ಬೆಂಗಳೂರು: ಉಚಿತ ಯೋಜನೆ ಎಂಬುದು ಎರೆಹುಳು ಇದ್ದಂತೆ. ನಾವು ಮೀನು ಹಿಡಿಯಬೇಕಾದರೆ ಎರೆಹುಳುವನ್ನು ಗಾಳಕ್ಕೆ ಸಿಕ್ಕಿಸುತ್ತಿದ್ದೆವು. ಆ ಎರೆ ಹುಳುವಿನ ಆಸೆಗೆ ಮೀನು ಗಾಳಕ್ಕೆ ಬೀಳುತ್ತಿತ್ತು. ಈಗ ಇಲ್ಲಾಗಿರುವುದೂ ಅದೇ. ಗ್ಯಾರಂಟಿ ಎನ್ನುವಂತಹ ಎರೆಹುಳುವನ್ನು ಗಾಳಕ್ಕೆ ಸಿಕ್ಕಿಸಿ ಮತ ಎನ್ನುವಂತಹ ಮೀನನ್ನು ಕಾಂಗ್ರೆಸ್‌ನವರು ಹಿಡಿದರು. ಆದರೆ, ಇದರಲ್ಲಿ ತನ್ನ ಬದುಕೇ ಹೋಗುತ್ತದೆ ಎಂಬುದು ಆ ಮೀನಿಗೆ ಗೊತ್ತಿಲ್ಲದಂತೆ, ಬದುಕೇ ನಾಶವಾಗುತ್ತದೆ ಎಂಬುದು ಮತದಾರನಿಗೂ ಗೊತ್ತಿಲ್ಲ. ಒಮ್ಮೆ ಅರಿವಿಗೆ ಬಂದಾಗ ಉಳಿದ ಮೀನುಗಳು ಎಚ್ಚರಿಸುತ್ತವೆ ಎಂದು ಉಚಿತ ಗ್ಯಾರಂಟಿ ಯೋಜನೆಗಳ ಬಗ್ಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ಪವರ್ ಪಾಯಿಂಟ್ ವಿಥ್ ಎಚ್‌ಪಿಕೆ (Power Point with HPK) ಸಂದರ್ಶನದಲ್ಲಿ ಮಾರ್ಮಿಕವಾಗಿ ರಾಜ್ಯ ಸರ್ಕಾರವನ್ನು ತಿವಿದಿದ್ದಾರೆ.
ವಿಸ್ತಾರ ನ್ಯೂಸ್ ಪ್ರಧಾನ ಸಂಪಾದಕ ಹರಿಪ್ರಕಾಶ್ ಕೋಣೆಮನೆ ಅವರು ನಡೆಸಿಕೊಡುವ “ಪವರ್ ಪಾಯಿಂಟ್ ವಿತ್ ಎಚ್‌ಪಿಕೆ” ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಸಿ.ಟಿ. ರವಿ ಅವರು, ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳು, 2024ರಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವೇ ಆಯ್ಕೆ ಆಗುತ್ತದೆ? ಬಿಜೆಪಿಯಲ್ಲಿ ಸರಿ-ತಪ್ಪುಗಳು, ಗೋಹತ್ಯೆ ನಿಷೇಧ ಕಾಯ್ದೆ, ಹಿಜಾಬ್‌ಗೆ ವಿರೋಧ, ಪಠ್ಯ ಪುಸ್ತಕ ಪರಿಷ್ಕರಣೆ, ಬಿಜೆಪಿ ಸೋಲಿನ ಪ್ರಮುಖ 3 ಕಾರಣಗಳು ಸೇರಿದಂತೆ ಹತ್ತಾರು ವಿಷಯಗಳ ಬಗ್ಗೆ ಮುಕ್ತವಾಗಿ ಚರ್ಚೆ ನಡೆಸಿದ್ದಾರೆ.
