Site icon Vistara News

ಕುಣಿಗಲ್: ಜಲ್ಲಿ ಸಾಗಾಟದ ಟ್ರ್ಯಾಕ್ಟರ್‌ಗಳಿಂದ ಹಣ ವಸೂಲಿ, ಇಬ್ಬರು ಪೊಲೀಸರು ಸಸ್ಪೆಂಡ್‌‌

Hana vasooli

ತುಮಕೂರು: ಅಕ್ರಮ ಗಣಿಗಾರಿಕೆಗೆ ಅಕ್ರಮವಾಗಿ ಅವಕಾಶ ನೀಡುವುದಲ್ಲದೆ, ಅಲ್ಲಿಂದ ಹೊರಹೋಗುವ ಪ್ರತಿ ಟ್ರ್ಯಾಕ್ಟರ್‌ ಜಲ್ಲಿಗೂ ಹಣ ವಸೂಲಿ ಮಾಡುವ ದಂಧೆ ಕುಣಿಗಲ್‌ನಲ್ಲಿ ನಡೆಯುತ್ತಿದೆ. ಈ ಕೃತ್ಯದಲ್ಲಿ ತೊಡಗಿದ್ದ ಇಬ್ಬರು ಪೊಲೀಸರು ಇದೀಗ ಅಮಾನತು ಮಾಡಲಾಗಿದೆ.

ಇವರು ಕುಣಿಗಲ್ ಪೊಲೀಸ್ ಠಾಣೆಯ ಕಾನ್‌ಸ್ಟೇಬಲ್‌ಗಳು. ಹೊಯ್ಸಳ ವಾಹನದ ಚಾಲಕರಾಗಿರುವ ಪರಮೇಶ್ವರ್‌ ಮತ್ತು ಕಾನ್‌ಸ್ಟೇಬಲ್‌ ಅಶೋಕ್‌ ಎಂ. ಛಲವಾಗಿ ಅಮಾನತಿಗೆ ಒಳಗಾದವರು. ತುಮಕೂರು ಎಸ್ ಪಿ ರಾಹುಲ್ ಕುಮಾರ್ ಅವರು ಈ ಆದೇಶ ಹೊರಡಿಸಿದ್ದಾರೆ.

ಇವರು ಸಮೀಪದ ಪ್ರದೇಶಗಳಲ್ಲಿರುವ ಜಲ್ಲಿಕಲ್ಲು ಗಣಿಗಳಿಂದ ಬರುವ ಟ್ರ್ಯಾಕ್ಟರ್‌ಗಳನ್ನು ಅಡ್ಡಗಟ್ಟಿ ಅವರಿಂದ ಹಣ ವಸೂಲಿ ಮಾಡುತ್ತಿದ್ದರು. ಕುಣಿಗಲ್ ತಾಲ್ಲೂಕಿನ ತರೀಕೆರೆಯ ಗೌಡನಪಾಳ್ಯ ಬಳಿ ತಮ್ಮ ವಾಹನವನ್ನು ನಿಲ್ಲಿಸಿಕೊಂಡು ಆ ರಸ್ತೆಯಲ್ಲಿ ಸಾಗುವ ಪ್ರತಿಯೊಂದು ಜಲ್ಲಿ ಕಲ್ಲಿನ ಟ್ರ್ಯಾಕ್ಟರ್‌ಗಳನ್ನು ನಿಲ್ಲಿಸಿ ಹಣ ಪಡೆಯುತ್ತಿದ್ದರು. ಇವರ ಹವಾ ಎಷ್ಟಿತ್ತೆಂದರೆ ಇವರಾಗಿಯೇ ಯಾವುದೇ ವಾಹನಗಳನ್ನು ಅಡ್ಡಗಟ್ಟಿ ನಿಲ್ಲಿಸಬೇಕಾಗಿರಲಿಲ್ಲ. ಬದಲಾಗಿ, ವಾಹನಗಳ ಚಾಲಕರೇ ನಿಲ್ಲಿಸಿ ಹಣ ಕೊಟ್ಟು ಮುಂದೆ ಹೋಗುವಷ್ಟು ಹವಾ ಸೃಷ್ಟಿಸಿದ್ದರು.

ಪೊಲೀಸರು ಈ ರೀತಿ ಹಣ ಪಡೆಯುವ ದೃಶ್ಯವನ್ನು ಸಾರ್ವಜನಿಕರು ತಮ್ಮ ಮೊಬೈಲ್‌ನಲ್ಲಿ ವಿಡಿಯೊ ಮಾಡಿದ್ದರು. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಭಾರಿ ಚರ್ಚೆಗೆ ಕಾರಣವಾಗಿತ್ತು. ಈ ಸಂಬಂಧ ಕುಣಿಗಲ್ ಸಿಪಿಐ ಗುರುಪ್ರಸಾದ್ ನೇತೃತ್ವದಲ್ಲಿ ತನಿಖೆ ನಡೆಸಲಾಗಿತ್ತು. ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಹಣ ವಸೂಲಿ ಮಾಡುತ್ತಿದ್ದ ಇಬ್ಬರು ಪೊಲೀಸ್ ಪೇದೆಗಳನ್ನು ಅಮಾನತು ಮಾಡಲಾಗಿದೆ.

‌ ಇದನ್ನೂ ಓದಿ| National Anthem | ಹಾಸನ ಉಪವಿಭಾಗದ ಪೊಲೀಸ್ ಠಾಣೆಗಳಲ್ಲಿ ಇನ್ನು ಪ್ರತಿದಿನ ರಾಷ್ಟ್ರಗೀತೆ!

ಅಕ್ರಮ ಜಲ್ಲಿ ಸಾಗಾಟ ಮಾಡುತ್ತಿದ್ದ ಟ್ರ್ಯಾಕ್ಟರ್ ಗಳಿಂದ ಹಣ ವಸೂಲಿ ಮಾಡಿದ್ದ ಪೇದೆಗಳು.

Exit mobile version