ಚಿಕ್ಕೋಡಿ: ಭ್ರಷ್ಟಾಚಾರದಲ್ಲಿ ಮುಳುಗಿರುವ ಹಾಗೂ ಅನೇಕರ ಸಾವಿಗೆ ಕಾರಣರಾಗುತ್ತಿರುವ ಬಿಜೆಪಿಯವರು ಕಂಸ ಹಾಗೂ ದುರ್ಯೋಧನರಿಗಿಂತ ನಿರ್ದಯಿಗಳು ಎಂದು ಕೆಪಿಸಿಸಿ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಹೇಳಿದ್ದಾರೆ. 20 ಜಿಲ್ಲೆಗಳನ್ನು ಸಂಚರಿಸುವ ಮೊದಲ ಹಂತದ ʼಪ್ರಜಾಧ್ವನಿ ಯಾತ್ರೆಯʼ (Prajadhwani Yatre) ಮೊದಲ ಹಂತಕ್ಕೆ ಚಿಕ್ಕೋಡಿಯ ಆರ್.ಡಿ. ಕಾಲೇಜು ಮೈದಾನದಲ್ಲಿ ನಡೆದ ಸಮಾವೇಶದಲ್ಲಿ ಚಾಲನೆ ನೀಡಿ ಮಾತನಾಡಿದರು.
ಈ ಸಮಾವೇಶದಲ್ಲಿ ಚಿಕ್ಕೋಡಿ-ಸದಲಗಾ, ಅಥಣಿ, ಯಮಕನಮರಡಿ, ಹುಕ್ಕೇರಿ, ಕಾಗವಾಡ, ರಾಯಭಾಗ, ನಿಪ್ಪಾಣಿ, ಹಾಗೂ ಕುಡಚಿ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು ಆಗಮಿಸಿದ್ದರು. ಕೆಪಿಸಿಸಿ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೆವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಶಾಸಕಿಯರಾದ ಅಂಜಲಿ ನಿಂಬಾಳ್ಕರ್, ಲಕ್ಷ್ಮೀ ಹೆಬ್ಬಾಳ್ಕರ್, ಮಾಜಿ ಸಚಿವ ಯು.ಟಿ. ಖಾದರ್, ಆರ್.ವಿ. ದೇಶಪಾಂಡೆ, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್, ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಸೇರಿ ಅನೇಕರು ಸಸಿಗೆ ನೀರು ಎರೆಯುವ ಮೂಲಕ ಪ್ರಜಾಧ್ವನಿ ಸಮಾವೇಶ ಉಧ್ಘಾಟನೆ ಮಾಡಿದರು. ಸಮಾವೇಶದ ಆರಂಭದಲ್ಲಿ, ಇತ್ತೀಚೆಗೆ ದೇಹತ್ಯಾಗ ಮಾಡಿದ ಶ್ರೀ ಸಿದ್ದೇಶ್ವರ ಶ್ರೀಗಳಿಗೆ ಸಂತಾಪ ಸೂಚಿಸಲಾಯಿತು.
ನಂತರ ಮಾತನಾಡಿದ ರಣದೀಪ್ ಸಿಂಗ್ ಸುರ್ಜೆವಾಲ, ಕರ್ನಾಟಕದ ಜನರು ಈ ಸರ್ಕಾರದಿಂದ ಬೆಂದು ಹೋಗಿದ್ದಾರೆ. ಈ ಸರ್ಕಾರ ನಿಮ್ಮ ಓಟಿನಿಂದ ಆಗಿದ್ದಲ್ಲ, ಶಾಸಕರನ್ನು ಖರೀದಿಸಿ ಆಗಿದ್ದು. ಭಾರತದ ಅತ್ಯಂತ ಭ್ರಷ್ಟ ಸರ್ಕಾರ ಎಂದರೆ ಬೊಮ್ಮಾಯಿ ಸರ್ಕಾರ. ಈ ಸರ್ಕಾರ 40% ಕಮಿಷನ್ ಸರ್ಕಾರ. ಈ ವಿಚಾರವನ್ನು ಸಂತೋಷ್ ಪಾಟೀಲ್ ಪತ್ನಿ ಹಾಗೂ ಕುಟುಂಬವನ್ನು ಕೇಳಿದರೆ ಗೊತ್ತಾಗುತ್ತದೆ. ನೀವು ಸಂತೋಷ್ ಪಾಟೀಲ್‌ರನ್ನು ಮತ್ತೆ ನೀಡಲಾಗುತ್ತದೆಯೇ?
ಬೆಂಗಳೂರಿನಲ್ಲಿ ಒಬ್ಬ ಉದ್ಯಮಿ ಗುಂಡು ಹಾರಿಸಿಕೊಂಡು ಪ್ರಾಣ ತ್ಯಾಗ ಮಾಡಿದ. ಆದರೆ ಬಿಜೆಪಿಯವರು ಎಷ್ಟು ನಿರ್ದಯಿ, ನಾಚಿಕೆಯಿಲ್ಲದವರು ಎಂದರೆ ಆ ವಿಚಾರವನ್ನು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯ ಪತ್ನಿ ಹಾಗೂ ಕುಟುಂಬದವರ ಮೇಲೆ ಆರೋಪ ಮಾಡಿದರು. ಈ ಹಿಂದೆ ಕರ್ನಾಟಕದ ಬ್ರ್ಯಾಂಡ್, ಬೆಂಗಳೂರು ಬ್ರ್ಯಾಂಡ್ ಇತ್ತು. ಆದರೆ ಬಿಜೆಪಿ ಸರ್ಕಾರದ ಅವಧಿಯಲ್ಲಿ 1,300 ಕಂಪನಿಗಳು ರಾಜ್ಯದಿಂದ ಹೊರಹೋಗಿವೆ, 1 ಲಕ್ಷ ಉದ್ಯೋಗ ನಷ್ಟವಾಗಿದೆ. ಇವರು ಎಷ್ಟು ನಿಶಕ್ತಿಯುಳ್ಳವರು ಎಂದರೆ ಮಹಾರಾಷ್ಟ್ರ ಮುಖ್ಯಮಂತ್ರಿಗೆ ತಿರುಗಿಸಿ ಉತ್ತರ ನೀಡಲೂ ಸಾಧ್ಯವಾಗುತ್ತಿಲ್ಲ. ಇವರಲ್ಲಿ ಸಾಮರ್ಥ್ಯ ಇಲ್ಲ. ಭಾರತದ ಅತ್ಯಂತ ನಿಶಕ್ತ ಸಿಎಂ ಎಂದರೆ ಬಸವರಾಜ ಬೊಮ್ಮಾಯಿ ಎಂದರು.
