ಮಂಗಳೂರು: ದಕ್ಷಿಣಕನ್ನಡ ಜಿಲ್ಲೆಯ ಮಂಗಳೂರು ಗ್ರಾಮಾಂತರ ಠಾಣೆಯ ಕಂಬುಳ ಗ್ರಾಮದಲ್ಲಿ ಮಹಜರು ನಡೆಸುತ್ತಿದ್ದಾಗ ಆರೋಪಿಯೊಬ್ಬ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದು, ಆತನ ಕಾಲಿಗೆ ಪೊಲೀಸರು ಗುಂಡು (Police Fire) ಹಾರಿಸಿದ್ದಾರೆ.
ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದ ಮುಸ್ತಾಕ್ (26) ಎಂಬಾತನ ಮೇಲೆ ಪೊಲೀಸರು ಗುಂಡು ಹಾರಿಸಿದ್ದು, ಗಾಯಗೊಂಡ ಆತನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಕೊಲೆ ಯತ್ನಕ್ಕೆ ಮುಂದಾಗಿದ್ದ ಮುಸ್ತಾಕ್
ಕಳೆದ ಆಗಸ್ಟ್ 20ರ ಸಂಜೆ ಮಂಗಳೂರು ಹೊರವಲಯದ ವಲಚ್ಚಿಲ್ ಬಳಿ ಅಂಗಡಿಗೆ ಬಂದಿದ್ದ ಮಿಫ್ತಾಹ್ (16) ಎಂಬ ಬಾಲಕನನ್ನು ಗಾಂಜಾ ಗ್ಯಾಂಗ್‌ವೊಂದು ತಡೆದು ಹಲ್ಲೆಗೆ ಮುಂದಾಗಿತ್ತು. ಈ ವೇಳೆ ಬಾಲಕ ಮಿಫ್ತಾಹ್ ಮಾವ ಆಸೀಫ್ (30) ದಾಳಿ ತಡೆಯಲು ಮುಂದಾಗಿದ್ದಾಗ ಮಾರಕಾಸ್ತ್ರಗಳಿಂದ ಗಾಂಜಾ ಗ್ಯಾಂಗ್ ದಾಳಿ ನಡೆಸಿತ್ತು.
ಮುಸ್ತಾಕ್, ಮನ್ಸೂರು ಯಾನೆ ಹುಸೈನ್ ಹಾಗೂ ಆಶಿಕ್ ಎಂಬವರಿಂದ ಈ ಕೃತ್ಯ ನಡೆದಿತ್ತು. ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಮುಸ್ತಾಕ್ ಎಂಬಾತನನ್ನು ಬಂಧಿಸಿದ್ದರು. ಪ್ರಕರಣ ಸಂಬಂಧ ಪೊಲೀಸರು ಸೋಮವಾರ ಸ್ಥಳ ಮಹಜರು ಮಾಡುವಾಗ ಆರೋಪಿ ಮುಸ್ತಾಕ್, ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಪರಾರಿ ಆಗುತ್ತಿದ್ದ ಆರೋಪಿ ಮುಸ್ತಾಕ್ ಕಾಲಿಗೆ ಗುಂಡು ಹಾರಿಸಿದ್ದಾರೆ. ಈಗ ಆತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಇದನ್ನೂ ಓದಿ | Murder Attempt | ಮಂಗಳೂರಲ್ಲಿ ವ್ಯಕ್ತಿ ಮೇಲೆ ಗಾಂಜಾ ಗ್ಯಾಂಗ್‌ನಿಂದ ದಾಳಿ, ಕೊಲೆ ಯತ್ನ