ಕಾಂಗ್ರೆಸ್‌ಗೆ “ರೋಗ” ಬಂದಿದೆ
ಆಗಿದ್ದನ್ನೆಲ್ಲ ತಾನು ಮಾಡಿದೆ ಎಂದು ಹೇಳಿಕೊಳ್ಳುವುದು, ಆಗದಿರುವುದನ್ನು ಪ್ರಧಾನಿ ನರೇಂದ್ರ ಮೋದಿ ಮಾಡಿರುವುದು ಎಂದು ಹೇಳುವ “ರೋಗ” ಕಾಂಗ್ರೆಸ್‌ನವರಿಗೆ ಇದೆ. ಈಗ 5 ಕೆಜಿ ಅಕ್ಕಿ ಕೊಡುತ್ತಿರುವುದು ಮೋದಿ, ಕೋವಿಡ್ ಸಂದರ್ಭದಲ್ಲಿ 10 ಕೆಜಿ ಅಕ್ಕಿ ಕೊಟ್ಟಿದ್ದು ಮೋದಿ, ಜನಧನ ಖಾತೆಗೆ, ಬೀದಿ ಬದಿ ಕಾರ್ಮಿಕರಿಗೆ ಹಣ ಹಾಕಿದ್ದು ಸಹ ಮೋದಿಯವರು. ಆಗ ಇವರು ಯಾವ ಬಿಲದಲ್ಲಿದ್ದರು? ಅವರಿಗೆ ಅಪ ಪ್ರಚಾರ ಮಾಡುವುದೇ ಒಂದು ರೋಗವಾಗಿ ಬಂದು ಬಿಟ್ಟಿದೆ ಎಂದು ಸಿ.ಟಿ. ರವಿ ಹೇಳಿದರು.
ಸಿಟಿ ರವಿ ಉತ್ತರ ಹೀಗಿದೆ…
2014ರಿಂದಲೂ ನರೇಂದ್ರ ಮೋದಿ ಅವರು ಅಕ್ಕಿ ನೀಡುತ್ತಾ ಬಂದಿದ್ದಾರೆ. ಹಾಗಾದರೆ ಕಾಂಗ್ರೆಸ್‌ನವರು ಯಾವತ್ತಾದರೂ ಮೋದಿ ಅವರ ಕೃಪೆಯಿಂದ ಅನ್ನಭಾಗ್ಯ ಅಕ್ಕಿ ಕೊಟ್ಟಿದ್ದೇವೆ ಎಂದು ಹೇಳಿದ್ದಾರಾ? ಈಗಲೂ ಕೇಂದ್ರ ಸರ್ಕಾರ ಕೊಡುತ್ತಿರುವ 5 ಕೆಜಿ ಅಕ್ಕಿ ಬಗ್ಗೆ ಮಾತನಾಡುತ್ತಾರಾ?
ಗ್ಯಾರಂಟಿಯ ವಾಗ್ದಾನ ಮಾಡಿದ್ದು ಕಾಂಗ್ರೆಸ್ ಪಕ್ಷ. ಅದನ್ನು ಅನುಷ್ಠಾನಗೊಳಿಸುವ ಜವಾಬ್ದಾರಿ ನರೇಂದ್ರ ಮೋದಿ ಅವರದ್ದಲ್ಲ. ಕಾಂಗ್ರೆಸ್ ಪಕ್ಷದ್ದಾಗಿದೆ. ತಾವು ಏನು ಬೇಕಾದರೂ ವಾಗ್ದಾನ ಮಾಡುತ್ತೇವೆ. ಅದನ್ನು ಮೋದಿ ಈಡೇರಿಸಬೇಕೆನ್ನುವುದು ಅಪಾಯಕಾರಿ ಬೆಳವಣಿಗೆಯಾಗಿದೆ.
ಕೇಂದ್ರದಲ್ಲಿರುವ ನರೇಂದ್ರ ಮೋದಿಯವರು ಇವರಂತೆ ಯೋಚನೆ ಮಾಡಿದ್ದರೆ ಭಾರತವು ಪ್ರಪಂಚದ 5ನೇ ಅತಿದೊಡ್ಡ ಆರ್ಥಿಕ ಸದೃಢತೆಯುಳ್ಳ ದೇಶವಾಗುತ್ತಿರಲಿಲ್ಲ. ನಾವೂ ಸಹ ಪಾಕಿಸ್ತಾನದ ಭಿಕ್ಷೆ ಬೇಡಬೇಕಿತ್ತು. ಇಲ್ಲವೇ ಶ್ರೀಲಂಕಾದಂತೆ ಅರಾಜಕತೆ ಸೃಷ್ಟಿಯಾಗುತ್ತಿತ್ತು.
ಸಾಲ ಕೊಟ್ಟು ಎಷ್ಟು ದಿನ ತೃಪ್ತಿಪಡಿಸುತ್ತೀರಿ?
