Site icon Vistara News

Prajwal Revanna Case: ವಿಚಾರಣೆಯಲ್ಲಿ ಬಾಯಿಬಿಡದ ಪ್ರಜ್ವಲ್‌; ಸ್ಥಳ ಮಹಜರಿಗಾಗಿ ಹೊಳೆನರಸೀಪುರಕ್ಕೆ ಕರೆದೊಯ್ಯಲು ಸಿದ್ಧತೆ

Prajwal Revanna Case

ಬೆಂಗಳೂರು: ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಪ್ರಕರಣದಲ್ಲಿ (Prajwal Revanna Case) ಬಂಧನವಾಗಿರುವ ಸಂಸದ ಪ್ರಜ್ವಲ್‌ ರೇವಣ್ಣ ವಿಚಾರಣೆ ತೀವ್ರಗೊಂಡಿದೆ. ಎಸ್‌ಐಟಿ ಕಸ್ಟಡಿಯಲ್ಲಿರುವ ಪ್ರಜ್ವಲ್‌, ಯಾವುದೇ ಪ್ರಶ್ನೆಗೂ ಉತ್ತರಿಸದೇ ಸುಮ್ಮನಿರುವುದರಿಂದ ಬಾಯಿಬಿಡಿಸುವುದು ಅಧಿಕಾರಿಗಳಿಗೆ ತಲೆನೋವಾಗಿದೆ. ಯಾವುದೇ ಪ್ರಶ್ನೆ ಕೇಳಿದರೂ ನಮ್ಮ ಲಾಯರ್‌ನ ಕೇಳಬೇಕು ಎಂದಷ್ಟೇ ಪ್ರಜ್ವಲ್ ಹೇಳುತ್ತಿದ್ದಾರೆ. ಮತ್ತೊಂದೆಡೆ ಹೊಳೆನರಸೀಪುರ ನಿವಾಸಕ್ಕೆ ಕರೆದೊಯ್ದು ಮಹಜರು ನಡೆಸಲು ಸಿದ್ಧತೆ ನಡೆಯುತ್ತಿದೆ.

ಹೊಳೆನರಸೀಪುರದ ಚೆನ್ನಾಂಬಿಕಾ ನಿವಾಸದಲ್ಲಿ ಇಂದು ಪ್ರಜ್ವಲ್‌ನ ಕರೆದೊಯ್ದು ಸ್ಥಳ ಮಹಜರು ನಡೆಸುವ ಸಾಧ್ಯತೆ ಇದೆ. ಹೀಗಾಗಿ ಹೊಳೆನರಸೀಪುರ ಪೊಲೀಸರಿಗೆ ಬಂದೋಬಸ್ತ್ ಏರ್ಪಡಿಸಲು ಸೂಚನೆ ನೀಡಲಾಗಿದೆ. ಮನೆ ಕೆಲಸದಾಕೆ ಮೇಲಿನ ಲೈಂಗಿಕ ದೌರ್ಜನ್ಯ ಸಂಬಂಧ ಸ್ಥಳ ಮಹಜರು ನಡೆಯಲಿದೆ.

ಏನೇ ಕೇಳಿದ್ರೂ ಲಾಯರ್‌ ಬಳಿ ಕೇಳಿ ಹೇಳುವೆ ಎನ್ನುವ ಸಂಸದ

ನೆನ್ನೆ ಇಡೀ ದಿನದ ವಿಚಾರಣೆಯಲ್ಲಿ ಪ್ರಜ್ವಲ್ ಯಾವುದೇ ಪ್ರಶ್ನೆಗಳಿಗೆ ಉತ್ತರ ನೀಡಿಲ್ಲ ಎನ್ನಲಾಗಿದೆ. ತನಿಖಾಧಿಕಾರಿ ಎಷ್ಟೇ ಪ್ರಶ್ನೆ ಮಾಡಿದರೂ ನಮ್ಮ ಲಾಯರ್‌ನ ಕೇಳಬೇಕು ಎಂದು ಪ್ರಜ್ವಲ್ ಹೇಳಿದ್ದಾರೆ, ನನಗೂ ಪ್ರಕರಣಕ್ಕೂ ಸಂಬಂಧವಿಲ್ಲ, ನೀವು ಏನೇ ಪ್ರಶ್ನೆ ಕೇಳಿದರೂ ನಮ್ಮ ಲಾಯರ್ ಹತ್ತಿರ ಮಾತನಾಡಿ ಹೇಳುವೆ. ಏನೇ ಉತ್ತರ ಕೊಡುವುದಿದ್ದರೂ ಲಾಯರ್ ಬಳಿ ಮಾತನಾಡಿ ಆ ನಂತರ ಉತ್ತರಿಸುತ್ತೇನೆ ಎಂದು ಪ್ರಜ್ವಲ್ ಹೇಳಿದ್ದಾರೆ.

