ಬೆಂಗಳೂರು: ಕುಖ್ಯಾತ ಕ್ರಿಮಿನಲ್ ಸ್ಯಾಂಟ್ರೋ ರವಿ ಗುಜರಾತ್‌ನ ಅಹಮದಾಬಾದ್‌ನಲ್ಲಿ ಸೆರೆ ಸಿಕ್ಕಿದ್ದಾನೆ. ಆತ ಸೆರೆ ಸಿಕ್ಕಿರುವುದರಿಂದ ಹಲವರಿಗೆ ನಡುಕ ಶುರುವಾಗಿದೆ. ಯಾಕೆಂದರೆ, ಸ್ಯಾಂಟ್ರೋ ರವಿ ಕೈಯಲ್ಲಿದೆ ಹಲವು ಸಚಿವರು, ಅಧಿಕಾರಿಗಳು ಮತ್ತು ರಾಜಕೀಯ ಮುಖಂಡರ ಭವಿಷ್ಯ.
ಮೈಸೂರಿನ ಕೆ.ಎಸ್. ಮಂಜುನಾಥ್ ಅಲಿಯಾಸ್ ಸ್ಯಾಂಟ್ರೋ ರವಿಯ ಮೇಲೆ ೧೧ ದಿನದ ಹಿಂದೆ ಮೈಸೂರಿನ ವಿಜಯ ನಗರ ಪೊಲೀಸ್ ಠಾಣೆಯಲ್ಲಿ ದಲಿತ ಮಹಿಳೆಯೊಬ್ಬರು ಅತ್ಯಾಚಾರ ಮತ್ತು ವಂಚನೆಯ ದೂರು ದಾಖಲಿಸಿದ್ದರು. ಬಹುಶಃ ಅಷ್ಟೇ ಆಗಿದ್ದರೆ ಅದು ಅಲ್ಲಿಗೇ ಏನೋ ಶಿಕ್ಷೆಯಾಗಿ ಮುಗಿದುಹೋಗುತ್ತಿತ್ತು. ಆದರೆ, ಅದರೊಂದಿಗೆ ಸ್ಯಾಂಟ್ರೋ ರವಿ ಎಂಬ ಪುರಾತನ ಪಿಂಪ್ ಹಳೆಯ ಮತ್ತು ಹೊಸ ಸಂಬಂಧ ಸಂಪರ್ಕಗಳೆಲ್ಲವೂ ಬಯಲಾಗಿ ಸಾರ್ವಜನಿಕವಾಗಿ ಹಲವರ ಮಾನ ಹರಾಜಾಗಿದೆ.
ಒಂದು ಕಾಲದಲ್ಲಿ ಹೆಣ್ಣು ಮಕ್ಕಳನ್ನು ಸರಬರಾಜು ಮಾಡುವ ಪಿಂಪ್ ಆಗಿದ್ದ ಸ್ಯಾಂಟ್ರೋ ರವಿ ಮುಂದೆ ಅದನ್ನೇ ಬಳಸಿಕೊಂಡು ವೈಟ್ ಕಾಲರ್ ಕ್ರಿಮಿನಲ್ ಆಗಿ ಬೆಳೆದಿದ್ದರ ಕಥೆ ತೆರೆದುಕೊಂಡಿತು. ಆತನ ವರ್ಗಾವಣೆ ದಂಧೆ, ಅಧಿಕಾರಿಗಳ ಜತೆಗಿನ ಸಂಬಂಧ ಮತ್ತು ರಾಜಕಾರಣಿಗಳ ಒಡನಾಟಗಳು ಬಿಚ್ಚಿಕೊಂಡಿದ್ದವು. ಅದರಲ್ಲೂ ಮುಖ್ಯವಾಗಿ ಸಿಎಂ ಪುತ್ರ, ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಪುತ್ರನ ಜತೆಗಿನ ಒಡನಾಟ, ಗೃಹ ಸಚಿವರ ಅಧಿಕೃತ ನಿವಾಸವಾಗಿರುವ ಕುಮಾರಕೃಪಾ ಗೆಸ್ಟ್ ಹೌಸ್‌ನಲ್ಲಿ ಆತ ಹಣ ಎಣೆಸಿದ್ದು ಭಾರಿ ಸುದ್ದಿಯಾಗಿತ್ತು. ಮಾಜಿ ಸಿಎಂ ಕುಮಾರಸ್ವಾಮಿ ಅವರಂತೂ ತನ್ನ ಸರ್ಕಾರವನ್ನು ಉರುಳಿಸುವ ಪ್ರಕ್ರಿಯೆಯಲ್ಲಿ ಮುಂಬಯಿಗೆ ಕಳುಹಿಸಲಾದ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರನ್ನು ರಂಜಿಸಲು ಸ್ಯಾಂಟ್ರೋ ರವಿ ಮುಂಬಯಿಗೆ ೧೨ ಹುಡುಗಿಯರನ್ನು ಕಳುಹಿಸಿದ್ದ ಎಂದು ಆಪಾದಿಸಿದ್ದರು. ಇದು ಭಾರಿ ರಾಜಕೀಯ ಚರ್ಚೆಗೆ ಕಾರಣವಾಗಿದೆ.
