Site icon Vistara News

MLA Muniratna : ಬಿಜೆಪಿ ಶಾಸಕ ಮುನಿರತ್ನಗೆ ಸಂಕಷ್ಟ; ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ FIR

muniratna

ಬೆಂಗಳೂರು: ರಾಜ್ಯದ ಮಾಜಿ ಸಚಿವ, ರಾಜರಾಜೇಶ್ವರಿ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ (MLA Muniratna) ಅವರ ವಿರುದ್ಧ ಸ್ಫೋಟಕ ಕಾಯಿದೆ ಮತ್ತು ಕರ್ನಾಟಕ ಭೂಕಂದಾಯ ಕಾಯಿದೆಯಡಿ ಪ್ರಕರಣ ದಾಖಲಿಸಲಾಗಿದೆ. ನಗರದ ಹೊರವಲಯದ ಹುಣಸಮಾರನಹಳ್ಳಿಯ ಕ್ವಾರಿಯಲ್ಲಿ ಕಲ್ಲು ಗಣಿಗಾರಿಕೆ (Stone quarry) ನಡೆಸಲು ಜಿಲೆಟಿನ್‌ ಸ್ಫೋಟ (Gelatin Blast) ನಡೆಸಿದ ಆರೋಪದ ಮೇಲೆ ಎಫ್‌ಐಆರ್‌ ದಾಖಲಾಗಿದೆ.

ಯಲಹಂಕ ತಹಸೀಲ್ದಾರ್ ಅನಿಲ್ ಅರೋಲಿಕರ್ ನೀಡಿದ ದೂರಿನ ಮೇರೆಗೆ ಚಿಕ್ಕಜಾಲ ಪೊಲೀಸರು ಮುನಿರತ್ನ ಅವರಲ್ಲದೆ ಆನಂದನ್, ಗಣೇಶ್ ವಿ ಮತ್ತು ರಾಧಮ್ಮ ಎಂಬವರ ವಿರುದ್ಧವೂ ಕೇಸು ದಾಖಲಿಸಿಕೊಂಡಿದ್ದಾರೆ. ‘ಅಕ್ರಮ’ ಗಣಿಗಾರಿಕೆ ಚಟುವಟಿಕೆಗಳನ್ನು ನಿಲ್ಲಿಸುವಂತೆ ಜೈ ಭೀಮ್ ಸೇನೆಯು ತಹಸೀಲ್ದಾರ್‌ಗೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ.

ಏನಿದು ಅಕ್ರಮ ಗಣಿಗಾರಿಕೆ, ಸ್ಫೋಟ ಪ್ರಕರಣ?

ಬೆಂಗಳೂರು ಉತ್ತರ ತಾಲೂಕಿನ ಹುಣಸಮಾರನಹಳ್ಳಿಯ ಜಮೀನಿನಲ್ಲಿ ಕಳೆದ ಸೋಮವಾರ ಜಿಲೆಟಿನ್‌ ಸ್ಫೋಟಿಸಿ ಗಣಿಗಾರಿಕೆ ಮಾಡಲಾಗಿದೆ. ಇದರಿಂದ ತಮಗೆ ತೊಂದರೆಯಾಗುತ್ತಿದೆ ಎಂದು ಅಲ್ಲಿನ ಸ್ಥಳೀಯರು ಧರಣಿ ನಡೆಸಿದ್ದರು.

ಹುಣಸಮಾರನಹಳ್ಳಿ ಸರ್ವೆ ನಂಬರ್ 177/3, 178/1.2.3, ಸೊಣಪ್ಪನಹಳ್ಳಿ ಸರ್ವೆ ನಂಬರ್ ನಲ್ಲಿ 34/1 2 3, 17/7 8 9ರ ಸರ್ಕಾರಿ ಜಮೀನು ಮತ್ತು ಖಾಸಗಿ ಜಮೀನಿನಲ್ಲಿ ಬಂಡೆ ಒಡೆದು ಕಲ್ಲು ಗಣಿಗಾರಿಕೆ ನಡೆಸಲಾಗುತ್ತಿದೆ. ಇದರಿಂದ ಭೂಮಿಗೆ ಮಾತ್ರವಲ್ಲ ತಮಗೂ ಹಾನಿಯಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದರು.

ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ಕ್ವಾರಿ ಗಣಿಗಾರಿಕೆ ನಡೆಸುವವರು ಸಕ್ಷಮ ಪ್ರಾಧಿಕಾರದಿಂದ ಯಾವುದೇ ಅನುಮತಿ ಪಡೆದಿಲ್ಲ ಎಂಬುದನ್ನು ಕಂಡುಕೊಂಡ ಬಳಿಕ ಕೇಸು ದಾಖಲಿಸಿಕೊಂಡಿದ್ದಾರೆ. ಕಲ್ಲು ಗಣಿಗಾರಿಕೆಗೆ ಸಿಡಿಮದ್ದು ಬಳಸುವುದನ್ನು ಗ್ರಾಮಸ್ಥರು ವಿರೋಧಿಸಿದ್ದು ಕ್ಷೇತ್ರ ಸಮೀಕ್ಷೆಯ ವೇಳೆ ಸ್ಫೋಟಕ ಬಳಸಿರುವುದು ಪತ್ತೆಯಾಗಿದೆ ಎಂದು ಎಫ್‌ಐಆರ್‌ನಲ್ಲಿ ತಿಳಿಲಾಗಿದೆ.

ಗಣಿಗಾರಿಕೆ ಏನೂಂತಾನೇ ಗೊತ್ತಿಲ್ಲ ಎಂದ ಮುನಿರತ್ನ

ಈ ನಡುವೆ, ಗಣಿಗಾರಿಕೆ ವಿಚಾರದಲ್ಲಿ FIR ದಾಖಲಾಗಿರುವ ಸಂಗತಿ ಬಗ್ಗೆ ಪ್ರತಿಕ್ರಿಯಿಸಿದ ಮುನಿರತ್ನ ಅವರು, ಗಣಿಗಾರಿಕೆ ಮಾಡುವ ವೃತ್ತಿ ನನ್ನದಲ್ಲ. ಗಣಿಗಾರಿಕೆ ಅಂದ್ರೆ ಏನು ಅಂತಲೂ ಗೊತ್ತಿಲ್ಲ. ನಾನು ಮನೆ ಕಟ್ಟಲು ಪಾಯ ತೆಗೆಯುತ್ತಿದ್ದೇನೆ. ಗಣಿಗಾರಿಕೆ ಅಂದ್ರೆ ಸರ್ಕಾರದಿಂದ ಲೈಸೆನ್ಸ್ ಪಡೆಯಬೇಕು. ನಾನು ಕಟ್ಟಡದ ಪಾಯ ತೆಗೆಯುವಾಗ ಕಲ್ಲು ಸಿಕ್ಕಿದ್ದನ್ನು ಒಡೆಯಲು ಲೈಸೆನ್ಸ್‌ ಪಡೆದವರ ಕೈಯಿಂದಲೇ ಜಿಲೆಟಿನ್‌ ಇಟ್ಟು ಒಡೆಸಿದ್ದು ಬಿಟ್ಟರೆ ಗಣಿಗಾರಿಕೆ ಮಾಡಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: 5 ಕೆ.ಜಿ ಅಕ್ಕಿ ಕೊಡ್ತಿರೋದು ಇವರೇ ಎಂದು ಧರ್ಮಸ್ಥಳದಲ್ಲಿ ಆಣೆ ಪ್ರಮಾಣ ಮಾಡಲಿ; ಕೈ ನಾಯಕರಿಗೆ ಮುನಿರತ್ನ ಸವಾಲ್‌

Exit mobile version