Site icon Vistara News

Karnataka Election: ಮತದಾನೋತ್ತರ ಹಿಂಸಾಚಾರ; ಮಂಗಳೂರಿನಲ್ಲಿ ಮಿಥುನ್ ರೈ ಕಾರಿನ ಮೇಲೆ ಕಲ್ಲು ತೂರಾಟ

post poll violence, Stones hurled at Mithun Rai's car in Mangaluru

ಮಂಗಳೂರು: ವಿಧಾನಸಭಾ ಚುನಾವಣೆಯ (Karnataka Election) ಮತದಾನ ಮುಗಿದ್ದ ಬೆನ್ನಲ್ಲೇ ರಾಜ್ಯದ ವಿವಿಧೆಡೆ ವಿವಿಧ ರಾಜಕೀಯ ಪಕ್ಷಗಳ ಕಾರ್ಯಕರ್ತರ ನಡುವೆ ಘರ್ಷಣೆ, ಕಲ್ಲು ತೂರಾಟ ನಡೆದಿರುವುದು ಕಂಡುಬಂದಿದೆ. ಈ ನಡುವೆ ನಗರ ಹೊರವಲಯದ ಮೂಡುಶೆಡ್ಡೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಬುಧವಾರ ರಾತ್ರಿ ಘರ್ಷಣೆ ನಡೆದಿದೆ. ಈ ವೇಳೆ ಮೂಲ್ಕಿ ಮೂಡಬಿದರೆ ಕಾಂಗ್ರೆಸ್ ಆಭ್ಯರ್ಥಿ ಮಿಥುನ್ ರೈ ಕಾರಿನ ಮೇಲೆ ಕಲ್ಲು ತೂರಾಟ ನಡೆಸಲಾಗಿದ್ದು, ಇಬ್ಬರು ಪೊಲೀಸ್‌ ಸಿಬ್ಬಂದಿಗೆ ಗಾಯಗಳಾಗಿವೆ.

ಬೂತ್‌ಗೆ ಅಭ್ಯರ್ಥಿ ಮಿಥುನ್ ರೈ ಬಂದಾಗ ಕಾಂಗ್ರೆಸ್ ಕಾರ್ಯಕರ್ತರು ಜೈಕಾರ ಕೂಗಿದ್ದಾರೆ. ಈ ವೇಳೆ ಎರಡು ಪಕ್ಷದ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ ನಡೆದು ಗಲಾಟೆ ಶುರುವಾಗಿದೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದರಿಂದ ಸ್ಥಳಕ್ಕೆ‌ ಪೊಲೀಸರು ಧಾವಿಸಿ ಪರಿಸ್ಥಿತಿ ನಿಯಂತ್ರಿಸಲು ಹರಸಾಹಸ ಪಟ್ಟರು. ಈ ವೇಳೆ ಡಿಸಿಪಿ ಕಾರಿನ ಮೇಲೆ ಕೂಡ ಕಲ್ಲು ತೂರಾಟ ನಡೆಸಲಾಗಿದೆ. ಭದ್ರತೆಗಾಗಿ ಸ್ಥಳದಲ್ಲಿ ಕೆಎಸ್ಆರ್‌ಪಿ ತುಕಡಿ ನಿಯೋಜನೆ ಮಾಡಲಾಗಿದೆ.

ಇದನ್ನೂ ಓದಿ | Karnataka Election Exit Poll: ಅತಂತ್ರ ವಿಧಾನಸಭೆ ನಿರೀಕ್ಷೆ, ಕಾಂಗ್ರೆಸ್‌ಗೆ ಹೆಚ್ಚು ಸ್ಥಾನ, ಜೆಡಿಎಸ್‌‌‌ಗೆ ಲಕ್, ಬಿಜೆಪಿಗೆ ಹಿನ್ನಡೆ