ಕಡು ಬಡವನಿಗೆ ನೆರವು ನೀಡುವುದು ತಪ್ಪಲ್ಲ, ಅದು ಧರ್ಮ. ಆದರೆ, ದುಡಿಯುವ ಕೈಗೆ ಕೆಲಸ ಕೊಡಬೇಕು. ಮೂಲ ಸೌಕರ್ಯಕ್ಕೆ ಬಂಡವಾಳ ಹೂಡಿಕೆ ಮಾಡಿದರೆ ಅಷ್ಟು ಆರ್ಥಿಕತೆ ಬೆಳೆಯುತ್ತದೆ. ಸಾಲ ಕೊಟ್ಟು ಎಷ್ಟು ದಿನ ತೃಪ್ತಿ ಪಡಿಸಬಹುದು? ಸಾಲ ಮಾಡಿ ತುಪ್ಪ ತಿನ್ನೋದು, ತಿನ್ನಿಸೋದು ಎಷ್ಟು ದಿನ ನಡೆಯುತ್ತೆ? ಮುಂದೊಂದು ದಿನ ಏನಾಗಬಹುದು? ದೇಶದಲ್ಲಿರುವ ಆರ್ಥಿಕವಾಗಿ ಶಿಸ್ತಿಲ್ಲದ ಬಿಮಾರು ರಾಜ್ಯಗಳ ಸ್ಥಿತಿಗೆ ನಾವೂ ಹೋಗಿಬಿಡಬಹುದು.
ಗ್ಯಾರಂಟಿ ಬಗ್ಗೆ ನಾನು ವ್ಯಕ್ತಿಗತವಾಗಿ ಹೇಳಬೇಕೆಂದರೆ ಅವರನ್ನು ಅವರದ್ದೇ ಧಾಟಿಯಲ್ಲಿ ಎದುರಿಸಬೇಕು. ಆದರೆ, “ಇವರು ಭ್ರಷ್ಟಾಚಾರವನ್ನು ನಡೆಸಲೆಂದೇ ಗ್ಯಾರಂಟಿ ಯೋಜನೆಯನ್ನು ಜಾರಿಗೆ ತಂದಿದ್ದಾರೆ” ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಜೂನ್ 27ರಂದು ಹೇಳಿದ್ದರು. ಈ ಬೆಳವಣಿಗೆಯನ್ನು ನೋಡಿದಾಗ ನನಗೆ ಭಯವಾಗುತ್ತದೆ.
ಪವರ್ ಪಾಯಿಂಟ್ ವಿತ್ ಎಚ್‌ಪಿಕೆಯಲ್ಲಿ ಸಿ.ಟಿ. ರವಿ ಅವರ ಮಾತು; ಇಲ್ಲಿದೆ ವಿಡಿಯೊ
150 ಪ್ಲಸ್ ಗೆಲ್ಲುತ್ತೇವೆಂದು ಹೇಳಿದ್ಯಾಕೆ?
ಚುನಾವಣೆಗೆ ಪೂರ್ವದಲ್ಲಿ ನಾವು ಮಾಡಿಸಿದ ಸರ್ವೇ ಪ್ರಕಾರ, ಕಾಂಗ್ರೆಸ್ ಹಾಗೂ ಬಿಜೆಪಿಯು 90 ಪ್ಲಸ್ ಸ್ಥಾನವನ್ನು ಗೆಲ್ಲಲಿದೆ ಎಂಬುದು ತಿಳಿದುಬಂದಿತ್ತು. ಆದರೆ, ಹೊರಗಡೆ ಕಾರ್ಯಕರ್ತರ ಉತ್ಸಾಹಕ್ಕೆ ನಾವು 130, 150 ಪ್ಲಸ್ ಎಂದು ಹೇಳುತ್ತಿದ್ದೆವು. ಆದರೆ, ಕೊನೆಯಲ್ಲಿ ನಾವು ಸೋತಿದ್ದೇವೆ. ಇದನ್ನು ಒಪ್ಪಿಕೊಂಡಿದ್ದೇವೆ.
