ಬೆಂಗಳೂರು : ರಾಜ್ಯಕ್ಕೆ ಎರಡು ದಿನಗಳ ಪ್ರವಾಸ ಕೈಗೊಳ್ಳಲಿರುವ ಪ್ರಧಾನಿ ಮೋದಿ ಕಾರ್ಯಕ್ರಮ ಯಶಸ್ವಿಗೊಳಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಶನಿವಾರ ಯಶವಂತಪುರ ವಿಧಾನಸಭಾ ಕ್ಷೇತ್ರದ ಕೊಮ್ಮಘಟ್ಟ ದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಭಾಗವಹಿಸಲಿರುವ ಸಾರ್ವಜನಿಕ ಸಭೆಯ ವೇದಿಕೆ ಸಿದ್ಧತಾ ಕಾರ್ಯಗಳ ಪರಿಶೀಲನೆ ನಡೆಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಜೂನ್ 20 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬೆಂಗಳೂರು ಮತ್ತು ಮೈಸೂರಿಗೆ ಭೇಟಿ ನೀಡಲಿದ್ದಾರೆ. ಈಗಾಗಲೇ ಅವರ ಕಾರ್ಯಕ್ರಮ ಪಟ್ಟಿ ಬಂದಿದೆ. ಕಾರ್ಯಕ್ರಮ ಅಚ್ಚುಕಟ್ಟಾಗಿ ಜರುಗಬೇಕೆಂಬ ಉದ್ದೇಶದಿಂದ ನಮ್ಮೆಲ್ಲಾ ಸಚಿವ ಸಂಪುಟದ ಸಹೋದ್ಯೋಗಿಗಳು, ಹಿರಿಯ ನಾಯಕ ಸದಾನಂದ ಗೌಡರು, ಎಲ್ಲಾ ಶಾಸಕರು ಶ್ರಮವಹಿಸುತ್ತಿದ್ದಾರೆ. ಅಧಿಕಾರಿಗಳ ಕೂಡ ಸಂಪೂರ್ಣ ಸಹಕಾರ ನೀಡಿ ಕೈ ಜೋಡಿಸಿದ್ದಾರೆ ಎಂದರು.
ಪ್ರಧಾನಿ ಕಾರ್ಯಕ್ರಮದ ವೇಳಾಪಟ್ಟಿ
ಪ್ರಧಾನಿ ಮೊದಿಯವರ ಕಾರ್ಯಕ್ರಮದ ವೇಳಾಪಟ್ಟಿಯನ್ನು ಸಿಎಂ ಬೊಮ್ಮಾಯಿ ಅಧಿಕೃತವಾಗಿ ನೀಡಿದರು. ಜೂನ್ ೨೦ರ ಬೆಳಿಗ್ಗೆ 11.55 ಕ್ಕೆ ಯಲಹಂಕ ವಿಮಾನ ನಿಲ್ದಾಣಕ್ಕೆ ಮೋದಿ ಆಗಮಿಸಲಿದ್ದಾರೆ. ಅಲ್ಲಿಂದ ಅವರು ಹೆಲಿಕಾಪ್ಟರ್ ಮೂಲಕ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್‌ಗೆ ಭೇಟಿ ನೀಡಿ ಅಲ್ಲಿ ಎರಡು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಬ್ರೈನ್ ಸೆಲ್ ಅಭಿವೃದ್ಧಿ ಕೇಂದ್ರವನ್ನು ಕ್ರಿಸ್ ಗೋಪಾಲಕೃಷ್ಣ ಅವರು 450 ಕೋಟಿ ರೂ.ಗಳ ದೇಣಿಗೆಯಲ್ಲಿ ನಿರ್ಮಿಸಿದ್ದು ಅದರ ಉದ್ಘಾಟನೆ ನಡೆಯಲಿದೆ. ನಂತರ ಮೈಂಡ್ ಟ್ರೀ ಸಂಸ್ಥೆಯ 850 ಹಾಸಿಗೆಗಳ ಸಂಶೋಧನಾ ಆಸ್ಪತ್ರೆ ನಿರ್ಮಾಣಕ್ಕೆ ಅಡಿಗಲ್ಲು ಹಾಕಲಿದ್ದಾರೆ.
