Site icon Vistara News

Prajwal Revanna Case: ಎರಡು ಎಫ್ಐಆರ್ ರದ್ದು ಕೋರಿ ಹೈಕೋರ್ಟ್‌ಗೆ ಎಚ್.ಡಿ.ರೇವಣ್ಣ ಅರ್ಜಿ

Prajwal Revanna Case

ಬೆಂಗಳೂರು: ಎಚ್.ಡಿ.ರೇವಣ್ಣ ವಿರುದ್ಧ ಈವರೆಗೆ 2 ಎಫ್ಐಆರ್ ದಾಖಲು ಹಿನ್ನೆಲೆಯಲ್ಲಿ ತಮ್ಮ ವಿರುದ್ಧ ದಾಖಲಾದ ಎಫ್‌ಐಆರ್‌ಗಳನ್ನು ರದ್ದುಪಡಿಸುವಂತೆ ಕೋರಿ ಹೈಕೋರ್ಟ್‌ಗೆ ಮಾಜಿ ಸಚಿವ ಎಚ್.ಡಿ ರೇವಣ್ಣ ಅರ್ಜಿ ಸಲ್ಲಿಸಿದ್ದಾರೆ. ಹೊಳೆನರಸೀಪುರದಲ್ಲಿ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ (Prajwal Revanna Case), ಕೆ.ಆರ್.ನಗರದ ಸಂತ್ರಸ್ತೆ ಕಿಡ್ನ್ಯಾಪ್‌ ಪ್ರಕರಣ ರದ್ದು ಕೋರಿ ಅರ್ಜಿ ಸಲ್ಲಿಸಲಾಗಿದೆ. ಪ್ರಕರಣಗಳಲ್ಲಿ ಹುರುಳಿಲ್ಲ, ಇದು ರಾಜಕೀಯ ಪ್ರೇರಿತವಾಗಿದೆ. ಹೀಗಾಗಿ ಎಫ್‌ಐಆರ್‌ಗಳನ್ನು ರದ್ದು ಮಾಡಬೇಕು ಎಂದು ರೇವಣ್ಣ, ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಇತ್ತೀಚೆಗೆ ಕೆ.ಆರ್‌.ನಗರದ ಸಂತ್ರಸ್ತೆಯ ಕಿಡ್ನ್ಯಾಪ್‌ ಪ್ರಕರಣಕ್ಕೆ ಸಂಬಂಧಿಸಿ ರೇವಣ್ಣ ಅವರನ್ನು ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗೆ ಕಳಿಸಲಾಗಿತ್ತು. ಆರು ದಿನಗಳ ನಿರಂತರ ಕಾನೂನು ಸಮರದ ಬಳಿಕ ಅವರಿಗೆ ಮೇ 13ರಂದು ಜಾಮೀನು ದೊರೆತಿತ್ತು. ನಂತರ ಹೊಳೆನರಸೀಪುರ ಠಾಣೆಯಲ್ಲಿ ದಾಖಲಾಗಿದ್ದ ಲೈಂಗಿಕ ದೌರ್ಜನ್ಯ (physical abuse) ಪ್ರಕರಣದಲ್ಲೂ ಮಾಜಿ ಸಚಿವ ಎಚ್‌ಡಿ ರೇವಣ್ಣ (HD Revanna case) ಅವರಿಗೆ ಮೇ 20ರಂದು ಜಾಮೀನು (Bail) ಮಂಜೂರಾಗಿತ್ತು. ಇದೀಗ ಎರಡು ಎಫ್‌ಐಆರ್‌ ರದ್ದು ಮಾಡುವಂತೆ ನ್ಯಾಯಾಲಯದ ಮೊರೆ ಹೋಗಿದ್ದಾರೆ.

ಇದನ್ನೂ ಓದಿ | Prajwal Revanna Case: ಪೆನ್ ಡ್ರೈವ್ ಹಂಚಿಕೆ ಪ್ರಕರಣ; ಚೇತನ್, ನವೀನ್ ಗೌಡ ಎಸ್ಐಟಿ ವಶಕ್ಕೆ

