ಶಶಿಧರ್ ಮೇಟಿ, ವಿಸ್ತಾರ ನ್ಯೂಸ್, ಬಳ್ಳಾರಿ.
“ಡಿಜಿಪಿ ನಾಲ್ಕು ವರ್ಷ ಆದ ಮೇಲೆ ಮನೆಗೆ ಹೋಗ್ತಾರೆ, ಅವರೇನೂ ಪರ್ಮನೆಂಟ್ ಕೂಡಲ್ಲ, ನಿಮಗೆ, ನಮಗೆ ಹತ್ತಾರು ವರ್ಷಗಳ ಸರ್ವಿಸ್ ಇರುತ್ತೆ, ಅದನ್ನು ನೆನಪಿಟ್ಟುಕೊಂಡು ಧೈರ್ಯವಾಗಿ ಆಕ್ಷೇಪಣೆ ಸಲ್ಲಿಸಿ, ಹಿಂಬರಹ ತೆಗೆದುಕೊಳ್ಳಿ, ಆದರೂ ನಿಯಮ ಜಾರಿಗೆ ತಂದರೆ 70 ಸಾವಿರ ಸಿಬ್ಬಂದಿ ಆರ್‌ಟಿಐ ಹಾಕೋಣ”
– ಕರ್ನಾಟಕ ಪೊಲೀಸ್ ಶಿಸ್ತು ಮತ್ತು ನಡಾವಳಿಯ ನಿಯಮ ತಿದ್ದುಪಡಿ ವಿರೋಧಿಸಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಆಡಿರುವ ಮಾತು ಇದು.
ಪೊಲೀಸ್ ಇಲಾಖೆಯಲ್ಲಿ ಮೇಲ್ಮನವಿಗೆ ಅವಕಾಶವಿಲ್ಲದಂತೆ ಕರ್ನಾಟಕ ಪೊಲೀಸ್ ಶಿಸ್ತು ಮತ್ತು ನಡಾವಳಿಯ ನಿಯಮ ತಿದ್ದುಪಡಿ ಮಾಡಲಾಗಿದೆ. ಇದರ ವಿರುದ್ಧ ಎಲ್ಲರೂ ಸೇರಿ ಹೋರಾಟ ಮಾಡಬೇಕು ಎಂದು ಪೊಲೀಸ್ ಅಧಿಕಾರಿಯೊಬ್ಬರು ವಾಯ್ಸ್ ರೆಕಾರ್ಡ್ ಮಾಡಿ ಹರಿಬಿಟ್ಟಿದ್ದಾರೆ. ಈ ಆಡಿಯೊ ವಿಸ್ತಾರ ನ್ಯೂಸ್ ಗೆ ಲಭ್ಯವಾಗಿದೆ. ಇದರಲ್ಲಿ ಡಿಜಿಪಿ ವಿರುದ್ಧವೇ ಹರಿಹಾಯುವ ಮೂಲಕ ತಿದ್ದುಪಡಿಗೆ ವ್ಯಾಪಕ ವಿರೋಧ ತೋರಿದ್ದಾರೆ. ಈ ಆಡಿಯೊ ಕ್ಷಿಪ್ರವಾಗಿ ಇಲಾಖೆಯ ಸಿಬ್ಬಂದಿಗಳ ಮಧ್ಯೆ ವೈರಲ್ ಆಗುತ್ತಿದೆ.
ಏನಿದು ನಿಯಮ ಬದಲಾವಣೆ?
