Site icon Vistara News

ಮುರುಘಾಶ್ರೀ ಪ್ರಕರಣ | ಬಾಲಕಿಯರ ಸಮ್ಮುಖ ಮಠದಲ್ಲಿ ಮಹಜರು, ಹೊರ ಕಳುಹಿಸಿದ್ದಕ್ಕೆ ಭಕ್ತರ ಆಕ್ರೋಶ

murugha mahajaru

ಚಿತ್ರದುರ್ಗ: ವಸತಿ ನಿಲಯಲ್ಲಿದ್ದ ಇಬ್ಬರು ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ ಎದುರಿಸುತ್ತಿರುವ ಚಿತ್ರದುರ್ಗ ಬ್ರಹನ್ಮಠದ ಶ್ರೀ ಶಿವಮೂರ್ತಿ ಮುರುಘಾ ಶರಣರ ಮೇಲೆ ಬಂಧನದ ತೂಗುಗತ್ತಿ ತೂಗಾಡುತ್ತಿದೆ. ಈ ನಡುವೆ, ಅನ್ಯಾಯಕ್ಕೆ ಒಳಗಾದ ಸಂತ್ರಸ್ತರೆಂದು ಹೇಳಲಾದ ಇಬ್ಬರು ಬಾಲಕಿಯರನ್ನು ಪೊಲೀಸರು ಮಠಕ್ಕೆ ಕರೆತಂದು ಸ್ಥಳ ಮಹಜರು ನಡೆಸಿದ್ದಾರೆ.

ಚಿತ್ರದುರ್ಗದಲ್ಲಿ ಮಠಕ್ಕೆ ಸೇರಿದ ಹೈಸ್ಕೂಲ್‌ನಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಅಧ್ಯಯನ ನಡೆಸುತ್ತಿದ್ದ ಮತ್ತು ಹಾಸ್ಟೆಲ್‌ನಲ್ಲಿ ವಾಸಿಸುತ್ತಿದ್ದ ಇಬ್ಬರು ವಿದ್ಯಾರ್ಥಿನಿಯರ ಮೇಲೆ ಕಳೆದ ಮೂರು ವರ್ಷಗಳಿಂದ ಸ್ವಾಮೀಜಿಯವರು ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದರು ಎಂದು ದೂರಲಾಗಿದೆ. ಈ ಸಂಬಂಧ ಮೈಸೂರಿನ ನಜರ್‌ ಬಾದ್‌ ಠಾಣೆಯಲ್ಲಿ ದಾಖಲಾದ ದೂರನ್ನು ಈಗ ಚಿತ್ರದುರ್ಗ ಗ್ರಾಮಾಂತರ ಠಾಣೆಗೆ ಹಸ್ತಾಂತರಿಸಲಾಗಿದೆ. ವಿದ್ಯಾರ್ಥಿನಿಯರನ್ನು ಕೂಡಾ ಮೈಸೂರಿನಿಂದ ಚಿತ್ರದುರ್ಗಕ್ಕೆ ಕರೆ ತರಲಾಗಿದೆ. ಭಾನುವಾರ ಚಿತ್ರದುರ್ಗಕ್ಕೆ ಆಗಮಿಸಿದ ಬಾಲಕಿಯರನ್ನು ಇಲ್ಲಿನ ಪರಿವೀಕ್ಷಣಾ ಕೇಂದ್ರದಲ್ಲಿ ಇಡಲಾಗಿತ್ತು. ಸೋಮವಾರ ನ್ಯಾಯಾಧೀಶರ ಮುಂದೆ ಅವರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆ.

ಬಾಲಕಿಯರ ಕರೆ ತಂದು ಮಹಜರು
ಈ ನಡುವೆ, ಡಿವೈಎಸ್‌ಪಿ ಅನಿಲ್‌ ನೇತೃತ್ವದ ತಂಡ ಸಂತ್ರಸ್ತ ಬಾಲಕಿಯರನ್ನು ಮಠಕ್ಕೆ ಕರೆತಂದು ಮಹಜರು ನಡೆಸಲು ಮುಂದಾಗಿದೆ. ಈ ಮಹಜರಿಗಾಗಿ ಮಠದೊಳಗಿದ್ದ ಎಲ್ಲರನ್ನೂ ಹೊರಗೆ ಕಳುಹಿಸಬೇಬೇಕಾಯಿತು. ಆಗ ಮಠದ ಭಕ್ತರು ಇದನ್ನು ತೀವ್ರವಾಗಿ ಆಕ್ಷೇಪಿಸಿದರು. ಮಠದ ಹೊರಗಡೆ ಬಂದು ಪ್ರತಿಭಟನೆ ನಡೆಸಿದರು. ಧರಣಿ, ಮಾತಿನ ಚಕಮಕಿಗಳು ಜೋರಾದವು. ಕೊನೆಗೆ ಎಲ್ಲರನ್ನೂ ಮನವೊಲಿಸಿ ಕಳುಹಿಸಲಾಗಿದೆ. ಆಗ ಭಕ್ತರು ಸ್ವಲ್ಪ ಮಟ್ಟಿಗೆ ದಾಂಧಲೆಯನ್ನು ನಡೆಸಿದರು.

ಮಠದೊಳಗೆ ಮಹಜರು
ಶ್ರೀಗಳು ಮಠದೊಳಗೇ ತಮ್ಮ ಮೇಲೆ ದೌರ್ಜನ್ಯ ನಡೆಸಿದ್ದಾರೆ ಎನ್ನುವುದು ವಿದ್ಯಾರ್ಥಿನಿಯರು ಮಾಡಿರುವ ಆರೋಪ. ಈ ನಿಟ್ಟಿನಲ್ಲಿ ಮಠದ ಯಾವ ಭಾಗದಲ್ಲಿ ಈ ಘಟನೆ ನಡೆದಿದೆ ಎನ್ನುವುದೂ ಸೇರಿದಂತೆ ಪ್ರಮುಖ ಮಾಹಿತಿಗಳನ್ನು ವಿದ್ಯಾರ್ಥಿನಿಯರಿಂದ ಪಡೆಯುವುದಕ್ಕಾಗಿ ಮಹಜರು ನಡೆದಿದೆ.

ಮಹಜರಿಗೆ ಮುನ್ನ ಎಸ್‌ಪಿ ಪರಶುರಾಮ್‌ ಅವರು ಮುರುಘಾಮಠಕ್ಕೆ ಭೇಟಿ ನೀಡಿ ಭದ್ರತೆಯನ್ನು ಖಾತ್ರಿಪಡಿಸಿಕೊಂಡರು. ಮಹಜರಿನ ವೇಳೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು, ಮಕ್ಕಳ ಕಲ್ಯಾಣ ಸಮಿತಿ ಸದಸ್ಯರು ಕೂಡಾ ಜತೆಗಿದ್ದರು.

ಇದನ್ನೂ ಓದಿ| ಮುರುಘಾಶ್ರೀ ಪ್ರಕರಣ | ತನಿಖೆಯಲ್ಲಿ ವಿಳಂಬವಿಲ್ಲ, ಕಾನೂನು ಪ್ರಕಾರ ಕ್ರಮ; ಗೃಹ ಸಚಿವ ಆರಗ ಜ್ಞಾನೇಂದ್ರ

Exit mobile version