ಬೆಂಗಳೂರು: ರಾಜ್ಯಾದ್ಯಂತ ವಿವಿಧ ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ಪೌರಕಾರ್ಮಿಕರು ಬೀದಿಗಿಳಿದು ನಡೆಸುತ್ತಿರುವ ಪ್ರತಿಭಟನೆ ಶನಿವಾರವೂ ಮುಂದುವರಿದಿದೆ. ಸರ್ಕಾರ ತಮ್ಮ ಬೇಡಿಕೆಗಳನ್ನು ಈಡೇರಿಸುವುದಾಗಿ ತಿಳಿಸಿದ್ದರೂ ಲಿಖಿತ ಭರವಸೆ ನೀಡುವವರೆಗೆ ಪೊರಕೆ ಹಿಡಿಯುವುದಿಲ್ಲ, ಸ್ವಚ್ಛತೆ ಮಾಡುವುದಿಲ್ಲ ಎಂದು ಕೆಲಸಕ್ಕೆ ಗೈರು ಹಾಜರಾಗಿ ಧರಣಿ ಮುಂದುವರಿಸಿದ್ದಾರೆ.
ಇದನ್ನೂ ಓದಿ | ಕೆಲಸ ಕಾಯಂಗೆ ಆಗ್ರಹಿಸಿ ಬೀದಿಗಿಳಿದ ಪೌರಕಾರ್ಮಿಕರು: CM ಬಸವರಾಜ ಬೊಮ್ಮಾಯಿ ಸಭೆ ಸಂಜೆ
ಶುಕ್ರವಾರ(ಜುಲೈ 1) ಸಿಎಂ ಬಸವರಾಜ ಬೊಮ್ಮಾಯಿ ಜತೆಗೆ ಅಧಿಕಾರಿಗಳ ಸಭೆ ನಡೆದಿದ್ದು, ಹಂತ ಹಂತವಾಗಿ ಪೌರಕಾರ್ಮಿಕರನ್ನು ಕಾಯಂ ಮಾಡುವುದಾಗಿ ಹಾಗೂ ಇತರೆ ಬೇಡಿಕೆಯನ್ನು ಈಡೇರಿಸುವುದಾಗಿ ಭರವಸೆ ನೀಡಿದ್ದರು. ಇದೊಂದು ಸಂತಸದ ಸುದ್ದಿಯಾಗಿದ್ದು, ಕಾರ್ಮಿಕರ ಹಿತವನ್ನು ಸರ್ಕಾರ ಕಾಯಲಿದೆ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ ಸಹ ಹೇಳಿದ್ದರು. ಆದರೆ ಬೇಡಿಕೆ ಈಡೇರಿಸುವ ಭರವಸೆಯನ್ನು ಲಿಖಿತ ರೂಪದಲ್ಲಿ ಕೊಡಿ ಎಂದು ಪೌರಕಾರ್ಮಿಕರು ಒತ್ತಾಯಿಸಿ ಪ್ರತಿಭಟನೆ ಮುಂದುವರೆಸಿದ್ದಾರೆ. ಸದ್ಯ ಅಧಿಕಾರಿಗಳಿಗೆ ಸಿಎಂ ಸೂಚನೆ ಕೊಟ್ಟಿದ್ದು, ಪತ್ರ ರವಾನೆ ಆಗುವ ಸಾಧ್ಯತೆ ಇದೆ.
