Site icon Vistara News

Prajwal Revanna Case: ಜಡ್ಜ್‌ ಮುಂದೆಯೂ ನಿಂಬೆ ಹಣ್ಣು ಹಿಡಿದುಕೊಂಡಿದ್ದ ಎಚ್‌.ಡಿ.ರೇವಣ್ಣ!

Prajwal Revanna Case

ಬೆಂಗಳೂರು: ಶಾಸಕ ಎಚ್.ಡಿ.ರೇವಣ್ಣ ಅವರ ಕೈಯಲ್ಲಿ ಸದಾ ನಿಂಬೆ ಹಣ್ಣು ಇರುತ್ತದೆ ಎಂಬುವುದು ಎಲ್ಲರಿಗೂ ತಿಳಿದ ವಿಷಯವೇ. ಈ ಬಗ್ಗೆ ಹಲವರು ಹಾಸ್ಯ ಮಾಡಿದರೂ ರೇವಣ್ಣ ಅವರು ಮಾತ್ರ ಎಲ್ಲವನ್ನೂ ನಗುತ್ತಲೇ ಸ್ವೀಕರಿಸಿ ಮುಂದೆ ಸಾಗುತ್ತಿದ್ದರು. ಇದೀಗ ಪ್ರಜ್ವಲ್‌ ರೇವಣ್ಣ ಅಶ್ಲೀಲ ವಿಡಿಯೊ ಪ್ರಕರಣ ಸಂಬಂಧಪಟ್ಟಂತೆ ಸಂತ್ರಸ್ತೆ ಕಿಡ್ನ್ಯಾಪ್‌ ಕೇಸ್‌ನಲ್ಲಿ ಬಂಧನವಾಗಿರುವ ರೇವಣ್ಣ ಅವರನ್ನು ಭಾನುವಾರ ಸಂಜೆ ನ್ಯಾಯಾಧೀಶರ ಮುಂದೆ ಎಸ್‌ಐಟಿ ಹಾಜರುಪಡಿಸಿತ್ತು. ಈ ವೇಳೆಯೂ ಅವರು ಕೈಯಲ್ಲಿ ನಿಂಬೆ ಹಣ್ಣು ಹಿಡಿದು ಸಾಗುತ್ತಿದ್ದದ್ದು ಕಂಡುಬಂದಿದೆ.

ಈ ಹಿಂದೆ ಕುಟುಂಬಕ್ಕೆ ಸಂಕಷ್ಟ ಬಂದಾಗ ಹೋಮ-ಹವನ, ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳ ಮೊರೆ ಹೋಗುವ ರೇವಣ್ಣ ಅವರು ಕೈಯಲ್ಲಿ ನಿಂಬೆ ಹಣ್ಣು ಹಿಡಿದು ಓಡಾಡುತ್ತಿದ್ದರು. ಆದರೆ, ಪ್ರಜ್ವಲ್‌ ರೇವಣ್ಣ ಪೆನ್‌ಡ್ರೈವ್‌ ಕೇಸ್‌ನಲ್ಲಿ ಬಂಧನವಾದ ನಂತರ ಅವರಿಗೆ ಜ್ಯೋತಿಷ್ಯ, ನಿಂಬೆಹಣ್ಣು ಕೂಡ ಕೈಹಿಡಿಯಲಿಲ್ಲ ಎಂದು ಸಾರ್ವಜನಿಕರು ವ್ಯಂಗ್ಯವಾಡುತ್ತಿದ್ದಾರೆ. ಇದರ ಬೆನ್ನಲ್ಲೇ ನ್ಯಾಯಾಧೀಶರ ಮುಂದೆ ಹಾಜರಾದಾಗಲೂ ರೇವಣ್ಣ ಅವರು ಎಡಗೈನಲ್ಲಿ ನಿಂಬೆಹಣ್ಣಿನೊಂದಿಗೆ ಕಾಣಿಸಿಕೊಂಡಿದ್ದಾರೆ.

