ಮೈಸೂರು: ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ 8 ಮತ್ತು 9ರಂದು ಮೈಸೂರು, ಚಾಮರಾಜನಗರ ಪ್ರವಾಸ ಕೈಗೊಂಡಿದ್ದಾರೆ. ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಮೋದಿ ಅವರು ಆಗಮಿಸುತ್ತಿದ್ದು, ಇದಕ್ಕಾಗಿ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ಪ್ರಧಾನಿ ರಾಜ್ಯ ಪ್ರವಾಸದ (Modi in Karnataka) ಸಂಪೂರ್ಣ ಮಾಹಿತಿ ಇಲ್ಲಿ ನೀಡಲಾಗಿದೆ.
ಈವರೆಗೆ ಒಟ್ಟು 7 ಬಾರಿಗೆ ಮೈಸೂರಿಗೆ ನರೇಂದ್ರ ಮೋದಿ ಅವರು ಆಗಮಿಸಿದ್ದು, 4 ಬಾರಿ ಮೈಸೂರಿನಲ್ಲೇ ವಾಸ್ತವ್ಯ ಹೂಡಿದ್ದಾರೆ. ಅವರು ಪ್ರಧಾನಿ ಆದ ನಂತರ 4ನೇ ಬಾರಿಗೆ ಮೈಸೂರಿಗೆ ಆಗಮಿಸುತ್ತಿದ್ದಾರೆ. ಪ್ರಧಾನಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಕೆಎಸ್‌ಒಯು ಘಟಿಕೋತ್ಸವ ಭವನವನ್ನು ಎಸ್‌ಪಿಜಿ ತಂಡ ವಶಕ್ಕೆ ಪಡೆದು ಪರಿಶೀಲನೆ ನಡೆಸುತ್ತಿದೆ.
ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮಗಳ ವೇಳಾಪಟ್ಟಿ
- ಏ.8 ರಂದು ರಾತ್ರಿ 8.45ಕ್ಕೆ ಚೆನ್ನೈನಿಂದ ಮೈಸೂರು ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮನ. ರ್ಯಾಡಿಸನ್ ಬ್ಲೂ ಹೋಟೆಲ್ನಲ್ಲಿ ವಾಸ್ತವ್ಯ.
- ಏ. 9 ಬೆಳಗ್ಗೆ 6.20ಕ್ಕೆ ಮೈಸೂರಿನಿಂದ ವಿಶೇಷ ಹೆಲಿಕಾಪ್ಟರ್ ಮೂಲಕ ಚಾಮರಾಜನಗರದ ಮೇಲುಕಾಮನಹಳ್ಳಿ ಹೆಲಿಪ್ಯಾಡ್ಗೆ ಪಯಣ.
- ಬೆಳಗ್ಗೆ 7.15ಕ್ಕೆ ಬಂಡೀಪುರಕ್ಕೆ ಭೇಟಿ, ಸಫಾರಿ ನಡೆಸಲಿರುವ ಮೋದಿ. ಅಲ್ಲಿಂದ ರಸ್ತೆ ಮಾರ್ಗವಾಗಿ ತೆಪ್ಪಕಾಡು ಆನೆ ಕ್ಯಾಂಪ್ಗೆ ಭೇಟಿ. ಸುಮಾರು 2 ಗಂಟೆಗಳ ಕಾಲ ಅರಣ್ಯದಲ್ಲಿ ಕಾಲ ಕಳೆಯಲಿರುವ ಪ್ರಧಾನಿ. 9.35ಕ್ಕೆ ತಮಿಳುನಾಡಿನ ಮುದುಮಲೈ ಆನೆ ಶಿಬಿರಕ್ಕೆ ಭೇಟಿ.
- ಬೆಳಿಗ್ಗೆ 10.20ಕ್ಕೆ ಮೈಸೂರಿಗೆ ವಾಪಸ್ ಆಗಲಿರುವ ನರೇಂದ್ರ ಮೋದಿ. ಮೈಸೂರು ವಿಶ್ವವಿದ್ಯಾನಿಲಯದ ಓವೆಲ್ ಮೈದಾನದ ಹೆಲಿಪ್ಯಾಡ್ ಆಗಮನ.