ಒಳ ಮೀಸಲಾತಿ ಪಡೆದ ಸಮಯದಾಯ ಬೆಂಬಲಕ್ಕೆ ನಿಲ್ಲಲಿಲ್ಲ
ಒಳ ಮೀಸಲಾತಿಯನ್ನು ನಾವು ಸದುದ್ದೇಶದಿಂದ ಜಾರಿಗೆ ತಂದೆವು. ಈ ಹಿಂದೆ ಸದಾಶಿವ ಆಯೋಗವು ಲಂಬಾಣಿ ಮತ್ತು ಬೋವಿ ಸಮಾಜಗಳಿಗೆ ಶೇ. 3ರಷ್ಟು ಒಳ ಮೀಸಲಾತಿ ನೀಡಿತ್ತು. ನಾವದನ್ನು ಶೇ. 4.5ಕ್ಕೆ ಹೆಚ್ಚಿಸಿದೆವು. ಆದರೆ, ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದರಲ್ಲಿ ನಾವು ವಿಫಲವಾದೆವು. ಎಡಗೈ, ಬಲಗೈ ಸಮಾಜವು ನಮ್ಮ ಪರ ನಿಲ್ಲಲಿಲ್ಲ.
ಕಾಂಗ್ರೆಸ್‌ನಿಂದ ಮತದಾನದ ಮಾಫಿಯಾ
ಗೋವಿನ ಜತೆಗೆ ಭಾರತೀಯ ಸಂಸ್ಕೃತಿ ಅಡಗಿದೆ. ಬಿಜೆಪಿ ಪಕ್ಷ ಅಸ್ತಿತ್ವಕ್ಕೆ ಬರುವ ಮೊದಲೇ ಗೋಹತ್ಯೆ ನಿಷೇಧ ಇತ್ತು. ಈಗ ನಾವು ಅದನ್ನು ಬಲಪಡಿಸುವ ಕೆಲಸವನ್ನು ಮಾಡಿದ್ದೆವು. ಈಗ ಈ ಸರ್ಕಾರ ಅಕ್ರಮ ಗೋಹತ್ಯೆ ಮಾಡುವವರನ್ನು ಬೆಂಬಲಿಸುತ್ತಿದೆ. ಈ ಮೂಲಕ ಮತದಾನದ ಮಾಫಿಯಾವನ್ನು ಸೃಷ್ಟಿ ಮಾಡುತ್ತಿದೆ.
ಸಮವಸ್ತ್ರ್ರ V/s ಹಿಜಾಬ್ ಆಗಲಿಲ್ಲ
ಶಾಲೆಯಲ್ಲಿ ಸಮವಸ್ತ್ರ ಇರಬೇಕೆನ್ನುವುದು 1964ರಿಂದಲೇ ಬಂದಿರುವ ಕಾಯಿದೆಯಾಗಿದೆ. ಬಡವ- ಬಲ್ಲಿದ, ಜಾತಿ-ಧರ್ಮದ ಭೇದ ಇರಬಾರದು ಎಂಬ ನಿಟ್ಟಿನಲ್ಲಿ ನಾವು ಶಾಲೆಯಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡಲಿಲ್ಲ. ಇಲ್ಲದಿದ್ದರೆ ಮತ್ತೊಬ್ಬ ಕೇಸರಿ ಶಾಲು ಹಾಕಿಕೊಂಡು ಬರುತ್ತಾನೆ. ಹೀಗಾಗಿ ಶಾಲೆಯಲ್ಲಿ ಮತೀಯ ಭಾವನೆ ಇರಬಾರದೆಂಬ ದೃಷ್ಟಿಯಲ್ಲಿ ಇದನ್ನು ಜಾರಿಗೆ ತಂದಿದ್ದೆವು. ಇದು ಬಳಿಕ ಸಮವಸ್ತ್ರ್ರ V/s ಹಿಜಾಬ್ ಎಂಬಂತೆ ಆಗಬೇಕಿತ್ತು. ಆದರೆ, ದಾರಿ ತಪ್ಪಿಸಿದರು.
ಬಿಜೆಪಿ ಮುಸ್ಲಿಮರ ಸಹಿತ ಯಾರನ್ನೂ ದೂರ ಇಟ್ಟಿಲ್ಲ. ನಾವು ಯಾವುದೇ ಯೋಜನೆಯನ್ನು ಮತೀಯ ಆಧಾರದಲ್ಲಿ ವಿಭಜನೆ ಮಾಡಿಲ್ಲ. 45 ಕೋಟಿ ಜನಧನ್ ಖಾತೆಯನ್ನು ತೆರೆಯಲಾಯಿತು. ಮುದ್ರಾ ಯೋಜನೆಯನ್ನು ಜಾರಿಗೆ ತರಲಾಯಿತು. ಈ ಎಲ್ಲದರಲ್ಲೂ ಮುಸ್ಲಿಮರೇ ಹೆಚ್ಚಿನ ಫಲಾನುಭವಿಗಳಿದ್ದಾರೆ.