ಸ್ಯಾಂಟ್ರೋ ರವಿ ಅದೆಷ್ಟೋ ಅಧಿಕಾರಿಗಳ ಜತೆಗೂ ಆತ್ಮೀಯ ಸಂಬಂಧ ಹೊಂದಿದ್ದು, ಕೆಲವರನ್ನು ಹುಡುಗಿಯರ ಪೂರೈಕೆ ಮೂಲಕ ತನ್ನ ಬಲೆಗೆ ಬೀಳಿಸಿದ್ದ ಎಂಬ ಆಪಾದನೆಗಳಿವೆ. ರಾಜ್ಯ ಹಲವು ಮಂತ್ರಿಗಳು, ರಾಜಕೀಯ ಮುಖಂಡರ ಹಲವಾರು ನಿಗೂಢ ರಹಸ್ಯಗಳು ಸ್ಯಾಂಟ್ರೋ ರವಿ ಬಳಿ ಇದೆ ಎಂದು ಹೇಳಲಾಗುತ್ತಿದೆ. ಅಧಿಕಾರಿಗಳ ಕಥೆಯಂತೂ ಸಾಕಷ್ಟಿದೆ ಎಂಬ ಮಾತು ಕೇಳಿಬರುತ್ತಿದೆ.
ಈಗ ಬಂಧನಕ್ಕೆ ಒಳಗಾಗಿರುವ ಸ್ಯಾಂಟ್ರೋ ರವಿ ಬಾಯಿ ಬಿಟ್ಟರೆ ರಾಜ್ಯದ ಬಹುತೇಕ ರಾಜಕಾರಣಿಗಳ ರಹಸ್ಯಗಳು ಬೀದಿಗೆ ಬರಲಿವೆ ಎಂಬ ಮಾತು ಸಾರ್ವಜನಿಕ ವಲಯದಲ್ಲಿವೆ. ಆದರೆ, ಅದ್ಯಾವುದೂ ಹೊರಬರದಂತೆ ಎಲ್ಲ ವ್ಯವಸ್ಥೆಗಳನ್ನು ಕೂಡಾ ಮಾಡಲಾಗಿದೆ. ಆತನನ್ನು ಬಂಧಿಸಿದ್ದರೂ ಆತನಿಗೂ ಯಾವುದೇ ದೊಡ್ಡ ಶಿಕ್ಷೆಯಾಗದಂತೆ ಯಾರ ರಹಸ್ಯಗಳೂ ಹೊರಬರದಂತೆ ಕಾಯ್ದುಕೊಳ್ಳುವ ವ್ಯವಸ್ಥೆಗಳು ನಡೆದಿವೆ ಎಂಬ ಆಪಾದನೆಗಳಿವೆ.
ಕಾಂಗ್ರೆಸ್‌ನಿಂದ ಗುಜರಾತ್ ಮಾಡೆಲ್ ಆರೋಪ
ಈ ನಡುವೆ, ಕಾಂಗ್ರೆಸ್ ಇದೇ ವಿಷಯವನ್ನು ಎತ್ತಿಕೊಂಡು ಬಿಜೆಪಿಯನ್ನು ಕೆಣಕಿದೆ. ಕ್ರಿಮಿನಲ್‌ಗಳೆಲ್ಲಾ ಗುಜರಾತ್‌ನಲ್ಲೇ ಯಾಕೆ ಸಿಕ್ಕಿಬೀಳುತ್ತಾರೆ, ಇದಾ ಗುಜರಾತ್ ಮಾಡೆಲ್ ಎಂದು ಪ್ರಶ್ನಿಸಿದೆ. ಆತನಿಗೆ ಗುಜರಾತ್‌ನಲ್ಲಿ ರಕ್ಷಣೆ ನೀಡಲಾಗಿತ್ತು. ಈಗ ಬಂಧನಕ್ಕೆ ಒತ್ತಡ ಹೆಚ್ಚಾದಾಗ ಆತನನ್ನು ಬಂಧಿಸಿ ಹಿಡಿದು ತರುವ ನಾಟಕ ಮಾಡಲಾಗಿದೆ ಎಂದು ಅದು ಪರೋಕ್ಷವಾಗಿ ಆರೋಪಿಸಿದೆ.
