋದಿ ಈ ವೇಳೆ ಉಲ್ಲೇಖಿಸಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಬಿಜೆಪಿಯಿಂದ ಮಾತ್ರ ಸುಸ್ಥಿರ ಸರ್ಕಾರ ಸಾಧ್ಯ ಎಂದು ಎಂಬ ಸಂದೇಶವನ್ನು ರವಾನಿಸುವ ಪ್ರಯತ್ನ ಮಾಡಿದ್ದಾರೆ.

ಕನ್ನಡಿಗರನ್ನು ಉದ್ದೇಶಿಸಿ ಮಾತನಾಡಿದ ಮೋದಿ

ಇದನ್ನೂ ಓದಿ: Shivamogga Airport: ಬೆಂಗಳೂರು ನಂತರ ಅತಿ ದೊಡ್ಡ ವಿಮಾನ ನಿಲ್ದಾಣ ಎಂದ ಯಡಿಯೂರಪ್ಪ: ಕಾರ್ಯಕ್ರಮಕ್ಕೆ ಪಾಸ್‌ ಬೇಕಿಲ್ಲ ಎಂದ ಬಿವೈಆರ್‌

ಅಲ್ಲದೆ, ರಾಜ್ಯದ ಹಿತಾಸಕ್ತಿ, ಬಿಜೆಪಿಯ ಕನ್ನಡಾಭಿಮಾನದ ಬಗ್ಗೆ ಮೋದಿ ಪ್ರಸ್ತಾಪ ಮಾಡುತ್ತಾ, ಬಿಜೆಪಿ ಸ್ಥಳೀಯ ಭಾಷೆ ವಿರೋಧಿ ಅಲ್ಲ ಎಂದು ಬಿಂಬಿಸುವ ಪ್ರಯತ್ನವನ್ನೂ ಮಾಡಿದರು. ಇದಲ್ಲದೆ, ಎಲ್ಲಾದರೂ ಇರು, ಎಂತಾದರೂ ಇರು, ಎಂದೆಂದಿಗೂ ನೀ ಕನ್ನಡವಾಗಿರು ಎಂಬ ಸಾಲುಗಳನ್ನು ನರೇಂದ್ರ ಮೋದಿ ನೆನೆದರು. “ದೇಶವು ಸ್ವಾತಂತ್ರ್ಯ ಗಳಿಸಿ ೭೫ನೇ ವರ್ಷದ ಸಂಭ್ರಮ ಆಚರಿಸುತ್ತಿರುವ ವೇಳೆಯೇ ದೆಹಲಿ ಕರ್ನಾಟಕ ಸಂಘವೂ ಅಮೃತ ಮಹೋತ್ಸವ ಆಚರಿಸುತ್ತಿರುವುದು ಸಂತಸದ ವಿಷಯ” ಎಂದೂ ಹೇಳಿದರು. ಈ ಮೂಲಕ ಕನ್ನಡ ಭಾಷೆಯ ಸಂಪ್ರದಾಯದ ಬಗ್ಗೆಯೂ ಪ್ರಸ್ತಾಪಿಸಿದರು.

ಮಕ್ಕಳಿಗೆ ಕನ್ನಡ ಕಲಿಸಲು ದೆಹಲಿ ಕನ್ನಡಿಗರಿಗೆ ಕರೆ

ದೆಹಲಿಯಲ್ಲಿರುವ ಕನ್ನಡಿಗರ ಮಕ್ಕಳು ಕನ್ನಡದಲ್ಲಿಯೇ ಅಧ್ಯಯನ ಮಾಡಲು ಅವಕಾಶವನ್ನು ಕಲ್ಪಿಸಲಾಗುತ್ತದೆ. ಇದು ಕನ್ನಡಿಗರ ಜತೆ ಬೇರೆಯವರೂ ಕನ್ನಡ ಕಲಿಯಲು ನೆರವಾಗುತ್ತದೆ. ಕನ್ನಡ ಕಲಿಯಿರಿ, ಕನ್ನಡ ಕಲಿಸಿರಿ ಎಂಬ ಧ್ಯೇಯ ನಿಮ್ಮದಾಗಲಿ ಎಂದೂ ಮೋದಿ ಕರೆ ನೀಡುವ ಮೂಲಕ ಕನ್ನಡ ಭಾಷೆಗೆ ತಮಗಿರುವ ಬದ್ಧತೆಯನ್ನು ತೋರಿದರು. ಈ ಮೂಲಕ ಕನ್ನಡಿಗರ ಮನಸ್ಸನ್ನು ಗೆಲ್ಲುವತ್ತ ಹೆಜ್ಜೆ ಇಟ್ಟರು.