ಕೆಲಸಕ್ಕೆ ಗೈರು
ನಗರ ಸ್ವಚ್ಛಗೊಳಿಸುವ ಪೌರಕಾರ್ಮಿಕರು ಪ್ರತಿಭಟನೆಯಲ್ಲಿ ನಿರತರಾಗಿದ್ದು, ಕೆಲಸಕ್ಕೆ ಗೈರು ಹಾಜರಾಗಿದ್ದರಿಂದ ಬೆಂಗಳೂರಿನ ರಸ್ತೆ ಬದಿಯಲ್ಲಿ ಎಲ್ಲೆಂದರಲ್ಲಿ ಕಸದ ರಾಶಿ ಬಿದ್ದಿರುವುದು ಕಂಡು ಬಂದಿದೆ. ಮನೆ ಮನೆ ಕಸ ಸಂಗ್ರಹವೂ ಆಗದೇ ಇರುವ ಕಾರಣ ಸಾರ್ವಜನಿಕರು ರಸ್ತೆಯ ಮೂಲೆಯೊಂದರಲ್ಲಿ ಕಸ ಎಸೆದು ಹೋಗುತ್ತಿದ್ದ ದೃಶ್ಯ ಅನೇಕ ಕಡೆಗಳಲ್ಲಿ ಕಂಡು ಬಂದಿದೆ. ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡುವುದಾಗಿ ಮಾಜಿ ಸಚಿವ, ಶಾಸಕ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಮಾನವೀಯತೆಯಿಂದ ಸ್ಪಂದಿಸಲಾಗುವುದು: ಸಿಎಂ ಬೊಮ್ಮಾಯಿ
ಪೌರಕಾರ್ಮಿಕರ ಸಮಸ್ಯೆಗಳ ಬಗ್ಗೆ ಸಹಾನುಭೂತಿ ಹಾಗೂ ಮಾನವೀಯತೆಯಿಂದ ಕ್ರಮ ತೆಗೆದುಕೊಳ್ಳಲು ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ, ನೇರ ಪಾವತಿ ವ್ಯವಸ್ಥೆಯಡಿ ಕಾರ್ಯ ನಿರ್ವಹಿಸುತ್ತಿರುವ ಪೌರಕಾರ್ಮಿಕರನ್ನು ಕಾಯಂಗೊಳಿಸಲು ತಾತ್ವಿಕವಾಗಿ ಸರ್ಕಾರ ಒಪ್ಪಿಕೊಂಡಿದೆ. ಕಾನೂನಾತ್ಮಕವಾಗಿ ಹಾಗೂ ತಾಂತ್ರಿಕವಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು. ಪೌರಕಾರ್ಮಿಕರ ಹಾಗೂ ಅಧಿಕಾರಿಗಳ ಜಂಟಿ ಸಮಿತಿಯನ್ನು ರಚಿಸಲಾಗಿದೆ. ಸಮಿತಿ ಶಿಫಾರಸು ಮಾಡಿದ ಕೂಡಲೆ ಪ್ರಕ್ರಿಯೆ ಪ್ರಾರಂಭಿಸಲಾಗುವುದು. ಪೌರಕಾರ್ಮಿಕರ ಆರೋಗ್ಯ, ಶಿಕ್ಷಣ ಸೇರಿದಂತೆ ಎಲ್ಲ ದೃಷ್ಟಿಯಿಂದ ಕಾಯಂ ಸುರಕ್ಷತೆ ನೀಡಲು ಒಪ್ಪಲಾಗಿದೆ. ಮುಂದಿನ ವಿಧಾನಸಭಾ ಅಧಿವೇಶನದಲ್ಲಿ ಈ ಕುರಿತು ಚರ್ಚೆ ಮಾಡಲಾಗುವುದು. ಸೌಹಾರ್ದತೆಯಿಂದ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದರು.
ವಿಷ ಕುಡಿಯಲು ಮುಂದಾದ ಕಾರ್ಮಿಕರು
ಹಾಸನ ಜಿಲ್ಲಾಧಿಕಾರಿ ಕಚೇರಿ ಎದುರು ವಿಷದ ಬಾಟಲಿ ಇಟ್ಟುಕೊಂಡು ಪೌರಕಾರ್ಮಿಕರು ಪ್ರತಿಭಟನೆ ನಡೆಸಿದರು. ಈ ವೇಳೆ ಏಕಾಏಕಿ ವಿಷದ ಬಾಟಲಿ ಕೈಗೆತ್ತಿಕೊಂಡು ಕುಡಿಯಲು ಕೆಲವರು ಮುಂದಾದರು. ಈ ವೇಳೆ ಪೊಲೀಸರು ಮಧ್ಯಪ್ರವೇಶಿಸಿ ಕಾರ್ಮಿಕರಿಂದ ವಿಷದ ಬಾಟಲ್ ಕಿತ್ತುಕೊಂಡರು. ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ಸ್ಥಳದಿಂದ ಕರೆದೊಯ್ದರು.
