ಬೆಂಗಳೂರು: ರಾಜ್ಯ ಸರ್ಕಾರವನ್ನು ಅನೇಕ ದಿನಗಳವರೆಗೆ ಕಾಡಿ ಹಿರಿಯ ಸಚಿವರೊಬ್ಬರ ರಾಜೀನಾಮೆಗೂ ಕಾರಣವಾದ ನಲವತ್ತು ಪರ್ಸೆಂಟ್ ಕಮಿಷನ್ ಹಗರಣದಲ್ಲಿ ಇದೀಗ ಸ್ವತಃ ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಿದೆ. ಸುಮಾರು ಒಂದು ವರ್ಷದ ಹಿಂದೆ ಗುತ್ತಿಗೆದಾರರ ಸಂಘ ನೀಡಿದ್ದ ದೂರಿನ ಕುರಿತು ಪ್ರಕ್ರಿಯೆ ಆರಂಭಿಸಿರುವುದು ಗುತ್ತಿಗೆದಾರರಲ್ಲಿ ಸಂತಸ ಮೂಡಿಸಿದ್ದರೆ ಸರ್ಕಾರದಲ್ಲಿ ನಡುಕ ಹುಟ್ಟಿಸಿದೆ.
ರಾಜ್ಯದಲ್ಲಿ ಭ್ರಷ್ಟಾಚಾರ ಅಂಕೆಗೂ ಮೀರಿ ನಡೆಯುತ್ತಿದೆ, ಪ್ರತಿ ಗುತ್ತಿಗೆಗೆ ಶೇ.40 ಕಮಿಷನ್ ಪಡೆಯಲಾಗುತ್ತಿದೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಪ್ರಧಾನಿ ಕಾರ್ಯಾಲಯಕ್ಕೆ ದೂರು ನೀಡಿದ್ದರು. ಇದೀಗ ಪ್ರಧಾನಿ ಕಾರ್ಯಾಲಯವು ಕೇಂದ್ರ ಗೃಸಚಿವಾಲಯಕ್ಕೆ ಮಾಹಿತಿ ರವಾನಿಸಿದೆ. ಗೃಹ ಸಚಿವಾಲಯದಿಂದ ಗುತ್ತಿಗೆದಾರರ ಸಂಘಕ್ಕೆ ಕರೆ ಬಂದಿದೆ.
ಇದನ್ನೂ ಓದಿ | 40% ಆಯ್ತು, ಈಗ 30% ಕಮಿಷನ್ ಚರ್ಚೆ: ಮಠಗಳಿಂದ ಕಮಿಷನ್ ವಿಚಾರದಲ್ಲಿ ಸರ್ಕಾರಕ್ಕೆ ಮುಖಭಂಗ
ಗೃಹಸಚಿವಾಲಯದಿಂದ ಅಧಿಕಾರಿಗಳು ಗುತ್ತಿಗೆದಾರರ ಸಂಘಕ್ಕೆ ಕರೆ ಮಾಡಿದ್ದಾರೆ. ನಿಮ್ಮ ದೂರು ತಲುಪಿದೆ. ಈ ಕುರಿತು ಗಮನಹರಿಸುತ್ತಿದ್ದೇವೆ. ನಿಮ್ಮ ಆರೋಪದ ಕುರಿತು ಪೂರಕ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಿ. ನಮ್ಮ ತಂಡ ನಿಮ್ಮನ್ನು ಸಂಪರ್ಕಿಸಲಿದೆ ಎಂದು ತಿಳಿಸಿದ್ದಾರೆ. ಈ ಕರೆ ಬಂದಿರುವುದನ್ನು ಗುತ್ತಿಗೆದಾರರ ಸಂಘದ ಸದಸ್ಯರು ಖಚಿತಪಡಿಸಿದ್ದಾರೆ.
