ಚಿತ್ರದುರ್ಗ/ಹೊಸಪೇಟೆ/ಕಲಬುರಗಿ: ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಸಾಲು ಸಾಲು ರ‍್ಯಾಲಿ, ಸಮಾವೇಶ, ರೋಡ್ ಶೋಗಳನ್ನು ನಡೆಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಭರ್ಜರಿಯಾಗಿಯೇ ಮತ ಬೇಟೆಯಲ್ಲಿ ತೊಡಗಿದ್ದಾರೆ. ಅದರಲ್ಲೂ, ಮಂಗಳವಾರ (May 2) ಒಂದೇ ದಿನ ಮಧ್ಯ ಕರ್ನಾಟಕದ ಚಿತ್ರದುರ್ಗ, ಕಲ್ಯಾಣ ಕರ್ನಾಟಕದ ಹೊಸಪೇಟೆ, ಸಿಂಧನೂರು ಹಾಗೂ ಖರ್ಗೆ ಕೋಟೆಯಾದ ಕಲಬುರಗಿಯಲ್ಲಿ ಮೋದಿ ಅಬ್ಬರದ ಪ್ರಚಾರ ನಡೆಸಿದರು.
ಮೊದಲು ಚಿತ್ರದುರ್ಗಕ್ಕೆ ತೆರಳಿದ ಮೋದಿ, ಅಭಿವೃದ್ಧಿ ವಿಷಯವನ್ನು ಪ್ರಸ್ತಾಪಿಸಿ ಜನರ ಗಮನ ಸೆಳೆದರು. ಏಳು ಸುತ್ತಿನ ಕೋಟೆ ಎಂದರೆ, ಏಳು ಸುತ್ತಿನ ಸುರಕ್ಷತೆ ಎಂದರ್ಥ. ಇಂತಹ ಸುರಕ್ಷತೆಯನ್ನು ಬಿಜೆಪಿ ನೀಡಲಿದೆ ಎಂದು ಜನರಿಗೆ ಭರವಸೆ ನೀಡಿದರು. ಇದಾದ ಬಳಿಕ ವಿಜಯನಗರ ಜಿಲ್ಲೆಯ ಹೊಸಪೇಟೆಗೆ ತೆರಳಿದ ಮೋದಿ, ಚುನಾವಣೆ ಅಸ್ತ್ರವನ್ನು ಬದಲಿಸಿದರು. ಬಜರಂಗದಳ ಸಂಘಟನೆಯನ್ನು ನಿಷೇಧಿಸುವುದಾಗಿ ಪ್ರಣಾಳಿಕೆ ಬಿಡುಗಡೆ ಮಾಡಿದ ಕಾಂಗ್ರೆಸ್ ಅಸ್ತ್ರವನ್ನು ಪ್ರತ್ಯಸ್ತ್ರವಾಗಿ ಬಳಸಿದ ಮೋದಿ, “ರಾಮ ಆಯ್ತು, ಈಗ ಹನುಮನನ್ನು ಬಂಧಿಸಲು ಹೊರಟಿದ್ದಾರೆ” ಎನ್ನುವ ಮೂಲ ಕಾಂಗ್ರೆಸ್‌ಗೆ ತಿರುಗೇಟು ನೀಡಿದರು.
ನಂತರ, ರಾಯಚೂರು ಜಿಲ್ಲೆಯ ಸಿಂಧನೂರಿಗೆ ತೆರಳಿದ ಮೋದಿ, ಅಭಿವೃದ್ಧಿ ಯೋಜನೆಗಳ ಜತೆಗೆ ಮಲ್ಲಿಕಾರ್ಜುನ ಖರ್ಗೆ ಹಾಗೂ ಅವರ ಪುತ್ರ ಪ್ರಿಯಾಂಕ್ ಖರ್ಗೆ ಅವರಿಗೆ ಕುಟುಕಿದರು. ಮಲ್ಲಿಕಾರ್ಜುನ ಖರ್ಗೆ ಹಾಗೂ ಪ್ರಿಯಾಂಕ್ ಖರ್ಗೆ ಅವರನ್ನು ಲಾಯಕ್ ನಾಯಕರು ಎನ್ನುವ ಮೂಲಕ ಅವರಿಗೆ ತಿರುಗೇಟು ನೀಡಿದರು.
