ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ (Karnataka Elections 2023) ಪೈಕಿ ಮೂರು ಕ್ಷೇತ್ರಗಳ ಅಭ್ಯರ್ಥಿಗಳನ್ನು ಕಾಂಗ್ರೆಸ್ ಫೈನಲ್ ಮಾಡಿದೆ. ಉಳಿದಿರುವುದು ಶಿಡ್ಲಘಟ್ಟ ಮತ್ತು ಚಿಕ್ಕಬಳ್ಳಾಪುರ. ಚಿಕ್ಕಬಳ್ಳಾಪುರದಲ್ಲಿ ಹಾಲಿ ಆರೋಗ್ಯ ಸಚಿವ, ಮಾಜಿ ಕಾಂಗ್ರೆಸಿಗ, ರಾಜ್ಯದ ಪ್ರಭಾವಿ ನಾಯಕ ಡಾ. ಕೆ. ಸುಧಾಕರ್ ಅವರ ವಿರುದ್ಧ ಕಾಂಗ್ರೆಸ್ ಫೀಲ್ಡಿಗೆ ಇಳಿಸುವ ಅಭ್ಯರ್ಥಿ ಯಾರು ಎನ್ನುವ ಬಗ್ಗೆ ಭಾರಿ ಕುತೂಹಲವಿದೆ. ಅದು ಪರಿಶ್ರಮ ಅಕಾಡೆಮಯ ಪ್ರದೀಪ್ ಈಶ್ವರ್ ಎನ್ನುವುದು ಬಹುತೇಕ ಫೈನಲ್ ಆಗಿದ್ದು, ಎರಡನೇ ಪಟ್ಟಿಯಲ್ಲಿ ಅವರ ಹೆಸರು ಬರಲಿದೆ ಎನ್ನಲಾಗುತ್ತಿದೆ.
ಚಿಕ್ಕಬಳ್ಳಾಪುರದಲ್ಲಿ ಡಾ. ಕೆ. ಸುಧಾಕರ್ ಅತ್ಯಂತ ಶಕ್ತಿಶಾಲಿಯಾಗಿದ್ದಾರೆ. ಸ್ವತಂತ್ರವಾಗಿಯೇ ಗೆದ್ದುಬರಬಲ್ಲಷ್ಟು ಶಕ್ತಿಯನ್ನು ಅವರು ಹೊಂದಿದ್ದಾರೆ. ಹಾಗಾಗಿ ಅವರ ವಿರುದ್ಧ ಪ್ರಬಲ ಅಭ್ಯರ್ಥಿ ಹಾಕಲು ಕಾಂಗ್ರೆಸ್ ಭಾರಿ ಹುಡುಕಾಟ ನಡೆಸಿದೆ. ಒಂದು ಹಂತದಲ್ಲಿ ಯುವ ಕಾಂಗ್ರೆಸ್ ನಾಯಕ ರಕ್ಷಾ ರಾಮಯ್ಯ ಅವರನ್ನು ಕಣಕ್ಕಿಳಿಸಲು ನಿರ್ಧರಿಸಲಾಗಿತ್ತು. ಡಾ. ಕೆ. ಸುಧಾಕರ್ ಅವರ ಹಿಂದಿರುವ ಯುವ ಶಕ್ತಿಯನ್ನು ಸೆಳೆಯುವುದು ಇದರ ಉದ್ದೇಶವಾಗಿತ್ತು. ಬಳಿಕ ಅದನ್ನು ತಳ್ಳಿ ಹಾಕಲಾಯಿತು. ಸಾಕಷ್ಟು ಸದ್ದು ಮಾಡುತ್ತಿರುವ ಕೊತ್ತೂರು ಮಂಜುನಾಥ್ ಸ್ಪರ್ಧಿಸುತ್ತಾರೆ ಎಂದು ಹೇಳಲಾಗಿತ್ತಾದರೂ ಅವರೂ ಹಿಂದೆ ಸರಿದಿದ್ದಾರೆ.
ಈ ನಡುವೆ ಕಾಂಗ್ರೆಸ್ ಕೈಗೆ ಸಿಕ್ಕಿದ್ದು ಪ್ರದೀಪ್ ಈಶ್ವರ್. ಪ್ರದೀಪ್ ಈಶ್ವರ್ ರಾಜ್ಯದಲ್ಲಿ ಜನಪ್ರಿಯವಾಗುತ್ತಿರುವ ಪರಿಶ್ರಮ ನೀಟ್ ಅಕಾಡೆಮಿಯ ಮುಖ್ಯಸ್ಥರಾಗಿದ್ದು, ಸಾಕಷ್ಟು ಜನಪ್ರಿಯರಾಗಿದ್ದಾರೆ. ಇವರು ಪ್ರಾಧ್ಯಾಪಕರಾಗಿದ್ದು, ರಾಜ್ಯದಲ್ಲಿ ನಡೆಯುವ ವೈದ್ಯಕೀಯ ಪ್ರವೇಶ ಪರೀಕ್ಷೆ – ನೀಟ್‌ಗಾಗಿ ವಿದ್ಯಾರ್ಥಿಗಳನ್ನು ಅಣಿಗೊಳಿಸುತ್ತಾರೆ. ಅವರ ಅಕಾಡೆಮಿಯಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳಲ್ಲಿ ಹೆಚ್ಚಿನವರಿಗೆ ನೀಟ್‌ನಲ್ಲಿ ಉತ್ತಮ ರ‍್ಯಾಂಕ್ ದೊರೆತು ಅವರಿಗೆ ಮೆಡಿಕಲ್ ಸೀಟು ದೊರೆಯುತ್ತದೆ ಎಂಬ ನಂಬಿಕೆ ಇದೆ. ನೀಟ್ ರಿಸಲ್ಟ್ ಬಂದಾಗ ಇದು ದಾಖಲಾಗಿದೆ ಕೂಡಾ.