ಬೆಂಗಳೂರಿಗೆ ಬರುವ ಮುನ್ನ ಹೊಳೇನರಸಿಪುರದ ಎಚ್‌.ಡಿ.ರೇವಣ್ಣ ನಿವಾಸದಲ್ಲಿ ಗಣಪತಿ ಹೋಮ ಮಾಡಿಸಲಾಗಿತ್ತು. ಅಲ್ಲದೆ, ನಿರೀಕ್ಷಣಾ ಜಾಮೀನು ಸಿಕ್ಕೇ ಸಿಗುತ್ತದೆ. ಚಿಂತೆ ಬೇಡ ಎಂಬುದಾಗಿ ಜ್ಯೋತಿಷಿಯೊಬ್ಬರು ಹೇಳಿದ್ದರು ಎನ್ನಲಾಗಿದೆ. ಇದರಿಂದಾಗಿ ತುಸು ನಿರಾಳರಾಗಿದ್ದ ಎಚ್‌.ಡಿ.ರೇವಣ್ಣ ಅವರು ಎಚ್‌.ಡಿ.ದೇವೇಗೌಡರ ನಿವಾಸದಲ್ಲಿಯೇ ನಿಶ್ಚಿಂತೆಯಿಂದ ಇದ್ದರು. ಆದರೆ, ಯಾವ ಪ್ರಯತ್ನವೂ ಫಲಿಸಲಿಲ್ಲ. ನ್ಯಾಯಾಲಯವು ಜಾಮೀನು ಅರ್ಜಿ ತಿರಸ್ಕರಿಸುತ್ತಲೇ ರೇವಣ್ಣ ಅವರನ್ನು ಎಸ್‌ಐಟಿ ಅಧಿಕಾರಿಗಳು ಶನಿವಾರ ವಶಕ್ಕೆ ಪಡೆದಿದ್ದರು.

ಇದನ್ನೂ ಓದಿ | Prajwal Revanna Case: ಪ್ರಜ್ವಲ್‌ಗೆ ವೋಟ್‌ ಹಾಕಿ ಎಂಬ ಸಿದ್ದರಾಮಯ್ಯ ಟ್ವೀಟ್‌; ಬಿಜೆಪಿಯಿಂದ ಫುಲ್‌ ಕ್ಲಾಸ್‌!

ಮಾಜಿ ಸಚಿವ ಎಚ್‌.ಡಿ. ರೇವಣ್ಣ 4 ದಿನ ಎಸ್‌ಐಟಿ ಕಸ್ಟಡಿಗೆ; ಮತ್ತೆ ತೀವ್ರ ವಿಚಾರಣೆ

ಬೆಂಗಳೂರು: ಹಾಸನ ಸಂಸದ (Hassan MP) ಪ್ರಜ್ವಲ್ ರೇವಣ್ಣ (Prajwal Revanna Case) ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ ಪೆನ್‌ಡ್ರೈವ್‌ ಪ್ರಕರಣಕ್ಕೆ (Hassan Pen Drive Case) ಸಂಬಂಧಪಟ್ಟಂತೆ ಕಿಡ್ನ್ಯಾಪ್‌ ಕೇಸ್‌ನಲ್ಲಿ ಬಂಧನವಾಗಿರುವ ಮಾಜಿ ಸಚಿವ ಎಚ್.‌ಡಿ. ರೇವಣ್ಣ (HD Revanna) ಅವರನ್ನು 4 ದಿನಗಳವರೆಗೆ ಎಸ್‌ಐಟಿ ಕಸ್ಟಡಿಗೆ ನೀಡಿ 17ನೇ ಎಸಿಎಂಎಂ ಕೋರ್ಟ್ ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ.