ಖರ್ಗೆ ಕೋಟೆಯಲ್ಲಿ ಮೋದಿ ರೋಡ್ ಶೋ
ಬಿಸಿಲಿನ ಪ್ರಖರತೆ ಜಾಸ್ತಿ ಇರುವ ಕಲಬುರಗಿಯಲ್ಲಿ ಪ್ರಧಾನಿ ನರೇಂದ್ರ ಮೋದಿ (Modi In Karnataka) ಅವರು ರೋಡ್ ಶೋ ನಡೆಸುವ ಮೂಲಕ ಚುನಾವಣೆಯ ಬಿಸಿಯನ್ನು ಕಲಬುರಗಿಯ ಬಿಸಿಲಿಗಿಂತ ಜಾಸ್ತಿಗೊಳಿಸಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕೋಟೆಯಾದ ಕಲಬುರಗಿಯಲ್ಲಿ ನರೇಂದ್ರ ಮೋದಿ ಅವರು ಅದ್ಧೂರಿಯಾಗಿ ರೋಡ್ ಶೋ ನಡೆಸಿದ್ದು, ಸಾವಿರಾರು ಜನ ಹೂಮಳೆ ಸುರಿಸಿ ಅಭಿಮಾನ ವ್ಯಕ್ತಪಡಿಸಿದ್ದಾರೆ.
ಕಲಬುರಗಿಯ ಡಿಎಆರ್ ಮೈದಾನದ ಹಲಿಪ್ಯಾಡ್‌ನಲ್ಲಿ ಇಳಿದ ಮೋದಿ ಅವರಿಗೆ ಅದ್ಧೂರಿ ಸ್ವಾಗತ ದೊರೆಯಿತು. ಮೈದಾನದ ಸುತ್ತಲೂ ಸಾವಿರಾರು ಜನ ಮೋದಿ ಮೋದಿ ಘೋಷಣೆ ಕೂಗಿದರು. ಇದಾದ ಬಳಿಕ ಮೋದಿ ಅವರು ಕೆಎಂಎಫ್ ಡೇರಿ ವೃತ್ತದಿಂದ ವಲ್ಲಭಭಾಯಿ ಪಟೇಲ್ ಸರ್ಕಲ್‌ವರೆಗೆ ರೋಡ್ ಶೋ ಕೈಗೊಂಡರು.
ಮೋದಿ ರೋಡ್ ಶೋ ಲೈವ್
ಮೋದಿ ರೋಡ್ ಶೋ ಸಾಗುವ 5 ಕಿಲೋಮೀಟರ್ ದಾರಿಯ ಉದ್ದಕ್ಕೂ ಸಾವಿರಾರು ಜನ ನೆರೆದಿದ್ದರು. ಮನೆಯ ಚಾವಣಿ ಮೇಲೆ ನಿಂತು ಕೂಡ ಜನ ಮೋದಿ ಅವರತ್ತ ಕೈ ಬೀಸಿದರು. ದಾರಿಯುದ್ದಕ್ಕೂ ಮೋದಿ ಅವರ ಮೇಲೆ ಹೂಮಳೆ ಸುರಿಸಿದರು. ಮೋದಿ ಮೋದಿ ಘೋಷಣೆಗಳು ಎಲ್ಲೆಡೆ ಮೊಳಗಿದವು.
ಇದರೊಂದಿಗೆ, ಕಲಬುರಗಿಯಲ್ಲಿ ಇನ್ನಷ್ಟು ಪ್ರಾಬಲ್ಯ ಸಾಧಿಸಲು ಮೋದಿ ರೋಡ್ ಶೋ ಕಾರಣವಾಗಲಿದೆ ಎಂದೇ ಹೇಳಲಾಗುತ್ತಿದೆ. ಲಂಬಾಣಿ ಸಮುದಾಯದ ಜನ ಸಾಂಪ್ರದಾಯಿಕ ನೃತ್ಯ ಮಾಡಿದ್ದು ಕೂಡ ವಿಶೇಷವಾಗಿತ್ತು. ಅದರಲ್ಲೂ, ಮಕ್ಕಳಿಗೆ ಶ್ರೀರಾಮ, ಒನಕೆ ಓಬವ್ವ ವೇಷ ತೊಡಿಸಿ, ಅವರನ್ನು ಪೋಷಕರು ಕರೆದುತಂದಿದ್ದು ಕೂಡ ಗಮನ ಸೆಳೆಯಿತು.
ಇದನ್ನೂ ಓದಿ: Modi In Karnataka: ಹಿರಿ ಖರ್ಗೆ, ಮರಿ ಖರ್ಗೆ ಅವರನ್ನು ‘ಲಾಯಕ್’ ಎನ್ನುತ್ತಲೇ ತಿರುಗೇಟು ಕೊಟ್ಟ ಮೋದಿ