ಇಷ್ಟು ದಿನಗಳ ನಂತರವಾದರೂ ಕೇಂದ್ರ ಸರ್ಕಾರದಿಂದ ಸ್ಪಂದನೆ ಬಂದಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ಗುತ್ತಿಗೆದಾರರ ಸಂಘದ ಸದಸ್ಯರೊಬ್ಬರು, ತಮ್ಮ ಕೋರಿಗೆಗೆ ಈಗಲಾದರೂ ನ್ಯಾಯ ಸಿಗುತ್ತದೆಯೇ ಎಂದು ನಿರೀಕ್ಷಿಸುತ್ತಿರುವುದಾಗಿ ಹೇಳಿದ್ದಾರೆ. ಸದ್ಯದಲ್ಲೆ ದಾಖಲೆಗಳನ್ನು ನೀಡುವುದಾಗಿ ತಿಳಿಸಿದ್ದಾರೆ. ಆದರೆ ಇತ್ತ ಸರ್ಕಾರ ಹಾಗೂ ವಿವಿಧ ಸಚಿವರಿಗೆ ಈ ಬೆಳವಣಿಗೆಯಿಂದ ನಡುಕ ಆರಂಭವಾಗಿದೆ.
ಪ್ರಧಾನಿಗೆ ನೀಡಿದ ದೂರಿನಲ್ಲಿ ಏನಿದೆ?
ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿನ ಗುತ್ತಿಗೆ ಕಾಮಗಾರಿಗಳ ಮೊತ್ತದ ಶೇ.40 ರಷ್ಟು ಲಂಚದ ರೂಪದಲ್ಲಿ ರಾಜಕಾರಣಿಗಳು ಮತ್ತು ಅಧಿಕಾರಿಗಳ ಜೇಬು ಸೇರುತ್ತಿದೆ. ಅದರಲ್ಲೂ ಆರೋಗ್ಯ, ಲೋಕೋಪಯೋಗಿ, ಜಲ ಸಂಪನ್ಮೂಲ, ಸಣ್ಣ ನೀರಾವರಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ನಗರಾಭಿವೃದ್ಧಿ ಇಲಾಖೆಗಳಲ್ಲಿ ಭ್ರಷ್ಟಾಚಾರ ಹೆಚ್ಚಿದೆ. ಕೆಲವು ಸಚಿವರು ಟೆಂಡರ್ ಅನುಮೋದನೆಗೂ ಮೊದಲೇ ಲಂಚಕ್ಕೆ ಒತ್ತಾಯಿಸುತ್ತಿದ್ದಾರೆ ಎಂಬ ಆರೋಪವನ್ನು ಗುತ್ತಿಗೆದಾರರ ಸಂಘ ಮಾಡಿತ್ತು.
ಕಾಮಗಾರಿ ಆರಂಭಕ್ಕೂ ಮುನ್ನವೇ ಒಟ್ಟು ಮೊತ್ತದ ಶೇ.2 ಮೊತ್ತವನ್ನು ತಮಗೆ ನೀಡುವಂತೆ ರಾಜ್ಯದ ಕೆಲವು ಸಂಸದರು ಗುತ್ತಿಗೆದಾರರಿಗೆ ಕಿರುಕುಳ ನೀಡುತ್ತಿದ್ದಾರೆ. ಕಟ್ಟಡ ಕಾಮಗಾರಿಗಳಲ್ಲಿ ಶೇ. 5 ಮತ್ತು ರಸ್ತೆ ಕಾಮಗಾರಿಗಳಲ್ಲಿ ಶೇ.10 ಲಂಚವನ್ನು ಮುಂಗಡವಾಗಿ ನೀಡುವಂತೆ ಒತ್ತಡ ಹೇರುತ್ತಿದ್ದಾರೆ. ರಾಜ್ಯದ ಹಿರಿಯ ಸಚಿವರೊಬ್ಬರು ಟೆಂಡರ್ ಅನುಮೋದನೆಗೂ ಮೊದಲು ಶೇ.15 ಲಂಚ ಕೊಡುವುದನ್ನು ಕಡ್ಡಾಯ ಮಾಡಿದ್ದಾರೆ. 2019ರಿಂದ ಲಂಚದ ಪ್ರಮಾಣ ದುಪ್ಪಟ್ಟಾಗಿದ್ದು, ಕೆಲವು ಪ್ರಕರಣಗಳಲ್ಲಿ ಶೇ.52ರಷ್ಟು ಪಾಲು ಕೇಳುತ್ತಿದ್ದಾರೆ. ಗುತ್ತಿಗೆದಾರರಿಗೆ ಬಿಲ್ ಪಾವತಿಸುವಲ್ಲೂ ಅಕ್ರಮ ನಡೆಯುತ್ತಿದೆ ಎಂದು ಗುತ್ತಿಗೆದಾರರ ಸಂಘ ದೂರಿನಲ್ಲಿ ಆರೋಪಿಸಿತ್ತು.