ಬೇಡಿಕೆಗಳೇನು?
-ನೇರಪಾವತಿ ಪೌರಕಾರ್ಮಿಕರು, ಹೊರಗುತ್ತಿಗೆ, ಕ್ಷೇಮಾಭಿವೃದ್ಧಿ, ಮನೆ-ಮನೆ ಕಸ ಸಂಗ್ರಹಿಸುವ ಪೌರಕಾರ್ಮಿಕರು, ಒಳಚರಂಡಿ ಸ್ವಚ್ಛತಾ ಕಾರ್ಮಿಕರು, ಲೋಡರ್ಸ್, ಕಸದ ವಾಹನ ಚಾಲಕರು, ಸಹಾಯಕರು ಹಾಗೂ ಮೇಲ್ವಿಚಾರಕರು ಎಂಬ ವಿಗಂಡಣೆಯನ್ನು ಕೈಬಿಟ್ಟು ಎಲ್ಲ ಸ್ವಚ್ಛತಾ ಕಾರ್ಮಿಕರನ್ನೂ ಏಕ ಕಾಲಕ್ಕೆ ಕಾಯಂ ಮಾಡಬೇಕು.
-ಮಹಿಳಾ ಪೌರಕಾರ್ಮಿಕರಿಗೆ ಶೌಚಾಲಯ, ಕುಡಿಯುವ ನೀರು, ಹೆರಿಗೆ ಭತ್ಯೆ, ಹೆರಿಗೆ ರಜೆ, ಬಾಲವಾಡಿ, ವಿಶ್ರಾಂತಿ ಗೃಹದಂತಹ ಮೂಲ ಸೌಲಭ್ಯಗಳನ್ನು ರಾಜ್ಯದ ಎಲ್ಲ ಕಡೆ ನೀಡಬೇಕು.
-ಗೃಹ ಭಾಗ್ಯ ಯೋಜನೆಯನ್ನು ಕೇವಲ ಕಾಯಂ ಪೌರಕಾರ್ಮಿಕರಿಗೆ ಸೀಮಿತ ಮಾಡಿ ಶೇ.85 ಸ್ವಚ್ಛತಾ ಕಾರ್ಮಿಕರಿಗೆ ತಾರತಮ್ಯ ಮಾಡಲಾಗಿದ್ದು, ಕೂಡಲೇ ಎಲ್ಲರಿಗೂ ಯೋಜನೆ ಸದ್ಬಳಕೆ ಆಗುವಂತೆ ಮಾಡಬೇಕು.
– ಕಾರ್ಮಿಕರ ಮಕ್ಕಳು ಖಾಸಗಿ ಶಾಲೆ-ಕಾಲೇಜುಗಳಲ್ಲಿಯೂ ವ್ಯಾಸಂಗ ಮಾಡಲು ಅನುಕೂಲವಾಗುವಂತೆ ಅದಕ್ಕೆ ಅಗತ್ಯವಿರುವ ಹಣಕಾಸಿನ ನೆರವು ನೀಡಬೇಕು.
-ಆರೋಗ್ಯ ಭದ್ರತೆಗಾಗಿ ಆರೋಗ್ಯ ಕಾರ್ಡ್ ನೀಡಬೇಕು.
ಇದನ್ನೂ ಓದಿ | ಪೌರ ಕಾರ್ಮಿಕರ ಬೇಡಿಕೆ ಈಡೇರಿಸಲು ಸರ್ಕಾರ ಒಪ್ಪಿಗೆ; ಲಿಖಿತ ಭರವಸೆಗೆ ಸಂಘಟನೆಗಳ ಪಟ್ಟು