ಇನ್ನು ಕರ್ನಾಟಕವು ಸಿರಧಾನ್ಯಗಳ ತವರೂರು ಎಂಬಂತೆಯೂ ಮೋದಿ ಪ್ರಸ್ತಾಪಿಸಿದ್ದಾರೆ. “ಸಿರಿಧಾನ್ಯ ವರ್ಷವನ್ನು ಆಚರಿಸಲಾಗುತ್ತಿದೆ. ಭಾರತದಲ್ಲಿ ಕರ್ನಾಟಕವು ಸಿರಿಧಾನ್ಯದ ಪ್ರಮುಖ ಕೇಂದ್ರವಾಗಿದೆ. ಅನ್ನ, ರಾಗಿಯ ನಾಡಾಗಿ ಕರ್ನಾಟಕವು ಸಿರಿಧಾನ್ಯಗಳ ವಿಷಯದಲ್ಲಿ ಸಮೃದ್ಧವಾಗಿದೆ. ಸಿರಿಧಾನ್ಯಗಳಿಗೆ ಕೇಂದ್ರ ಸರ್ಕಾರ ಉತ್ತೇಜನ ನೀಡುತ್ತಿರುವುದರಿಂದ ಕರ್ನಾಟಕದ ಸಣ್ಣ ರೈತರಿಗೆ ಅನುಕೂಲವಾಗಲಿದೆ ಎಂದೂ ಹೇಳಿದ್ದಾರೆ.

ಇದನ್ನೂ ಓದಿ: Grama Vastavya: ಕೊನೇ ಗ್ರಾಮ ವಾಸ್ತವ್ಯ ಯಶಸ್ವಿ; ಗ್ರಾಮಕ್ಕೆ 1 ಕೋಟಿ ರೂ. ಘೋಷಿಸಿದ ಆರ್.‌ ಅಶೋಕ್‌

ಬಸವಣ್ಣ, ರಾಷ್ಟ್ರಕವಿ ಕುವೆಂಪು ನೆನೆದ ಮೋದಿ

ಕುವೆಂಪು ಅವರು ಕರ್ನಾಟಕದ ನಾಡಗೀತೆ ರಚಿಸಿದರು. ಭಾರತ ಮಾತೆಯ ಪುತ್ರಿ ಕರ್ನಾಟಕ ಎಂದು ಗೀತೆ ರಚಿಸಿದರು. ಇದು ಅವರ ಏಕ ಭಾರತ್‌, ಶ್ರೇಷ್ಠ ಭಾರತ್‌ ಕಲ್ಪನೆಯ ದ್ಯೋತಕವಾಗಿದೆ. ಬಸವಣ್ಣನವರು ಜಗತ್ತಿಗೆ ಜ್ಞಾನದ ಬೆಳಕು ನೀಡಿದರು. ಅವರ ಮೂರ್ತಿಯನ್ನು ಲಂಡನ್‌ನಲ್ಲಿ ಪ್ರತಿಷ್ಠಾಪಿಸಲಾಗಿದೆ. ಕರ್ನಾಟಕವು ತಂತ್ರಜ್ಞಾನ, ಸಂಸ್ಕೃತಿ, ಕೃತಕ ಬುದ್ಧಿಮತ್ತೆಯ ತವರೂರಾಗಿದೆ ಎಂದೂ ಹೊಗಳುವ ಮೂಲಕ ಕನ್ನಡಿಗರ ಮನಮುಟ್ಟಿದರು.

Exit mobile version