Site icon Vistara News

MP Pratapsimha: ಶಾಸಕ ಪ್ರದೀಪ್‌ ಈಶ್ವರ್‌ಗೆ ಓರಿಯೆಂಟೇಷನ್‌ ಅಗತ್ಯವಿದೆ ಎಂದ ಪ್ರತಾಪ್‌ಸಿಂಹ

Pratapsimha Pradeep Eshwar

#image_title

ಮೈಸೂರು: ಕಳೆದ ಕೆಲವು ದಿನಗಳಿಂದ ನಿತ್ಯ ಎಂಬಂತೆ ಸುದ್ದಿ ಮಾಡುತ್ತಿರುವ ಮೈಸೂರು ಸಂಸದ ಪ್ರತಾಪ್‌ ಸಿಂಹ (MP Pratapsimha) ಅವರು ಬುಧವಾರ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್‌ ಈಶ್ವರ್‌ (MLA Pradeep Eshwar), ಸಚಿವರಾದ ಸತೀಶ್‌ ಜಾರಕಿಹೊಳಿ (Satish Jarakiholi), ಎಚ್‌.ಸಿ. ಮಹದೇವಪ್ಪ ಅವರಿಗೆ ಕ್ಲಾಸ್‌ ತೆಗೆದುಕೊಂಡಿದ್ದಾರೆ. ಅದೇ ಹೊತ್ತಿಗೆ ಸಚಿವ ಎಂ.ಬಿ. ಪಾಟೀಲ್‌ (MB Patil) ಅವರ ಜತೆ ಕಾಂಪ್ರೊಮೈಸ್‌ ಮಾಡಿಕೊಂಡಿದ್ದಾರೆ!

ಬುಧವಾರ ಮೈಸೂರಿನಲ್ಲಿ ಮಾತನಾಡಿದ ಅವರು ಕಾಂಗ್ರೆಸ್‌ ಜನವಿರೋಧಿ ಧೋರಣೆ ಅನುಸರಿಸುತ್ತಿದೆ, ತನ್ನ ತಪ್ಪನ್ನು ಮುಚ್ಚಿಕೊಳ್ಳಲು ಕೇಂದ್ರ ಸರಕಾರದ ಮೇಲೆ ಗೂಬೆ ಕೂರಿಸುತ್ತಿದೆ ಎಂದು ಹೇಳಿದರು.

ಓರಿಯೆಂಟೇಷನ್‌ ಅಗತ್ಯವಿದೆ ಎಂದ ಪ್ರತಾಪ್‌

ಚಿಕ್ಕಬಳ್ಳಾಪುರದಲ್ಲಿ ಶಾಸಕ ಪ್ರದೀಪ್‌ ಈಶ್ವರ್‌ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಡವರಿಗೆ ಅಕ್ಕಿ ನೀಡದ, ಕಣ್ಣೀರು ಒರೆಸದ ಬಿಜೆಪಿಯಿಂದ ಯಾವ ಅಭಿವೃದ್ಧಿ ಸಾಧ್ಯ. ಅನ್ನಭಾಗ್ಯ ಯೋಜನೆಗೆ ಉದ್ದೇಶಪೂರ್ವಕವಾಗಿ ಅಡ್ಡಿ ಪಡಿಸುತ್ತಿದ್ದಾರೆ. ಜನರಿಗೆ ಕಾಂಗ್ರೆಸ್ ಬಗ್ಗೆ ತಪ್ಪು ಸಂದೇಶ ರವಾನಿಸಬೇಕು ಎನ್ನುವುದು ಇವರ ಉದ್ದೇಶ. ಸಂಸದರಾದ ಪ್ರತಾಪ್ ಸಿಂಹ, ತೇಜಸ್ವಿ ಸೂರ್ಯ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಈ ವಿಚಾರವಾಗಿ ಬಹಿರಂಗ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದ್ದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಪ್ರತಾಪ್‌ಸಿಂಹ ಅವರು ಪ್ರದೀಪ್‌ ಈಶ್ವರ್‌ ಅವರಿಗೆ ಸಾರ್ವಜನಿಕವಾಗಿ ಮಾತನಾಡುವ ವಿಚಾರದಲ್ಲಿ ಓರಿಯೆಂಟೇಷನ್‌ ಅಗತ್ಯವಿದೆ ಎಂದು ಹೇಳಿದರು.