ಭವಾನಿ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆ

ಬೆಂಗಳೂರು: ಭವಾನಿ ರೇವಣ್ಣ ಅವರ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಮೇ 29ರ ಬೆಳಗ್ಗೆ 11 ಗಂಟೆಗೆ ಮುಂದೂಡಿಕೆಯಾಗಿದೆ. ಹಾಸನ ಅಶ್ಲೀಲ ವಿಡಿಯೊ ಪ್ರಕರಣಕ್ಕೆ (Prajwal Revanna Case) ಸಂಬಂಧಿಸಿ ಕೆ.ಆರ್.ನಗರ ಸಂತ್ರಸ್ಥ ಮಹಿಳೆ ಕಿಡ್ನ್ಯಾಪ್ ಪ್ರಕರಣದಲ್ಲಿ ಆರೋಪ ಕೇಳಿಬಂದಿದ್ದರಿಂದ ಭವಾನಿ ರೇವಣ್ಣ ಅವರಿಗೂ ಬಂಧನ ಭೀತಿ ಎದುರಾಗಿದೆ. ಹೀಗಾಗಿ ಅವರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ನಡೆಸಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ, ನಾಳೆಗೆ ವಿಚಾರಣೆ ಮುಂದೂಡಿದೆ.

ವಿದೇಶದಲ್ಲಿರುವ ಪ್ರಜ್ವಲ್‌ ರೇವಣ್ಣ ಸೋಮವಾರ ಪ್ರತ್ಯಕ್ಷವಾದ ಬೆನ್ನಲ್ಲೇ ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯಕ್ಕೆ ಭವಾನಿ ರೇವಣ್ಣ ಅರ್ಜಿ ಸಲ್ಲಿಕೆ ಮಾಡಿದ್ದರು. ಅರ್ಜಿ ವಿಚಾರಣೆ ನಡೆಸಿ ಎಸ್‌ಪಿಪಿಗೆ ಆಕ್ಷೇಪಣೆ ಸಲ್ಲಿಸಲು ನ್ಯಾಯಾಧೀಶರು ನೋಟೀಸ್ ನೀಡಿದ್ದರು. ಭವಾನಿ ರೇವಣ್ಣ ಪರ ಹಿರಿಯ ವಕೀಲ ಸಂದೇಶ್ ಚೌಟ ವಾದ ಮಂಡಿಸಿದರು. ಮತ್ತೊಂದೆಡೆ ಆಕ್ಷೇಪಣೆ ಸಲ್ಲಿಸಲು ಎಸ್ಐಟಿ ಕಾಲಾವಕಾಶ ಕೋರಿದ್ದರಿಂದ ಅರ್ಜಿ ವಿಚಾರಣೆ ಮುಂದೂಡಿಕೆಯಾಗಿದೆ.

ಇದನ್ನೂ ಓದಿ | Arvind Kejriwal: ಕೇಜ್ರಿವಾಲ್‌ಗೆ ಮತ್ತೆ ಹಿನ್ನಡೆ; ಜಾಮೀನು ವಿಸ್ತರಣೆಗೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಗೆ ಸುಪ್ರೀಂ ನಕಾರ

ಈ ಪ್ರಕರಣದಲ್ಲಿ ಮಧ್ಯಂತರ ನಿರೀಕ್ಷಣಾ ಜಾಮೀನು ಅರ್ಜಿ ಅರ್ಹವಾಗಿದೆ. ಅಕ್ಷೇಪಣೆ ಸಲ್ಲಿಸುವವರೆಗೂ ಬಂಧನದಿಂದ ರಕ್ಷಣೆ ನೀಡಬೇಕು. ಇವತ್ತು ಬಂಧನ ಮಾಡಿದರೆ ಏನು ಮಾಡಲು ಆಗುತ್ತೆ. ಹೀಗಾಗಿ ನನ್ನ ಕಕ್ಷಿದಾರರಿಗೆ ಕಾನೂನು ರಕ್ಷಣೆ ಕೊಡಬೇಕು ಎಂದು ಭವಾನಿ ಪರ ವಕೀಲರು ಮನವಿ ಮಾಡಿದ್ದಾರೆ. ಇನ್ನು ಪ್ರಕರಣದಲ್ಲಿ ದಿನೇ ದಿನೇ ಆರೋಪಿಗಳನ್ನು ಸೇರ್ಪಡೆ ಮಾಡಲಾಗುತ್ತಿದೆ. ಕೆಎಂಎಫ್ ಮಾಜಿ ಅಧ್ಯಕ್ಷರನ್ನು ಈ ಪ್ರಕರಣದಲ್ಲಿ 7ನೇ ಆರೋಪಿಯನ್ನಾಗಿ‌ ಸೇರಿಸಿದ್ದಾರೆ ಎಂದು ತಿಳಿಸಿದ್ದಾರೆ. ವಾದ-ಪ್ರತಿ ವಾದ ಆಲಿಸಿದ ಬಳಿಕ ನ್ಯಾಯಾಧೀಶರು ವಿಚಾರಣೆಯನ್ನು ನಾಳೆಗೆ ಮುಂದೂಡಿದ್ದಾರೆ.

Exit mobile version