ಪೊಲೀಸ್ ಇಲಾಖೆ ಪ್ರಕಟಿಸಿರುವ ಹೊಸ ನಿಯಮಾವಳಿ ಪ್ರಕಾರ ಇನ್ನು ಮುಂದೆ ಶಿಕ್ಷೆಗೆ ಒಳಗಾದವರು ಇನ್‌ಕ್ರಿಮೆಂಟ್, ಬಡ್ತಿ ಸೇರಿದಂತೆ ಯಾವುದೇ ವಿಚಾರಗಳಿಗೆ ಸಂಬಂಧಿಸಿ ಆಂತರಿಕವಾಗಿ ಮೇಲ್ಮನವಿಯನ್ನು ಸಲ್ಲಿಸುವಂತಿಲ್ಲ. ಅಂದರೆ ಇನ್ಸ್‌ಪೆಕ್ಟರ್ ಒಬ್ಬರ ಕ್ರಮದ ಬಗ್ಗೆ ಆಕ್ಷೇಪಗಳಿದ್ದರೆ ಅದನ್ನು ಅವರಿಗಿಂತ ಮೇಲಿನ ಅಧಿಕಾರಿಗೆ ಮೇಲ್ಮನವಿ ಸಲ್ಲಿಸಬಹುದಾಗಿತ್ತು. ಹೆಚ್ಚಿನ ಸಂದರ್ಭದಲ್ಲಿ ಅದು ಅಲ್ಲಲ್ಲೇ ಇತ್ಯರ್ಥವೂ ಆಗುತ್ತಿತ್ತು. ಆದರೆ, ಹೊಸ ನಿಯಮಾವಳಿ ಪ್ರಕಾರ, ಇನ್ನು ಆಂತರಿಕವಾಗಿ ಮೇಲ್ಮನವಿ ಸಲ್ಲಿಸಲು ಅವಕಾಶವಿಲ್ಲ. ಬದಲಾಗಿ, ಕೋರ್ಟ್‌ಗೇ ಹೋಗಬೇಕು. ಇದರಿಂದ ಕೋರ್ಟ್ ಮೇಲೆ ಒತ್ತಡ, ಅನಗತ್ಯ ಕಿರಿಕಿರಿ ಆಗುತ್ತದೆ ಎನ್ನುವುದು ಪೊಲೀಸ್ ಸಿಬ್ಬಂದಿಗಳ ವಾದ. ಈ ನಡುವೆ, ಆಂತರಿಕ ಮೇಲ್ಮನವಿಗೆ ಅವಕಾಶ ನೀಡುವುದರಿಂದ ಪ್ರಭಾವ ಬೀರುವುದಕ್ಕೆ ಅವಕಾಶವಿರುತ್ತದೆ. ಹೀಗಾಗಿ ಕೋರ್ಟ್ ಮೊರೆ ಹೋಗುವುದೇ ಸೂಕ್ತ ಎನ್ನುವುದು ನಿಯಮಾವಳಿ ರೂಪಿಸಿದವರ ಅಭಿಮತ ಎನ್ನಲಾಗಿದೆ.
IAS ಮತ್ತು IPS ಏಕೆ ಹೀಗೆ..?
ನಮ್ಮ ಇಲಾಖೆಯಲ್ಲಿ ಬೇಕಾಬಿಟ್ಟಿ ದುಂಡಾವರ್ತನೆಯಿಂದ ವರ್ತಿಸುತ್ತಿದ್ದಾರೆ. ನಮ್ಮ ಇಲಾಖೆಯಲ್ಲಿ ಮುಖ್ಯಸ್ಥರಿಗೆ 4-5 ವರ್ಷ ಅಧಿಕಾರ ಕೊಟ್ಟರೆ ಒಳ್ಳೆಯದು. ಹೀಗೆ ಮಾಡಿ ಎಂದರೆ ಒತ್ತಡ ಹೇರಿ ಹೆಡೆಮುರಿಗೆ ಕಟ್ಟುತ್ತಿದ್ದಾರೆ. ಇವರಿಗೆ ಸಂವಿಧಾನದ ಬಗ್ಗೆ, ಜನಸಾಮಾನ್ಯರ ನೈಸರ್ಗಿಕ ನ್ಯಾಯದ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ, ಐಎಎಸ್ ಮತ್ತು ಐಪಿಎಸ್ ಗಳು ಏಕೆ ಹೀಗಾಗುತ್ತಾರೆ ಅಂತ ಅರ್ಥವಾಗುತ್ತಿಲ್ಲ- ಎಂದು ಬೇಸರದ ಧ್ವನಿಯಲ್ಲಿ ಮಾತನಾಡಿದ್ದಾರೆ.
ಕೋರ್ಟ್ ಭಾರ ಆಗೋಲ್ವಾ?