ಬಿರಿಯಾನಿ ತಿಂದು ಮುಸ್ಲಿಮರನ್ನು ಬಕ್ರಾ ಮಾಡಿದರು!
ಅತಿ ಹೆಚ್ಚು ಬಡವರು, ಶೈಕ್ಷಣಿಕವಾಗಿ ಹಿಂದುಳಿದವರಲ್ಲಿ ಮುಸ್ಲಿಮರೇ ಇದ್ದಾರೆ. ಹಾಗಾದರೆ ಇವರು ಮಾಡಿದ್ದೇನು? ಅವರನ್ನು ಮತ ಬ್ಯಾಂಕ್ ಆಗಿ ಬಳಸಿಕೊಂಡು ಬಿರಿಯಾನಿ ತಿಂದಿದ್ದು ಬಿಟ್ಟರೆ ಮಾಡಿದ್ದೇನು? ಮುಸ್ಲಿಮರನ್ನು ಬಕ್ರಾಗಳನ್ನಾಗಿ ಮಾಡಿದರು!
ಪಠ್ಯ ಪರಿಷ್ಕರಣೆ ಚರ್ಚೆಗೆ ಬರಲಿ
ಆಗ ಬರಗೂರು ರಾಮಚಂದ್ರ ಅವರ ಸಮಿತಿ ಶಿಫಾರಸು ಮಾಡಿದ್ದ ವಿಚಾರದಲ್ಲಿ ದೋಷಗಳಿವೆ ಎಂದು ಎನ್‌ಸಿಇಆರ್‌ಟಿ ಸಾರಾಸಗಟಾಗಿ ತಿರಸ್ಕರಿಸಿತ್ತು. ಆ ಕಾರಣಕ್ಕಾಗಿ ನಾವು ಹೊಸ ಪಠ್ಯವನ್ನು ಮಾಡಿದ್ದೆವು. ಈಗ ದೇಶಭಕ್ತಿಯ ಪಠ್ಯವನ್ನು ಹಾಕಿದರೆ ತಪ್ಪೇ? ಹೆಗಡೇವಾರ್ ಏನು ಬಿನ್ ಲಾಡೆನ್ ಅಲ್ಲವಲ್ಲಾ? ಇವರು ಚರ್ಚೆಗೆ ಬರಲಿ.
ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ಸೇ ಜಾತ್ಯತೀತ ಅಲ್ಲ
ಓಲೈಕೆಯ ರಾಜಕೀಯ ಮಾಡುವ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ಸೇ ಜಾತ್ಯತೀತ ಅಲ್ಲ. ಇವರು ಜಾತ್ಯತೀತವಾಗಿದ್ದರೆ ಸಮಾನ ನಾಗರಿಕ ಸಂಹಿತೆಗೆ ಬೆಂಬಲ ನೀಡಬೇಕಿತ್ತು. ಆದರೆ, ಅವರಿಗಿದು ಬೇಡ! ಏಕರೂಪ ನಾಗರಿಕ ಸಂಹಿತೆ ಎಲ್ಲರನ್ನೂ ಸಮಾನವಾಗಿ ನೋಡುವಂತೆ ಹೇಳುತ್ತದೆ. ಇದು ಅಪರಾಧವೇ? ಇದರಲ್ಲಿ ವಿಭಜನೆ ರಾಜಕೀಯ ಇದೆಯಾ? ಅಂಬೇಡ್ಕರ್ ಅವರೇ ಸಂವಿಧಾನದಲ್ಲಿ ಇದರ ಬಗ್ಗೆ ಉಲ್ಲೇಖಿಸಿದ್ದಾರೆ. ಸ್ವಾತಂತ್ರ್ಯ ಬಂದು 75 ವರ್ಷ ಆಗಿದೆ. ಇದನ್ನು ಅನುಷ್ಠಾನಕ್ಕೆ ತರಲು ಇನ್ನೆಷ್ಟು ವರ್ಷ ಬೇಕು?
