Site icon Vistara News

Pocso Case : 18 ವರ್ಷದೊಳಗಿನ ಬಾಲಕಿ ಪ್ರೀತಿಗೆ ಅನುಮತಿಸಬಹುದೇ ಹೊರತು ದೈಹಿಕ ಸಂಪರ್ಕಕ್ಕಲ್ಲ ಎಂದ ಕೋರ್ಟ್‌

high court gives bail to rape accused boy

ಬೆಂಗಳೂರು: ಹದಿನೆಂಟು ವರ್ಷದೊಳಗಿನ ಬಾಲಕಿಯರಿಗೆ ಪ್ರೀತಿ ಮಾಡುವ ಅವಕಾಶ ಇರಬಹುದೇ ಹೊರತು ದೈಹಿಕ ಸಂಪರ್ಕ ಬೆಳೆಸಲು ಅನುಮತಿ ನೀಡುವ ಅಧಿಕಾರವಿಲ್ಲ ಎಂದು ರಾಜ್ಯ ಹೈಕೋರ್ಟ್‌ ಸ್ಪಷ್ಟವಾಗಿ ಹೇಳಿದೆ. ಇದರರ್ಥ ಯಾರೋ ಒಬ್ಬರು ಅವಳ ಒಪ್ಪಿಗೆ ಪಡೆದೇ ಸಂಬಂಧ ಬೆಳೆಸಿದೆ ಎಂದು ಹೇಳಿ ತಪ್ಪಿಸಿಕೊಳ್ಳುವಂತಿಲ್ಲ. ಮಾತ್ರವಲ್ಲ, ಆಕೆಯೇ ನೇರವಾಗಿ ಹೌದು ನಾನೇ ಅನುಮತಿಸಿದ್ದೇನೆ ಎಂದು ಹೇಳಿದರೂ ಅದನ್ನು ಕೋರ್ಟ್‌ ಒಪ್ಪುವುದಿಲ್ಲ.

ಬಾಲಕಿಯನ್ನು ಪ್ರೇಮ ವಿವಾಹವಾಗಿ ಆಕೆಯ ಸಮ್ಮತಿಯೊಂದಿಗೇ ಲೈಂಗಿಕ ಸಂಪರ್ಕ ಬೆಳೆಸಿದ ಪ್ರಕರಣವೊಂದರಲ್ಲಿ ಬಂಧನಕ್ಕೆ ಒಳಗಾಗಿರುವ ಯುವಕನಿಗೆ ಜಾಮೀನು ನಿರಾಕರಿಸುವ ವೇಳೆ ಕೋರ್ಟ್‌ ಈ ಮಾತನ್ನು ಸ್ಪಷ್ಟವಾಗಿ ಹೇಳಿದೆ. ಆಕೆಗೆ ಪ್ರೇಮ ವ್ಯವಹಾರ ನಡೆಸುವ ಅನುಮತಿ ಇರಬಹುದೇ ವಿನಾ ದೈಹಿಕ ಸಂಪರ್ಕ ಬೆಳೆಸಲು ಅಲ್ಲ ಎಂದು ಅದು ಹೇಳಿದೆ.

ಏನಿದು ಪ್ರಕರಣ, ವಿವರ ಇಲ್ಲಿದೆ

ತಮ್ಮ 16 ವರ್ಷದ ಪುತ್ರಿಯನ್ನು 2022ರ ಏಪ್ರಿಲ್‌ 2ರಂದು ಚರ್ಚ್‌ಗೆ ಹೋಗಿದ್ದಾಗ ಅಪಹರಣ ಮಾಡಲಾಗಿದೆ ಎಂದು ಆರೋಪಿಸಿ ವ್ಯಕ್ತಿಯೊಬ್ಬರು ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಸಂತ್ರಸ್ತೆ ಮತ್ತು ಆರೋಪಿಯನ್ನು ಪತ್ತೆ ಹಚ್ಚಿದ್ದರು. ಅಧೀನ ನ್ಯಾಯಾಲಯವು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ನಂತರ ಪೊಲೀಸರು ತನಿಖೆ ಪೂರ್ಣಗೊಳಿಸಿ, ಆರೋಪಿ ವಿರುದ್ಧ ಪೋಕ್ಸೊ ಕಾಯಿದೆ ಹಾಗೂ ಐಪಿಸಿಯ ವಿವಿಧ ಸೆಕ್ಷನ್‌ಗಳ ಪ್ರಕರಣ ದಾಖಲಿಸಿ, ಆನಂತರ ಆರೋಪ ಪಟ್ಟಿ ಸಲ್ಲಿಸಿದ್ದರು.

ವಿಚಾರಣೆಯ ವೇಳೆ ತಿಳಿದುಬಂದ ಮತ್ತೊಂದು ಅಂಶವೇನೆಂದರೆ 2022ರ ಫೆಬ್ರವರಿ 14ರಂದು ಪ್ರೇಮಿಗಳ ದಿನಾಚರಣೆಯಂದು ಆರೋಪಿಯು ಬಾಲಕಿಯನ್ನು ನಂದಿಬೆಟ್ಟಕ್ಕೆ ಕರೆದೊಯ್ದು ಅಲ್ಲಿನ ನಿರ್ಜನ ಪ್ರದೇಶದಲ್ಲಿ ಬಲವಂತವಾಗಿ ಲೈಂಗಿಕ ಸಂಪರ್ಕ ಬೆಳೆಸಿದ್ದ. ಇದಾದ ಬಳಿಕ ಏಪ್ರಿಲ್‌ 3ರಂದು ಸಂತ್ರಸ್ತೆಯನ್ನು ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಕರೆದೊಯ್ದು ತಾಳಿ ಕಟ್ಟಿ ಮದುವೆಯಾಗಿದ್ದ. ಏಪ್ರಿಲ್‌ 4ರಂದು ಸಂತ್ರಸ್ತೆಯನ್ನು ಕರೆದೊಯ್ದು ಸಂಬಂಧಿಕರ ಮನೆಯಲ್ಲಿ ಬಾಡಿಗೆ ಪಡೆದು ನೆಲೆಸಿದ್ದ. ಆನಂತರ ಸತತವಾಗಿ ಲೈಂಗಿಕ ಕ್ರಿಯೆ ನಡೆಸಿದ್ದ ಎಂದು ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿತ್ತು. ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಅಧೀನ ನ್ಯಾಯಾಲಯ ತಿರಸ್ಕರಿಸಿದ್ದರಿಂದ ಆರೋಪಿ ಹೈಕೋರ್ಟ್ ಮೆಟ್ಟಿಲೇರಿದ್ದನು.

ಇದೀಗ ನ್ಯಾಯಮೂರ್ತಿ ವಿ ಶ್ರೀಶಾನಂದ ಅವರ ಅವರ ನೇತೃತ್ವದ ಏಕಸದಸ್ಯ ಪೀಠವು ಬುಜ್ಜಿ ಅಲಿಯಾನ್‌ ಬಾಬು (23) ಎಂಬಾತನ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ. ಸ್ವಯಂ ಪ್ರಮಾಣೀಕೃತ ಹೇಳಿಕೆಯಲ್ಲಿ ಖುದ್ದು ಸಂತ್ರಸ್ತೆಯೇ, ಆರೋಪಿ ನನಗೆ ಮಂಗಳ ಸೂತ್ರ ಕಟ್ಟಿದ್ದ. ನಾವಿಬ್ಬರು ದಂಪತಿಯಂತೆ ಜೀವಿಸಿದ್ದು, ಸ್ವಯಿಚ್ಛೆ ಮೇರೆಗೆ ಲೈಂಗಿಕ ಸಂಪರ್ಕ ಬೆಳೆಸಿರುವುದಾಗಿ ತಿಳಿಸಿದರೂ ಜಾಮೀನು ನೀಡಲು ನ್ಯಾಯಾಲಯ ನಿರಾಕರಿಸಿತು.

ಪೋಕ್ಸೋ ಕಾಯಿದೆ ಅತ್ಯಂತ ಸ್ಪಷ್ಟವಾಗಿದೆ

ಪೋಕ್ಸೊ ಕಾಯಿದೆಯ ಪ್ರಕಾರ 18 ವರ್ಷದೊಳಗಿನವರು ಅಪ್ರಾಪ್ತರು. ಸಂತ್ರಸ್ತೆಯು 18 ವರ್ಷ ಒಳಗಿನವರಾಗಿದ್ದಾರೆ. ಅವರು ಲೈಂಗಿಕ ಕ್ರಿಯೆಗೆ ಸಮ್ಮತಿ ನೀಡಿದರೂ ಅದು ಸಮ್ಮತಿಯಾಗುವುದಿಲ್ಲ ಎಂದು ಪೋಕ್ಸೊ ಕಾಯಿದೆಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಅದರಂತೆ ಅಪ್ರಾಪ್ತರು ಸಮ್ಮತಿ ಪಕ್ಷಕಾರರು ಆಗುವುದಿಲ್ಲ ಮತ್ತು ಅವರ ಸಮ್ಮತಿ ತಿರಸ್ಕೃತಗೊಳ್ಳಲಿದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.

