ಬೆಂಗಳೂರು: ಸೇವೆ ಕಾಯಂ ಸೇರಿ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ರಾಜ್ಯಾದ್ಯಂತ ಪೌರಕಾರ್ಮಿಕರು ಕೆಲಸಕ್ಕೆ ಗೈರು ಹಾಜರಾಗಿ ನಡೆಸುತ್ತಿರುವ ಪ್ರತಿಭಟನೆ ಎರಡನೇ ದಿನವನ್ನು ಪೂರೈಸಿದೆ. ಸಿಎಂ ಬಸವರಾಜ ಬೊಮ್ಮಯಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಭರವಸೆ ನೀಡಿದ್ದರೂ ಲಿಖಿತ ಭರವಸೆಗಾಗಿ ಕಾಯುತ್ತಿರುವ ಪೌರಕಾರ್ಮಿಕರು ಮುಷ್ಕರ ಮುಂದುವರಿಸುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ | ಭರವಸೆ ಈಡೇರುವವರೆಗೆ ಪೊರಕೆ ಹಿಡಿಯೋಲ್ಲ: ಮುಂದುವರಿದ ಪೌರ ಕಾರ್ಮಿಕರ ಮುಷ್ಕರ
ಸಿಎಂ ಸಭೆಯಲ್ಲಿ ನೀಡಿರುವ ಭರವಸೆಗಳನ್ನು ಲಿಖಿತ ರೂಪದಲ್ಲಿ ನೀಡಬೇಕು ಎಂದು ಪೌರಕಾರ್ಮಿಕರು ಆಗ್ರಹಿಸಿದ್ದರು. ಈ ಕಾರಣಕ್ಕೆ, ಸಿಎಂ ಸಭೆಯ ನಡಾವಳಿಗಳನ್ನು ಅಧಿಕೃತ ಸಹಿಯೊಂದಿಗೆ ಸರ್ಕಾರ ಶನಿವಾರ ಬಿಡುಗಡೆ ಮಾಡಿತು. ಕಾರ್ಮಿಕರ ಕೈ ಸೇರಿರುವ ಈ ದಾಖಲೆಯಲ್ಲಿ ಕೆಲ ಬೇಡಿಕೆ ಮಾತ್ರ ಈಡೇರಿದೆ. ಉಳಿದ ಬೇಡಿಕೆಗೆ ಯಾವುದೇ ಸರಿಯಾದ ಉತ್ತರ ಸಿಕ್ಕಿಲ್ಲ. ಹೀಗಾಗಿ ನಮ್ಮ ಎಲ್ಲ ಬೇಡಿಕೆಯನ್ನು ಕೂಡಲೇ ಅಂಗೀಕರಿಸಿ ಎಂದು ಒತ್ತಾಯಿಸಿದ್ದಾರೆ.
ಈ ಕುರಿತು ಬಿಬಿಎಂಪಿ ವಿಶೇಷ ಆಯುಕ್ತ ರಂಗಪ್ಪ ಮಾತನಾಡಿದ್ದು, ಪೌರಕಾರ್ಮಿಕರ ಪ್ರತಿಭಟನೆ ಇಡೀ ರಾಜ್ಯಕ್ಕೆ ಸಂಬಂಧಿಸಿದ್ದು. ಬಿಬಿಎಂಪಿಯಿಂದಷ್ಟೆ ಮನವೊಲಿಸುವ ಕಾರ್ಯ ಆಗುವುದಿಲ್ಲ. ಪೌರಕಾರ್ಮಿಕರ ವಿಚಾರ ಸರ್ಕಾರದ ಹಂತದಲ್ಲಿದ್ದು, ಸಿಎಂ ಭರವಸೆಗೆ ಒಪ್ಪಿ ಭಾನುವಾರದಿಂದ ಕೆಲಸಕ್ಕೆ ವಾಪಸಾಗುವ ವಿಶ್ವಾಸವಿದೆ ಎಂದರು.
ಪೌರಕಾರ್ಮಿಕರ ಪ್ರತಿಭಟನೆಯಿಂದ ಬೆಂಗಳೂರಿನಲ್ಲಿ ಮನೆ, ವಾಣಿಜ್ಯ ಸಂಸ್ಥೆಗಳ ಘನ ತಾಜ್ಯ ವಿಲೇವಾರಿಗೆ ತೊಂದರೆಯಾಗಿಲ್ಲ. ಬದಲಿಗೆ ರಸ್ತೆ ಗುಡಿಸುವ ವಿಚಾರದಲ್ಲಿ ಸ್ವಲ್ಪ ಸಮಸ್ಯೆಯಾಗಿದೆ. ಪಾಲಿಕೆ ವ್ಯಾಪ್ತಿಯಲ್ಲಿ 17,425 ಪೌರಕಾರ್ಮಿಕರು ಇದ್ದು 3,615 ಕೆಲಸಕ್ಕೆ ಹಾಜರು ಆಗಿದ್ದಾರೆ. 13,028 ಜನ ಗೈರಾಗಿದ್ದಾರೆ. ಮೇಲ್ವಿಚಾರಕರು, ಆಟೋ ಚಾಲಕರು, ಆಟೋ ಹೆಲ್ಪರ್ ಸೇರಿದಂತೆ ಕಾಂಪ್ಯಾಕ್ಟರ್‌ನ ಕೆಲವರು ಗೈರಾಗಿರುವುದಾಗಿ ರಂಗಪ್ಪ ಹೇಳಿದ್ದಾರೆ.
