ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರ ಎರಡು ದಿನಗಳ ರಾಜ್ಯ ಪ್ರವಾಸದ ವೇಳಾಪಟ್ಟಿ ಅಂತಿಮಗೊಂಡಿದೆ. ಈ ಹಿಂದೆ ಪ್ರಕಟಿಸಿದ ಕಾರ್ಯಕ್ರಮಗಳಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ನಿಗದಿಯಂತೆ ಪ್ರಧಾನಿ ಮೋದಿಯವರು ಜೂನ್ 20ರ ಸೋಮವಾರ ಮಧ್ಯಾಹ್ನ 12.30 ಕ್ಕೆ ನಗರದ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಮಿದುಳು ಸಂಶೋಧನಾ ಕೇಂದ್ರ ಲೋಕಾರ್ಪಣೆಗೊಳಿಸಿ ಬಾಗ್ಚಿ- ಪಾರ್ಥಸಾರಥಿ ಆಸ್ಪತ್ರೆಯ ಶಂಕುಸ್ಥಾಪನೆಯನ್ನು ನೆರವೇರಿಸಲಿದ್ದಾರೆ.
ಮಧ್ಯಾಹ್ನ 1.45 ಕ್ಕೆ ಪ್ರಧಾನಿಯವರು (ಬೇಸ್) ಕ್ಯಾಂಪಸ್ ಗೆ ತೆರಳಿ, ಡಾ:ಬಿ.ಆರ್.ಅಂಬೇಡ್ಕರ್ ಕಂಚಿನ ಪುತ್ಥಳಿ ಅನಾವರಣ, ಡಾ:ಬಿ.ಆರ್.ಅಂಬೇಡ್ಕರ್ ಸ್ಕೂಲ್ ಆಫ್ ಎಕಾನಾಮಿಕ್ಸ್ ಕ್ಯಾಂಪಸ್ ಉದ್ಘಾಟನೆ ಹಾಗೂ ಮೇಲ್ದರ್ಜೆಗೇರಿಸಿದ 150 ಐಟಿಐಗಳನ್ನು ಲೋಕಾರ್ಪಣೆ ಮಾಡಲಿದ್ದಾರೆ. ಮಧ್ಯಾಹ್ನ 2.45 ಕ್ಕೆ ಬೆಂಗಳೂರಿನ ಕೊಮ್ಮಘಟ್ಟದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳ ಶಂಕುಸ್ಥಾಪನೆ ಹಾಗೂ ಲೋಕಾರ್ಪಣೆಗೊಳಿಸಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಮೈಸೂರಿಗೆ ತೆರಳಿದ್ದಾರೆ.
ಮೈಸೂರಿನಲ್ಲಿ ಸಂಜೆ 5.30 ಕ್ಕೆ ಮಹಾರಾಜ ಮೈದಾನಕ್ಕೆ ತೆರಳಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಲೋಕಾರ್ಪಣೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಅಂದು ರಾತ್ರಿ 7 ಗಂಟೆಗೆ ಶ್ರೀ ಸುತ್ತೂರು ಮಠದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ರಾತ್ರಿ 7.50 ಕ್ಕೆ ಮೈಸೂರಿನ ಚಾಮುಂಡಿಬೆಟ್ಟಕ್ಕೆ ತೆರಳಿ ಶ್ರೀ ಚಾಮುಂಡೇಶ್ವರಿ ದರ್ಶನ ಪಡೆಯಲಿದ್ದಾರೆ.
ಜೂನ್ 21 ರಂದು ಮಂಗಳವಾರ ಬೆಳಿಗ್ಗೆ 6.30 ಕ್ಕೆ ಪ್ರಧಾನಿ ಮೋದಿಯವರು ಮೈಸೂರು ಅರಮನೆಯ ಮೈದಾನದಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಭಾಗವಹಿಸಿ ಯೋಗಪಟುಗಳೊಂದಿಗೆ ಬೆರತು ಯೋಗ ಮಾಡಲಿದ್ದಾರೆ. ಬೆಳಿಗ್ಗೆ 8.10 ಕ್ಕೆ ವಸ್ತುಪ್ರದರ್ಶನ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ. ನಂತರ ಬೆಳಿಗ್ಗೆ 9.20 ಕ್ಕೆಮೈಸೂರು ಅರಮನೆ ಆವರಣದಿಂದ ಹೊರಟು ಬೆಳಿಗ್ಗೆ 9.45ಕ್ಕೆ ಮೈಸೂರಿನ ವಿಮಾನನಿಲ್ದಾಣದಿಂದ ನವದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ | ಬೆಂಗಳೂರಿಗೆ ಪ್ರಧಾನಿ ಮೋದಿ; ರಸ್ತೆಗಳ ಸಂಚಾರ ಬದಲು