ಲಸಿಕೆ ಪಡೆದಿರುವುದು ಕಡ್ಡಾಯ
ಪ್ರಧಾನಿ ಮೋದಿ ಭಾಗವಹಿಸುವ ಸಾರ್ವಜನಿಕ ಕಾರ್ಯಕ್ರಮ ದಲ್ಲಿ ಭಾಗವಹಿಸುವವರು ಕೋವಿಡ್ ಲಸಿಕೆ ಪಡೆದಿರುವ ಪ್ರಮಾಣ ಪತ್ರ ತೋರಿಸಬೇಕು. ಒಳಾಂಗಣ ದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸುವವರು ಮಾತ್ರ ಕೋವಿಡ್ ಪರೀಕ್ಷೆ ಮಾಡಿಸಿರಬೇಕು ಎಂದು ಮುಖ್ಯಮಂತ್ರಿ ತಿಳಿಸಿದರು.
ಸಬ್ ಅರ್ಬನ್ ರೈಲ್ವೆ ಯೋಜನೆಗೆ ಶಂಕುಸ್ಥಾಪನೆ
ನಂತರ 15,000 ಕೋಟಿ ರೂ.ಗಳ ವೆಚ್ಚದ ಸಬ್ ಅರ್ಬನ್ ರೈಲ್ವೆ ಯೋಜನೆಗೆ ಪ್ರಧಾನಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಬೆಂಗಳೂರು ಹೊರವಲಯಕ್ಕೆ ಸಂಪರ್ಕ ಕಲ್ಪಿಸುವ ಈ ಮಹತ್ವಾಕಾಂಕ್ಷಿ ಯೋಜನೆಗೆ ಚಾಲನೆ ದೊರಕಲಿದೆ. ಇದರ ಜತೆಗೆ 6 ರೈಲ್ವೆ ಯೋಜನೆಗಳಿಗೆ ಚಾಲನೆ ದೊರಕಲಿದೆ. ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೂ ಚಾಲನೆ ನೀಡಲಾಗುತ್ತದೆ. ಎಸ್.ಟಿ. ಆರ್.ಆರ್. ಯೋಜನೆಗೂ ಶಂಕುಸ್ಥಾಪನೆ ನೆರವೇರಲಿದೆ. ದಾಬಸಪೇಟೆಯಿಂದ ಹೊಸಕೋಟೆ ಹಳೆ ಮದ್ರಾಸು ರಸ್ತೆಯವರೆಗೂ ಸಂಪರ್ಕಿಸುವ ರಸ್ತೆ ನಿರ್ಮಿಸುವ ಯೋಜನೆ ಇದಾಗಿದೆ.
ಇದಾದ ನಂತರ ಬೆಂಗಳೂರು ವಿವಿಯಲ್ಲಿರುವ ಡಾ: ಬಿ.ಆರ್.ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಗೆ ಭೇಟಿ ನೀಡಿ ಮೂರ್ತಿ ಅನಾವರಣ ಹಾಗೂ ಸಂಸ್ಥೆಯ ಉದ್ಘಾಟನೆ ನೆರವೇರಿಸಲಿದ್ದಾರೆ. ಅಲ್ಲಿಂದ ಮೈಸೂರಿಗೆ ತೆರಳಲಿದ್ದಾರೆ. ಅಲ್ಲಿ ಎರಡು ದೊಡ್ಡ ಕಾರ್ಯಕ್ರಮ ಗಳಿವೆ. ಫಲಾನುಭವಿಗಳ ಸಮ್ಮೇಳನವಿದೆ. ಅದನ್ನು ಮುಗಿಸಿ ಸುತ್ತೂರು ಮಠ ಹಾಗೂ ಚಾಮುಂಡೇಶ್ವರಿ ಬೆಟ್ಟಕ್ಕೆ ಭೇಟಿ ನೀಡಲಿದ್ದಾರೆ. ಮರುದಿನ ವಿಶ್ವ ಯೋಗ ದಿನಾಚರಣೆಯಲ್ಲಿ ಭಾಗವಹಿಸಿ ಹಿಂದಿರುಗಲಿದ್ದಾರೆ ಎಂದು ವಿವರಿಸಿದರು.
ಇದನ್ನೂ ಓದಿ| Yoga day | ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ರಾಜಮನೆತನಕ್ಕೂ ಆಹ್ವಾನ, ಪ್ಯಾಲೇಸ್‌ಗೆ 3 ದಿನ ನಿರ್ಬಂಧ