ಮೇಲ್ಮನವಿಗೆ ಅವಕಾಶವಿಲ್ಲ ಎಂದರೆ ಹೇಗೆ? ಸಣ್ಣ ಇನ್ ಕ್ರಿಮೆಂಟ್‌ಗೆ ರಿಟ್ ಹಾಕಿಕೊಂಡು ಕೂಡಬೇಕೆಂದರೆ ಕೋರ್ಟಿಗೆ ಒತ್ತಡ ಆಗೋದಿಲ್ವೆ? ಅಧಿಕಾರಿಗಳ ಸಮಯ ಮತ್ತು ಹಣ ಎಷ್ಟು ವ್ಯರ್ಥ ಆಗುತ್ತೆ? ಇದನ್ನು ಕನಿಷ್ಠ ಯೋಚನೆ ಮಾಡುವ ಶಕ್ತಿ ಇಲ್ಲದವರು ಮೇಲಾಧಿಕಾರಿಗಳಾಗಿ ಹೊಸ ಹೊಸ ಕಾಯಿದೆ ಮಾಡುತ್ತಿದ್ದಾರೆ ಎಂದು ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅನ್ಯಾಯ, ಶೋಷಣೆ ವಿರುದ್ಧ ಧ್ವನಿ ಎತ್ತಿ
ಪ್ರತಿಯೊಬ್ಬರು ಆಕ್ಷೇಪಣೆ ಅರ್ಜಿ ಸಲ್ಲಿಸುವ ಮುಖಾಂತರ ನಮಗೆ ಸರಕಾರ ಮತ್ತು ಇಲಾಖೆಯಿಂದ ಆಗುತ್ತಿರುವ ಅನ್ಯಾಯವನ್ನು, ಶೋಷಣೆಯ ವಿರುದ್ಧ ಕಾನೂನಾತ್ಮಕವಾಗಿ ಹೋರಾಟ ಮಾಡೋಣ. ಯಾವ ಪೊಲೀಸ್ ಅಧಿಕಾರಿಗಳೂ ಹೆದರಬೇಡಿ. ಇಷ್ಟೆಲ್ಲ ಮಾಡಿದ ನಂತರೂ ನಿಯಮ ಜಾರಿಗೆ ತಂದರೆ, RTI ಮೂಲಕ ಅರ್ಜಿ ಹಾಕಿ ನಮ್ಮ ಆಕ್ಷೇಪಣೆಗೆ ನಿಮ್ಮ ಉತ್ತರ ಏನು ಅಂತ ಕೇಳೋಣ, ಅನಂತರ ಕೋರ್ಟ್, ಕಾಯ್ದೆ ಇರುತ್ತದೆ. ಇಂತಹ ದೌರ್ಜನ್ಯಗಳನ್ನು ಕನ್ನಡಿಗರು ಹಲವು ಬಾರಿ ಎದುರಿಸಿದ್ದೇವೆ. ಪ್ರತಿಯೊಬ್ಬ ಸಿಬ್ಬಂದಿಯೂ ಹೆದರದೆ ಮುನ್ನುಗ್ಗಿ ಎಂದು ಆಡಿಯೊದಲ್ಲಿ ಮನವಿ ಮಾಡಿದ್ದಾರೆ.
ಈ ಆಡಿಯೋ ವೈರಲ್ ಆಗುತ್ತಿದೆ, ಇನ್ನೊಂದು ಕಡೆ ಇಡೀ ಇಲಾಖೆಯಲ್ಲಿ ಇಂತಹ ನಿಯಮಗಳ ತಿದ್ದುಪಡಿಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ, ಚುನಾವಣೆಯ ಹೊಸ್ತಿಲಲ್ಲಿ ಈ ನಿಯಮ ತಿದ್ದುಪಡಿಯು ಇಡಿ ಇಲಾಖೆಯ ಸಿಬ್ಬಂದಿಗಳಿಗೆ ಆಡಳಿತ ಪಕ್ಷ ಬಿಜೆಪಿ ಮೇಲೆ ಮುನಿಸಿಗೆ ಕಾರಣವಾಗುವ ಸಾಧ್ಯತೆ ಇದೆ.