Site icon Vistara News

Siddaramaiah: ಯಾವ ಮುಖ ಇಟ್ಕೊಂಡು ಮೋದಿ ಮತ ಕೇಳ್ತಾರೆ? ಸಿದ್ದರಾಮಯ್ಯ ವಾಗ್ದಾಳಿ

Siddaramaiah

PM Narendra Modi Has No Morality To Ask Vote In Karnataka: CM Siddaramaiah

ಮೈಸೂರು: ಲೋಕಸಭೆ ಚುನಾವಣೆ (Lok Sabha Election) ಪ್ರಚಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಭಾನುವಾರ (ಏಪ್ರಿಲ್‌ 14) ಮೈಸೂರಿಗೆ ಆಗಮಿಸುತ್ತಿರುವ ಬೆನ್ನಲ್ಲೇ ಸಿದ್ದರಾಮಯ್ಯ ಅವರು ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. “ದೇಶದ ಜನರಿಗೆ ಸತತವಾಗಿ ಸುಳ್ಳು ಹೇಳಿದ, ನೀಡಿದ ಭರವಸೆಗಳನ್ನು ಈಡೇರಿಸದ ನರೇಂದ್ರ ಮೋದಿ ಅವರು ಯಾವ ಮುಖ ಇಟ್ಟುಕೊಂಡು ಮತ ಕೇಳಲು ಕರ್ನಾಟಕಕ್ಕೆ ಬರುತ್ತಾರೆ” ಎಂದು ಟೀಕಿಸಿದರು.

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಕೃಷ್ಣರಾಜದಲ್ಲಿ ನಡೆದ ಜನಧ್ವನಿ-2 ಯಾತ್ರೆಯ ಬೃಹತ್ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು. “ಸುಳ್ಳು ಹೇಳಿದರೆ ಜನ ಮೋದಿ ಮೋದಿ ಎನ್ನುತ್ತಾರೆ ಎನ್ನುವುದು ಅವರಿಗೆ ಗೊತ್ತಾಗಿದೆ. ಹೀಗಾಗಿ ಅವರು ಸುಳ್ಳು ಹೇಳುವುದನ್ನು ಮತ್ತಷ್ಟು ಹೆಚ್ಚಿಸಿದ್ದಾರೆ” ಎಂದು ವಾಗ್ದಾಳಿ ನಡೆಸಿದರು.

“ಪ್ರತಿಯೊಬ್ಬ ಭಾರತೀಯರ ಖಾತೆಗೆ 15 ಲಕ್ಷ ರೂ. ಹಾಕ್ತೀನಿ ಅಂದ್ರು, ವಿದೇಶದಿಂದ ಕಪ್ಪು ಹಣ ತರ್ತೀನಿ ಅಂದ್ರು, ರೈತರ ಆದಾಯ ದುಪ್ಪಟ್ಟು ಮಾಡ್ತೀವಿ ಅಂದ್ರು, ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡ್ತೀವಿ ಅಂದ್ರು, ಡೀಸೆಲ್- ಪೆಟ್ರೋಲ್‌, ಗ್ಯಾಸ್‌, ರಸಗೊಬ್ಬರದ ಬೆಲೆ ಕಡಿಮೆ ಮಾಡ್ತೀವಿ ಅಂದ್ರು, ಡಾಲರ್ ಎದುರು ರೂಪಾಯಿ ಮೌಲ್ಯ ಹೆಚ್ಚಿಸ್ತೀವಿ ಅಂದರು. ಹೀಗೆ ರಾಶಿ ರಾಶಿ ಸುಳ್ಳುಗಳ ಮೂಲಕವೇ ಭಾರತೀಯರನ್ನು ನಿರಂತರವಾಗಿ ಬಕ್ರಾ ಮಾಡಿ ವಂಚಿಸಿದರು. ಹತ್ತು ವರ್ಷಗಳ ಕಾಲ ನಿಮ್ಮನ್ನು ವಂಚಿಸಿದವರಿಗೇ ಮತ ಹಾಕೋಕೆ ನಿಮಗೆ ಮನಸ್ಸು ಬರುತ್ತದೆಯೇ” ಎಂಬುದಾಗಿ ಪ್ರಶ್ನಿಸಿದರು.

