ಬೆಂಗಳೂರು: ಚುನಾವಣೆ ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ಪೊಲೀಸರು ಹಾಗೂ ಚುನಾವಣಾ ಅಧಿಕಾರಿಗಳು (Karnataka Election 2023) ಚೆಕ್‌ಪೋಸ್ಟ್‌ಗಳಲ್ಲಿ ತೀವ್ರ ತಪಾಸಣೆ ನಡೆಸುತ್ತಿದ್ದಾರೆ. ಈ ನಡುವೆ ಶಿವಮೊಗ್ಗ, ರಾಯಚೂರು, ಬಾಗಲಕೋಟೆ, ಕಲಬುರಗಿ ಹಾಗೂ ವಿಜಯನಗರ ಜಿಲ್ಲೆಯ ಚೆಕ್‌ಪೋಸ್ಟ್‌ಗಳಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಹಣ ಸೇರಿ ಮದ್ಯ, ಅಕ್ಕಿ ಹಾಗೂ ವಿವಿಧ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಶಿವಮೊಗ್ಗದಲ್ಲಿ ನಗದು ಸೇರಿ 20.40 ಲಕ್ಷ ರೂ. ಮೌಲ್ಯದ ವಸ್ತುಗಳು ಜಪ್ತಿ
ಶಿವಮೊಗ್ಗ: ಜಿಲ್ಲೆಯಲ್ಲಿ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ ಮುಂದುವರಿದಿದ್ದು, ದೊಡ್ಡಪೇಟೆ ಠಾಣಾ ವ್ಯಾಪ್ತಿಯಲ್ಲಿ 10 ಲಕ್ಷ ರೂ. ಮೌಲ್ಯದ ಅಕ್ಕಿ, ಬೇಳೆ, ಎಣ್ಣೆ, ಶಾವಿಗೆ, ಸಕ್ಕರೆ ಮತ್ತಿತರೆ ವಸ್ತುಗಳಿದ್ದ 500 ಬ್ಯಾಗ್ ಅನ್ನು ವಶಕ್ಕೆ ಪಡೆದಿದ್ದಾರೆ. ಅಕ್ರಮವಾಗಿ ಸಂಗ್ರಹಿಸಿಡಲು ಸಾಗಾಟ ಮಾಡುತ್ತಿದ್ದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಆಗುಂಬೆ ಠಾಣಾ ವ್ಯಾಪ್ತಿಯಲ್ಲಿ ಲಾರಿಯಲ್ಲಿ ಸಾಗಿಸುತ್ತಿದ್ದ 5 ಲಕ್ಷ ರೂ. ಮೌಲ್ಯದ 115 ಕ್ವಿಂಟಾಲ್ ಅಕ್ಕಿಯನ್ನು ವಶಕ್ಕೆ ಪಡೆಯಲಾಗಿದೆ.
