Site icon Vistara News

ಪತ್ರಕರ್ತರಿಗೆ ದೀಪಾವಳಿ ಗಿಫ್ಟ್‌ ಹೆಸರಿನಲ್ಲಿ ಲಂಚ ಆರೋಪ: ರಾಜಕೀಯ ನಾಯಕರ ಪ್ರತಿಕ್ರಿಯೆ ಏನು?

bribing

ಬೆಂಗಳೂರು: ದೀಪಾವಳಿ ಹಬ್ಬಕ್ಕೆ ಸ್ವೀಟ್‌ ಕೊಡುವ ನೆಪದಲ್ಲಿ ಸಿಎಂ ಕಚೇರಿಯಿಂದಲೇ ಅನೇಕ ಪತ್ರಕರ್ತರಿಗೆ ಲಂಚ ನೀಡಲಾಗಿದೆ ಎಂಬ ಕುರಿತು ಈಗಾಗಲೆ ಲೋಕಾಯುಕ್ತದಲ್ಲಿ ದೂರು ದಾಖಲಾಗಿದೆ. ಈ ಕುರಿತು ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಹರಿಹಾಯ್ದಿದ್ದು, ಬಿಜೆಪಿ ನಾಯಕರೂ ಪ್ರತಿಕ್ರಿಯೆ ನೀಡಿದ್ದಾರೆ.

ಆರಗ ಜ್ಞಾನೇಂದ್ರ, ಗೃಹಸಚಿವ
ಈ ಕುರಿತು ನನಗೆ ಯಾವುದೇ ಮಾಹಿತಿ ಇಲ್ಲ. ಯಾರು ಏನು ಆರೋಪ ಮಾಡಿದ್ದಾರೋ ಅವರಿಗೇ ಕೇಳಬೇಕು. ಅವರ ಬಳಿಯೇ ಕೇಳಬೇಕು, ನನ್ನ ಹತ್ತಿರ ಯಾವುದೇ ಸಾಕ್ಷಿ ಆಧಾರಗಳಿಲ್ಲ. ಲೋಕಾಯುಕ್ತಕ್ಕೆ ದೂರು ನೀಡಿದ್ದರೆ ಲೋಕಾಯುಕ್ತ ತನಿಖೆ ಮಾಡಲಿದೆ. ನಾವು ಮೂಗು ತೂರಿಸುವ ಕೆಲಸ ಮಾಡುವುದಿಲ್ಲ.

ಎಂ.ಬಿ. ಪಾಟೀಲ್‌, ಕಾಂಗ್ರೆಸ್‌ ಪ್ರಚಾರ ಸಮಿತಿ ಅಧ್ಯಕ್ಷ
ಇದೊಂದು ಕೆಟ್ಟ ಸಂಪ್ರದಾಯ. ದೀಪಾವಳಿ ಹಬ್ಬ ಇದೆ, ಹಬ್ಬಕ್ಕೆ ಸ್ವೀಟ್ ಬಾಕ್ಸ್ ಕೊಡಬೇಕು. ಆದರೆ ಆ ಸ್ವೀಟ್ ಬಾಕ್ಸ್‌ನಲ್ಲಿ ಹಣ ಹಾಕಿಕೊಡುವುದು ತಪ್ಪು. ಇದು PyaCM ತರಹ PyaPM ಆಗಿದೆ. . ಪೇ ಪರ್ಸನಲ್ ಮಿಡಿಯಾ ಆಗಿದೆ. ಯಾರ‍್ಯಾರಿಗೆ ದುಡ್ಡು ಹೋಗಿದೆ, ಯಾರು ಆ ದುಡ್ಡು ವಾಪಸ್ ಕೊಟ್ಟಿದ್ದಾರೆ ಎನ್ನುವುದನ್ನು ಅವರೇ ಹೇಳಬೇಕು. ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದುಡ್ಡು ತಂದು ಕೊಡುತ್ತಾರೆ ಎಂದರೆ ಅದೇನು ಅವರ ದುಡ್ಡಾ? ಸಿಎಂ ಗಮನಕ್ಕೆ ಇಲ್ಲದೆ ಈ ದುಡ್ಡು ಬಂದಿದೇನಾ..?

ಸಿ.ಟಿ. ರವಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ
ಸುಧೀರ್ಘ ರಾಜಕಾರಣದಲ್ಲಿ ಇರುವ ಸಿಎಂ ಇಂತಹ ಕೆಲಸ ಮಾಡಿರಲಾರರು. ಸಿಎಂ ಹೆಸರು ಹೇಳಿಕೊಂಡು ಯಾರಾದರೂ ಆ ರೀತಿ ಅತಿರೇಕದ ವರ್ತನೆ ಮಾಡಿದ್ದರೆ, ಸಿಎಂ ಸಹ ಸುಮ್ಮನೆ ಇರಬಾರದು. ನಾನು ಸಿಎಂ ಭೇಟಿ ಮಾಡಿ ಚರ್ಚಿಸುತ್ತೇನೆ.