“ಮೈಸೂರಿನಲ್ಲಿ ಜಯದೇವ ಆಸ್ಪತ್ರೆ ಮಾಡಿದವರು ಯಾರು, ಮಹಿಳಾ-ಮಕ್ಕಳ ಆಸ್ಪತ್ರೆ ಮಾಡಿದವರು ಯಾರು, ಶಾಲೆ-ಹಾಸ್ಟೆಲ್ ಗಳನ್ನು ಮಾಡಿದವರು ಯಾರು, ಮೈಸೂರಿನ ಅಭಿವೃದ್ಧಿಗೆ ಸಾವಿರಾರು ಕೋಟಿ ಹಣ ಕೊಟ್ಟ ಸರ್ಕಾರ ಯಾವುದು ಎನ್ನುವುದು ಮೈಸೂರಿನ ಪ್ರತಿ ಪ್ರಜ್ಞಾವಂತರಿಗೂ ಗೊತ್ತು. ನಾವು ಮಾಡಿದಷ್ಟು ಕೆಲಸವನ್ನು ಮಾಡಲು ಬಿಜೆಪಿಗೂ ಅವಕಾಶ ಇತ್ತು. ಜನ ಅವಕಾಶ ಕೊಟ್ಟಿದ್ದರು. ಆದರೆ ಈ ಅವಕಾಶ ಸಿಕ್ಕಾಗ ಬಿಜೆಪಿ ಸಂಸದರು ಕೆಲಸ ಮಾಡಲಿಲ್ಲ. ಹೀಗಾಗಿ ನುಡಿದಂತೆ ನಡೆದು ಅಭಿವೃದ್ಧಿಯ ದಿಕ್ಕಲ್ಲಿ ಮುನ್ನುಗ್ಗುತ್ತಿರುವ ನಮಗೆ ಅವಕಾಶ ಕೊಡಿ. ಸಾಮಾನ್ಯ ಕಾರ್ಯಕರ್ತರಾಗಿ ಹೋರಾಟ, ಪ್ರತಿಭಟನೆಗಳಿಂದ ಬೆಳೆದ ಎಂ.ಲಕ್ಷ್ಮಣ್ ಅವರನ್ನು ಈ ಬಾರಿ ಗೆಲ್ಲಿಸಿ” ಎಂದು ಕರೆ ನೀಡಿದರು.

ಪ್ರಧಾನಿ ನರೇಂದ್ರ ಮೋದಿ ಬಡವರು, ದುಡಿಯವ ವರ್ಗಗಳ ಪರವಾಗಿ, ಮಹಿಳೆಯರ ಪರವಾಗಿ ಮಾಡಿದ ಒಂದೇ ಒಂದು ಕೆಲಸ ಯಾರಿಗಾದರೂ ಗೊತ್ತಾ ಎಂದು ಪ್ರಶ್ನಿಸಿದ ಅವರು, ಕೇವಲ ಸುಳ್ಳುಗಳನ್ನು ಸೃಷ್ಟಿಸಿ, ಭಾವನಾತ್ಮಕವಾಗಿ ಕೆರಳಿಸದವರಿಗೆ ಮತ ಹಾಕಿದರೆ ನೀವು ಮೋಸಹೋದಂತೆ ತಾನೇ ಎಂದು ಪ್ರಶ್ನಿಸಿದರು.

ಮತ ಕೇಳೋದಕ್ಕೆ ಮೋದಿಯವರಿಗೆ ಮುಖ ಇದೆಯಾ?

ನಾಳೆ ಮೈಸೂರಿಗೆ ಬರುತ್ತಿರುವ ಮೋದಿಯವರು ಯಾವ ಮುಖ ಇಟ್ಟುಕೊಂಡು ಮತ ಕೇಳುತ್ತಾರೆ? ಮೋದಿಯವರಾಗಲೀ, ಇವರ ಸಂಸದರಾಗಲೀ ಮೈಸೂರಿಗೆ ಏನು ಕೆಲಸ ಮಾಡಿದ್ದಾರೆ ತೋರಿಸಲಿ. ಬರೀ ಸುಳ್ಳುಗಳ ಸವಾರಿ ಮಾಡಿಕೊಂಡು 10 ವರ್ಷ ಮುಗಿಸಿದರು. ಹೀಗಿದ್ದಾಗ ಮೋದಿಯವರು ಯಾವ ಮುಖ ಹೊತ್ಕೊಂಡು ರಾಜ್ಯಕ್ಕೆ ಬರ್ತಾರೆ? ಯಾವ ಮುಖ ಹೊತ್ತಕೊಂಡು ಮತ ಕೇಳ್ತಾರೆ” ಎಂದು ಪ್ರಶ್ನಿಸಿದರು.‌

“ಸ್ವಾತಂತ್ರ್ಯಾ ನಂತರ ದೇಶದ ಅಭಿವೃದ್ಧಿಗೆ ಅಡಿಪಾಯ ಹಾಕಿದ್ದು ಕಾಂಗ್ರೆಸ್. ಬಡತನ ನಿರ್ಮೂಲನೆಗೆ ಇಂದಿರಾಗಾಂಧಿಯವರು 20 ಅಂಶಗಳ ಕಾರ್ಯಕ್ರಮಗಳನ್ನು ರೂಪಿಸಿ ಜಾರಿ ಮಾಡಿದರು. ಕೇವಲ ಅತ್ಯಂತ ಶ್ರೀಮಂತರಿಗಾಗಿ ಕೆಲಸ ಮಾಡಿದ ಮೋದಿ ಬಡವರಿಗಾಗಿ, ಬಡತನ ಹೋಗಲಾಡಿಸಲು ಒಂದಂಶದ ಕಾರ್ಯಕ್ರಮವನ್ನೂ ಏಕೆ ಕೊಡಲಿಲ್ಲ? ಇಂತಹ ಬಿಜೆಪಿಗೆ ಒಂದೂ ಮತ ಹಾಕಬೇಡಿ” ಎಂದು ಕರೆ ನೀಡಿದರು.

ಇದನ್ನೂ ಓದಿ: ಇಂಡಿಯಾ ಒಕ್ಕೂಟಕ್ಕೆ ಬಹುಮತ ಸಿಗಲ್ಲ ಎಂದ ಸಿದ್ದರಾಮಯ್ಯ; ಚುನಾವಣೆ ಮೊದಲೇ ಸೋಲೊಪ್ಪಿಗೆ?

Exit mobile version