ಕಾಂಗ್ರೆಸ್ ಕೇಳಿದ ಪ್ರಶ್ನೆಗಳು
೧. ಆರಗ ಜ್ಞಾನೇಂದ್ರ ಅವರೇ ಗುಜರಾತಿನಲ್ಲಿ ಸ್ಯಾಂಟ್ರೋ ರವಿ ನಿಮ್ಮ ಮದ್ಯೆ ನಡೆದ ಡೀಲಿಂಗ್ ಏನು? ವರ್ಗಾವಣೆ ದಂಧೆಯ ಸಾಕ್ಷ್ಯಗಳನ್ನು ಮುಚ್ಚಿಡಲು ಒಪ್ಪಂದ ಮಾಡಿಕೊಂಡಿರಾ? ಆತನ ಬಳಿ ಇದ್ದ ಹಲವು ಸಚಿವರ ಸಿಡಿಗಳನ್ನ ವಶಪಡಿಸಿಕೊಳ್ಳಲು ಹೋಗಿದ್ರಾ? ಅಥವಾ ಹೈಕಮಾಂಡ್‌ಗೆ ಭೇಟಿ ಮಾಡಿಸಿ ಆತನಿಗೆ ಉನ್ನತ ಹುದ್ದೆ ಕೊಡಿಸಲು ಹೋಗಿದ್ರಾ?
೨. ಸ್ಯಾಂಟ್ರೋ ರವಿಯ ಆಪ್ತರಾದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ನಿನ್ನೆ ಗುಜರಾತಿಗೆ ಹೋಗಿರುತ್ತಾರೆ, ಸ್ಯಾಂಟ್ರೋ ರವಿಯೂ ಗುಜರಾತಿಗೆ ಹೋಗಿರುತ್ತಾನೆ. ಬಂಧನವೂ ಗುಜರಾತಿನಲ್ಲಿ. ರವಿ ಗೃಹಸಚಿವರೊಂದಿಗೆ ಅಲ್ಲಿಗೆ ಹೋಗಿದ್ದನೇ? ಅಲ್ಲಿ ಅವರಿಬ್ಬರ ನಡುವೆ ಒಪ್ಪಂದ ನಡೆದಿರಬಹುದೇ? ತಮ್ಮ ವಿರುದ್ದದ ಸಾಕ್ಷ್ಯ ನಾಶಕ್ಕಾಗಿ ಗುಜರಾತಿಗೆ ಹೋಗಿದ್ದರೆ?
೩. ನಿನ್ನೆ ಗೃಹಸಚಿವ ಆರಗ ಜ್ಞಾನೇಂದ್ರ ಅವರು ಗುಜರಾತಿನ ಅಹಮದಾಬಾದ್‌ಗೆ ತೆರಳಿದ್ದರು. ಇಂದು ಅದೇ ಗುಜರಾತಿನ ಅಹಮದಾಬಾದ್‌ನಲ್ಲಿ ಸ್ಯಾಂಟ್ರೋ ರವಿಯ ಬಂಧನ. ಇದು ಖಂಡಿತಾ ಕಾಕತಾಳೀಯವಲ್ಲ.
೪. ಸ್ಯಾಂಟ್ರೋ ರವಿಯ ವಿರುದ್ಧ ವರ್ಗಾವಣೆ ದಂಧೆಯ ವಿಚಾರವಾಗಿ ಸರ್ಕಾರ ಇನ್ನೂ ಪ್ರಕರಣ ದಾಖಲಿಸಲಿಲ್ಲ. ಆತನ ಬಂಧನವಾಗಿದ್ದು ಪತ್ನಿಯ ದೂರಿನ ಆಧಾರದಲ್ಲಿ ಹೊರತು ಸರ್ಕಾರದ ದೂರಿನಲ್ಲಿ ಅಲ್ಲ. ಆತನ ಎಲ್ಲಾ ವ್ಯವಹಾರಗಳನ್ನು, ಸರ್ಕಾರ, ಸಚಿವರ ಸಹಬಾಗಿತ್ವವನ್ನು ಲೋಕಾಯುಕ್ತ ಅಥವಾ ನ್ಯಾಯಾಂಗ ತನಿಖೆಗೆ ವಹಿಸಿದಲ್ಲಿ ಮಾತ್ರ ಸತ್ಯ ಹೊರಬರಲು ಸಾಧ್ಯ.
ಇದನ್ನೂ ಓದಿ | Santro Ravi Case | ಸ್ಯಾಂಟ್ರೋ ರವಿ ಸಿಕ್ಕಿಬಿದ್ದಿದ್ದು ಗುಜರಾತ್‌ನಲ್ಲಿ: 1500 ಕಿ.ಮೀ ಚೇಸ್ ಮಾಡಿ ಹಿಡಿದ ಪೊಲೀಸರು