ಮೊಬೈಲ್ ಪತ್ತೆ ಮಾಡೋದೆ ಸವಾಲು

ವಿಚಾರಣೆ ಚುರುಕುಗೊಳಿಸಿದ ಎಸ್‌ಐಟಿ ಅಧಿಕಾರಿಗಳಿಗೆ ಪ್ರಜ್ವಲ್ ಮೊಬೈಲ್ ಪತ್ತೆ ಮಾಡೋದೆ ದೊಡ್ಡ ಸವಾಲಾಗಿದೆ. ವಿಡಿಯೋ ರೆಕಾರ್ಡ್ ಮಾಡಿದ ಮೊಬೈಲ್‌ಗಾಗಿ ಎಸ್‌ಐಟಿ ಹುಡುಕಾಟ ನಡೆಸುತ್ತಿದೆ. ಆದರೆ, ಒಂದು ವರ್ಷದ ಹಿಂದೆಯೇ ಮೊಬೈಲ್ ಕಳೆದುಹೋಗಿದೆ ಎಂದು ಪ್ರಜ್ವಲ್ ರೇವಣ್ಣ ಹೇಳಿದ್ದಾರೆ.

ಒಂದು ವರ್ಷದ ಹಿಂದೆಯೇ ಮೊಬೈಲ್ ಕಳೆದುಹೋಗಿದೆ ಎಂದಿರುವ ಪ್ರಜ್ವಲ್, ಮೊಬೈಲ್ ಕಳೆದುಹೋಗಿದ್ದಕ್ಕೆ ನಾನು ಸ್ಥಳೀಯ ಠಾಣೆಯಲ್ಲೂ ದೂರು ನೀಡಿದ್ದೆ. ಕೆಎಸ್‌ಪಿ ಆ್ಯಪ್‌ ಮೂಲಕವೂ ದೂರು ದಾಖಲಿಸಿದ್ದೆ. ಕಳೆದ ವರ್ಷ ಮಾರ್ಚ್ 29 ರಂದು ಪಿಎ ಭರತ್ ರಾಜ್ ಮೂಲಕ ದೂರು ನೀಡಲಾಗಿದೆ. ಪೊಲೀಸರು ಕೂಡ ಕೇಸ್ ದಾಖಲಿಸಿಕೊಂಡು, ಮೊಬೈಲ್ ಪತ್ತೆಗೆ ಮುಂದಾಗಿದ್ದರು ಎಂದು ಹೇಳಿದ್ದಾರೆ.

ಪ್ರಜ್ವಲ್ ಹೇಳಿಕೆ ಬೆನ್ನಲ್ಲೇ ಹೊಳೆನರಸೀಪುರ ಪೊಲೀಸರನ್ನು ಎಸ್‌ಐಟಿ ಅಧಿಕಾರಿಗಳು ಸಂಪರ್ಕಿಸಿದ್ದು, ಈ ವೇಳೆ ಮೊಬೈಲ್ ಕಳೆದುಹೋದ ಬಗ್ಗೆ ಎನ್‌ಸಿಆರ್ ದಾಖಲಾಗಿರುವ ಮಾಹಿತಿ ಸಿಕ್ಕಿದೆ. ಆದರೆ ಎಷ್ಟೇ ಹುಡುಕಿದರೂ ಮೊಬೈಲ್ ಸಿಕ್ಕಿಲ್ಲ ಎಂದು ಸ್ಥಳೀಯ ಪೊಲೀಸರು ಹೇಳಿದ್ದಾರೆ. ಹೀಗಾಗಿ‌ ಮೊಬೈಲ್ IMEI ನಂಬರ್ ಪಡೆದು ಮೊಬೈಲ್ ಪತ್ತೆ ಮುಂದಾದ ಎಸ್‌ಐಟಿ ಮುಂದಾಗಿದೆ.