ಇಂದು ಭಾನುವಾರ (ಮೇ 5) ಕೋರ್ಟ್‌ ರಜೆ ಇರುವ ಹಿನ್ನೆಲೆಯಲ್ಲಿ ಅಪಹರಣ ಪ್ರಕರಣದ ಪ್ರಮುಖ ಆರೋಪಿ ಎಚ್.ಡಿ. ರೇವಣ್ಣ ಅವರನ್ನು ಕೋರಮಂಗಲದಲ್ಲಿರುವ 17ನೇ ಎಸಿಎಂಎಂ ಕೋರ್ಟ್ ನ್ಯಾಯಾಧೀಶರ ನಿವಾಸಕ್ಕೆ ಕರೆತರಲಾಗಿತ್ತು. ಜಡ್ಜ್‌ ಮುಂದೆ ರೇವಣ್ಣ ಅವರನ್ನು ಎಸ್‌ಐಟಿ ಅಧಿಕಾರಿಗಳು ಹಾಜರುಪಡಿಸಿದರು. ಈ ವೇಳೆ ಎಸ್‌ಐಟಿ ಪರ ವಕೀಲರು, ಪ್ರಕರಣದ ತೀವ್ರತೆಯನ್ನು ವಿವರಿಸಿ ರೇವಣ್ಣ ಅವರನ್ನು ಕಸ್ಟಡಿಗೆ ಕೊಡುವಂತೆ ಮನವಿ ಮಾಡಿದರು. ಆದರೆ, ಇದಕ್ಕೆ ರೇವಣ್ಣ ಪರ ವಕೀಲರಾದ ಮೂರ್ತಿ ಡಿ. ನಾಯಕ್‌ ಆಕ್ಷೇಪ ವ್ಯಕ್ತಪಡಿಸಿದರು. ಅಲ್ಲದೆ, ಎಸ್‌ಐಟಿಯವರು ತಮ್ಮ ಕಕ್ಷಿದಾರರಿಗೆ ಕಿರುಕುಳವನ್ನು ನೀಡುತ್ತಿದ್ದಾರೆ. ಅವರಿಗೆ ಆರೋಗ್ಯ ಸಮಸ್ಯೆ ಇದೆ ಎಂದು ವಾದವನ್ನು ಮಂಡಿಸಿದರು.

ಈ ವೇಳೆ ರಿಮ್ಯಾಂಡ್‌ ಕಾಪಿ‌ಯನ್ನು ಎಸ್‌ಐಟಿ ಅಧಿಕಾರಿಗಳು ನ್ಯಾಯಾಧೀಶರಿಗೆ ಸಲ್ಲಿಕೆ ಮಾಡಿದ್ದಾರೆ. ಸುಮಾರು 15 ಅಂಶಗಳನ್ನು ಉಲ್ಲೇಖ ಮಾಡಿ 5 ದಿನಗಳ ಕಾಲ ಕಸ್ಟಡಿಗೆ ವಹಿಸುವಂತೆ ಕೋರಿದ್ದಾರೆ. ವಾದ – ಪ್ರತಿವಾದವನ್ನು ಆಲಿಸಿದ ನ್ಯಾಯಾಧೀಶರಾದ ರವೀಂದ್ರ ಕುಮಾರ್ ಬಿ. ಕಟ್ಟಿಮನಿ ಅವರು, ಎಚ್‌.ಡಿ. ರೇವಣ್ಣ ಅವರನ್ನು 4 ದಿನಗಳ ವರೆಗೆ ಅಂದರೆ ಮೇ 8ರವರೆಗೆ ಎಸ್‌ಐಟಿ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದ್ದಾರೆ.

ಬಿಗಿ ಭದ್ರತೆ ಒದಗಿಸಿದ್ದ ಪೊಲೀಸ್‌!

ಎಚ್.ಡಿ. ರೇವಣ್ಣ‌ ಪ್ರಭಾವಿ ನಾಯಕ ಹಾಗೂ ಶಾಸಕರಾಗಿರುವ ಕಾರಣ ಈಗಾಗಲೇ ಕೋರಮಂಗಲದ ನ್ಯಾಯಾಧೀಶರ ಮನೆ ಬಳಿ ಬಿಗಿ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿತ್ತು. ಮನೆಯ ಮುಂಭಾಗದಲ್ಲಿ ‌ಬ್ಯಾರಿಕೇಡ್‌ಗಳನ್ನು ಹಾಕಲಾಗಿತ್ತು. ಭದ್ರತೆಯೊಂದಿಗೆ ಅವರನ್ನು ಜಡ್ಜ್‌ಗೆ ಹಾಜರುಪಡಿಸಲಾಯಿತು.

