ಬೆಂಗಳೂರು: ಲೈಂಗಿಕ ದೌರ್ಜನ್ಯಕ್ಕೀಡಾದ ಸಂತ್ರಸ್ತೆಯನ್ನು ಅಪಹರಣ ಮಾಡಿದ ಪ್ರಕರಣದಲ್ಲಿ ಮೊದಲ ಆರೋಪಿಯಾಗಿರುವ ಎಚ್.ಡಿ.ರೇವಣ್ಣ (HD Revanna) ಅವರನ್ನು ಎಸ್‌ಐಟಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಸಿಐಡಿ ಕಚೇರಿಯಲ್ಲಿ ವೈದ್ಯಕೀಯ ಪರೀಕ್ಷೆ (Medical Test) ನಡೆಸಲಾಗುತ್ತಿದೆ. ಇನ್ನು, ಪ್ರಕರಣದಲ್ಲಿ ಯಾವುದೇ ತೊಂದರೆಯಾಗದಿರಲಿ ಎಂದು ಎಚ್.ಡಿ.ರೇವಣ್ಣ ಅವರು ಮಾಡಿಸಿದ ಹೋಮ, ಇವರ ಕುರಿತು ಜ್ಯೋತಿಷಿ ನೀಡಿದ ಭವಿಷ್ಯ ಸುಳ್ಳಾಗಿದೆ. ಅವರು ಯಾವಾಗಲೂ ಹಿಡಿದುಕೊಂಡು ತಿರುಗಾಡುತ್ತಿದ್ದ ನಿಂಬೆ ಹಣ್ಣು ಕೂಡ ಮತ್ತಷ್ಟು ಹುಳಿ ಆಗಿದೆ.
ಹೌದು, ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಯಾವುದೇ ಸಮಸ್ಯೆ ಎದುರಾಗದಿರಲಿ, ಮಗ ಬಚಾವಾಗಲಿ, ಜಾಮೀನು ಸಿಗಲಿ ಎಂಬುದು ಸೇರಿ ಹಲವು ದೃಷ್ಟಿಯಿಂದ ಬುಧವಾರ (ಮೇ 1) ಸಂಜೆ ಹೊಳೆನರಸಿಪುರದಲ್ಲಿರುವ ಎಚ್.ಡಿ.ರೇವಣ್ಣ ನಿವಾಸದಲ್ಲಿ ಗಣಪತಿ ಹೋಮ ಮಾಡಿಸಲಾಗಿತ್ತು. ಅಲ್ಲದೆ, ನಿರೀಕ್ಷಣಾ ಜಾಮೀನು ಸಿಕ್ಕೇ ಸಿಗುತ್ತದೆ. ಚಿಂತೆ ಬೇಡ ಎಂಬುದಾಗಿ ಜ್ಯೋತಿಷಿಯೊಬ್ಬರು ಹೇಳಿದ್ದರು. ಇದರಿಂದಾಗಿ ತುಸು ನಿರಾಳರಾಗಿದ್ದ ಎಚ್.ಡಿ.ರೇವಣ್ಣ ಅವರು ಎಚ್.ಡಿ.ದೇವೇಗೌಡರ ನಿವಾಸದಲ್ಲಿಯೇ ನಿಶ್ಚಿಂತೆಯಿಂದ ಇದ್ದರು. ಜಾಮೀನು ಸಿಕ್ಕೇ ಸಿಗುತ್ತದೆ ಎಂಬ ವಿಶ್ವಾಸವೂ ಅವರದ್ದಾಗಿತ್ತು ಎಂದು ತಿಳಿದುಬಂದಿದೆ.
ರೇವಣ್ಣ ಅಂದುಕೊಂಡಂತೆ ಯಾವುದೂ ಆಗಲಿಲ್ಲ. ಸುದೀರ್ಘ ವಾದ-ಪ್ರತಿವಾದ ಆಲಿಸಿದ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಎಚ್.ಡಿ.ರೇವಣ್ಣ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿದರು. ಇದಾದ ಕೆಲ ಹೊತ್ತಿನಲ್ಲೇ ಎಚ್.ಡಿ.ದೇವೇಗೌಡರ ನಿವಾಸಕ್ಕೆ ತೆರಳಿದ ಎಸ್‌ಐಟಿ ಅಧಿಕಾರಿಗಳು ಎಚ್.ಡಿ.ರೇವಣ್ಣ ಅವರನ್ನು ವಶಪಡಿಸಿಕೊಂಡರು.