ಅಬಕಾರಿ ಭ್ರಷ್ಟಾಚಾರದ ತನಿಖೆಯಾಗಲಿ
ಕಾಂಗ್ರೆಸ್ ಇಂದು ಭ್ರಷ್ಟಾಚಾರದಲ್ಲಿ ತೊಡಗಿದೆ. ಒಂದೇ ಹುದ್ದೆಗೆ ನಾಲ್ವರನ್ನು ನೇಮಕ ಮಾಡಿ ಆದೇಶಿಸಿದೆ. ಅಲ್ಲದೆ, ಅಬಕಾರಿ ಲೇಬಲ್ ಅಂಟಿಸುವ ಕಾಮಗಾರಿಯನ್ನು ಎಲ್ 3 ಹಂತದ ಸಂಸ್ಥೆಗೆ ನೀಡಲಾಗಿದೆ. 56 ಕೋಟಿ ರೂಪಾಯಿ ಸ್ಕ್ಯಾಮ್ ಇದಾಗಿದ್ದು, ತನಿಖೆಗೆ ಬಂದ ಕೂಡಲೇ ರದ್ದುಪಡಿಸಿದ್ದಾರೆ. ಇದರ ತನಿಖೆಯಾಗಲಿ.
ಬಿಜೆಪಿ ಸೋಲಿಗೆ ಸಿ.ಟಿ. ರವಿ ಕೊಟ್ಟ ಮೂರು ಕಾರಣ
ಫಲಾನುಭವಿಗಳನ್ನು ಮತದಾರರನ್ನಾಗಿ ಪರಿವರ್ತನೆ ಮಾಡುವಲ್ಲಿ ನಾವು ವಿಫಲ, ಗ್ಯಾರಂಟಿ ಯೋಜನೆ ಹಾಗೂ ಕಾಂಗ್ರೆಸ್ ಹಬ್ಬಿಸಿದ ಸುಳ್ಳು ಸುದ್ದಿಗಳನ್ನು ಜನರ ಮನಸ್ಸಿನಿಂದ ತೆಗೆದುಹಾಕುವುದರಲ್ಲಿ ನಾವು ಸೋತಿದ್ದೇ ಬಿಜೆಪಿ ಸೋಲಿಗೆ ನಾನು ನೀಡುವ ಮೂರು ಕಾರಣ ಎಂದು ಸಿ.ಟಿ. ರವಿ ಹೇಳಿದ್ದಾರೆ.
ಕೋವಿಡ್ ವೇಳೆ ದುಡಿಯುವ ಅವಕಾಶ ಕಡಿಮೆಯಾಗಿದ್ದಕ್ಕೆ 5 ಕೆಜಿ ಅಕ್ಕಿ ಜತೆ ಮತ್ತೈದು ಕೆಜಿ ಸೇರಿಸಿ ಪ್ರಧಾನಿ ನರೇಂದ್ರ ಮೋದಿಯವರು ಕೊಟ್ಟರು. ಆದರೆ, ಮೂರು ವರ್ಷದ ಬಳಿಕ ಸಹಜ ಸ್ಥಿತಿಗೆ ಬಂದಾಗ ಹತ್ತರಲ್ಲಿ ಐದು ಕೆಜಿ ಅಕ್ಕಿಯನ್ನು ಕಡಿತ ಮಾಡಿದರು. ಅದೇ ಸಂದರ್ಭದಲ್ಲಿ ಬೇರೆ ತೊಂದರೆಯಿಂದ ಇನ್ನೂ ಒಂದು ಕೆಜಿ ಅಕ್ಕಿಯನ್ನು ಕಡಿತ ಮಾಡಲಾಯಿತು. ಆಗ ಜನರಿಗೆ ಕಾಂಗ್ರೆಸ್ ಗ್ಯಾರಂಟಿ ಕನೆಕ್ಟ್ ಆಯಿತು. ಇದರ ಜತೆಗೆ ಬಿಜೆಪಿ ರೇಷನ್ ಕಾರ್ಡ್ ಅನ್ನೇ ತಗೆದುಬಿಡುತ್ತದೆ ಎಂಬ ಅಪ ಪ್ರಚಾರವೂ ಆಯಿತು. ನಾವದನ್ನು ತಿಳಿಹೇಳುವಲ್ಲಿ ಎಡವಿದೆವು.
ನಾಯಕರೆಲ್ಲರೂ ಒಟ್ಟಾಗೋಣ
ದೇಶದಲ್ಲಿ ಲೋಕಸಭಾ ಚುನಾವಣೆ ದೇಶದ ರಕ್ಷಣೆ, ಅಭ್ಯುದಯಕ್ಕಾಗಿ ನಾವು ಮೋದಿಯವರನ್ನು ಅಧಿಕಾರಕ್ಕೆ ತರಬೇಕು. ಇದಕ್ಕಾಗಿ ನಾವು ನಾಯಕರು ಒಗ್ಗಟ್ಟಾಗಬೇಕು. ಆ ಮೂಲಕ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಬೇಕು.