ಕಾಂಗ್ರೆಸ್‌ ಟ್ವೀಟ್‌
40% ಸರ್ಕಾರದಲ್ಲಿ ಎಲ್ಲವೂ ಪೇಮೆಂಟ್ ವ್ಯವಹಾರವೇ. PSI ನೇಮಕಾತಿಯಲ್ಲಿ, ಪೊಲೀಸರ ವರ್ಗಾವಣೆಯಲ್ಲಿ 70-80 ಲಕ್ಷ ರೂ. ವ್ಯವಹಾರ ನಡೆದಿದೆ ಎಂದು ಸಚಿವ MTB ನಾಗರಾಜ್ ಒಪ್ಪಿಕೊಂಡಿದ್ದಾರೆ. ಇತ್ತ ಸರ್ಕಾರ ಪತ್ರಕರ್ತರಿಗೆ ಲಂಚ ನೀಡುತ್ತದೆ. ಪೇ ಸಿಎಂ ಬಸವರಾಜ ಬೊಮ್ಮಾಯಿ ಅವರೇ, ಮುಗಿಲುಮುಟ್ಟಿದ ಭ್ರಷ್ಟಾಚಾರಕ್ಕೆ ಇನ್ಯಾವ ಸಾಕ್ಷಿ ಬೇಕು?

ರಣದೀಪ್‌ ಸಿಂಗ್‌ ಸುರ್ಜೆವಾಲ, ಕೆಪಿಸಿಸಿ ಉಸ್ತುವಾರಿ
ಲಂಚದ ಹಗರಣ ಈಗ ಬಹಿರಂಗವಾಗಿದೆ. ಸಿಎಂ ಬೊಮ್ಮಾಯಿ ಬಳಿಯಿಂದಲೇ ಈ ಹಗರಣ ನಡೆದಿದೆ. ಈ ಬಾರಿ ಬೊಮ್ಮಾಯಿ ಅವರು ಪತ್ರಕರ್ತರನ್ನೇ ಭ್ರಷ್ಟರನ್ನಾಗಿಸಲು ಮುಂದಾಗಿದ್ದಾರೆ. ಪತ್ರಕರ್ತರೇ ಈ ಭ್ರಷ್ಟಾಚಾರವನ್ನು ಬಯಲಿಗೆಳೆದಿದ್ದಾರೆ. ಪೇ ಸಿಎಂ ಅಭಿಯಾನದಲ್ಲಿ ಈಗಾಗಲೆ ಕುಪ್ರಸಿದ್ಧವಾಗಿರುವ ಸರ್ಕಾರ ಇದೀಗ ಮತ್ತೊಂದು ಹಗರಣ ನಡೆಸಿದೆ. ಈ ಹಣ ಎಲ್ಲಿಂದ ಬಂತು? ಇದು ಸಾರ್ವಜನಿಕರ ಹಣವೇ? ನಿಮ್ಮ ವೈಯಕ್ತಿಕ ಹಣವೇ? ಬೊಮ್ಮಾಯಿ ಅವರೇ? ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಬೇಕು ಹಾಗೂ ರಾಜೀನಾಮೆ ನೀಡಬೇಕು.

ಸರಣಿ ಟ್ವೀಟ್‌ ಮೂಲಕ ಬಿಜೆಪಿ ಉತ್ತರ
ಕೆಪಿಸಿಸಿ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೆವಾಲ ಅವರ ಹೇಳಿಕೆಗೆ ಬಿಜೆಪಿ ಸರಣಿ ಟ್ವೀಟ್‌ ಮೂಲಕ ಪ್ರತಿಕ್ರಿಯೆ ನೀಡಿದೆ. “ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸುರ್ಜೆವಾಲ ಹಾಗೂ ಕಾಂಗ್ರೆಸ್‌ ನಾಯಕರು ನಾಯಕರು ಅನಗತ್ಯ ಆಧಾರ ರಹಿತ ಆರೋಪ ಮಾಡುತ್ತಿರುವ ಮೂಲಕ ಹಳೆಯ ಟೇಪನ್ನೇ ರಿಪೀಟ್ ಮಾಡುತ್ತಿದ್ದಾರೆ. ಭಾರತ ಜೋಡೊ ಪಾದಯಾತ್ರೆ ಫಲ ನೀಡಿಲ್ಲ ಎನ್ನುವುದು ಅವರಿಗೆ ಅರಿವಾದಂತಿದೆ”.

