Site icon Vistara News

Political Clash | ಮತ ನೀಡಿಲ್ಲವೆಂದು ಸೋತ ಬಿಜೆಪಿ ಅಭ್ಯರ್ಥಿ, ಬೆಂಬಲಿಗರಿಂದ ವಿಜಯಪುರದಲ್ಲಿ ವ್ಯಕ್ತಿ ಮೇಲೆ ಹಲ್ಲೆ?

vijapura halle

ವಿಜಯಪುರ: ವಿಜಯಪುರ ಮಹಾನಗರ ಪಾಲಿಕೆಯ ಪ್ರಥಮ ಚುನಾವಣೆಯಲ್ಲಿ ವಾರ್ಡ್‌ ನಂಬರ್‌ ೨ರಲ್ಲಿ ಪರಾಜಿತ ಬಿಜೆಪಿ ಅಭ್ಯರ್ಥಿ ಹಾಗೂ ಬೆಂಬಲಿಗರು ತಮಗೆ ಮತ ನೀಡದೆ, ಪಕ್ಷೇತರ ಅಭ್ಯರ್ಥಿಯನ್ನು ಬೆಂಬಲಿಸಿದ್ದೀರಾ ಎಂದು ಪ್ರಶ್ನಿಸಿ ವ್ಯಕ್ತಿಯೊಬ್ಬರ ಮೇಲೆ ತೀವ್ರವಾಗಿ ಹಲ್ಲೆ (Political Clash) ನಡೆಸಿದ್ದಾರೆಂಬ ಆರೋಪ ಕೇಳಿಬಂದಿದೆ. ಆದರೆ, ಈ ಬಗ್ಗೆ ದೂರು ಕೊಟ್ಟರೆ ಪೊಲೀಸರು ಇನ್ನೂ ಎಫ್‌ಐಆರ್‌ ದಾಖಲಿಸದೆ ದಿನದೂಡುತ್ತಿದ್ದಾರೆಂದು ಹಲ್ಲೆಗೊಳಗಾದವರು ಆರೋಪ ಮಾಡಿದ್ದಾರೆ.

ವಾರ್ಡ್‌ ನಂಬರ್‌ ೨ರ ನಿವಾಸಿ ದೇವಕಾಂತ ಬಿಜ್ಜರಗಿ ಎಂಬುವವರು ತೀವ್ರವಾಗಿ ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರ ಮೇಲೆ ಬಿಜೆಪಿಯ ಅಭ್ಯರ್ಥಿ ರಾಹುಲ್ ಔರಂಗಾಬಾದ್ ಹಾಗೂ ಬೆಂಬಲಿಗರು ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಈಗ ಕೇಳಿಬಂದಿದೆ.

ಕಳೆದ ಸೋಮವಾರ (ಅ.೩೧) ವಿಜಯಪುರ ಮಹಾನಗರ ಪಾಲಿಕೆ ಮತ ಎಣಿಕೆ ನಡೆದಿದ್ದು, ವಾರ್ಡ್‌ ನಂಬರ್‌ ೨ರಲ್ಲಿ ಪಕ್ಷೇತರವಾಗಿ ಸ್ಪರ್ಧೆ ಮಾಡಿದ್ದ ಅಲ್ತಾಫ್‌ ಇಟಗಿ ಎಂಬುವವರು ಗೆದ್ದಿದ್ದರು. ಈ ಹಿನ್ನೆಲೆಯಲ್ಲಿ ಇದೇ ವಾರ್ಡ್‌ ನಿವಾಸಿಯಾಗಿರುವ ದೇವಕಾಂತ ಅವರು ಅಲ್ತಾಫ್‌ರನ್ನು ತಮ್ಮ ಮನೆಗೆ ಕರೆಸಿ ಸನ್ಮಾನ ಮಾಡಿದ್ದರು.