ಕಾನೂನು ಪ್ರಕಾರ ಜಾಮೀನು ಅರ್ಜಿ ತೀರ್ಮಾನಿಸುವಾಗ ನ್ಯಾಯಾಲಯ, ಪ್ರಕರಣದ ವಾಸ್ತವಾಂಶ ಕಂಡುಹಿಡಿಯಲು ಕಿರು ವಿಚಾರಣೆ (ಮಿನಿ ಟ್ರಯಲ್) ಮಾಡಲು ಸಾಧ್ಯವಿಲ್ಲ. ಅದು ಪ್ರಕರಣದ ವಿಚಾರಣೆ ಮೇಲೆ ಪೂರ್ವಾಗ್ರಹ ಉಂಟು ಮಾಡಬಹುದು. ಸ್ವಯಂ ಪ್ರಮಾಣೀಕೃತ ಹೇಳಿಕೆಯನ್ನು ಪ್ರಕರಣದ ವಿಚಾರಣೆ ವೇಳೆ ಪರೀಕ್ಷೆಗೊಳಪಡಿಸಬೇಕು. ವಿಚಾರಣಾಧೀನ ನ್ಯಾಯಾಲಯ ವಿಚಾರಣೆ ಪೂರ್ಣಗೊಳಿಸಿ, ಆದೇಶ ಮಾಡುವವರೆವಿಗೂ ಯಾವುದೇ ನ್ಯಾಯಾಲಯಕ್ಕೆ ಪೋಕ್ಸೊ ಪ್ರಕರಣದಲ್ಲಿ ಅರ್ಜಿದಾರನ ಪಾತ್ರದ ಬಗ್ಗೆ ನಿರ್ದಿಷ್ಟ ಅಭಿಪ್ರಾಯ ವ್ಯಕ್ತಪಡಿಸಲು ಮುಕ್ತ ಅವಕಾಶವಿಲ್ಲ ಎಂದು ಪೀಠ ಹೇಳಿದೆ.

ದೈಹಿಕ ಸಂಪರ್ಕಕ್ಕೆ ಒಪ್ಪುವ ಅಧಿಕಾರವಿಲ್ಲ

ಪ್ರೇಮ ವ್ಯವಹಾರ ಮತ್ತು ಅಪ್ರಾಪ್ತರ ಮದುವೆ ವಿಚಾರದಲ್ಲೂ ಪೋಕ್ಸೊ ಕಾಯಿದೆ ಅತ್ಯಂತ ಸ್ಪಷ್ಟ ನಿಲುವನ್ನು ಹೊಂದಿದೆ. 18 ವರ್ಷ ಒಳಗಿನ ಅಪಾಪ್ತರಿಗೆ ಪ್ರೀತಿ ವ್ಯವಹಾರ ನಡೆಸುವ ಅನುಮತಿ ಇರಬಹುದೇ ವಿನಾ ಖಂಡಿತವಾಗಿ ದೈಹಿಕ ಸಂಪರ್ಕ ಬೆಳೆಸಲು ಅಲ್ಲವೇ ಅಲ್ಲ. ದೈಹಿಕ ಸಂಪರ್ಕ ಬೆಳೆಸಲು ಅನುಮತಿ ಎಂದಾದರೆ ಪೋಕ್ಸೊ ಕಾಯಿದೆ ಜಾರಿ, ಪ್ರಕರಣ ದಾಖಲಾತಿ, ತನಿಖೆ ಮತ್ತು ವಿಚಾರಣೆ ನಡೆಸುವ ಉದ್ದೇಶವೇ ವಿಫಲವಾಗುತ್ತದೆ. ಈ ಉದ್ದೇಶವನ್ನು ವಿಫಲಗೊಳಿಸುವ ನಿಟ್ಟಿನಲ್ಲಿ ನ್ಯಾಯಾಲಯಗಳು ತೀರ್ಪು ಕೈಗೊಳ್ಳಬಾರದು. ಅರ್ಜಿದಾರನ ವಾದ ಒಪ್ಪಿ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ಅರ್ಜಿ ವಜಾಗೊಳಿಸಿದ ನ್ಯಾಯಾಲಯವು ಪ್ರಕರಣದ ಸಾಕ್ಷ್ಯಗಳ ವಿಚಾರಣೆ ಪೂರ್ಣಗೊಂಡ ನಂತರ ಸಾಂದರ್ಭಿಕ ಸನ್ನಿವೇಶಗಳು ಸಕಾರಾತ್ಮಕವಾಗಿ ಬದಲಾವಣೆಯಾದರೆ ಜಾಮೀನು ಕೋರಿ ನ್ಯಾಯಾಲಯದ ಮೊರೆ ಹೋಗಲು ಅರ್ಜಿದಾರರು ಸ್ವತಂತ್ರವಾಗಿದ್ದಾರೆ ಎಂದಿದೆ.

ಇದನ್ನೂ ಓದಿದೆ : Pocso case : ನಿವೃತ್ತಿ ಹೊತ್ತಲ್ಲಿ ಪ್ರಿನ್ಸಿಪಾಲ್‌ ಕಾಮ ಪುರಾಣ, 10ನೇ ಕ್ಲಾಸ್‌ ವಿದ್ಯಾರ್ಥಿನಿಗೆ ಮೆಸೇಜ್‌, ವಿಡಿಯೊ ಕಾಲ್‌ ಕಿರುಕುಳ!

Exit mobile version