Site icon Vistara News

Modi in Karnataka: ಮೇ 3ಕ್ಕೆ ಮೂಲ್ಕಿಯಲ್ಲಿ ಪ್ರಧಾನಿ ಮೋದಿ ಸಮಾವೇಶ; ಕುಡ್ಲದ ಆತಿಥ್ಯದಲ್ಲೇನಿದೆ?

PM Narendra Modi to address rally in Mulki on May 3 Modi in Karnataka updates

ಮಂಗಳೂರು: ಪ್ರಧಾನಿ ನರೇಂದ್ರ ಮೋದಿ (Modi in Karnataka) ಅವರು ಮೇ 3ರಂದು ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸುತ್ತಿದ್ದು, ಮೂಲ್ಕಿ ಬಳಿ ಸಜ್ಜುಗೊಳಿಸಲಾದ ವಿಶಾಲ ಮೈದಾನದಲ್ಲಿ ಬೃಹತ್ ಸಮಾವೇಶಕ್ಕೆ ಎಲ್ಲ ಸಿದ್ಧತೆ ನಡೆದಿದೆ.

ಪ್ರಧಾನಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಬಿಜೆಪಿ ಪ್ರತಿ ಬೂತ್ ಮಟ್ಟದಲ್ಲಿ ಪೂರ್ವಭಾವಿ ಸಭೆಗಳು ನಡೆಸಿದೆ. ಪ್ರತಿ ಬೂತ್‌ಗಳಿಂದ ಕಾರ್ಯಕರ್ತರು ಮತ್ತು ಮತದಾರರು ಆಗಮಿಸುವಂತೆ ಈಗಾಗಲೇ ಸೂಚನೆ ನೀಡಲಾಗಿದೆ.

ಸಮಾವೇಶವನ್ನು ಗ್ರಾಮಾಂತರ ಪ್ರದೇಶದಲ್ಲಿ ನಡೆಸಲಾಗುತ್ತಿದ್ದು, ನಗರದಲ್ಲಿ ಟ್ರಾಫಿಕ್ ಸಮಸ್ಯೆಗಳು ಉಂಟಾಗದಂತೆ ನೋಡಿಕೊಳ್ಳಲಾಗಿದೆ. ಎರಡೂ ಜಿಲ್ಲೆಗಳ ಮಧ್ಯಭಾಗದ ಮೂಲ್ಕಿಯ ಕೊಳ್ನಾಡಿನಲ್ಲಿ ಕಾರ್ಯಕ್ರಮವನ್ನು ಆಯೋಜಿಸಿರುವುದರಿಂದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಂದ ಲಕ್ಷಾಂತರ ಮಂದಿ ಆಗಮಿಸಲು ಅನುಕೂಲವಾಗಲಿದೆ.

ಇದನ್ನೂ ಓದಿ: Karnataka Election : 2013ರಲ್ಲಿ ಬಿಎಸ್‌ವೈ, ಶೋಭಾ ಲೀಲಾ ಪ್ಯಾಲೇಸ್‌ನಲ್ಲಿ ಭೇಟಿ ಆಗಿದ್ದು ಯಾರನ್ನು?; ಹುಳ ಬಿಟ್ಟ ಎಂ.ಬಿ ಪಾಟೀಲ್‌

ಮುಕ್ತಾಯ ಹಂತದಲ್ಲಿ ವೇದಿಕೆ

ಈಗಾಗಲೇ ವೇದಿಕೆ ಮತ್ತು ಪೆಂಡಾಲ್ ಕೆಲಸಗಳು ಮುಕ್ತಾಯದ ಹಂತದಲ್ಲಿದ್ದು, ವಾಹನಗಳ ಪಾರ್ಕಿಂಗ್‌ಗೆ ಸಾಕಷ್ಟು ಸ್ಥಳಾವಕಾಶವನ್ನು ಒದಗಿಸಲಾಗಿದೆ. ಮಂಗಳವಾರ ಮಧ್ಯಾಹ್ನದೊಳಗೆ ಎಲ್ಲ ಕೆಲಸ ಪೂರ್ಣಗೊಂಡು ಇಡೀ ಪ್ರದೇಶವನ್ನು ಭದ್ರತಾ ಸಿಬ್ಬಂದಿಗೆ ಬಿಟ್ಟುಕೊಡಲಾಗುತ್ತದೆ. ಕಾರ್ಯಕ್ರಮಕ್ಕೆ ಆಗಮಿಸುವವರಿಗೆ ಯಾವುದೇ ತೊಂದರೆಯಾಗದಂತೆ ವ್ಯವಸ್ಥೆ ಮಾಡಲಾಗಿದೆ.