ಹಾಗೆಯೇ ಆಗುಂಬೆ ಠಾಣಾ ವ್ಯಾಪ್ತಿಯಲ್ಲಿ 3 ಲಗೇಜ್ ವಾಹನಗಳಲ್ಲಿ ಸಾಗಿಸುತ್ತಿದ್ದ 4.50 ಲಕ್ಷ ರೂಪಾಯಿ ಮೌಲ್ಯದ ರಗ್ಗು, ಜಮಖಾನೆ ವಶಕ್ಕೆ ಪಡೆದಿದ್ದು, ಕುಂಸಿ ಠಾಣಾ ವ್ಯಾಪ್ತಿಯಲ್ಲಿ 90,000 ರೂ. ನಗದು ಜಪ್ತಿ ಮಾಡಲಾಗಿದೆ. ನೀತಿ ಸಂಹಿತೆ ಉಲ್ಲಂಘನೆ ಹಿನ್ನೆಲೆಯಲ್ಲಿ ಸೊರಬ ತಾಲೂಕಿನ ಬರದವಳ್ಳಿ ಗ್ರಾಮದ ಕಲ್ಲಪ್ಪ ಮನೆ ಮೇಲೆ ಶಿವಮೊಗ್ಗ ಅಬಕಾರಿ ಪೊಲೀಸರು ದಾಳಿ ನಡೆಸಿ, ಮನೆಯಲ್ಲಿ ಶೇಖರಣೆ ಮಾಡಿಟ್ಟಿದ್ದ ಸಾರಾಯಿ, ಕಳ್ಳಭಟ್ಟಿಯನ್ನು ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ | Vijaynagara : ವಿಜಯನಗರ ಜಿಲ್ಲೆಯಲ್ಲಿ ಚೆಕ್‌ಪೋಸ್ಟ್ ಸಂಖ್ಯೆ 20ರಿಂದ 23ಕ್ಕೆ ಏರಿಕೆ
ಕಲ್ಲಪ್ಪ ಮನೆ ಹಿಂಭಾಗದಲ್ಲಿ ಅಕ್ರಮವಾಗಿ ಕಳ್ಳಬಟ್ಟಿ ಸಾರಾಯಿ ತಯಾರಿಸುತ್ತಿದ್ದ. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಅಬಕಾರಿ ಪೊಲೀಸರು, 340 ಲೀಟರ್ ಬೆಲ್ಲದ ಕೊಳೆ, 5 ಲೀಟರ್ ಕಳ್ಳಬಟ್ಟಿ ಸಾರಾಯಿಯನ್ನು ವಶಕ್ಕೆ ಪಡೆದು, ಆರೋಪಿ ಕಲ್ಲಪ್ಪ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ದಾಖಲೆ ಇಲ್ಲದೆ ಸಾಗಿಸುತ್ತಿದ್ದ 9 ಲಕ್ಷ ರೂಪಾಯಿ ಜಪ್ತಿ
ರಾಯಚೂರು: ಸಿಂಧನೂರು ತಾಲೂಕಿನ ಶಾಂತಿನಗರದ ಚೆಕ್‌ಪೋಸ್ಟ್‌ನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 9 ಲಕ್ಷ ರೂ.ಗಳನ್ನು ಚುನಾವಣಾ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಆಂಧ್ರಪ್ರದೇಶ ನಂಬರ್ ಪಾಸಿಂಗ್ ಹೊಂದಿದ್ದ ಬೊಲೆರೋ ವಾಹನದಲ್ಲಿ ಶುಕ್ರವಾರ ತಡರಾತ್ರಿ ದಾಖಲೆಗಳು ಇಲ್ಲದೆ ಸಾಗಿಸಲಾಗುತ್ತಿದ್ದ ಹಣ ವಶಕ್ಕೆ ಪಡೆಯಲಾಗಿದೆ. ಜಪ್ತಿಯಾದ ಹಣವನ್ನು ತಾಲೂಕು ಖಜಾನೆಗೆ ರವಾನೆ ಮಾಡಲಾಗಿದ್ದು, ಜಿಲ್ಲಾ ಹಣ ಮುಟ್ಟುಗೋಲು ಸಮಿತಿ ಹಾಗೂ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಲಾಗಿದೆ.
