Site icon Vistara News

Police Firing | ನಗರಸಭೆ ಮಾಜಿ ಅಧ್ಯಕ್ಷ ಗಿರೀಶ್ ಕಂಬನೂರ್ ಹತ್ಯೆಗೈದ ಆರೋಪಿ ಮೇಲೆ ಪೊಲೀಸ್‌ ಫೈರಿಂಗ್

ಕಲಬುರಗಿ: ಶಹಾಬಾದ್ ಪಟ್ಟಣದಲ್ಲಿ ಮಾಜಿ ನಗರಸಭೆ ಅಧ್ಯಕ್ಷ ಗಿರೀಶ್ ಕಂಬನೂರ್ ಹತ್ಯೆ ಮಾಡಿದ್ದ ಆರೋಪಿ ವಿಜಯ್‌ ಮೇಲೆ ಪೊಲೀಸರಿಂದ ಗುಂಡಿನ ದಾಳಿ (Police Firing) ನಡೆದಿದೆ. ಈ ಪ್ರಕರಣದಲ್ಲಿ ಪಿಎಸ್‌ಐ ಸುವರ್ಣ ಅವರಿಗೂ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ನಗರ ಪುರಸಭೆಯ ಮಾಜಿ ಅಧ್ಯಕ್ಷ ಹಾಗೂ ಹಾಲಿ ಅಧ್ಯಕ್ಷೆಯ ಪತಿ ಗಿರೀಶ್‌ ಕಂಬನೂರ್‌ ಅವರ ಮೇಲೆ ಸೋಮವಾರದಂದು (ಜುಲೈ 10) ಹಾಡಹಗಲೇ ಹಲ್ಲೆ ಮಾಡಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಶಹಾಬಾದ್ ಪಟ್ಟಣದ ರೈಲ್ವೆ ನಿಲ್ದಾಣ ಮುಂಭಾಗದಲ್ಲಿ ಈ ಪ್ರಕರಣ ನಡೆದಿತ್ತು.

ಈ ಪ್ರಕರಣದ ತನಿಖೆ ನಡೆಸಿದ ಚಿತ್ತಾಪುರ ಪೊಲೀಸರು ವಿಜಯ್‌ ಎಂಬ ಆರೋಪಿಯನ್ನು ಸೆರೆಹಿಡಿದಿದ್ದರು. ಹಲ್ಲೆ ನಡೆದ ಸ್ಥಳವನ್ನು ಮಹಜರು ಮಾಡುವಾಗ ಶಹಬಾದ್ ಪಿಎಸ್‌ಐ ಸುವರ್ಣ ಎಂಬುವರ ಮೇಲೆ ಆರೋಪಿ ವಿಜಯ್ ಹಲ್ಲೆ ನಡೆಸಿದ್ದಾನೆ. ಅಲ್ಲದೆ, ಪೊಲೀಸರ ವಶದಿಂದ ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಚಿತ್ತಾಪುರ ಸಿಪಿಐ ಪ್ರಕಾಶ್ ಯಾತನೂರ್‌ ಅವರು ಆರೋಪಿ ವಿಜಯ್‌ ಮೇಲೆ ಫೈರಿಂಗ್‌ ಮಾಡಿದ್ದಾರೆ. ಇದರಿಂದ ಪಿಎಸ್ಐ ಸುವರ್ಣ ಹಾಗೂ ಆರೋಪಿ ವಿಜಯ್‌ ಗಾಯಗೊಂಡಿದ್ದಾರೆ. ಗಾಯಾಳು ಪಿಎಸ್‌ಐ ಸುವರ್ಣ ಅವರನ್ನು ಬಸವೇಶ್ವರ ಆಸ್ಪತ್ರೆಗೆ ಹಾಗೂ ಗಾಯಾಳು ಆರೋಪಿ ವಿಜಯನನ್ನು ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಹಬಾದ್ ನಗರ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.‌

ಇದನ್ನೂ ಓದಿ: ಶಹಬಾದ್‌ ನಗರಸಭೆ ಮಾಜಿ ಅಧ್ಯಕ್ಷ ಗಿರೀಶ್‌ ಕಂಬನೂರ್‌ ಬರ್ಬರ ಹತ್ಯೆ

Exit mobile version