ನೆನ್ನೆ ರಾತ್ರಿ 9 ಗಂಟೆಯವರೆಗೆ ಪ್ರಜ್ವಲ್ ವಿಚಾರಣೆ ನಡೆಸಿದ್ದ ಎಸ್ಐಟಿ ಅಧಿಕಾರಿಗಳು, ನಂತರ ಪ್ರಜ್ವಲ್‌ಗೆ ಊಟದ ವ್ಯವಸ್ಥೆ ಮಾಡಿದ್ದರು. ರಾತ್ರಿ 11.30ರ ತನಕ ನಿದ್ದೆ ಬರದೇ ಕೂತಿದ್ದ ಪ್ರಜ್ವಲ್‌, ನಂತರ ನಿದ್ದೆಗೆ ಜಾರಿದ್ದರು. ವಿಚಾರಣೆ ವೇಳೆ ಪ್ರಜ್ವಲ್ ರೇವಣ್ಣ‌ ಅಸಮರ್ಪಕ ಉತ್ತರಗಳನ್ನು ನೀಡಿದ ಹಿನ್ನೆಲೆಯಲ್ಲಿ ಇಂದು ಕೂಡ ವಿಚಾರಣೆ ನಡೆಸಿ ಲೈಂಗಿಕ ದೌರ್ಜನ್ಯ ಸಂಬಂಧ ಹೇಳಿಕೆ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ | Bhavani Revanna: ಮಗ ಬಂದ, ಅಮ್ಮ ನಾಪತ್ತೆ! ಮನೆಯಿಂದ ಮಾಯವಾದ ಭವಾನಿ ರೇವಣ್ಣ; ಕಾದು ಕುಳಿತ ಎಸ್‌ಐಟಿ

6 ದಿನಕ್ಕೆ ಮುಗಿಯಲ್ವಾ ಪ್ರಜ್ವಲ್ ಪೊಲೀಸ್ ಕಸ್ಟಡಿ?

ಸದ್ಯ ಹೊಳೆನರಸೀಪುರ ಲೈಂಗಿಕ ದೌರ್ಜನ್ಯ ಕೇಸ್‌ನಲ್ಲಿ ಪ್ರಜ್ವಲ್ ರೇವಣ್ಣರನ್ನು ಪೊಲೀಸ್‌ ಕಸ್ಟಡಿಗೆ ಪಡೆಯಲಾಗಿದೆ. ಕ್ತೈಂ ನಂಬರ್ 107 ಸಂಬಂಧಿಸಿದಂತೆ ಮಾತ್ರ ವಿಚಾರಣೆ ನಡೆಸಲಾಗುತ್ತಿದೆ. ಇದಲ್ಲದೆ ಸಿಐಡಿ ಸೈಬರ್ ಠಾಣೆಯಲ್ಲಿ ಎರಡು ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಮೂರು ಎಫ್‌ಐಆರ್‌ಗಳಿಗೆ ಪ್ರತ್ಯೇಕ ತನಿಖಾಧಿಕಾರಿ ನೇಮಕ ಮಾಡಲಾಗಿದೆ. ಹೀಗಾಗಿ ಹೊಳೆ ನರಸೀಪುರ ಕೇಸ್ ಕಸ್ಟಡಿ ಮುಗಿದ ಬಳಿಕ ಸಿಐಡಿ ಸೈಬರ್ ಠಾಣೆಯ ಎಫ್‌ಐಆರ್ ಮೇರೆಗೆ ಅರೆಸ್ಟ್ ಮಾಡಲಾಗುತ್ತದೆ. ಸಿಐಡಿಯ ಎರಡೂ ಎಫ್‌ಐಆರ್‌ಗಳಲ್ಲಿ ಪ್ರತ್ಯೇಕವಾಗಿ ಪ್ರಜ್ವಲ್‌ನ ಕಸ್ಟಡಿಗೆ ಪಡೆಯಲು ಎಸ್‌ಐಟಿ ನಿರ್ಧಾರ ಮಾಡಿದೆ. ಹೀಗಾಗಿ 10 ರಿಂದ 15 ದಿನ ಪ್ರಜ್ವಲ್ ಪೊಲೀಸ್ ಕಸ್ಟಡಿಯಲ್ಲೇ ಇರುವ ಸಾಧ್ಯತೆ ಇದೆ. ಹೀಗಾಗಿ 6 ದಿನಕ್ಕೇ ಪ್ರಜ್ವಲ್‌ ವಿಚಾರಣೆ ಮುಗಿಯುವುದಿಲ್ಲ ಎನ್ನಲಾಗಿದೆ.

Exit mobile version