ಮೈಸೂರು: ರಾಜ್ಯದಲ್ಲಿ ವರ್ಗಾವಣೆಯಲ್ಲಿ ದಂಧೆ (Transfer Politics) ಮತ್ತು ರಾಜಕೀಯ ನಡೆಯುತ್ತಿದೆ ಎಂಬ ಆರೋಪ ಒಂದು ಕಡೆಯಾದರೆ ಇನ್ನೊಂದು ಕಡೆಯಲ್ಲಿ ಬೇರೆ ಪಕ್ಷದ ಬೆಂಬಲಿಗರು ಎಂಬ ಕಾರಣಕ್ಕೆ ಕೆಲವು ಸರ್ಕಾರಿ ಉದ್ಯೋಗಿಗಳನ್ನು ಮಾತ್ರವಲ್ಲ, ಗುತ್ತಿಗೆ ನೌಕರರ (Contract workers) ಮೇಲೂ ದ್ವೇಷ ಸಾಧಿಸುವ (Political Rivalry) ಘಟನೆಗಳು ಕೇಳಿಬರುತ್ತಿವೆ. ಈ ಹಿಂದೆ ಕೃಷಿ ಸಚಿವ ಚೆಲುವರಾಯ ಸ್ವಾಮಿ (Chaluvaraya Swamy) ಅವರು ಜೆಡಿಎಸ್ ಬೆಂಬಲಿಗರು ಎಂಬ ಕಾರಣಕ್ಕಾಗಿ ಜಗದೀಶ್ ಎಂಬ ಕೆಎಸ್‌ಆರ್‌ಟಿಸಿ ಚಾಲಕರನ್ನು ವರ್ಗಾವಣೆ ಮಾಡಿ ವಿವಾದಕ್ಕೆ ಒಳಗಾದರೆ ಈಗ ಒಬ್ಬ ಗುತ್ತಿಗೆ ನೌಕರನನ್ನು ಕೆಲಸದಿಂದ ಕಿತ್ತುಹಾಕಿದ ಆರೋಪವನ್ನು ಎದುರಿಸುತ್ತಿದ್ದಾರೆ ಸಚಿವ ಡಾ. ಎಚ್.ಸಿ. ಮಹದೇವಪ್ಪ (Dr. HC Mahadevappa) ಅವರ ಪುತ್ರ ಸುನಿಲ್ ಬೋಸ್ (Sunil Bose).
ಕೆಲವೇ ದಿನಗಳ ಹಿಂದೆ ತಿ. ನರಸೀಪುರದ ಯುವ ಬ್ರಿಗೇಡ್ ಕಾರ್ಯಕರ್ತ ವೇಣುಗೋಪಾಲ ನಾಯಕ್ ಕೊಲೆ ಪ್ರಕರಣದಲ್ಲಿ ಸುನಿಲ್ ಬೋಸ್ ಅವರ ಆಪ್ತರ ಹೆಸರು ಕೇಳಿಬಂದರೆ ಈಗ ಇನ್ನೊಂದು ಆರೋಪ ಅವರ ಬಗಲೇರಿದೆ.
ಏನಿದು ಗುತ್ತಿಗೆ ನೌಕರನ್ನು ಕೆಲಸದಿಂದ ಬಿಡಿಸಿದ ಆರೋಪ
ಮುಡುಕುತೊರೆ ಏತ ನೀರಾವರಿಯಲ್ಲಿ ಕಳೆದ 8 ವರ್ಷಗಳಿಂದ ಗುತ್ತಿಗೆ ನೌಕರನಾಗಿರುವ ಶಿವಕುಮಾರ್ ಮತ್ತು ನವೀದ್ ಎಂಬವರನ್ನು ಕೆಲಸದಿಂದ ಕಿತ್ತು ಹಾಕಲಾಗಿದೆ. ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರ ಪುತ್ರ ಸುನಿಲ್ ಕುಮಾರ್ ಅವರ ಸೂಚನೆಯ ಮೇರೆಗೆ ಕೆಲಸದಿಂದ ಕಿತ್ತುಹಾಕಲಾಗಿದೆ ಎಂದು ಹಿರಿಯ ಅಧಿಕಾರಿಗಳು ಸ್ಪಷ್ಟವಾಗಿ ತಿಳಿಸಿದ್ದಾರೆ. ಮತ್ತು ಒಂದೊಮ್ಮೆ ಮರಳಿ ಕೆಲಸಕ್ಕೆ ತೆಗೆದುಕೊಳ್ಳಬೇಕಾದರೆ ಅವರೇ ಶಿಫಾರಸು ಮಾಡಬೇಕು ಎಂದಿದ್ದಾರೆ.
ಈ ಬಗ್ಗೆ ಕೆಲಸ ಕಳೆದುಕೊಂಡಿರುವ ಶಿವಕುಮಾರ್ ಅವರು ವಿಡಿಯೋ ಮಾಡಿ ತಮ್ಮ ಅಳಲು ತೋಡಿಕೊಂಡಿದ್ದಾರೆ.
