ಬೆಂಗಳೂರು: ಮೊದಲೆಲ್ಲ ಪೋಸ್ಟ್ ಆಫೀಸ್ ಎಂದರೆ ಪತ್ರ ವ್ಯವಹಾರ ಮಾತ್ರ ಇತ್ತು. ಆದರೀಗ, ಅಂಚೆ ಕಚೇರಿಗಳು ಬ್ಯಾಂಕ್ಗಳಾಗಿಯೂ ಮಾರ್ಪಾಡಾಗಿರುವುದರಿಂದ ಪೋಸ್ಟ್ ಆಫೀಸ್ಗಳಿಗೆ ಹೆಚ್ಚಿನ ಜನ ತೆರಳುವ, ವಹಿವಾಟು ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಅಲ್ಲದೆ, ಪೋಸ್ಟ್ ಆಫೀಸ್ ಬ್ಯಾಂಕ್ಗಳಲ್ಲಿ (Post Office Schemes) ಉಳಿತಾಯ ಯೋಜನೆಗಳಿಗೆ ಆಕರ್ಷಕ ಬಡ್ಡಿಯೂ (Interest) ಸಿಗುವುದರಿಂದ ಹೆಚ್ಚಿನ ಜನ ಪೋಸ್ಟ್ ಆಫೀಸ್ ಉಳಿತಾಯ ಯೋಜನೆಗಳ (Saving Schemes) ಮೂಲಕ ಲಾಭ ಗಳಿಸುತ್ತಿದ್ದಾರೆ. ಹಾಗಾದರೆ, ಪೋಸ್ಟ್ ಆಫೀಸ್ನ ಪ್ರಮುಖ ಉಳಿತಾಯ ಯೋಜನೆಗಳು ಯಾವವು? ಯಾವ ಯೋಜನೆ ಉತ್ತಮ ಎಂಬುದರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ಉಳಿತಾಯ ಖಾತೆ ತೆರೆಯುವುದು ಸುಲಭ
ಪೋಸ್ಟ್ ಆಫೀಸ್ ಉಳಿತಾಯ ಖಾತೆಯು ಬೇರೆ ಯಾವ ಬ್ಯಾಂಕ್ಗಳ ಉಳಿತಾಯ ಖಾತೆಗಿಂತ ಕಡಿಮೆ ಇಲ್ಲ. ಅಗತ್ಯ ದಾಖಲೆ ನೀಡಿ, ಕೇವಲ 500 ರೂ. ಡೆಪಾಸಿಟ್ ಮಾಡಿದರೆ ಉಳಿತಾಯ ಖಾತೆ ತೆರೆಯಲಾಗುತ್ತದೆ. ಇನ್ನು ಚೆಕ್ಬುಕ್, ಎಟಿಎಂ ಕಾರ್ಡ್, ಇ-ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಸೇವೆಗಳೂ ಇವೆ. ವರ್ಷಕ್ಕೆ ಶೇ.4ರಷ್ಟು ಬಡ್ಡಿಯೂ ಸಿಗುತ್ತದೆ.
ಆರ್ಡಿ ಖಾತೆಗೆ ಉತ್ತಮ ಬಡ್ಡಿ
ಪೋಸ್ಟ್ ಆಫೀಸ್ನಲ್ಲಿ ಆರ್ಡಿ (Recurring Deposit) ಖಾತೆ ತೆಗೆಯುವುದು ಉಳಿತಾಯ ಖಾತೆ ತೆರೆದಷ್ಟೇ ಸುಲಭ. ಪೋಸ್ಟ್ ಆಫೀಸ್ನಲ್ಲಿ ಉಳಿತಾಯ ಖಾತೆ ಹೊಂದಿದವರು ಆರ್ಡಿ ಮಾಡಬಹುದಾಗಿದ್ದು, ಹೆಚ್ಚಿನ ಜನ ಆಯ್ಕೆ ಮಾಡಿಕೊಳ್ಳುವ ಯೋಜನೆ ಇದಾಗಿದೆ. ಐದು ವರ್ಷದ ಅವಧಿಗೆ ಮಾಸಿಕ ಇಂತಿಷ್ಟು ಹಣ ಕಟ್ಟುತ್ತ ಹೋದರೆ ಐದು ವರ್ಷಕ್ಕೆ ಶೇ.6.2ರಷ್ಟು ಬಡ್ಡಿಯ ಲಾಭ ನಿಮ್ಮದಾಗಲಿದೆ.
