ಮೈಸೂರು: ರಾಜ್ಯ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ರಾತ್ರಿ ನಗರದ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ವಿಶೇಷ ವಿಮಾನದಲ್ಲಿ ಆಗಮಿಸಿದ ಪ್ರಧಾನಿಗೆ (Modi in karnataka) ಜಿಲ್ಲಾಧಿಕಾರಿ ಕೆ.ವಿ.ರಾಜೇಂದ್ರ, ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್, ಎಸ್ಪಿ ಸೀಮಾ ಲಾಟ್ಕರ್ ಸೇರಿ ವಿವಿಧ ಅಧಿಕಾರಿಗಳಿಂದ ಹೂಗುಚ್ಛ ನೀಡಿ ಸ್ವಾಗತಿಸಿದರು.
ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳಿಂದ ಸ್ವಾಗತಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಹೀಗಾಗಿ ಅಧಿಕಾರಿಗಳು ಪ್ರಧಾನಿ ಮೋದಿ ಅವರಿಗೆ ಶಿಷ್ಟಾಚಾರದಂತೆ ಸ್ವಾಗತ ಕೋರಿದ್ದಾರೆ. ಈ ವೇಳೆ ಕೇಂದ್ರ ಅರಣ್ಯ ಸಚಿವ ಭೂಪೇಂದ್ರ ಯಾದವ್, ಕೇಂದ್ರದ ಪರಿಸರ ಅರಣ್ಯ ಹಾಗೂ ಹವಾಮಾನ ಬದಲಾವಣೆ ಖಾತೆಯ ರಾಜ್ಯ ಸಚಿವ ಅಶ್ವಿನಿ ಕುಮಾರ್ ಚೌಬೆ ಇದ್ದರು.
ಪ್ರಾಜೆಕ್ಟ್ ಟೈಗರ್ (ಹುಲಿ ಯೋಜನೆ) ಸುವರ್ಣ ಸಂಭ್ರಮದ ಕಾರ್ಯಕ್ರಮಕ್ಕಾಗಿ ಪ್ರಧಾನಿ ಮೋದಿ ಮೈಸೂರಿಗೆ ಆಗಮಿಸಿದ್ದಾರೆ. ಚೆನ್ನೈನಲ್ಲಿ ವಿಮಾನ ನಿಲ್ದಾಣದ ನೂತನ ಟರ್ಮಿನಲ್ ಹಾಗೂ ಚೆನ್ನೈ-ಕೊಯಮತ್ತೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ ನೀಡಿದ ಬಳಿಕ ಪ್ರಧಾನಿ ಮೋದಿ ಶನಿವಾರ ರಾತ್ರಿ ನಗರಕ್ಕೆ ಆಗಮಿಸಿದ್ದು, ಇಲ್ಲಿನ ಎಂ.ಜಿ.ರಸ್ತೆಯಲ್ಲಿರುವ ರ‍್ಯಾಡಿಸನ್ ಬ್ಲ್ಯೂ ಹೋಟೆಲ್‌ನಲ್ಲಿ ಅವರು ವಾಸ್ತವ್ಯ ಹೂಡಲಿದ್ದಾರೆ.
ಇದನ್ನೂ ಓದಿ | Modi Stalin Show: ಕೆಸಿಆರ್‌ಗೆ ಟೀಕೆ, ಸ್ಟಾಲಿನ್ ಜತೆ ಕೇಕೆ; ತಮಿಳುನಾಡಿನಲ್ಲಿ ಮೋದಿ-ಸ್ಟಾಲಿನ್ ಸ್ನೇಹದ ಮೋಡಿ
ಭಾನುವಾರ ಹುಲಿಗಣತಿ ವರದಿ ಬಿಡುಗಡೆ; ಬಂಡೀಪುರದಲ್ಲಿ ಮೋದಿ ಹುಲಿ ಸಫಾರಿ
ಭಾನುವಾರ (ಏಪ್ರಿಲ್ 9) ಬೆಳಗ್ಗೆ 6.20ಕ್ಕೆ ಮೈಸೂರಿನ ವಿಶೇಷ ಹೆಲಿಪ್ಯಾಡ್‌ನಿಂದ ಚಾಮರಾಜನಗರದ ಮೇಲುಕಾಮನಹಳ್ಳಿ ಹೆಲಿಪ್ಯಾಡ್‌ಗೆ ಪ್ರಧಾನಿ ಮೋದಿ ಅವರು ಪ್ರಯಾಣ ಬೆಳೆಸಲಿದ್ದು, ಬೆಳಗ್ಗೆ 7.15ಕ್ಕೆ ಬಂಡೀಪುರಕ್ಕೆ ಭೇಟಿ ನೀಡಿ, ಸಫಾರಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಅಲ್ಲಿಂದ ರಸ್ತೆ ಮಾರ್ಗವಾಗಿ ತೆಪ್ಪಕಾಡು ಆನೆ ಕ್ಯಾಂಪ್‌ಗೆ ಭೇಟಿ ನೀಡಲಿದ್ದಾರೆ. ಈ ವೇಳೆ ಸುಮಾರು 2 ಗಂಟೆಗಳ ಕಾಲ ಅರಣ್ಯದಲ್ಲಿ ಕಾಲ ಕಳೆಯಲಿದ್ದಾರೆ. ಅಲ್ಲಿಂದ ಮೈಸೂರಿಗೆ ಭೇಟಿ ನೀಡಿ ಬೆಳಗ್ಗೆ 10.30ಕ್ಕೆ ಕರ್ನಾಟಕ ಮುಕ್ತ ವಿವಿ ಘಟಿಕೋತ್ಸವ ಭವನಕ್ಕೆ ಆಗಮಿಸಲಿದ್ದಾರೆ. ಹುಲಿ ಯೋಜನೆ 50ನೇ ವರ್ಷದ ಸ್ಮರಣಾರ್ಥ ಹುಲಿಗಣತಿ ವರದಿಯನ್ನು ಬಿಡುಗಡೆಗೊಳಿಸಲಿದ್ದಾರೆ.