ʻʻಮುಡುಕುತೊರೆ ಏತ ನೀರಾವರಿಯಲ್ಲಿ ಕಳೆದ 8 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಯಾರೋ ರಾಜಕೀಯ ವ್ಯಕ್ತಿಗಳು ಹೇಳಿದರು ಅಂತ ನಮ್ಮನ್ನು ಕೆಲಸದಿಂದ ತೆಗೆದಿದ್ದಾರೆ. ಇದರಿಂದ ನಮಗೆ ತುಂಬಾ ಅನ್ಯಾಯವಾಗಿದೆ. ಮುಂದೆ ಏನು ಮಾಡಬೇಕೆಂದು ದಿಕ್ಕು ತೋಚುತ್ತಿಲ್ಲ. ನಾಲ್ಕೂವರೆ ಸಾವಿರ ರೂ ಸಂಬಳದಿಂದಲೂ ಕೆಲಸ ಮಾಡುತ್ತ ಬಂದಿದ್ದೇವೆ. ಸಚಿವ ಮಹದೇವಪ್ಪ ಪುತ್ರ ಸುನಿಲ್ ಬೋಸ್ ಕೆಲಸದಿಂದ ತೆಗೆಯುವಂತೆ ಹೇಳಿದ್ದಾರೆ. ಬೇಕಿದ್ರೆ ಸುನಿಲ್ ಬೋಸ್ ಅವರಿಂದಲೇ ಫೋನ್ ಮಾಡಿಸುವಂತೆ ಅಧಿಕಾರಿಗಳು ಹೇಳುತ್ತಿದ್ದಾರೆʼʼ ಎಂದು ಕೆಲಸ ಕಳೆದುಕೊಂಡ ನೌಕರ ಶಿವಕುಮಾರ್ ಅಳಲು ತೋಡಿಕೊಂಡಿದ್ದಾರೆ.
ನೀರಾವರಿ ಇಲಾಖೆ ಎಂಜಿನಿಯರ್ ಸೋಮಣ್ಣ ಹೇಳುವುದೇನು?
ಈ ನಡುವೆ, ಸಚಿವ ಮಹದೇವಪ್ಪ ಅವರ ಪುತ್ರ ಸುನಿಲ್ ಬೋಸ್ ಅವರ ಸೂಚನೆಯ ಮೇರೆಗೆ ಶಿವಕುಮಾರ್ ಮತ್ತು ನವೀದ್ ಅವರನ್ನು ಕೆಲಸದಿಂದ ಕಿತ್ತು ಹಾಕಿರುವ ನೀರಾವರಿ ಇಲಾಖೆ ಎಂಜಿನಿಯರ್ ಸೋಮಣ್ಣ ಅವರು ಜೆಡಿಎಸ್‌ಗೆ ಕೆಲಸ ಮಾಡಿದ ಕಾರಣಕ್ಕಾಗಿಯೇ ಕೆಲಸದಿಂದ ತೆಗೆಯಲಾಗಿದೆ ಎಂದು ಹೇಳಿದ್ದಾರೆ. ಶಿವಕುಮಾರ್ ಮತ್ತು ಸೋಮಣ್ಣ ಅವರು ಮಾತನಾಡಿರುವ ಆಡಿಯೊವೊಂದು ಈಗ ಬಯಲಾಗಿದೆ.
ಎಂಜಿನಿಯರ್ ಸೋಮಣ್ಣ ಹೇಳಿದ್ದೇನು?
ಶಿವಕುಮಾರ್ ಅವರು ಸೋಮಣ್ಣ ಜತೆಗೆ ದೂರವಾಣಿ ಮೂಲ ಮಾತನಾಡಿದ ಆಡಿಯೋ ವೈರಲ್ ಆಗಿದೆ.
ʻʻʻಹೊರ ಗುತ್ತಿಗೆ ಕೆಲಸದ ಬಗ್ಗೆ ನನಗೆ ಕೇಳಬೇಡಿ. ಕೆಲಸ ಮಾಡಿದರೂ ಸುನೀಲ್ ಬೋಸ್ ಹೇಳಿದರೆ ಮಾತ್ರ ಹಣ ಕೊಡುತ್ತೇವೆ. ನೀವು ಬೇರೆ ಪಕ್ಷಕ್ಕೆ ಕೆಲಸ ಮಾಡಿದ್ದರಿಂದ ಹೀಗಾಗಿದೆʼʼ ಎಂದು ಸೋಮಣ್ಣ ಹೇಳುತ್ತಾರೆ.
ʻʻನಾನು ಯಾವ ಪಕ್ಷದ ಪರವಾಗಿಯೂ ಕೆಲಸ ಮಾಡಿಲ್ಲ. ನಾನು 8 ವರ್ಷದಿಂದ ಇಲ್ಲಿ ಕೆಲಸ ಮಾಡುತ್ತಿದ್ದೇನೆ. ಏಕಾ ಏಕಿ ಕೆಲಸದಿಂದ ತೆಗೆದರೆ ಹೇಗೆʼʼ ಎಂದು ಪ್ರಶ್ನೆ ಮಾಡಿದ್ದಾರೆ.