ರೇವಣ್ಣಗೆ ಮತ್ತೊಮ್ಮೆ ಮೆಡಿಕಲ್ ಟೆಸ್ಟ್

ನ್ಯಾಯಾಧೀಶರ ಮುಂದೆ ಎಚ್.ಡಿ. ರೇವಣ್ಣ ಅವರನ್ನು ಹಾಜರುಪಡಿಸುವ ಮುನ್ನ ಬೋರಿಂಗ್‌ ಆಸ್ಪತ್ರೆಯಲ್ಲಿ ಮತ್ತೊಮ್ಮೆ ವೈದ್ಯಕೀಯ ತಪಾಸಣೆ ಮಾಡಲಾಯಿತು. ಹೃದಯ ತಜ್ಞರು ಮತ್ತು ಗ್ಯಾಸ್ಟ್ರೋಎಂಟರಾಲಜಿಸ್ಟ್ ತಜ್ಞರ ಬಳಿ ತಪಾಸಣೆ ನಡೆಸಲಾಗಿದೆ.

ನನ್ನ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ, ಇದೊಂದು ಷಡ್ಯಂತ್ರ: ಎಚ್‌.ಡಿ. ರೇವಣ್ಣ

ನನ್ನ ಮೇಲೆ ಕಿಡ್ನ್ಯಾಪ್ ಕೇಸ್ ಹಾಕಿದ್ದಾರೆ. 40 ವರ್ಷ ರಾಜಕೀಯ ಜೀವನದಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲ. ಯಾವುದೇ ರೀತಿಯ ಪುರಾವೆಗಳು ಇಲ್ಲದಿದ್ದರೂ ಅನಾವಶ್ಯಕವಾಗಿ ನನ್ನನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದ್ದಾರೆ. ನನ್ನ ವಿರುದ್ಧದ ಆರೋಪಗಳೆಲ್ಲವೂ ಸುಳ್ಳು. ಇದೊಂದು ದುರದ್ದೇಶಪೂರ್ವಕ ಬಂಧನವಾಗಿದೆ. ಯಾವುದೇ ಸಾಕ್ಷಿಗಳು ಸಹ ಇವರ ಬಳಿ ಇಲ್ಲ ಎಂದು ಎಚ್‌.ಡಿ. ರೇವಣ್ಣ ಹೇಳಿದ್ದಾರೆ.

ಇದನ್ನೂ ಓದಿ | Prajwal Revanna Case: ನನ್ನ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ, ಇದೊಂದು ಷಡ್ಯಂತ್ರ: ಎಚ್‌.ಡಿ. ರೇವಣ್ಣ ಫಸ್ಟ್‌ ರಿಯಾಕ್ಷನ್‌!

ಎಸ್‌ಐಟಿ ಅಧಿಕಾರಿಗಳು ಮೆಡಿಕಲ್‌ ಟೆಸ್ಟ್‌ಗೆಂದು ಬೌರಿಂಗ್‌ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಎಚ್‌.ಡಿ. ರೇವಣ್ಣ ಏಪ್ರಿಲ್‌ 28ರಂದು ನಮ್ಮ ವಿರುದ್ಧ ಕೇಸ್‌ ದಾಖಲಿಸಿದರು. ಆಗ ನಮ್ಮ ಮೇಲೆ ಯಾವುದೇ ಸಾಕ್ಷಿಗಳು ಸಿಕ್ಕಿಲ್ಲವೆಂದು ಪುನಃ ಮೇ 2ರಂದು ನನ್ನ ಮೇಲೆ ಸಾಕ್ಷಿಗಳನ್ನು ಸೃಷ್ಟಿ ಮಾಡಿ ಸಿಕ್ಕಿ ಹಾಕಿಸಿದ್ದಾರೆ. ಇದರಲ್ಲಿ ಯಾವುದೇ ರೀತಿಯ ಪುರಾವೆಗಳು ಇಲ್ಲ. ಆದರೂ ನನ್ನನ್ನು ಸಿಕ್ಕಿ ಹಾಕಿಸಲಾಗಿದೆ ಎಂದು ಗುಡುಗಿದರು.

Exit mobile version