ಬಿಗಿ ಪೊಲೀಸ್ ಬಂದೋಬಸ್ತ್
ಪ್ರಧಾನಿ ನರೆಂದ್ರ ಮೋದಿ ಆಗಮನ ಹಿನ್ನೆಲೆಯಲ್ಲಿ ರ‍್ಯಾಡಿಸನ್ ಬ್ಲೂ ಹೋಟೆಲ್‌ನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಹೋಟೆಲ್ ಭದ್ರತೆಗಾಗಿ 261 ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. 4 ಎಸಿಪಿ, 5 ಇನ್ಸ್‌ಪೆಕ್ಟರ್, 11 ಪಿಎಸ್ಐ, 19 ಎಎಸ್ಐ, 167 ಹೆಡ್ ಕಾನ್ಸ್‌ಟೆಬಲ್, 50 ಮಹಿಳಾ ಪೊಲೀಸ್ ಕಾನ್ಸ್‌ಟೆಬಲ್‌ಗಳನ್ನು ನಿಯೋಜನೆ ಮಾಡಲಾಗಿದೆ.
ಹೋಟೆಲ್‌ನಲ್ಲಿರುವ ಎಲ್ಲ 140 ರೂಂ ಅನ್ನು ಸಹ ಪ್ರಧಾನಿ ಕಾರ್ಯಾಲಯದವರು ಬುಕ್ ಮಾಡಿದ್ದಾರೆ. ಸಮೀಪದ ಮಾಲ್ ಆಫ್ ಮೈಸೂರಿಗೆ ಬೀಗ ಹಾಕಲಾಗಿದೆ. ಭದ್ರತಾ ದೃಷ್ಟಿಯಿಂದ ಎಂ.ಜಿ. ರಸ್ತೆಯ ಸೊಪ್ಪು, ತರಕಾರಿ ಬೀದಿ ಬದಿ ವ್ಯಾಪಾರವನ್ನೂ ಸ್ಥಗಿತಗೊಳಿಸಲಾಗಿದೆ.
ಇದನ್ನೂ ಓದಿ | Modi in Karnataka: ಮೈಸೂರಲ್ಲಿ ಮೋದಿ ಸಂಚಲನ; ನಾಳೆ ಹುಲಿಗಣತಿ ವರದಿ ಬಿಡುಗಡೆ; ಬಂಡೀಪುರದಲ್ಲಿ ಹುಲಿ ಸಫಾರಿ
ಅನಗತ್ಯ ಸಂಚಾರಕ್ಕೆ ಬ್ರೇಕ್
ಪ್ರಧಾನಿ ಮೋದಿ ಮೈಸೂರಿಗೆ ಆಗಮನ ಹಿನ್ನೆಲೆಯಲ್ಲಿ ಅಂತಿಮ ಹಂತದ ಭದ್ರತಾ ತಪಾಸಣೆಯನ್ನು ಕೈಗೊಳ್ಳಲಾಗಿತ್ತು. ಮೈಸೂರು ಏರ್‌ಪೋರ್ಟ್ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಪ್ರಯಾಣಿಕರನ್ನು ಹೊರತುಪಡಿಸಿ ಅನಗತ್ಯ ಸಂಚಾರಕ್ಕೆ ತಡೆಯೊಡ್ಡಲಾಗಿದೆ. ಪ್ರತಿ ವಾಹನ ತಪಾಸಣೆ ನಂತರ ಏರ್‌ಪೋರ್ಟ್‌ಗೆ ಸಂಚರಿಸಲು ಅವಕಾಶ ಮಾಡಿಕೊಡಲಾಗುತ್ತಿದೆ. ಏರ್‌ಪೋರ್ಟ್ ಹೊರ ಮತ್ತು ಒಳ ಆವರಣದಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಮೋದಿ ಸಂಚರಿಸುವ ಮೈಸೂರು-ನಂಜನಗೂಡು ಹೆದ್ದಾರಿಯಲ್ಲಿ ಪೊಲೀಸರನ್ನು ನಿಯೋಜನೆಗೊಳಿಸಲಾಗಿದೆ.