“ಕಳೆದ ಒಂದು ವರ್ಷದಿಂದ ಮಾಡುತ್ತಿರುವ ಆರೋಪಕ್ಕೆ ಯಾವುದೇ ದಾಖಲೆ ನೀಡದೇ ಈಗ ಹೊಸ ರಾಗದಲ್ಲಿ ಭ್ರಷ್ಟಾಚಾರದ ಆರೋಪ ಮಾಡುತ್ತಿರುವುದು. ಇದು ಕಾಂಗ್ರೆಸ್ ನ ಟೂಲ್ ಕಿಟ್. ನಿಮ್ಮ ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಆಗಿರುವ ಭ್ರಷ್ಟಾಚಾರದ ದೊಡ್ಡ ಪಟ್ಟಿಯೇ ದೇಶದ ಜನರ ಮುಂದಿದೆ. ಹಾಸಿಗೆ ದಿಂಬು, ರಿಡೂ ಹಗರಣ, ಸೋಲಾರ್ ಹಗರಣಕ್ಕೆ ಉತ್ತರ ಕೊಡುವಿರಾ?”

“ರಾಜ್ಯದಲ್ಲಿ ಹಬ್ಬದ ಸಂದರ್ಭದಲ್ಲಿ ಪತ್ರಕರ್ತರಿಗೆ ಸ್ವೀಟ್ ಬಾಕ್ಸ್ ನೀಡುವ ಸಂಪ್ರದಾಯ ಮೊದಲಿನಿಂದಲೂ ಇದ್ದು, ಸುರ್ಜೆವಾಲ ಅವರು ಈ ಬಗ್ಗೆ ರಾಜ್ಯದಲ್ಲಿರುವ ತಮ್ಮ ಪಕ್ಷದ ನಾಯಕರಿಂದ ಮಾಹಿತಿ ಪಡೆದುಕೊಳ್ಳುವುದು ಒಳ್ಳೆಯದು. ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಡಿಕೆಶಿ ಅವರು ಐಫೋನ್ ಗಿಫ್ಟ್ ನೀಡಿದ್ದು, ಮಾಜಿ ಸಚಿವರು ಲ್ಯಾಪ್ ಟಾಪ್ ಹಂಚಿದ್ದು, ಗೋಲ್ಡ್ ಕಾಯಿನ್ ಹಂಚಿಕೆ ಮಾಡಿರುವುದು ತಮ್ಮ ಗಮನಕ್ಕೆ ಬಂದಿಲ್ಲದಿದ್ದರೆ, ಪಕ್ಷದ ರಾಜ್ಯ ಉಸ್ತುವಾರಿಯಾಗಿ, ನಿಮ್ಮ ಪಕ್ಷದಲ್ಲಿನ ಬೆಳವಣಿಗೆಯ ಬಗ್ಗೆ ಮೊದಲು ತಿಳಿದುಕೊಳ್ಳುವುದು ಒಳಿತು”.

“ರಾಜ್ಯ ಕಾಂಗ್ರೆಸ್ ನಿಂದ ಮೇಕೆದಾಟು ಪಾದಯಾತ್ರೆ ಹಾಗೂ ಭಾರತ್‌ ಜೋಡೊ ಯಾತ್ರೆ ಸಂದರ್ಭದಲ್ಲಿ ಆಯ್ದ ಪತ್ರಕರ್ತರಿಗೆ ಸ್ವತಃ ನಿಮ್ಮ ಪಕ್ಷದ ರಾಜ್ಯಾಧ್ಯಕ್ಷರಿಂದಲೇ ಹಣ ಸಂದಾಯವಾಗಿರುವ ಚರ್ಚೆ ನಡೆಯುತ್ತಿದೆ ಈ ಬಗ್ಗೆ ದೇಶದ ಜನತೆಗೆ ಉತ್ತರಿಸುವಿರಾ?” ಎಂದು ಟ್ವೀಟ್‌ ಮಾಡಿದೆ.

ಇದನ್ನೂ ಓದಿ | ಇನ್ಸ್‌ಪೆಕ್ಟರ್‌ ನಂದೀಶ್‌ ಸಾವು | ಸಚಿವ ಎಂಟಿಬಿ ಸ್ಪಷ್ಟೀಕರಣ ಕೊಡಬೇಕಾಗುತ್ತದೆ ಎಂದ ಗೃಹ ಸಚಿವ ಆರಗ ಜ್ಞಾನೇಂದ್ರ

Exit mobile version