ʻʻಸಿದ್ದರಾಮಯ್ಯ ಅವರಿಗೆ 40 ವರ್ಷಗಳ ರಾಜಕೀಯ ಅನುಭವ ಇದೆ. ಆದಷ್ಟು ಬೇಗ ಮೊದಲ ಭಾರಿಗೆ ಗೆದ್ದ ಶಾಸಕರಿಗೆ, ಹಿರಿಯ ಶಾಸಕರು ಗೊತ್ತಿಲ್ಲದವರಿಗೆ ಒರಿಯಂಟೇಶನ್ ಪ್ರೋಗ್ರಾಂ ಅಗತ್ಯವಿದೆ. ಸಾರ್ವಜನಿಕ ಜೀವನದಲ್ಲಿ ಹೇಗೆ ಮಾತನಾಡಬೇಕು, ಹೇಗೆ ಕೆಲಸ ಮಾಡಬೇಕು ಎಂಬುದನ್ನ ತಿಳಿದುಕೊಳ್ಳಲು ಹೇಳಿʼʼ ಎಂದು ಸಂಸದ ಪ್ರತಾಪ ಸಿಂಹ ಹೇಳಿದರು.

ಸತೀಶ್‌ ಜಾರಕಿಹೊಳಿ ಅಪ್ರಬುದ್ಧ ಹೇಳಿಕೆ

ಕೇಂದ್ರ ಸರ್ಕಾರ ಗೃಹ ಲಕ್ಷ್ಮಿ ಯೋಜನೆ ಸಾಫ್ಟ್‌ವೇರನ್ನು ಹ್ಯಾಕ್ ಮಾಡಿದೆ ಎಂಬ ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯಿಸಿದ ಪ್ರತಾಪ್‌ಸಿಂಹ ಅವರು, ʻʻಸಚಿವರಿಗೆ ಓರಿಯಂಟಿಯೇಶನ್ ಅಗತ್ಯವಿದೆ. ಸಿದ್ದರಾಮಯ್ಯ ಸಾಹೇಬರ ಸರ್ಕಾರದಲ್ಲಿ ಎಂತೆಂತ ಸಚಿವರು ಇದ್ದಾರೆ ಇದ್ದಾರೆ ಎನ್ನುವುದು ಗೊತ್ತಾಯಿತು. ಅವರಿಗೆ ಯಾವುದರ ಬಗ್ಗೆಯೂ ಅರಿವಿಲ್ಲದೆ ಈ ರೀತಿ ಹೇಳಿಕೆ ಕೊಡುತ್ತಿದ್ದಾರೆ. ಇದೊಂದು ರೀತಿ ಕರ್ನಾಟಕಕ್ಕೆ ಅವಮಾನ.
ಸಾರ್ವಜನಿಕವಾಗಿ ಏನ್ ಮಾತನಾಡಬೇಕು,ಈ ರೀತಿ ಅಸಂಬದ್ಧವಾದ ಹೇಳಿಕೆ ಕೊಟ್ರೆ ಕರ್ನಾಟಕದ ಮರ್ಯಾದೆ ಹೋಗುತ್ತದೆʼʼ ಎಂದು ಹೇಳಿದರು.