ಸಿಐಡಿ ಕಚೇರಿಯಲ್ಲಿ ಆಂಬುಲೆನ್ಸ್, ಅಲ್ಲೇ ವೈದ್ಯಕೀಯ ಪರೀಕ್ಷೆ
ಎಚ್.ಡಿ.ರೇವಣ್ಣ ಅವರನ್ನು ವಶಪಡಿಸಿಕೊಂಡಿರುವ ಎಸ್‌ಐಟಿ ಅಧಿಕಾರಿಗಳು, ಭದ್ರತಾ ದೃಷ್ಟಿಯಿಂದ ಆಂಬುಲೆನ್ಸ್ ಹಾಗೂ ವೈದ್ಯರನ್ನೇ ಸಿಐಡಿ ಕಚೇರಿಗೆ ಕರೆಸಿದ್ದಾರೆ. ಭದ್ರತಾ ದೃಷ್ಟಿಯಿಂದಾಗಿ ವೈದ್ಯಕೀಯ ಪರೀಕ್ಷೆಗಾಗಿ ರೇವಣ್ಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯದೆ, ಆಂಬುಲೆನ್ಸ್‌ಅನ್ನು ಸಿಐಡಿ ಕಚೇರಿಗೆ ಕರೆಸಲಾಗಿದೆ. ಆಂಬುಲೆನ್ಸ್‌ನಲ್ಲಿಯೇ ಎಚ್.ಡಿ.ರೇವಣ್ಣ ಅವರ ವೈದ್ಯಕೀಯ ತಪಾಸಣೆ ಮಾಡಲಾಗುತ್ತದೆ.
ಪ್ರಜ್ವಲ್ ಶರಣಾಗತಿ?
“ಎಸ್‌ಐಟಿ ಅಧಿಕಾರಿಗಳು ಎಚ್.ಡಿ.ರೇವಣ್ಣ ಅವರನ್ನು ವಶಕ್ಕೆ ಪಡೆದಿದ್ದಾರೆ. ಕಾನೂನು ಪ್ರಕಾರ ಯಾವ ಪ್ರಕ್ರಿಯೆ ಅನುಸರಿಸಬೇಕೋ, ಅದೆಲ್ಲವನ್ನೂ ಅನುಸರಿಸಲಾಗುತ್ತದೆ. ಕಾನೂನು ಪ್ರಕಾರ ಅವರು ನಡೆದುಕೊಳ್ಳುತ್ತಾರೆ. ಇನ್ನು, ಪ್ರಜ್ವಲ್ ರೇವಣ್ಣ ಕೂಡ ಆಗಮಿಸಲಿದ್ದಾರೆ. ಅವರು ಪೊಲೀಸರಿಗೆ ಶರಣಾಗಲಿದ್ದಾರೆ” ಎಂಬುದಾಗಿ ಜೆಡಿಎಸ್ ನಾಯಕ, ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರು ಮಾಹಿತಿ ನೀಡಿದ್ದಾರೆ. ಆದರೆ, ಪ್ರಜ್ವಲ್ ರೇವಣ್ಣ ಯಾವಾಗ ಭಾರತಕ್ಕೆ ವಾಪಸಾಗಲಿದ್ದಾರೆ ಎಂಬುದರ ಕುರಿತು ಅವರು ಮಾಹಿತಿ ನೀಡಿಲ್ಲ.
ಇದನ್ನೂ ಓದಿ: HD Revanna: ರೇವಣ್ಣ ಬಂಧನದ ಬೆನ್ನಲ್ಲೇ ಪೊಲೀಸರಿಗೆ ಪ್ರಜ್ವಲ್ ಶರಣಾಗತಿ? ಸಿ.ಎಸ್.ಪುಟ್ಟರಾಜು ಮಹತ್ವದ ಹೇಳಿಕೆ