ದಾಖಲೆ ಇಲ್ಲದ 4.96 ರೂಪಾಯಿ ಮೌಲ್ಯದ ಅಕ್ಕಿ ಪ್ಯಾಕೆಟ್ ವಶ
ಬಾಗಲಕೋಟೆ: ಜಮಖಂಡಿ ತಾಲೂಕಿನ ಹುಲ್ಯಾಳ ಚೆಕ್‌ಪೋಸ್ಟ್‌ನಲ್ಲಿ ದಾಖಲೆ ಇಲ್ಲದೇ ಸಾಗಾಟ ಮಾಡುತ್ತಿದ್ದ 4.96 ಲಕ್ಷ ರೂಪಾಯಿ ಮೌಲ್ಯದ ಅಕ್ಕಿ ಪ್ಯಾಕೆಟ್‌ಗಳನ್ನು ಜಪ್ತಿ ಮಾಡಲಾಗಿದೆ. ತಹಸೀಲ್ದಾರ್ ಸದಾಶಿವ ಮುಕ್ಕೋಜಿ, ಜಮಖಂಡಿ ಗ್ರಾಮೀಣ ಪಿ.ಎಸ್.ಐ ಗಂಗಾ ಬಿರಾದಾರ ನೇತೃತ್ವದಲ್ಲಿ ಪರಿಶೀಲನೆ ನಡೆಸಿ, ಎರಡು ವಾಹನಗಳಲ್ಲಿದ್ದ ಒಟ್ಟು 33.1 ಟನ್ ಅಕ್ಕಿ ವಶಪಡಿಸಿಕೊಳ್ಳಲಾಗಿದೆ. ಇಳಕಲ್‌ನಿಂದ ಬೆಳಗಾವಿ ಜಿಲ್ಲೆಯ ಅಥಣಿ ಕಡೆಗೆ ಅಕ್ಕಿ ಸಾಗಿಸಲಾಗುತ್ತಿದ್ದ ಲಾರಿಗಳನ್ನು ಅಕ್ಕಿ ಸಮೇತ ವಶಕ್ಕೆ ಪಡೆದಿದ್ದು, ಜಮಖಂಡಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೇವರ್ಗಿಯ ಜೇರಟಗಿಯಲ್ಲಿ 4.50 ಲಕ್ಷ ರೂ. ವಶಕ್ಕೆ
ಕಲಬುರಗಿ: ಜಿಲ್ಲೆಯ ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ಜೇರಟಗಿ ಚೆಕ್‌ಪೋಸ್ಟ್‌ನಲ್ಲಿ 4.50 ಲಕ್ಷ ರೂ.ಗಳನ್ನು ಜಪ್ತಿ ಮಾಡಲಾಗಿದೆ. ಬೊಲೆರೋ ವಾಹನದಲ್ಲಿ ಮೆಹಬೂಬ್‌ಸಾಬ್ ಎಂಬುವವರು ದಾಖಲೆಯಿಲ್ಲದೆ 4.50 ಲಕ್ಷ ರೂಪಾಯಿ ತೆಗೆದುಕೊಂಡು ಹೋಗುತ್ತಿದ್ದರು. ಹೀಗಾಗಿ ಹಣ ಜಪ್ತಿ ಮಾಡಲಾಗಿದ್ದು, ನೇಲೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕನಕಗಿರಿಯಲ್ಲಿ ಕೆಆರ್‌ಪಿ ಪಕ್ಷದ ಆಂಬ್ಯುಲೆನ್ಸ್ ವಶಕ್ಕೆ
ಕೊಪ್ಪಳ: ಜಿಲ್ಲೆಯ ಕನಕಗಿರಿ ಠಾಣೆ ವ್ಯಾಪ್ತಿಯಲ್ಲಿ ನೀತಿ ಸಂಹಿತೆ ಉಲ್ಲಂಘನೆ ಆರೋಪದಲ್ಲಿ ಕೆಆರ್‌ಪಿ ಪಕ್ಷದ ಆಂಬ್ಯುಲೆನ್ಸ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನೀತಿ ಸಂಹಿತೆ ಜಾರಿ ಸಮಯದಲ್ಲಿ ರಾಜಕೀಯ ಪಕ್ಷದ ಚಿಹ್ನೆ, ಮುಖಂಡರ ಭಾವಚಿತ್ರ ಬಳಸಬಾರದು. ಆದರೂ ಸಾರ್ವಜನಿಕ ಉಪಯೋಗಕ್ಕಾಗಿ ಬಿಟ್ಟಿದ್ದ ಗಂಗಾವತಿ ಕ್ಷೇತ್ರದ ಕೆಆರ್‌ಪಿ ಪಕ್ಷದ ಅಭ್ಯರ್ಥಿ, ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ, ಬಳ್ಳಾರಿ ಅಭ್ಯರ್ಥಿ ಅರುಣಾ ಲಕ್ಷ್ಮಿ ಹಾಗೂ ಕನಕಗಿರಿ ಅಭ್ಯರ್ಥಿ ಡಾ. ಚಾರುಲ್ ಭಾವಚಿತ್ರವಿದ್ದ ಆಂಬ್ಯುಲೆನ್ಸ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ವಿಜಯನಗರ ಜಿಲ್ಲೆಯಲ್ಲಿ 6 ಲಕ್ಷ ರೂಪಾಯಿ ವಶ
ವಿಜಯನಗರ: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ದಾಖಲೆ ಇಲ್ಲದೇ ಸಾಗಿಸುತ್ತಿದ್ದ 6 ಲಕ್ಷ ರೂ.ಗಳನ್ನು ಚುನಾವಣಾ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ. ಜಿಲ್ಲೆಯ ಹೊಸಪೇಟೆ ತಾಲೂಕಿನ ಭುವನಹಳ್ಳಿ ಚೆಕ್‌ಪೋಸ್ಟ್‌ನಲ್ಲಿ ಬಳ್ಳಾರಿಯಿಂದ ಹುಬ್ಬಳ್ಳಿ ಕಡೆಗೆ ಸಾಗಾಟ ಮಾಡುತ್ತಿದ್ದ 4 ಲಕ್ಷ ರೂಪಾಯಿ ಹಾಗೂ ಹೂವಿನ ಹಡಗಲಿ-ಮೈಲಾರ ಚೆಕ್ ಪೋಸ್ಟ್‌ನಲ್ಲಿ ಹಿರೇಕೆರೂರಿನಿಂದ ಮಾಗಳಕ್ಕೆ ಸಾಗಾಟ ಮಾಡುತ್ತಿದ್ದಾಗ 2 ಲಕ್ಷ ರೂಪಾಯಿ ಪತ್ತೆಯಾಗಿದೆ. ಹೊಸಪೇಟೆ ಗ್ರಾಮೀಣ ಪೊಲೀಸ್ ಠಾಣೆ ಮತ್ತು ಹಿರೇಹಡಗಲಿ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.
ಬೆಂ.ಗ್ರಾಮಾಂತರ ಜಿಲ್ಲೆಯಲ್ಲಿ ಈವರೆಗೆ 75 ಲಕ್ಷ ರೂ. ಮೌಲ್ಯದ ಮದ್ಯ ವಶ
ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಚೆಕ್‌ಪೋಸ್ಟ್‌ಗಳಲ್ಲಿ ನಗದು ಸೇರಿ ವಿವಿಧ ವಸ್ತುಗಳ ಅಕ್ರಮ ಸಾಗಾಟಕ್ಕೆ ಕಡಿವಾಣ ಹಾಕಲು ಅಧಿಕಾರಿಗಳು ನಿಗಾ ಇಟ್ಟಿದ್ದು, ಅಬಕಾರಿ ಡಿಸಿ ನಾಗೇಶ್ ಹಾಗೂ ಇನ್ಸ್‌ಪೆಕ್ಟರ್ ಸುನೀಲ್ ನೇತೃತ್ವದಲ್ಲಿ ವಾಹನಗಳ ತಪಾಸಣೆ ನಡೆಯುತ್ತಿದೆ.