ಅಣ್ಣಾಮಲೈ ಮಾಸ್, ಪಾಪ್ಯುಲರ್ ಲೀಡರ್
ಅಣ್ಣಾಮಲೈ ಮಾಸ್, ಪಾಪ್ಯುಲರ್ ಲೀಡರ್ ಆಗಿದ್ದಾರೆ. ಅವರಿಗೆ ರಾಜ್ಯದಲ್ಲಿ ಅಭಿಮಾನಿಗಳಿದ್ದಾರೆ. ತಮಿಳುನಾಡಿನಲ್ಲಿ ಅವರು ಸಂಚಲನ ಮೂಡಿಸಿದ್ದಾರೆ. ತಮಿಳುನಾಡಿನಲ್ಲಿ ಒಂದು ಮೂಲೆಯಲ್ಲಿರುವ ಬಿಜೆಪಿಯನ್ನು ಚರ್ಚೆಯಾಗುವ ಪಕ್ಷವಾಗಿ ಬದಲಾಯಿಸಿರುವ ಖ್ಯಾತಿ ಅವರದ್ದಾಗಿದೆ. ಹೀಗಾಗಿ ರೇಣುಕಾಚಾರ್ಯ ಅವರು ಏನನ್ನೋ ಹೇಳುವ ಭರದಲ್ಲಿ ಒಬ್ಬ ವ್ಯಕ್ತಿಯನ್ನು ನಗಣ್ಯ ಎನ್ನುವ ರೀತಿ ನೋಡಬಾರದು.
ಅಡ್ಜೆಸ್ಟ್‌ಮೆಂಟ್ ಬಗ್ಗೆ ಸಿ.ಟಿ. ರವಿ ಹೇಳಿದ್ದಿಷ್ಟು!
ಬಿಜೆಪಿ ಅವಧಿಯ ಯೋಜನೆಗಳ ತನಿಖೆ ಮಾಡುತ್ತೇವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದರು. ಅರ್ಕಾವತಿ ಪ್ರಕರಣದಲ್ಲಿ ನ್ಯಾಯಮೂರ್ತಿ ಕೆಂಪಣ್ಣ ಆಯೋಗ ಕೊಟ್ಟಿರುವ ವರದಿ ಮೇಲೆ ಕ್ರಮ ತೆಗೆದುಕೊಳ್ಳಲಿ ಎಂದು ನಾನು ಹೇಳಿದೆ. ನಾವೇ ಈ ಕೆಲಸವನ್ನು ಮಾಡಬೇಕಿತ್ತು. ಈ ವಿಷಯದಲ್ಲಿ ನಾವು ತಪ್ಪು ಮಾಡಿದ್ದೇವೆ. ನಾವೇ ಮಾಡಿದ್ದರೆ ಪೇಸಿಎಂ ಎಂದು ನಾವು ಹೇಳಿಸಿಕೊಳ್ಳುವ ಪ್ರಮೇಯ ಬರುತ್ತಿರಲಿಲ್ಲ. ಕಟಕಟೆಯಲ್ಲಿ ಕಾಂಗ್ರೆಸ್‌ನವರು ನಿಲ್ಲುತ್ತಿದ್ದರು ಎಂದು ಹೇಳಿದ್ದೆ. ಅದಕ್ಕೆ ಮಾಧ್ಯಮದವರು ಮರು ಪ್ರಶ್ನೆ ಹಾಕಿ, “ಇದೇನಿದು ಅಡ್ಜೆಸ್ಟ್‌ಮೆಂಟ್ ರಾಜಕಾರಣವಾ?” ಎಂದು ಕೇಳಿದ್ದರು. ಅದಕ್ಕೆ ನಾನು, “ಇರಬಹುದು” ಎಂದೆ ಅಷ್ಟೆ.
ಜೆಡಿಎಸ್ ಜತೆ ಮೈತ್ರಿ ಬಗ್ಗೆ ಏನಂದ್ರು?
ನಾನು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಜತೆ ಮೈತ್ರಿ ಸಂಬಂಧ ಮಾತುಕತೆ ಆಗಿರುವ ವಿಚಾರ ನನಗೆ ಗೊತ್ತಿಲ್ಲ. ಹಾಗಾಗಿ ನಾನು ಏನೂ ಗೊತ್ತಿಲ್ಲದೆ, ಇದನ್ನು ತಿರಸ್ಕರಿಸುವುದೂ ಇಲ್ಲ, ಪುರಸ್ಕರಿಸುವುದೂ ಇಲ್ಲ. ಆದರೆ, ಪಕ್ಷದ ಸಂಸದೀಯ ಮಂಡಳಿಯು ದೇಶ ಹಾಗೂ ಪಕ್ಷದ ಹಿತದೃಷ್ಟಿಯಿಂದ ಈ ಬಗ್ಗೆ ನಿರ್ಧಾರ ಕೈಗೊಳ್ಳುತ್ತದೆ.