- 10.30ಕ್ಕೆ ಕರ್ನಾಟಕ ಮುಕ್ತ ವಿವಿ ಘಟಿಕೋತ್ಸವ ಭವನಕ್ಕೆ ಆಗಮನ. ಹುಲಿ ಯೋಜನೆ (ಪ್ರಾಜೆಕ್ಟ್ ಟೈಗರ್) 50ನೇ ವರ್ಷದ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ಭಾಗಿ. ಕಾರ್ಯಕ್ರಮದಲ್ಲಿ ದೇಶ ವಿದೇಶಗಳ ಗಣ್ಯರು ಭಾಗಿ. ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ ಪ್ರವೇಶ ನಿಷೇಧವಿರಲಿದೆ.
- ಮಧ್ಯಾಹ್ನ 12.10ಕ್ಕೆ ಹೆಲಿಕಾಪ್ಟರ್ ಮೂಲಕ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ವಾಪಸ್.
- 12.40ಕ್ಕೆ ಮಂಡಕಳ್ಳಿ ವಿಮಾನ ನಿಲ್ದಾಣದಿಂದ ದೆಹಲಿಗೆ ಮೋದಿ ಪಯಣ.
ಹುಲಿ ಗಣತಿ ವರದಿ ಬಿಡುಗಡೆ
ಚಾಮರಾಜ ನಗರ: ಹುಲಿ ಯೋಜನೆಗೆ (ಪ್ರಾಜೆಕ್ಟ ಟೈಗರ್) 50 ವರ್ಷ ತುಂಬಿದ ಹಿನ್ನೆಲೆಯಲ್ಲಿ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿವಿ (ಕೆಎಸ್‌ಒಯು) ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಹುಲಿ ಗಣತಿ ವರದಿಯನ್ನು ಬಿಡುಗಡೆ ಮಾಡಲಿದ್ದಾರೆ. ಅದರ ಜತೆಗೆ ಹುಲಿ ಸಂರಕ್ಷಣೆಗಾಗಿ ಸರ್ಕಾರದ ದೃಷ್ಟಿಕೋನ ಮತ್ತು ಕಾರ್ಯಕ್ರಮದ ಸ್ಮರಣಾರ್ಥ ನಾಣ್ಯವನ್ನು ಬಿಡುಗಡೆ ಮಾಡಲಿದ್ದಾರೆ.
ಜೀಪ್‌ನಲ್ಲಿ ಹುಲಿ ಸಫಾರಿ
ಪ್ರಧಾನಿ ಮೋದಿ ಅವರು ಜೀಪ್‌ನಲ್ಲಿ ಕುಳಿತು ಸುಮಾರು ಎರಡು ಗಂಟೆ ಕಾಲ ಹುಲಿ ಸಫಾರಿ ನಡೆಸಲಿದ್ದಾರೆ. ಬಂಡೀಪುರ ಉದ್ಯಾನದಲ್ಲಿ ಕೆಲಸ ಮಾಡುವ ಉದ್ಯೋಗಿಗಳ ಜತೆ ಅವರು ಮಾತುಕತೆ ನಡೆಸಲಿದ್ದಾರೆ. ಬಳಿಕ ಮೋದಿ ಅವರು ತಮಿಳುನಾಡಿನಲ್ಲಿರುವ ತೆಪ್ಪ ಕಾಡು ಆನೆ ಶಿಬಿರಕ್ಕೆ ಭೇಟಿ ನೀಡಲಿದ್ದಾರೆ. ಇಲ್ಲಿ ಆಸ್ಕರ್ ಪ್ರಶಸ್ತಿ ವಿಜೇತ ಡಾಕ್ಯುಮೆಂಟರಿ ಚಿತ್ರ ಎಲಿಫೆಂಟ್ ವಿಸ್ಪರರ್ಸ್‌ನ ಹೀರೊಗಳಾದ ಬೊಮ್ಮನ್ ಮತ್ತು ಬೆಳ್ಳಿ ಅವರ ಜತೆ ಮೋದಿ ಮಾತನಾಡಲಿದ್ದಾರೆ.
