Site icon Vistara News

Siddaramaiah: ಮೋದಿ ಸುಳ್ಳಿನ ಸರದಾರ, ಭಾವನಾತ್ಮಕ ಆಟ ನಡೆಯಲ್ಲ; ಸಿದ್ದರಾಮಯ್ಯ ತಿರುಗೇಟು

cm Siddaramaiah

ಮೈಸೂರು: “ಪ್ರತಿಪಕ್ಷಗಳು ನನ್ನನ್ನು ಸಮಾಧಿ ಮಾಡಲು ಹೊರಟಿವೆ. ಜನರೇ ನನ್ನನ್ನು ಕಾಪಾಡಲು ಹೊರಟಿವೆ” ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ (Narendra Modi) ನೀಡಿದ ಹೇಳಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ (Siddaramaiah), “ನರೇಂದ್ರ ಮೋದಿ ಸುಳ್ಳುಗಳ ಸರದಾರ ಆಗಿದ್ದಾರೆ. ಅವರ ಭಾವನಾತ್ಮಕ ಆಟವು ಭಾರತೀಯರಿಗೆ ಗೊತ್ತಾಗಿದೆ” ಎಂದು ಹೇಳಿದರು.

“ವಿರೋಧ ಪಕ್ಷದವರು ಯಾರನ್ನೂ ಸಮಾಧಿ ಮಾಡುವುದಿಲ್ಲ. ಪ್ರಧಾನಿಯವರನ್ನು ರಾಜಕೀಯವಾಗಿ ವಿರೋಧ ಮಾಡುತ್ತಿದ್ದೇವೆ. ನರೇಂದ್ರ ಮೋದಿ 10 ವರ್ಷ ಪ್ರಧಾನಿಯಾಗಿ ಬಡವರ ಪರವಾಗಿ ಏನೂ ಮಾಡಿಲ್ಲ ಎನ್ನುವುದು ಹಾಗೂ ಸುಳ್ಳಿನ ಸರದಾರ ಎನ್ನುವುದು ನಮ್ಮ ಆರೋಪ. ಜನರಿಗೆ ನೀಡಿದ್ದ ಯಾವ ಭರವಸೆಗಳನ್ನೂ ಈಡೇರಿಸಿಲ್ಲ. ರಾಜಕೀಯವಾಗಿ ಅವರನ್ನು ಸೋಲಿಸಬೇಕೆನ್ನುವುದು ವಿರೋಧ ಪಕ್ಷಗಳ ಗುರಿ. ಏಕೆಂದರೆ ಈ ದೇಶ ಆರ್ಥಿಕ ಹಾಗೂ ಬಡವರ ಅಭಿವೃದ್ಧಿ ಆಗಿಲ್ಲ” ಎಂದರು.

ಮೇಲಕ್ಕೇರಿದವರು ಕೆಳಕ್ಕೆ ಇಳಿಯಲೇಬೇಕು

ನರೇಂದ್ರ ಮೋದಿ ಅವರಿಗೆ ಚುನಾವಣೆಯಲ್ಲಿ ಸೋಲುತ್ತೇವೆ ಎಂಬುದು ಖಾತರಿಯಾಗಿದೆ. ಹಾಗಾಗಿಯೇ ಅವರು ಹತಾಶರಾಗಿ ಈ ರೀತಿ ಮಾತನಾಡುತ್ತಿದ್ದಾರೆ. ಅವರ ಭಾವನಾತ್ಮಕ ಆಟ ಜನರಿಗೆ ಗೊತ್ತಾಗಿದೆ. ಅವರು ಸುಳ್ಳು ಹೇಳುವುದು, ಭಾವನಾತ್ಮಕವಾಗಿ ಶೋಷಣೆ ಮಾಡುವುದು ಜನರಿಗೆ ಗೊತ್ತಾಗಿದೆ. ಜನರಿಗೆ ಗೊತ್ತಾದ ಮೇಲೆ ಮತ್ತೆ ಅದೇ ತಪ್ಪನ್ನು ಮಾಡುವುದಿಲ್ಲ. ಮೇಲಕ್ಕೇರಿದವರು ಕೆಳಕ್ಕೆ ಇಳಿಯಲೇಬೇಕು” ಎಂದು ಕುಟುಕಿದರು.

ನೈತಿಕ ಹಕ್ಕಿಲ್ಲ

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ರಾಜ್ಯದಲ್ಲಿ ಬರಗಾಲ ಇರುವುದರಿಂದ ರೈತರ ಸಾಲ ಮನ್ನಾ ಮಾಡಬೇಕು ಎಂದು ಹೇಳಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, “ಈ ಹಿಂದೆ ಸಾಲ ಮನ್ನಾ ಮಾಡಿ ಎಂದಾಗ ನಮ್ಮ ಬಳಿ ಪ್ರಿಂಟಿಂಗ್ ಮಶೀನ್ ಇಲ್ಲ ಎಂದಿದ್ದರು ಈಗ. ಇವರಿಗೆ ಯಾವ ನೈತಿಕತೆ ಇದೆ” ಎಂದು ಪ್ರಶ್ನಿಸಿದರು. ಮೈಸೂರಿನಲ್ಲಿ ಶ್ರೀನಿವಾಸ ಪ್ರಸಾದ್‌ ಅವರ ನಿಧನದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಸಿದ್ದರಾಮಯ್ಯ ಭಾಗವಹಿಸಿದರು.

ಇದನ್ನೂ ಓದಿ: BS Yediyurappa: ಪ್ರಜ್ವಲ್‌ ಕೇಸ್‌ನಿಂದ ಬಿಜೆಪಿ-ಜೆಡಿಎಸ್‌ ಮೈತ್ರಿಗೆ ಧಕ್ಕೆ? ಯಡಿಯೂರಪ್ಪ ಹೇಳಿದ್ದಿಷ್ಟು

Exit mobile version