ವೈದ್ಯಕೀಯ ಹಿನ್ನೆಲೆಯ ಡಾ. ಸುಧಾಕರ್‌ಗೆ ವೈದ್ಯಕೀಯ ಶಿಕ್ಷಣಕ್ಕೆ ವಿದ್ಯಾರ್ಥಿಗಳನ್ನು ಅಣಿಗೊಳಿಸುವ, ಮೋಟಿವೇಷನಲ್ ಭಾಷಣಕಾರರೂ ಆಗಿರುವ ಪ್ರದೀಪ್ ಈಶ್ವರ್ ಅವರೇ ಸರಿಯಾದ ಪ್ರತಿಸ್ಪರ್ಧಿ ಎಂಬ ನಿರ್ಧಾರಕ್ಕೆ ಕಾಂಗ್ರೆಸ್ ಬಹುತೇಕ ಬಂದಿದೆ.
ಅವರು ಎದುರಾಳಿಯಾಗಲು ಬೇರೊಂದು ಕಾರಣವೂ ಇದೆ!
ನಿಜವೆಂದರೆ ಪ್ರದೀಪ್ ಈಶ್ವರ್ ಅವರು ಡಾ. ಕೆ. ಸುಧಾಕರ್ ಅವರ ವಿರುದ್ಧ ಕಣಕ್ಕಿಳಿಯುವ ಆಸಕ್ತಿ ತೋರಲು ಒಂದು ಕಾರಣವೂ ಇದೆ. ಪ್ರದೀಪ್ ಈಶ್ವರ್ ಕೂಡಾ ಡಾ. ಸುಧಾಕರ್ ವರ ಸ್ವಗ್ರಾಮ ಪೆರೇಸಂದ್ರವರೇ ಆಗಿದ್ದಾರೆ. ಅವರಿಬ್ಬರ ನಡುವೆ ಏನೋ ವೈಮನಸ್ಸು ಬೆಳೆದು ಸಚಿವ ಸುಧಾಕರ್ ಕಿರುಕುಳದಿಂದ ಪ್ರದೀಪ್ ಈಶ್ವರ್ ಜೈಲು ಸೇರಿದ್ದರು ಎನ್ನಲಾಗಿದೆ. ಸುಧಾಕರ್ ಕಾಟಕ್ಕೆ ಬೇಸತ್ತು ಪ್ರದೀಪ್ ಈಶ್ವರ್ ಚಿಕ್ಕಬಳ್ಳಾಪುರ ಬಿಟ್ಟು ಬೆಂಗಳೂರಿಗೆ ಶಿಫ್ಟ್ ಆಗಿದ್ದರು.
ಪರಿಶ್ರಮ ನೀಟ್ ಅಕಾಡೆಮಿ ಸ್ಥಾಪಿಸಿ ಸಾಕಷ್ಟು ಹೆಸರು ಸಂಪಾದಿಸಿದ್ದು ತನ್ನದೇ ಆದ ಅಭಿಮಾನಿ ಬಳಗ ಹೊಂದಿದ್ದಾರೆ.
ಪ್ರದೀಪ್ ಈಶ್ವರ್ ಅವರನ್ನು ಕಣಕ್ಕಿಳಿಸುವ ಕಾಂಗ್ರೆಸ್ ಪ್ಲ್ಯಾನ್ ಹಿಂದೆ ಇನ್ನೊಂದು ತಂತ್ರವೂ ಇದೆ. ಪ್ರದೀ ಅವರು ಬಲಿಜ ಸಮುದಾಯದವರು. ಚಿಕ್ಕಬಳ್ಳಾಪುರದಲ್ಲಿ ಬಲಿಜ ಮತದಾರರ ಸಂಖ್ಯೆಯೂ ದೊಡ್ಡದಿದೆ. ಮುಳ್ಳನ್ನು ಮುಳ್ಳಿನಿಂದಲೇ ತೆಗೆಯುವ ಪ್ರಯತ್ನಕ್ಕೆ ಕಾಂಗ್ರೆಸ್ ಕೈ ಹಾಕಿದೆ ಎನ್ನಲಾಗಿದೆ.
ಕಾಂಗ್ರೆಸ್ ತನಗೆ ಸೀಟು ನೀಡಲು ಮುಂದಾಗಿರುವುದನ್ನು ಸ್ವತಃ ಪ್ರದೀಪ್ ಈಶ್ವರ್ ಒಪ್ಪಿಕೊಂಡಿದ್ದು, ಮುಂದಿನ ಪಟ್ಟಿಯಲ್ಲಿ ಹೆಸರು ಬರಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ. ಜತೆಗೆ ಎಲ್ಲ ಕಾಂಗ್ರೆಸ್ ನಾಯಕರು ತಮ್ಮನ್ನು ಬೆಂಬಲಿಸಿದ್ದಾಗಿ ಹೇಳಿದ್ದಾರೆ.
ಇದನ್ನೂ ಓದಿ : Congress ticket : ವರುಣಾ ಜತೆ ಕೋಲಾರದಲ್ಲೂ ಸ್ಪರ್ಧೆ ಮಾಡ್ತೀನಿ; ಖಚಿತಪಡಿಸಿದ ಸಿದ್ದರಾಮಯ್ಯ