ಮುದುಮಲೈ ಆನೆ ಶಿಬಿರಕ್ಕೆ ಭೇಟಿ
ಬಂಡೀಪುರ ಪ್ರವಾಸದ ವೇಳೆ ತಮಿಳುನಾಡಿನ ನೀಲಗಿರಿ ಬೆಟ್ಟಗಳಲ್ಲಿನ ಮುದುಮಲೈ ಆನೆ ಶಿಬಿರಕ್ಕೆ ಭೇಟಿ ನೀಡಲಿದ್ದಾರೆ. ಮುದುಮಲೈನಲ್ಲಿ ‘ಎಲಿಫೆಂಟ್ ವಿಸ್ಪರರ್ಸ್’ ಸಾಕ್ಷ್ಯಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಮಾವುತ ದಂಪತಿ ಬೊಮ್ಮನ್ ಹಾಗೂ ಬೆಳ್ಳಿ ಅವರನ್ನು ಪ್ರಧಾನಿ ನರೇಂದ್ರ ಮೋದಿ ಭೇಟಿ ಆಗಿ ಅಭಿನಂದಿಸಲಿದ್ದಾರೆ. ತಮಿಳುನಾಡಿನ ಮಧುಮಲೈ ಆನೆ ಶಿಬಿರ ಬಂಡೀಪುರ ಸಮೀಪ ಇದೆ. ಹೀಗಾಗಿ ಪ್ರಧಾನಿ ಮೋದಿ ಅವರು ಮುದುಮಲೈ ಆನೆ ಶಿಬಿರಕ್ಕೆ ತೆರಳಿ ಬಳಿಕ ಮೈಸೂರಿಗೆ ವಾಪಸ್ ಆಗಲಿದ್ದಾರೆ.
ಇದನ್ನೂ ಓದಿ | BJP Karnataka: ದೆಹಲಿಯಲ್ಲಿ ನಡೆಯಬೇಕಿದ್ದ ಬಿಜೆಪಿ ಟಿಕೆಟ್ ಆಯ್ಕೆ ಪೂರ್ವಭಾವಿ ಸಭೆ ರದ್ದು
ಏಪ್ರಿಲ್ 6ರಿಂದಲೇ ಸಫಾರಿ ಬಂದ್
ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ 9ರಂದು ಬಂಡೀಪುರಕ್ಕೆ ಭೇಟಿ ನೀಡುವ ಹಿನ್ನೆಲೆಯಲ್ಲಿ ಬಂಡೀಪುರದಲ್ಲಿ ಏಪ್ರಿಲ್ 6ರಿಂದಲೇ ಸಫಾರಿ ಬಂದ್ ಆಗಲಿದೆ. ಇದರ ಜತೆಗೆ ಬಂಡೀಪುರ ವ್ಯಾಪ್ತಿಯ ಎಲ್ಲಾ ಹೋಂ ಸ್ಟೇ, ರೆಸಾರ್ಟ್, ಲಾಡ್ಜ್ ಗಳು ಸಹ ಬಂದ್ ಆಗಲಿವೆ ಎಂದು ಚಾಮರಾಜ ನಗರ ಜಿಲ್ಲಾಧಿಕಾರಿ ಡಿ.ಎಸ್.ರಮೇಶ್ ಆದೇಶ ಹೊರಡಿಸಿದ್ದಾರೆ. ಏ.6 ರಿಂದ 9 ರವರಗೆ ಪ್ರವಾಸಿಗರಿಗೆ ಸಫಾರಿ, ಬಂಡೀಪುರ ವ್ಯಾಪ್ತಿಯ ಎಲ್ಲಾ ಹೋಂಸ್ಟೇ, ರೆಸಾರ್ಟ್, ಲಾಡ್ಜ್ ಗಳಲ್ಲಿ ಪ್ರವಾಸಿಗರ ವಾಸ್ತವ್ಯಕ್ಕೆ ನಿರ್ಬಂಧ ವಿಧಿಸಲಾಗಿದೆ ಎಂದು ತಿಳಿಸಲಾಗಿದೆ.