ಇದಕ್ಕೂ ಮೊದಲು ಮಾತನಾಡಿದ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್, ಕಾಂಗ್ರೆಸ್ ಪಕ್ಷ ಈ ದೇಶವನ್ನು ಕಟ್ಟಿದೆ. ೨೦೧೪ರಿಂದ ಬಿಜೆಪಿ ಸರ್ಕಾರ ಕೇಂದ್ರದಲ್ಲಿ ೨೦೧೯ರಿಂದ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದಿದೆ. ಅದರೆ ಪೆಟ್ರೋಲ್, ಡೀಸೆಲ್, ಗೊಬ್ಬರ, ಬೇಳೆ ದರ, ಗ್ಯಾಸ್ ಸಿಲಿಂಡರ್ ದರ ಏರಿಕೆ ಆಗಿದೆ. ಆದಾಯ ಅಷ್ಟೆ ಉಳಿದಿದೆ, ಆದರೆ ಬೆಲೆ ಏರಿಕೆ ಆಗಿದೆ. ಒಳ್ಳೆಯ ದಿನಗಳು ಬರುತ್ತವೆ ಎಂದು ೨೦೧೪ರಲ್ಲಿ ಮೋದಿ ಹೇಳಿದ್ದರು. ೨ ಕೋಟಿ ಉದ್ಯೋಗ ರೂಪಿಸುತ್ತೇವೆ ಎಂದು ಹೇಳಿದ್ದರು. ಆದರೆ ಅವರಿಗೆ ಪಕೋಡ ಮಾರಿ ಅಂತ ಹೇಳುತ್ತಿದ್ದಾರೆ ಎಂದು ಆರೋಪಿಸಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಮಾತನಾಡಿ, ರಾಜ್ಯಾದ್ಯಂತ ಪ್ರಜಾಧ್ವನಿ ಸಮಾವೇಶ ಆಗಲಿದೆ. ಒಂದೇ ಬಸ್‌ನಲ್ಲಿ ಸಾಗಿ ಪ್ರಜಾ ಧ್ವನಿ ಸಮಾವೇಶ ನಡೆಯಲಿದೆ. ಚಿಕ್ಕೋಡಿಯಿಂದ ಪ್ರಾರಂಭ ಆಗಿರುವುದು ನಮ್ಮ ಸೌಭಾಗ್ಯ. ಜನವಿರೋಧಿ ಸರ್ಕಾರ, ಭ್ರಷ್ಟ ಸರ್ಕಾರ ಕಿತ್ತೊಗೆಯಲು ಈ ಪ್ರಜಾಧ್ವನಿ, ಚಿಕ್ಕೋಡಿ ಭಾಗದಿಂದ ಹೆಚ್ಚಿನ ಸ್ಥಾನ ಗೆಲ್ಲಲು ಅವಕಾಶ ಇದೆ. ಸಿದ್ದರಾಮಯ್ಯನವರ ಕಾಲದ ಜನಪ್ರಿಯ ಯೋಜನೆಗಳನ್ನು ಕಟ್ ಮಾಡಲಾಗಿದೆ. ಅನುದಾನ ಕಡಿತಗೊಳಿಸಿಲಾಗುತ್ತಿದೆ. ಕೆಲಸದಲ್ಲಿ ವ್ಯತ್ಯಾಸಗಳು ಅಭಿವೃದ್ದಿ ಕೆಲಸದಲ್ಲಿ ಆಗುತ್ತಿವೆ. ಹಲವಾರು ಸ್ಕಾಲರ್‌ಶಿಪ್‌ಗಳನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಮುಂದಾಗಿದೆ. ಬಡವರಿಗೆ ಮನೆ ನೀಡುವ ಕೆಲಸವೂ ಸಹ ಬಿಜೆಪಿ ಸರ್ಕಾರದಲ್ಲಿ ಕಡಿತಗೊಳಿಸಲಾಗಿದೆ. ಬುಲೆಟ್ ಟ್ರೇನ್ ಓಡುತ್ತೇವೆ ಎಂದು ಮೋದಿ ಹೇಳಿದ್ದರು. ಆದರೆ ವಂದೇ ಭಾರತ್ ರೈಲನ್ನೇ ಓಡಿಸಿ ಅದನ್ನೇ ಬುಲೆಟ್ ರೈಲು ಎಂದು ನಂಬಿಸುತ್ತಿದ್ದಾರೆ ಎಂದರು.
ಇದನ್ನೂ ಓದಿ | Prajadhwani Yatre | ಬಸ್ ಯಾತ್ರೆಗೆ ಎರಡು ತಂಡ ಪ್ರಕಟಿಸಿದ ಕಾಂಗ್ರೆಸ್; ʼಪ್ರಜಾಧ್ವನಿ ಯಾತ್ರೆʼ ಎಂದು ನಾಮಕರಣ?