ʻʻಕಂಪ್ಯೂಟರ್‌, ಸರ್ವರನ್ನು ಯಾರೂ ಹ್ಯಾಕ್ ಮಾಡಲು ಸಾಧ್ಯವಿಲ್ಲ. ಸತೀಶ್ ಜಾರಕಿಹೊಳಿ ನಮ್ಮ ರಾಜ್ಯ ಸರ್ಕಾರದ ಪ್ರತಿನಿಧಿ. ಈ ರೀತಿ ಹೇಳಿಕೆ ಕೊಟ್ಟು ಮುಜುಗರಕ್ಕೆ ಒಳಗಾಗುವುದು ಬೇಡʼʼ ಎಂದು ಹೇಳಿದರು ಪ್ರತಾಪ್‌ಸಿಂಹ.

ಸಿಎಂ ಬದಲಾವಣೆ: ಮಹದೇವಪ್ಪ ಟ್ವೀಟ್‌ಗೆ ಸಿಂಹ ಪ್ರತಿಕ್ರಿಯೆ ಏನು?

ಬಿಜೆಪಿ ಕಾಲದಲ್ಲಿ ಮೂರು ಮೂರು ಸಿಎಂಗಳನ್ನು ಬದಲಾವಣೆ ಮಾಡಲಾಗಿದೆ ಎಂಬ ಸಚಿವ ಎಚ್.ಸಿ ಮಹದೇವಪ್ಪ ಟ್ವೀಟ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ʻʻಮುಂದಿನ ದಿನಗಳಲ್ಲಿ ಎಲ್ಲವೂ ಗೊತ್ತಾಗಲಿದೆ. ವೀರೇಂದ್ರ ಪಾಟೀಲ್, ವೀರಪ್ಪ ಮೊಯ್ಲಿ ಹಾಗೂ ಬಂಗಾರಪ್ಪ.. ಹೀಗೆ ಐದು ವರ್ಷದಲ್ಲಿ ಮೂರು ಮುಖ್ಯಮಂತ್ರಿಗಳನ್ನು ಬದಲಿಸಿದ್ದು ಯಾರು ಎಂದು ರಾಜ್ಯದ ಜನತೆಗೆ ಗೊತ್ತಿದೆ, ಇದರ ಬಗ್ಗೆ ತಿಳಿದುಕೊಂಡು ಮಾತನಾಡಿದರೆ ಒಳ್ಳೆಯದು ಎಂದರು.

ರಾಜ್ಯದ ರೈತರಿಂದಲೇ ಅಕ್ಕಿ ತೆಗೆದುಕೊಳ್ಳಿ

ಕೇಂದ್ರ ಸರ್ಕಾರ ಅಕ್ಕಿ ಕೊಡುತ್ತಿಲ್ಲ ಎಂದು ಪ್ರತಿಭಟನೆ ಮಾಡೋದು ಬಿಟ್ಟು, ಬೊಬ್ಬೆ ಹೊಡೆಯುವುದನ್ನು ಬಿಟ್ಟು ಓಪನ್ ಮಾರ್ಕಟ್ ನಲ್ಲಿ ತೆಗೆದುಕೊಳ್ಳಿ ಎಂದು ಪ್ರತಾಪ್‌ ಸಿಂಹ ಸಲಹೆ ನೀಡಿದರು.

ರಾಜ್ಯದಲ್ಲೇ ಸಾಕಷ್ಟು ಅಕ್ಕಿ ಬೆಳೆಯಲಾಗುತ್ತದೆ. ಮಂಡಿ ತೆರೆದು ರಾಜ್ಯದಲ್ಲಿ ಬೆಳೆಯುವ ರೈತರ ಬಳಿ ಭತ್ತ ಖರೀದಿ ಮಾಡಿ. ನಮ್ಮ ರೈತರು ರಾಜ್ಯದ ಜನತೆಗೆ ಕೊಡುವಷ್ಟು ಬೆಳೆದಿದ್ದಾರೆ. ಮಂಡಿ ತೆರೆದು ಕನಿಷ್ಠ ಬೆಲೆ ನಿಗದಿ ಮಾಡಿ ಖರೀದಿ ಮಾಡಿ. ವಿನಾಕರಣ ಮೋದಿ ಅವರನ್ನು ಬೈದುಕೊಂಡು ಓಡಾಡಬೇಡಿ ಎಂದು ಸಲಹೆ ನೀಡಿದ್ದಾರೆ ಪ್ರತಾಪ್‌ಸಿಂಹ.