ಮಸ್ಕಿ ಶಾಸಕ ಬಸನಗೌಡ ತುರ್ವಿಹಾಳ ಸಹೋದರನ ಮೇಲೆ ಹಲ್ಲೆ

ರಾಯಚೂರು: ಜಿಲ್ಲೆಯ ಮಸ್ಕಿ ಪಟ್ಟಣದ ಗಚ್ಚಿನಮಠ ಮತಗಟ್ಟೆ ‌ಬಳಿ ಮತದಾನ ಮುಕ್ತಾಯವಾದ ಬಳಿಕ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ ನಡೆದಿದ್ದು, ಈ ವೇಳೆ ನಡದ ಹಲ್ಲೆಯಲ್ಲಿ ಮಸ್ಕಿ ಶಾಸಕ ಬಸನಗೌಡ ತುರ್ವಿಹಾಳ ಸಹೋದರ ಸಿದ್ದನಗೌಡ ಸೇರಿ ಹಲವರು ಗಂಭಿರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಜೆಡಿಎಸ್ ಕಾರ್ಯಕರ್ತರ ಮೇಲೆ ಹಲ್ಲೆ

ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ಕ್ಷೇತ್ರದ ಹೊಸಹುಡ್ಯ ಗ್ರಾಮದಲ್ಲಿ ಚುನಾವಣೆ ಅಕ್ರಮ ವಿರೋಧಿಸಿದ ಜೆಡಿಎಸ್ ದಲಿತ ಕಾರ್ಯಕರ್ತರ ಮೇಲೆ ಕಾಂಗ್ರೆಸ್‌ ಬೆಂಬಲಿಗರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಮಾಜಿ ಸ್ಪೀಕರ್, ಕಾಂಗ್ರೆಸ್‌ ಅಭ್ಯರ್ಥಿ ಕೆ.ಆರ್‌. ರಮೇಶ್ ಕುಮಾರ್ ಅವರ ಸ್ವಗ್ರಾಮದ ಪಕ್ಕದ ಊರಿನಲ್ಲಿ ಘಟನೆ ನಡೆದಿದೆ. ದಲಿತರಿಗೆ ಮತ ಹಾಕುವ ಹಕ್ಕಿಲ್ಲ, ಮತದಾನದ ಚೀಟಿಗಳನ್ನು ಕೊಟ್ಟು ಹೋಗಬೇಕು ಎಂದು ಹೇಳಿ ಕಾಂಗ್ರೆಸ್ ಬೆಂಬಲಿಗರು ಹೇಳಿದ್ದಾರೆ ಎನ್ನಲಾಗಿದೆ. ಇದನ್ನು ಪ್ರಶ್ನಿಸಿದ್ದಕ್ಕೆ ಜೆಡಿಎಸ್‌ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಗಾಯಾಳುಗಳು ಆಪಾದಿಸಿದ್ದಾರೆ.

ಇದನ್ನೂ ಓದಿ | Karnataka Election: ಪುತ್ತೂರಿನಲ್ಲಿ ಆರ್‌ಎಸ್ಎಸ್ ಮುಖಂಡರ ವಿರುದ್ಧ ತಿರುಗಿ ಬಿದ್ದ ಹಿಂದು ಕಾರ್ಯಕರ್ತರು

ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಕಲ್ಲು ತೂರಾಟ

ವಿಜಯಪುರ: ನಗರದ ಆದರ್ಶ ನಗರದ ಮುಖ್ಯ ರಸ್ತೆಯಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಮುಖಾಮುಖಿಯಾದಾಗ ಕಲ್ಲು ತೂರಾಟ ನಡೆದಿರುವ ಘಟನೆ ನಡೆದಿದೆ. ಮತದಾನ ಪೂರ್ಣಗೊಳಿಸಿ ವಾಪಸ್ ತೆರಳುತ್ತಿದ್ದ ವೇಳೆ ಬಿಜೆಪಿ ಕಾರ್ಯಕರ್ತರು ಕಲ್ಲು ತೂರಾಟ ಮಾಡಿದ್ದಾರೆ ಎಂದು ಕೈ ಕಾರ್ಯಕರ್ತರು ಆರೋಪಿಸಿದ್ದಾರೆ.

Exit mobile version