ಬೆಳಗ್ಗೆ 9 ಗಂಟೆಯೊಳಗೆ ಬರಬೇಕು

ಪ್ರಧಾನಿ ಮೋದಿ ಅವರ ಸಾರ್ವಜನಿಕ ಸಭೆ ಬೆಳಗ್ಗೆ 10 ಗಂಟೆಗೆ ನಿಗದಿಯಾಗಿದ್ದು, ಆಗಮಿಸುವ ಕಾರ್ಯಕರ್ತರು, ಸಾರ್ವಜನಿಕರು ಬೆಳಗ್ಗೆ 9 ಗಂಟೆಯೊಳಗೆ ಸಮಾವೇಶದ ಸ್ಥಳಕ್ಕೆ ಆಗಮಿಸುವಂತೆ ಬಿಜೆಪಿ ಮುಖಂಡರು ಕಾರ್ಯಕರ್ತರಿಗೆ ಸೂಚಿಸಿದ್ದಾರೆ. ಭದ್ರತಾ ಕಾರಣಗಳಿಂದಾಗಿ ಪ್ರಧಾನಿ ನರೇಂದ್ರ ಮೋದಿ ಆಗಮಿಸುವ ಹೊತ್ತಿಗೆ ಸಮಾವೇಶದ ಪರಿಸರದಲ್ಲಿ ಸಾರ್ವಜನಿಕರ ಸಂಚಾರವನ್ನು ಸಂಪೂರ್ಣ ನಿರ್ಬಂಧಿಸಲಾಗುತ್ತದೆ. ಹೀಗಾಗಿ ಪ್ರಧಾನಿ ಅವರು ಸ್ಥಳಕ್ಕೆ ಆಗಮಿಸುವ ಮೊದಲೇ ಸಾರ್ವಜನಿಕರು ಸಮಾವೇಶದ ಮೈದಾನದಲ್ಲಿರಬೇಕು ಎಂದು ಸೂಚಿಸಲಾಗಿದೆ.

ಪ್ರಧಾನಿಗೆ ಕುಡ್ಲದ ಆತಿಥ್ಯ

ಪ್ರಧಾನಿ ನರೇಂದ್ರ ಮೋದಿ ಅವರು ಕರಾವಳಿಯ ತಿಂಡಿ ತಿನಿಸುಗಳನ್ನು ವಿಶೇಷವಾಗಿ ಇಷ್ಟಪಡುತ್ತಿದ್ದು, ಅವರಿಗಾಗಿ ಉಪ್ಪಿಟ್ಟು ಅವಲಕ್ಕಿ, ಮೂಡೆ, ನೀರ್‌ದೋಸೆ ಮುಂತಾದ ಎಲ್ಲ ಬಗೆಯ ಖಾದ್ಯಗಳನ್ನು ಸಿದ್ಧಪಡಿಸಲಾಗುತ್ತಿದೆ. ಮುಂಜಾನೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿಮಾನ ನಿಲ್ದಾಣದಲ್ಲೇ ಕುಡ್ಲದ ಬ್ರೇಕ್ ಫಾಸ್ಟ್ ವ್ಯವಸ್ಥೆ ಮಾಡಲಾಗಿದೆ.

ಮೂರು ಕಡೆ ಹೆಲಿಪ್ಯಾಡ್

ದಿಲ್ಲಿಯಿಂದ ನೇರವಾಗಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುವ ಪ್ರಧಾನಿ ನರೇಂದ್ರ ಮೋದಿ ಅವರು ಬಜಪೆಯಿಂದ ಹೆಲಿಕಾಪ್ಟರ್ ಮೂಲಕ ಸಮಾವೇಶದ ಸ್ಥಳಕ್ಕೆ ಆಗಮಿಸುತ್ತಾರೆ. ಹೆಲಿಕಾಪ್ಟರ್‌ ಇಳಿಯಲು ಪಣಂಬೂರಿನ ಎನ್‌ಎಂಪಿಎ, ಸುರತ್ಕಲ್‌ನ ಎನ್‌ಐಟಿಕೆ, ಹಾಗೂ ಮೂಲ್ಕಿಯ ಸಮಾವೇಶದ ಸ್ಥಳದ ಪಕ್ಕದಲ್ಲಿ ಹೆಲಿಪ್ಯಾಡ್‌ಗಳನ್ನು ನಿರ್ಮಿಸಲಾಗಿದೆ.

ಎರಡೂವರೆ ಲಕ್ಷಕ್ಕೂ ಹೆಚ್ಚಿನ ಜನರ ನಿರೀಕ್ಷೆ

ಸಮಾವೇಶದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಂದ ಎರಡೂವರೆ ಲಕ್ಷಕ್ಕೂ ಹೆಚ್ಚು ಜನರು ಆಗಮಿಸುವ ನಿರೀಕ್ಷೆ ಇಡಲಾಗಿದೆ. ಎರಡೂ ಜಿಲ್ಲೆಗಳ ಒಟ್ಟು 13 ಕ್ಷೇತ್ರಗಳ ಅಭ್ಯರ್ಥಿಗಳೂ ಹಾಜರಿರುತ್ತಾರೆ. ಹೀಗಾಗಿ 2 ಲಕ್ಷ ಕಾರ್ಯಕರ್ತರು ಆಗಮಿಸುವ ನಿರೀಕ್ಷೆ ಹೊಂದಲಾಗಿದೆ.

ಇದನ್ನೂ ಓದಿ: Karnataka Election: 2018ರಲ್ಲಿ ಮನೆಗೆ ಬಂದು ಅಧಿಕಾರ ಕೊಟ್ಟು ಕೈ ಕೊಟ್ಟ ಕಾಂಗ್ರೆಸ್‌ ಈಗ ದುಷ್ಪರಿಣಾಮ ಎದುರಿಸುತ್ತೆ: ಎಚ್.ಡಿ. ದೇವೇಗೌಡ

ಬಳಿಕ ಅಂಕೋಲಾ, ಕಿತ್ತೂರಿಗೆ ಪ್ರಯಾಣ

ಪ್ರಧಾನಿ ನರೇಂದ್ರ ಮೋದಿ ಅವರು ಮೂಲ್ಕಿಯ ಸಮಾವೇಶದ ಬಳಿಕ ಅಂಕೋಲಕ್ಕೆ ತೆರಳಲಿದ್ದಾರೆ. ಬಳಿಕ ಕಿತ್ತೂರಿನಲ್ಲಿ ಸಾರ್ವಜನಿಕ ಸಮಾವೇಶ ನಡೆಸಲಿದ್ದಾರೆ.

Exit mobile version