ಬೆಂಗಳೂರು: 17 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪೋಕ್ಸೊ ಕೇಸ್‌ನಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ (BS Yediyurappa) ಅವರಿಗೆ ಕರ್ನಾಟಕ ಹೈಕೋರ್ಟ್ (Karnataka High Court) ಬಿಗ್ ರಿಲೀಫ್ ನೀಡಿದೆ. ಪೋಕ್ಸೊ ಕೇಸ್‌ನಲ್ಲಿ ಯಡಿಯೂರಪ್ಪ ಅವರನ್ನು ಮುಂದಿನ ವಿಚಾರಣೆವರೆಗೆ ಬಂಧಿಸಬಾರದು ಎಂದು ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರ ಏಕಸದಸ್ಯ ಪೀಠವು ಆದೇಶ ಹೊರಡಿಸಿದೆ. ಇದರ ಮಧ್ಯೆಯೇ, ವಿಚಾರಣೆ ವೇಳೆ ನ್ಯಾಯಾಲಯವು ಕರ್ನಾಟಕ ಸರ್ಕಾರಕ್ಕೆ ಚಾಟಿ ಬೀಸಿದೆ. “ಒಬ್ಬ ಮಾಜಿ ಮುಖ್ಯಮಂತ್ರಿಯನ್ನೇ ಈ ರೀತಿ ನಡೆಸಿಕೊಂಡರೆ, ಸಾಮಾನ್ಯ ಜನರ ಪಾಡೇನು” ಎಂದು ಕೋರ್ಟ್ ಕಳವಳ ವ್ಯಕ್ತಪಡಿಸಿದೆ.
ಅಡ್ವೊಕೇಟ್ ಜನರಲ್ (AG) ಶಶಿಕಿರಣ್ ಶೆಟ್ಟಿ ಅವರು ಸಿಐಡಿ ಪರ ವಾದ ಮಂಡಿಸಿದರು. “ಜೂನ್ 11ರಂದು ಬೆಳಗ್ಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಿಐಡಿ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ. ಜೂನ್ 12ರಂದು ವಿಚಾರಣೆಗೆ ಹಾಜರಾಗಬೇಕು ಎಂದು ನೋಟಿಸ್ ನೀಡಿದ್ದಾರೆ. ಹೀಗಿದ್ದರೂ, ಯಡಿಯೂರಪ್ಪ ಅವರು ಸಂಜೆಗೆ ವಿಮಾನದ ಟಿಕೆಟ್ ಬುಕ್ ಮಾಡಿಕೊಂಡು ದೆಹಲಿಗೆ ತೆರಳಿದ್ದಾರೆ” ಎಂದು ನ್ಯಾಯಾಲಯಕ್ಕೆ ತಿಳಿಸಿದರು.
POCSO case against former Karnataka CM and senior BJP leader B.S. Yediyurappa | Coercive proceedings of arrest and detention are kept on hold till the next date of hearing. The petitioner to appear before jurisdictional police on June 17.
— ANI (@ANI) June 14, 2024
ಇದೇ ವೇಳೆ ನ್ಯಾಯಾಲಯವು, “ಬಿ.ಎಸ್.ಯಡಿಯೂರಪ್ಪ ಅವರು ಜೂನ್ 12ರ ಬದಲು, ಜೂನ್ 17ರಂದು ತನಿಖಾಧಿಕಾರಿ ಎದುರು ವಿಚಾರಣೆಗೆ ಹಾಜರಾಗುವುದಾಗಿ ತಿಳಿಸಿದ್ದಾರೆ. ಹೀಗಿದ್ದರೂ, ಕೋರ್ಟ್‌ಗೆ ಹೋಗಿ ಅರೆಸ್ಟ್ ವಾರೆಂಟ್ ತರುವ ಅವಶ್ಯಕತೆ ಏನಿತ್ತು? ಅವರು ಒಬ್ಬ ಮಾಜಿ ಮುಖ್ಯಮಂತ್ರಿ. ಅವರೇನೂ ದೇಶ ಬಿಟ್ಟು ಓಡಿ ಹೋಗುತ್ತಿದ್ದರೇ? ನಾಲ್ಕೈದು ದಿನ ತಡವಾಗಿ ವಿಚಾರಣೆಗೆ ಹಾಜರಾದರೆ ಆಕಾಶವೇ ಕಳಚಿ ಬೀಳುತ್ತಿತ್ತೇ? ಒಬ್ಬ ಮಾಜಿ ಮುಖ್ಯಮಂತ್ರಿಗೇ ಹೀಗಾದರೆ, ಸಾಮಾನ್ಯ ಜನರ ಗತಿ ಏನು” ಎಂದು ಚಾಟಿ ಬೀಸಿತು.
ಬಳಿಕ, ಯಡಿಯೂರಪ್ಪ ಅವರನ್ನು ಮುಂದಿನ ವಿಚಾರಣೆವರೆಗೆ ಬಂಧಿಸಬಾರದು ಎಂದು ನ್ಯಾ.ಕೃಷ್ಣ ದೀಕ್ಷಿತ್ ಅವರು ಆದೇಶ ಹೊರಡಿಸಿದರು. ಹಾಗೆಯೇ, ಜೂನ್ 17ರಂದು ತನಿಖಾಧಿಕಾರಿ ಎದುರು ಯಡಿಯೂರಪ್ಪ ಅವರು ವಿಚಾರಣೆಗೆ ಹಾಜರಾಗಬೇಕು ಎಂದು ಸೂಚಿಸಿ, ವಿಚಾರಣೆಯನ್ನು ಎರಡು ವಾರ ಮುಂದೂಡಿದರು.
ಏನಿದು ಪ್ರಕರಣ?
2024ರ ಫೆಬ್ರವರಿ 2ರಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು 17 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಮಾರ್ಚ್ 14ರಂದು ಪೋಕ್ಸೊ ಕಾಯ್ದೆ ಅಡಿಯಲ್ಲಿ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು. ಇದಾದ ಬಳಿಕ ಬಿ.ಎಸ್.ಯಡಿಯೂರಪ್ಪ ಅವರು ಸಿಐಡಿ ಅಧಿಕಾರಿಗಳ ವಿಚಾರಣೆಗೂ ಹಾಜರಾಗಿದ್ದರು. ಆದರೆ, ಎಫ್‌ಐಆರ್ ದಾಖಲಾದ ಮೂರು ತಿಂಗಳ ಬಳಿಕ ಪ್ರಕರಣವೀಗ ಮತ್ತೆ ಮುನ್ನೆಲೆಗೆ ಬಂದಿದೆ. ಜೂನ್ 12ರಂದೇ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಬೇಕು ಎಂಬುದಾಗಿ ಜೂನ್ 11ರಂದೇ ಸಿಐಡಿ ಅಧಿಕಾರಿಗಳು ನೋಟಿಸ್ ನೀಡಿದ್ದರು.
ಇದನ್ನೂ ಓದಿ: BS Yediyurappa: ಪೋಕ್ಸೊ ಕೇಸ್‌ನಲ್ಲಿ ಯಡಿಯೂರಪ್ಪಗೆ ಬಿಗ್ ರಿಲೀಫ್; ಬಂಧಿಸದಂತೆ ಕೋರ್ಟ್ ಆದೇಶ