ಕೈ ನಾಯಕರ ಬೆಂಬಲ
ಪೌರ ಕಾರ್ಮಿಕರ ಬೇಡಿಕೆಗಳನ್ನು ಸರ್ಕಾರ ಎರಡು ದಿನಗಳೊಳಗಾಗಿ ಈಡೇರಿಸಬೇಕು. ಇಲ್ಲವಾದರೆ ಸೋಮವಾರದಿಂದ ನಾನೂ ಪ್ರತಿಭಟನೆಯಲ್ಲಿ ಭಾಗವಹಿಸಿ, ಬೇಡಿಕೆಗಳು ಈಡೇರುವವರೆಗೂ ಇಲ್ಲೇ ಊಟ, ತಿಂಡಿ ಮಾಡುವ ಜತೆಗೆ ಇಲ್ಲೇ ಮಲಗುತ್ತೇನೆ ಎಂದು ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಸಿದ್ದರಾಮಯ್ಯರಿಗೂ ಪೌರ ಕಾರ್ಮಿಕರ ಬಗ್ಗೆ ಕಾಳಜಿ ಇದ್ದು, ನಿಮ್ಮ ಕೂಗಿಗೆ ಸಾಥ್ ನೀಡಲಿದ್ದಾರೆ. ನಿಮಗೆ ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ಮುಂದುವರಿಯುತ್ತದೆ ಎಂದು ಜಮೀರ್ ತಿಳಿಸಿದ್ದಾರೆ.
ನಮ್ಮ ಸರ್ಕಾರ ಇದ್ದಾಗ 4 ಸಾವಿರ ಕಾರ್ಮಿಕರನ್ನು ಕಾಯಂ ಮಾಡಿದ್ದೇವೆ ಎಂದು ಮಾಜಿ ಸಚಿವ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂರಾ ರೆಡ್ಡಿ ಹೇಳಿದರು. ಪೌರ ಕಾರ್ಮಿಕರ ಪ್ರತಿಭಟನೆಗೆ ಬೆಂಬಲ ನೀಡಿ ಮಾತಾನಾಡಿದ ಅವರು, ಪೌರಕಾರ್ಮಿಕರು ಕೆಲಸ ಮಾಡಿದರೆ ಮಾತ್ರ ನಗರ ಸ್ವಚ್ಛವಾಗಿರುತ್ತದೆ, ಆರೋಗ್ಯ ಸುಧಾರಣೆ ಆಗುತ್ತದೆ. ಅವರ ಕುಟುಂಬ ನಿರ್ವಹಣೆಗೆ ಬೇಕಾಗುವಷ್ಟು ಸಂಬಳ ನೀಡಬೇಕು. 2005ರಲ್ಲಿ 5 ಸಾವಿರ ರೂ. ಸಂಬಳ ನೀಡುತ್ತಿದ್ದರು, ಆದರೆ ಕಾಂಗ್ರೆಸ್ ಸರ್ಕಾರ ಇದ್ದಾಗ ಪೌರ ಕಾರ್ಮಿಕರಿಗೆ 17 ಸಾವಿರ ರೂ.ಗೆ ಸಂಬಳ ಹೆಚ್ಚಿಗೆ ಮಾಡಿ ಹಲವು ಸೌಲಭ್ಯ ನೀಡಿದ್ದೆವು. ಜತೆಗೆ 4 ಸಾವಿರ ಕಾರ್ಮಿಕರನ್ನು ಕಾಯಂ ಮಾಡಲು ಅನುಮತಿ ನೀಡಿದ್ದೆವು ಎಂದು ಹೇಳಿದರು.
ಇದನ್ನೂ ಓದಿ | ಪೌರ ಕಾರ್ಮಿಕರ ಬೇಡಿಕೆ ಈಡೇರಿಸಲು ಸರ್ಕಾರ ಒಪ್ಪಿಗೆ; ಲಿಖಿತ ಭರವಸೆಗೆ ಸಂಘಟನೆಗಳ ಪಟ್ಟು