ಆಗ ಸೋಮಣ್ಣ, ʻʻ8 ವರ್ಷ ಆದರೂ ಸರಿ, 10 ವರ್ಷದಿಂದ ಕೆಲಸ ಮಾಡಿದ್ದರು ಸರಿ. ಶಾಶ್ವತ ಇರುವ ನಮ್ಮಂಥವರನ್ನೇ ತೆಗೆಯುತ್ತಾರೆ. ಯಾರು ಆಡಳಿತದಲ್ಲಿ ಇರುತ್ತಾರೆ ಅವರ ಮಾತು ಕೇಳಬೇಕು. ನಿಮ್ಮ ಸಂಸದರು ಹೇಳಿದರೂ ಆಗುವುದಿಲ್ಲ. ನೀವು ಏನಾದರೂ ಮಾಡಿಕೊಳ್ಳಿ ನಮಗೆ ಗೊತ್ತಿಲ್ಲ.ʼʼ ಎಂದು ಉತ್ತರಿಸಿದ್ದಾರೆ.
ಅರೋಪಗಳನ್ನು ಅಲ್ಲಗಳೆದ ಸುನಿಲ್ ಬೋಸ್
ಈ ನಡುವೆ, ತಿ.ನರಸೀಪುರದಲ್ಲಿ ಗುತ್ತಿಗೆ ನೌಕರನನ್ನು ಕೆಲಸದಿಂದ ತೆಗೆಸಿದ ಆರೋಪವನ್ನು ಅಲ್ಲಗಳೆದಿದ್ದಾರೆ ಡಾ.ಎಚ್.ಸಿ. ಮಹದೇವಪ್ಪ ಅವರ ಪುತ್ರ ಸುನಿಲ್ ಬೋಸ್.
ʻʻನಾನು ಯಾರನ್ನು ಕೆಲಸದಿಂದ ತೆಗೆಯುವಂತೆ ಹೇಳಿಲ್ಲ. ಅಧಿಕಾರಿ ಯಾಕಾಗಿ ನನ್ನ ಹೆಸರು ಬಳಸಿದ್ದಾರೆ ಗೊತ್ತಿಲ್ಲ. ಈ ಬಗ್ಗೆ ಅಧಿಕಾರಿಗೆ ಸ್ಪಷ್ಟನೆ ಕೇಳುತ್ತೇನೆ. ಗುತ್ತಿಗೆ ನೌಕರರನ್ನು ಕೆಲಸ ತೆಗೆದುಕೊಳ್ಳಲು ಅವಧಿಯ ಮಾನದಂಡ ಇರುತ್ತೆ. ನಂತರ ಅವರನ್ನು ಉಳಿಸಿಕೊಳ್ಳಲುಬಹುದು, ತೆಗೆಯಲೂ ಬಹುದು. ಈ ಪ್ರಕರಣದಲ್ಲಿ ಆ ವ್ಯಕ್ತಿಯನ್ನು ಉಳಿಸಿಕೊಳ್ಳೋದು ಬಿಡೋದು ಅಧಿಕಾರಿಗೆ ಬಿಟ್ಟಿದ್ದು. ನಾನು ಹಸ್ತಕ್ಷೇಪ ಮಾಡುವುದಿಲ್ಲʼʼ ಎಂದು ಸುನಿಲ್ ಬೋಸ್ ಸ್ಪಷ್ಟಪಡಿಸಿದರು.
ʻʻಚುನಾವಣೆಯಲ್ಲಿ ಪ್ರತಿಮನೆಯನ್ನು ಸುತ್ತಾಡಿ ತಂದೆಯನ್ನು ಗೆಲ್ಲಿಸಿದ್ದೇನೆ. ಜನರ ಕೆಲಸ ಮಾಡಿಕೊಡುವುದು ನನ್ನ ಜವಾಬ್ದಾರಿ. ಅಷ್ಟನ್ನು ನಾನು ಮಾಡುತ್ತಿದ್ದೇನೆʼʼ ಎಂದು ಹೇಳುವ ಮೂಲಕ ತಂದೆಯ ಅಧಿಕಾರಿವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದೀರಾ ಎಂಬ ಪ್ರಶ್ನೆಗೆ ಸುನೀಲ್ ಬೋಸ್ ಜಾಣ್ಮೆಯ ಉತ್ತರ ನೀಡಿದರು.
ಇದನ್ನೂ ಓದಿ : Transfer controversy ; ಜೆಡಿಎಸ್ ಪರ ಲೈನ್‌ಮ್ಯಾನ್ ವರ್ಗ; ಚಲುವರಾಯಸ್ವಾಮಿ ವಿರುದ್ಧ ಮತ್ತೊಂದು ಆರೋಪ