ಇದನ್ನೂ ಓದಿ | Corporation Election | ಹಲವು ದಾಖಲೆಗಳಿಗೆ ಸಾಕ್ಷಿ ಆಯ್ತು ವಿಜಯಪುರ ಮಹಾನಗರ ಪಾಲಿಕೆ ಚುನಾವಣೆ!

ಸಿಟ್ಟಿಗೆದ್ದ ಬಿಜೆಪಿ ಅಭ್ಯರ್ಥಿಯಿಂದ ಹಲ್ಲೆ?
ದೇವಕಾಂತ ಬಿಜ್ಜರಗಿ ಅವರು ತಮ್ಮನ್ನು ಬೆಂಬಲಿಸದೆ ಪಕ್ಷೇತರ ಅಭ್ಯರ್ಥಿಗೆ ಬೆಂಬಲ ನೀಡಿದ್ದಾರೆ ಎಂದು ಆಕ್ರೋಶಗೊಂಡ ಪರಾಜಿತ ಬಿಜೆಪಿ ಅಭ್ಯರ್ಥಿಯು ನಗರದ ದರ್ಗಾ ಜೈಲು ರಸ್ತೆಯಲ್ಲಿ ಹಲ್ಲೆ ನಡೆಸಿದ್ದಾರೆಂದು ಹೇಳಲಾಗಿದೆ. ಆದರೆ, ಪರಾಜಿತ ಬಿಜೆಪಿ ಅಭ್ಯರ್ಥಿಯು ತಾವು ಹಲ್ಲೆಯನ್ನೇ ಮಾಡಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ದೇವಕಾಂತ, “ನನ್ನ ಮೇಲೆ ರಾಹುಲ್‌ ಔರಂಗಾಬಾದ್‌ ತಮ್ಮ ಐದಾರು ಮಂದಿ ಬೆಂಬಲಿಗರ ಜತೆ ಸೇರಿ ಕಲ್ಲಿನಿಂದ ಹಲ್ಲೆ ನಡೆಸಿದ್ದಾರೆ. ತೀವ್ರವಾಗಿ ಗಾಯಗೊಳಿಸಿದ್ದಾರೆ” ಎಂದು ಹೇಳಿದ್ದಾರೆ. ಸದ್ಯ ಅವರಿಗೆ ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.

ದೂರು ದಾಖಲು ಮಾಡಿಕೊಳ್ಳದ ಪೊಲೀಸರು?
ಹಲ್ಲೆಗೊಳಗಾಗಿರುವ ದೇವಕಾಂತ ಅವರು ಆದರ್ಶನಗರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ನೀಡಿದ್ದಾರೆ. ಆದರೆ, ದೂರು ದಾಖಲಿಸಿಕೊಂಡಿರುವ ಪೊಲೀಸರು ಇದುವರೆಗೂ ಎಫ್‌ಐಆರ್‌ ದಾಖಲು ಮಾಡಿಲ್ಲ ಎಂದು ದೇವಕಾಂತ ಆರೋಪ ಮಾಡಿದ್ದಾರೆ. ಅಲ್ಲದೆ, ಮಾತುಕತೆ ಮೂಲಕ ಪ್ರಕರಣವನ್ನು ಇತ್ಯರ್ಥಗೊಳಿಸಲು ನೋಡುತ್ತಿದ್ದಾರೆ. ನನಗೆ ಸಂಧಾನ ಬೇಡ, ನ್ಯಾಯ ಬೇಕು. ಈ ಹಿನ್ನೆಲೆಯಲ್ಲಿ ಹೋರಾಟ ನಡೆಸುತ್ತೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ | ಕೊಳ್ಳೇಗಾಲ ನಗರಸಭೆ ಬೈ ಎ‌ಲೆಕ್ಷನ್, ವಿಜಯಪುರ ಪಾಲಿಕೆ ಗೆಲುವು ಮುಂದಿನ ಚುನಾವಣೆಗೆ ದಿಕ್ಸೂಚಿ: ಸಿಎಂ

Exit mobile version