ರಾಜ್ಯಕ್ಕೆ ಬರಲಿದೆಯಾ ತಂಡ?
ಪ್ರಧಾನಮಂತ್ರಿ ಕಾರ್ಯಾಲಯದ ಸೂಚನೆ ಮೇರೆಗೆ ಗೃಹಸಚಿವಾಲಯದ ತನಿಖಾ ತಂಡವೊಂದು ರಾಜ್ಯಕ್ಕೆ ಬರುವ ನಿರೀಕ್ಷೆಯಲ್ಲಿ ಗುತ್ತಿಗೆದಾರರ ಸಂಘ ಇದೆ. ಸಂಘದಿಂದ ದಾಖಲೆಗಳನ್ನು ಪಡೆಯುವುದರ ಜತೆಗೆ ನಾಲ್ಕೈದು ಗುತ್ತಿಗೆದಾರರನ್ನು ಕರೆಸಿ ಅವರ ಅಭಿಪ್ರಾಯವನ್ನು ಲಿಖಿತ ರೂಪದಲ್ಲಿ ದಾಖಲಿಸಬಹುದು ಎನ್ನಲಾಗಿದೆ. ಗುತ್ತಿಗೆದಾರರು ಯಾರ‍್ಯಾರ ಮೇಲೆ ಆರೋಪಗಳನ್ನು ಮಾಡಿದ್ದಾರೆಯೋ, ಅವರನ್ನೂ ಕರೆಸಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.
ತನಿಖೆ ಶುರುವಾದರೆ ಯಾವ ಇಲಾಖೆಯವರಿಗೆ ನಡುಕ?
ಗುತ್ತಿಗೆದಾರ ಸಂಘದ ದೂರಿನಲ್ಲಿ ಹಲವು ಇಲಾಖೆಗಳ ಅಧಿಕಾರಿಗಳ ಬಗ್ಗೆ ಉಲ್ಲೇಖ ಮಾಡಲಾಗಿದೆ. ಅದರಲ್ಲಿ ಪ್ರಮುಖವಾಗಿ ಲೋಕೋಪಯೋಗಿ ಇಲಾಖೆ, ಜಲ ಸಂಪನ್ಮೂಲ ಇಲಾಖೆ, ಸಣ್ಣ ನೀರಾವರಿ ಇಲಾಖೆಯು ಸೇರಿದಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ನಗರಾಭಿವೃದ್ಧಿ ಹಾಗೂ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಒಳಗೊಂಡಂತೆ ಹೆಚ್ಚಿನ ತನಿಖೆ ನಡೆಯಲಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಶೇ.40 ಕಮಿಷನ್ ಆರೋಪ ಮಾಡಿದ್ದ ಬಿಜೆಪಿ ಕಾರ್ಯಕರ್ತ ಹಾಗೂ ಗುತ್ತಿಗೆದಾರ ಸಂತೋಷ್ ಏಪ್ರಿಲ್‌ನಲ್ಲಿ ಉಡುಪಿಯ ಲಾಡ್ಜ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ. ನಂತರ ರಾಜ್ಯ ರಾಜಕೀಯದಲ್ಲಿ ಬಿರುಗಾಳಿಯೆದ್ದು, ಕೊನೆಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ರಾಜೀನಾಮೆ ನೀಡಿದ್ದರು. ಇದೀಗ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೆಂದ್ರ ಸರ್ಕಾವೇ ಪ್ರಕರಣದಲ್ಲಿ ಪ್ರವೇಶ ಮಾಡಿರುವುದರಿಂದ ಸ್ವತಃ ಸಿಎಂ ಬಸವರಾಜ ಬೊಮ್ಮಾಯಿ ಸೇರಿ, ಆರೋಪಿತ ಇಲಾಖೆಗಳ ಹೊಣೆ ಹೊತ್ತ ಸಚಿವರಿಗೆ ನಡುಕ ಉಂಟಾಗಿದೆ.
ಇದನ್ನೂ ಓದಿ | 1% ಕಮಿಷನ್ ಬೇಡಿಕೆ ಸಾಬೀತು, ಪಂಜಾಬ್ ಆರೋಗ್ಯ ಸಚಿವ ವಿಜಯ್ ಸಿಂಗ್ಲಾ ಅರೆಸ್ಟ್!