ರಾಹುಲ್ ಗಾಂಧಿಯನ್ನು ನಿರ್ಲಕ್ಷ್ಯ ಮಾಡಲ್ಲ; ಧಾರಾವಾಹಿ ಕಥೆ ಹೇಳಿದ ಸಿ.ಟಿ. ರವಿ
ನಾನು ರಾಹುಲ್ ಗಾಂಧಿ ಸಹಿತ ಯಾರನ್ನೂ ನಿರ್ಲಕ್ಷ್ಯ ಮಾಡುವುದಿಲ್ಲ. ಸಂಕ್ರಾಂತಿ ಎಂಬ ಧಾರಾವಾಹಿಯೊಂದು ಬಹಳ ಹಿಂದೆ ಬರುತ್ತಿತ್ತು. ಅದರಲ್ಲಿ ಬರುವ ತಾತಪ್ಪನ ಪಾತ್ರಧಾರಿಯೊಬ್ಬ ಹೇಳುವ ಮಾತು ನನಗೆ ಈಗಲೂ ಬಹಳ ನೆನಪಿದೆ. “ಮಗಾ ಯಾರನ್ನೂ ನಿರ್ಲಕ್ಷ್ಯ ಮಾಡಬಾರದು. ಗಾಳಿ ಬಂದಾಗ ಒಂದು ಹುಲ್ಲು ಕಡ್ಡಿ ಹೋಗಿ ಗೋಪುರದ ಮೇಲೆ ನಿಂತುಕೊಳ್ಳುತ್ತದೆ. ಜನ ಕೈ ಮುಗಿಯಬೇಕಾದರೆ ಆ ಹುಲ್ಲು ಕಡ್ಡಿಗೂ ಗೌರವ ಸಿಗುತ್ತದೆ. ಹಾಗೇ ಆ ಗಾಳಿಯು ಬಿರುಗಾಳಿಯಾದರೆ ಗಟ್ಟಿಯಾಗಿರುವ ಗೋಪುರವೂ ಬಿದ್ದು ಹೋಗುತ್ತದೆ. ಹೀಗಾಗಿ ಯಾವುದನ್ನೂ ನಿರ್ಲಕ್ಷ್ಯ ಮಾಡಬೇಡ!” ಎಂಬ ಡೈಲಾಗ್ ಅನ್ನು ಕೇಳಿದ್ದೆ.
ಇದನ್ನೂ ಓದಿ: ಪ್ರತಾಪ್ ಸಿಂಹ ಸಂದರ್ಶನ: ಭರವಸೆ ಈಡೇರಿಸಲು ಸಿದ್ದರಾಮಯ್ಯ ವಿಫಲ; ದೇಶದ ಭವ್ಯ ಭವಿಷ್ಯಕ್ಕಾಗಿ ಮತ್ತೊಮ್ಮೆ ಮೋದಿ ಗೆಲ್ಲಬೇಕು
ಮೋದಿ ಆಯ್ಕೆ ಯಾಕೆ?
ಮನಮೋಹನ್ ಸಿಂಗ್ ಸರ್ಕಾರವು 10 ವರ್ಷ ಆಡಳಿತ ನಡೆಸಿತ್ತು. ಪ್ರತಿ ಬಾರಿಯೂ ಹಗರಣಗಳು. ಆದರೆ, ನರೇಂದ್ರ ಮೋದಿ ನೇತೃತ್ವದಲ್ಲಿನ 9 ವರ್ಷದ ಆಡಳಿತದಲ್ಲಿ ಒಂದು ಹಗರಣವಿದ್ದರೆ ತೋರಿಸಲಿ. ಹೀಗಾಗಿ ದೇಶದ ಹಿತದೃಷ್ಟಿಯಿಂದ ಜನರು ಮೋದಿಗೆ ಮತ ಹಾಕುತ್ತಾರೆ ಎಂದು ಸಿ.ಟಿ. ರವಿ ಅಭಿಪ್ರಾಯಪಟ್ಟಿದ್ದಾರೆ.