ಗೂಡ್ಸ್ ವಾಹನಗಳನ್ನು ತೀವ್ರ ತಪಾಸಣೆಗೆ ಒಳಪಡಿಸುತ್ತಿದ್ದು, ನೆಲಮಂಗಲ, ದೇವನಹಳ್ಳಿ, ಹೊಸಕೋಟೆಯಲ್ಲಿ ಈವರೆಗೆ 75 ಲಕ್ಷ ಮೌಲ್ಯದ ಅಕ್ರಮ ಮದ್ಯವನ್ನು ಜಪ್ತಿ ಮಾಡಲಾಗಿದೆ. ಅಬಕಾರಿ ಇಲಾಖೆಯ 8 ತಂಡಗಳ ಕಾರ್ಯಾಚರಣೆಯಲ್ಲಿ 75 ಲಕ್ಷ ಮೌಲ್ಯದ ಅಕ್ರಮ ಮದ್ಯ ಸೀಜ್ ಮಾಡಲಾಗಿದೆ. ನೆಲಮಂಗಲ 40 ಲಕ್ಷ ರೂಪಾಯಿ, ಹೊಸಕೋಟೆ 25 ಲಕ್ಷ ರೂಪಾಯಿ, ದೇವನಹಳ್ಳಿ ವಲಯದಲ್ಲಿ 10 ಲಕ್ಷ ರೂಪಾಯಿ ಮೌಲ್ಯದ ಮದ್ಯ ಸೀಜ್ ಮಾಡಲಾಗಿದ್ದು, 8 ದ್ವಿಚಕ್ರ ವಾಹನ, ಒಂದು ಸ್ವಿಫ್ಟ್ ಕಾರು, ಒಂದು ಲಾರಿ ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿ | Election Code Of Conduct : ಶಿವಮೊಗ್ಗದಲ್ಲಿ ಪೊಲೀಸರ ಕಾರ್ಯಾಚರಣೆ, 10 ಲಕ್ಷ ರೂ. ಅಕ್ಕಿ, ಬೇಳೆ, ಎಣ್ಣೆ, ಸಕ್ಕರೆ ಚೀಲ ವಶಕ್ಕೆ
ಉಡುಪಿ ಜಿಲ್ಲೆಯಲ್ಲಿ 20ಕ್ಕೂ ಅಧಿಕ ಚೆಕ್‌ಪೋಸ್ಟ್
ಉಡುಪಿ: ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಪೊಲೀಸ್ ಇಲಾಖೆ ದಿನೇ ದಿನೇ ಅಲರ್ಟ್ ಆಗುತ್ತಿದೆ. ಈಗಾಗಲೇ ಜಿಲ್ಲೆಯಾದ್ಯಂತ 20ಕ್ಕೂ ಅಧಿಕ ಚೆಕ್‌ಪೋಸ್ಟ್‌ಗಳನ್ನು ಆರಂಭಿಸಲಾಗಿದೆ. ಈ ನಡುವೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಮಚ್ಚೀಂದ್ರ ಹಾಕೆ ಅವರ ನೇತೃತ್ವದಲ್ಲಿ ದಿಢೀರ್ ಕಾರ್ಯಾಚರಣೆ ನಡೆಸಲಾಗಿದೆ. ರಾಷ್ಟ್ರೀಯ ಹೆದ್ದಾರಿ ಸೇರಿ ಒಳ ರಸ್ತೆಗಳಲ್ಲಿರುವ ಚೆಕ್‌ಪೋಸ್ಟ್‌ಗಳಿಗೆ ಸ್ವತಃ ಎಸ್‌ಪಿ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು. ಈ ವೇಳೆ ದಾಖಲೆ ಇಲ್ಲದ ಅನೇಕ ಸ್ವತ್ತುಗಳನ್ನು ಪರಿಶೀಲಿಸಲಾಗಿದೆ. ದಾಖಲೆ ಸಲ್ಲಿಸಲು ಕಾಲಾವಕಾಶವನ್ನು ಕೂಡ ನೀಡಲಾಗಿದೆ. 2ನೇ ಬಾರಿಗೆ ಈ ದಿಢೀರ್ ಕಾರ್ಯಾಚರಣೆ ನಡೆಸುತ್ತಿರುವುದು ಅಕ್ರಮ ತಡೆಗಟ್ಟುವಲ್ಲಿ ಮಹತ್ವದ ನಿರ್ಧಾರವಾಗಿದೆ.