ಟೈಮ್ ಡೆಪಾಸಿಟ್ ಅಕೌಂಟ್
ಪೋಸ್ಟ್ ಆಫೀಸ್ಗಳಲ್ಲಿ ಟೈಮ್ ಡೆಪಾಸಿಟ್ ಅಕೌಂಟ್ ತೆರೆದರೂ ಉತ್ತಮ ಲಾಭ ಪಡೆಯಬಹುದಾಗಿದೆ. 2023ರ ಜುಲೈ 1ರಿಂದ ಸೆಪ್ಟೆಂಬರ್ 30ರ ಅವಧಿಗೆ ಇಂಡಿಯಾ ಪೋಸ್ಟ್ ಇಷ್ಟು ಬಡ್ಡಿ ನಿಗದಿ ಮಾಡಿದೆ. ಒಂದು, ಎರಡು, ಮೂರು ಹಾಗೂ ಐದು ವರ್ಷದವರೆಗೆ ಠೇವಣಿ ಮಾಡುವ ಹಣಕ್ಕೆ ಇಷ್ಟು ಬಡ್ಡಿ ಸಿಗಲಿದೆ.
- ಒಂದು ವರ್ಷ- 6.9%
- ಎರಡು ವರ್ಷ: 7%
- ಮೂರು ವರ್ಷ: 7%
- ಐದು ವರ್ಷ: 7.5%
ಇದನ್ನೂ ಓದಿ: Mutual fund : ಮ್ಯೂಚುವಲ್ ಫಂಡ್ನಲ್ಲಿ 6 ವರ್ಷಕ್ಕೆ ಹೂಡಿಕೆ ಡಬಲ್, ವೀಕ್ಷಿಸಿ ವಿಸ್ತಾರ ಮನಿ ಪ್ಲಸ್
ರಾಷ್ಟ್ರೀಯ ಉಳಿತಾಯ ಖಾತೆ
ರಾಷ್ಟ್ರೀಯ ಉಳಿತಾಯ ಖಾತೆದಾರರಿಗೆ ವಾರ್ಷಿಕ ಶೇ.7.7ರಷ್ಟು ಬಡ್ಡಿ ಸಿಗಲಿದೆ. ಈ ಯೋಜನೆ ಅಡಿಯಲ್ಲಿ ಕನಿಷ್ಠ 100 ರೂಪಾಯಿಯಿಂದ 1.5 ಲಕ್ಷ ರೂ.ವರೆಗೆ ಠೇವಣಿ ಮಾಡಬಹುದಾಗಿದೆ. ಠೇವಣಿ ಮಾಡಿದ ಹಣ ಜಾಸ್ತಿಯಾದಷ್ಟು ಹೆಚ್ಚಿನ ಲಾಭ ಸಿಗುವುದು ಈ ಯೋಜನೆಯ ವಿಶೇಷ.
ಹಿರಿಯ ನಾಗರಿಕರ ಉಳಿತಾಯ ಯೋಜನೆ
ಹಿರಿಯ ನಾಗರಿಕರು ಕೂಡ ತಮ್ಮ ಪಿಂಚಣಿ ಹಣದಲ್ಲಿ ಒಂದಷ್ಟು ಮೊತ್ತವನ್ನು ಹಿರಿಯ ನಾಗರಿಕರ ಉಳಿತಾಯ ಯೋಜನೆ ಮೂಲಕ ಉಳಿತಾಯ ಮಾಡಬಹುದಾಗಿದೆ. ಈ ಯೋಜನೆ ಅನ್ವಯ ವಾರ್ಷಿಕ ಶೇ.8.2ರಷ್ಟು ಬಡ್ಡಿ ಸಿಗಲಿದೆ.