ʻʻಉಚಿತ ಅಕ್ಕಿ ಕೊಡುವಾಗ ಮೋದಿ ಅವರನ್ನು ಕೇಳಿಕೊಂಡು ಪ್ರಕಟಿಸಿದ್ದೀರಾ? ಕ್ರಿಶ್ಚಿಯನ್ನರು ಬಂದು ಕೇಳಿದಾಗ ಮತಾಂತರ ನಿಷೇಧ ಕಾಯ್ದೆ ಹಿಂಪಡೆಯುತ್ತೀರಾ. ಮುಸ್ಲಿಮರು ಬಂದ ಕೇಳಿದ ಕೂಡಲೇ ಗೋ ಹತ್ಯೆ ನಿಷೇಧ ಕಾಯ್ದೆ ವಾಪಸ್ ಪಡೆಯುತ್ತೀರಾ, ಆದರೆ, ಸಾಮನ್ಯ ಜನ ವಿದ್ಯುತ್ ಬೆಲೆ ಕಡಿಮೆ ಮಾಡಿ ಅಂದ್ರೆ ಆಗಲ್ಲ ಅಂತೀರಾ. ನಿಮ್ಮದು ಜ‌ನ ವಿರೋಧಿ ಧೋರಣೆʼʼ ಎಂದು ಪ್ರತಾಪ್‌ ಸಿಂಹ ಹೇಳಿದರು.

ಎಂ.ಬಿ. ಪಾಟೀಲ್‌ ಜತೆ ಪ್ರತಾಪ್‌ಸಿಂಹ ಕಾಂಪ್ರೊಮೈಸ್!

ಸಚಿವ ಎಂ.ಬಿ ಪಾಟೀಲ್ ಅವರು ನನ್ನ ಬಗ್ಗೆ ಮಾತನಾಡಲಿಲ್ಲ ಅಂದ್ರೆ ನಾನು ಅವರ ಬಗ್ಗೆ ಮಾತನಾಡುವುದಿಲ್ಲ ಎಂದು ಹೇಳಿದರು ಸಂಸದ ಪ್ರತಾಪ ಸಿಂಹ.
ʻʻಅವರ ಬಗ್ಗೆ ಅಪಾರವಾದ ಗೌರವ ಇದೆ. ರಾಜ್ಯದ ನೀರಾವರಿ ಸಚಿವರು, ನಾನು ಸಹ ಅವರ ಕ್ಷೇತ್ರಕ್ಕೆ ಹೋಗಿದ್ದೇನೆ. ಅವರ ಬಗ್ಗೆ ಜನರು ಅಪಾರವಾದ ಪ್ರೀತಿ ವಿಶ್ವಾಸ ಇಟ್ಟುಕೊಂಡಿದ್ದಾರೆ. ನಮ್ಮ ಕೆಲಸಗಳು ಮಾತನಾಡಬೇಕು, ಮಾತನಾಡುವುದು ಸಾಧನೆಯಾಗಬಾರದುʼʼ ಎಂದು ನುಡಿದರು.

ಇದನ್ನೂ ಓದಿ: MB Patil: ಸಂತೋಷ್‌ಗೆ ಬೈದ್ರೆ ಬ್ರಾಹ್ಮಣರಿಗೆ ಬೈದಂಗಾ?; ಪ್ರತಾಪ್‌ ಸಿಂಹ ಚೇಲಾ ಎಂದ ಎಂ.ಬಿ ಪಾಟೀಲ್‌

Exit mobile version