ಹುಬ್ಬಳ್ಳಿ: ಹುಬ್ಬಳ್ಳಿಗೆ ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಆಗಮಿಸಲಿದ್ದು, ಇಂದಿನಿಂದ ಆರಂಭವಾಗಲಿರುವ 26ನೇ ರಾಷ್ಟ್ರೀಯ ಯುವ ಜನೋತ್ಸವಕ್ಕೆ ಚಾಲನೆ ನೀಡಲಿದ್ದಾರೆ.
ಹುಬ್ಬಳ್ಳಿಯ ರೈಲ್ವೆ ಮೈದಾನದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಪ್ರಧಾನಿ ಸ್ವಾಗತಕ್ಕೆ ಹುಬ್ಬಳ್ಳಿ ಸಜ್ಜಾಗಿದೆ. ವಾಣಿಜ್ಯ ನಗರಿ ಸಂಪೂರ್ಣ ಕೇಸರಿಮಯವಾಗಿದ್ದು, ಎಲ್ಲೆಡೆ ಪ್ರಧಾನ ಮಂತ್ರಿ, ಸ್ವಾಮಿ ವಿವೇಕಾನಂದರ ಕಟೌಟ್ ರಾರಾಜಿಸುತ್ತಿದೆ. ಪ್ರಧಾನಿ ಮಧ್ಯಾಹ್ನ 3.45ಕ್ಕೆ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದು, ಪ್ರಧಾನ ಮಂತ್ರಿಗಳ ಸ್ವಾಗತಕ್ಕೆ ಗಣ್ಯರ ದಂಡು ಸಿದ್ಧವಾಗುತ್ತಿದೆ. ರಾಜ್ಯಪಾಲ ಥಾವರ್‌ಚಂದ್ ಗೆಹಲೋಟ್, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಜಗದೀಶ ಶೆಟ್ಟರ್ ಸೇರಿದಂತೆ ಜಿಲ್ಲೆಯ ಎಲ್ಲ ಶಾಸಕರು ಭಾಗಿಯಾಗಲಿದ್ದಾರೆ.
ರೈಲ್ವೆ ಮೈದಾನದಲ್ಲಿ 4 ಗಂಟೆಗೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಸಂಜೆ 5.15ಕ್ಕೆ ಸಮಾರೋಪ ನಡೆಯಲಿದೆ. ಮೋದಿಯವರು ಅರ್ಧ ತಾಸು ಭಾಷಣ ಮಾಡಲಿದ್ದಾರೆ. ಪ್ರಧಾನಿಗಳ ಜತೆ 25 ಗಣ್ಯರು ವೇದಿಕೆ ಹಂಚಿಕೊಳ್ಳಲಿದ್ದಾರೆ. ಕಾರ್ಯಕ್ರಮ ವೀಕ್ಷಣೆಗೆ 25 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಕಾರ್ಯಕ್ರಮ ನಡೆಯಲಿರುವ ವೇದಿಕೆ ಅಕ್ಕಪಕ್ಕ 8 ಬೃಹತ್ ಎಲ್ಇಡಿ ಸ್ಕ್ರೀನ್ ಅಳವಡಿಸಲಾಗಿದೆ.
ಇದನ್ನೂ ಓದಿ | PM Narendra Modi | ಜ.12ರಂದು ಹುಬ್ಬಳ್ಳಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ; ಪ್ರವಾಸದ ವೇಳಾಪಟ್ಟಿ ಹೀಗಿದೆ
ಮೋದಿ ಭೇಟಿ ಹುಬ್ಬಳ್ಳಿಗರಲ್ಲಿ ಸಂತಸ ಮೂಡಿಸಿದೆ. ವಿಮಾನ ನಿಲ್ದಾಣದಿಂದ ಕಾರ್ಯಕ್ರಮ ನಡೆಯುವ ಸ್ಥಳದವರೆಗೂ ಸಾರ್ವಜನಿಕರನ್ನು ಭೇಟಿ ಮಾಡಲಿರುವ ಪಿಎಂ, ಪ್ರತೀ ಒಂದು ಕಿಲೋಮೀಟರ್‌ಗೆ ವಾಹನದಿಂದ ಕೆಳಗೆ ಇಳಿದು ಸಾರ್ವಜನಿಕರತ್ತ ಕೈ ಬೀಸಲಿದ್ದಾರೆ. ಮೋದಿ ಸಂಚರಿಸಲಿರುವ ರಸ್ತೆಯ ಇಕ್ಕೆಲಗಳಲ್ಲೂ ಬ್ಯಾರಿಕೇಡ್ ಅಳವಡಿಸಲಾಗಿದೆ. ನಗರದಾದ್ಯಂತ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ಭದ್ರತೆಗೆ 2900 ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. 7 ಎಸ್‌ಪಿ, 25 ಡಿವೈಎಸ್‌ಪಿ, 60 ಪಿಐ, 18ಕೆಎಸ್‌ಆರ್‌ಪಿ ತುಕಡಿ, ಗರುಡ, ಸಿಆರ್, ಡಿಆರ್ ಸಿಬ್ಬಂದಿ, ಸುಗಮ ಸಂಚಾರ ವ್ಯವಸ್ಥೆ ಮಾಡಲು ಬೆಂಗಳೂರಿನ ಟ್ರಾಫಿಕ್ ಸಿಬ್ಬಂದಿ, ರೈಲ್ವೆ ಮೈದಾನದ ಮುಖ್ಯ ವೇದಿಕೆಯ ಸುತ್ತಲೂ ಭಾರಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.
ಟ್ರಾಫಿಕ್ ನಿಯಂತ್ರಣಕ್ಕಾಗಿ ವಾಣಿಜ್ಯ ನಗರದಲ್ಲಿ ಪರ್ಯಾಯ ಮಾರ್ಗ ಸಂಚಾರಕ್ಕೆ ಸೂಚಿಸಲಾಗಿದ್ದು, ಕಾರ್ಯಕ್ರಮ ಆರಂಭಕ್ಕೆ ಮುನ್ನ ಒಂದು ಗಂಟೆ ವಾಹನ ಸಂಚಾರಕ್ಕೆ ನಿರ್ಬಂಧವಿದೆ.
ಇದನ್ನೂ ಓದಿ | Youth Festival | ಮೋದಿ ಕಾರ್ಯಕ್ರಮಕ್ಕೆ ಪ್ರತಿ ಕಾಲೇಜಿನಿಂದ 100 ವಿದ್ಯಾರ್ಥಿಗಳನ್ನು ಕರೆತರಬೇಕು ಎಂಬ ಸುತ್ತೋಲೆ ವಾಪಸ್