Site icon Vistara News

Prajwal Revanna Case: ರೇವಣ್ಣ ಬಸವನಗುಡಿ ನಿವಾಸದಲ್ಲಿ 2ನೇ ಬಾರಿ ಸ್ಥಳ ಮಹಜರು

Prajwal Revanna Case

ಬೆಂಗಳೂರು: ಹಾಸನ ಅಶ್ಲೀಲ ವಿಡಿಯೊ ಪ್ರಕರಣ ಸಂಬಂಧಪಟ್ಟಂತೆ ಎಚ್.ಡಿ. ರೇವಣ್ಣ ನಿವಾಸದಲ್ಲಿ ನಡೆದಿದೆ ಎನ್ನಲಾದ ಅತ್ಯಾಚಾರ ಪ್ರಕರಣದ ತನಿಖೆ ಭಾಗವಾಗಿ ರೇವಣ್ಣ ಅವರ ಬಸವನಗುಡಿಯ ನಿವಾಸದಲ್ಲಿ ಎಸ್‌ಐಟಿ 2ನೇ ಬಾರಿ ಸ್ಥಳ ಮಹಜರು ನಡೆಸಿದೆ. ಕಳೆದ ನಾಲ್ಕು ದಿನಗಳ ಹಿಂದಷ್ಟೇ ಅಧಿಕಾರಿಗಳು ಸ್ಥಳ ಮಹಜರು ನಡೆಸಿದ್ದರು, ಇದೀಗ 2ನೇ ಬಾರಿ ಸಂತ್ರಸ್ತೆ ಸಮ್ಮುಖದಲ್ಲಿ ಎಸ್‌ಐಟಿ ತಂಡ ಮಹಜರು ಕೈಗೊಂಡಿದೆ.

ರೇವಣ್ಣ ಅವರ ಬಸವನಗುಡಿಯ ಶಿವಸ್ಮಿತ ನಿವಾಸಕ್ಕೆ ಎರಡು ಜೀಪ್‌ಗಳಲ್ಲಿ ಎಸ್ಐಟಿ‌ ಅಧಿಕಾರಿಗಳು ತೆರಳಿ ಪರಿಶೀಲನೆ ನಡೆಸಿದ್ದಾರೆ. ಸಂತ್ರಸ್ತೆ ಸಮ್ಮುಖದಲ್ಲಿ ವಿಡಿಯೊ ರೆಕಾರ್ಡ್ ಸಹಿತ ಅಧಿಕಾರಿಗಳು ಮಹಜರು ನಡೆಸಿದ್ದಾರೆ.
ಮನೆಯ ಹಾಲ್, ಪಾರ್ಕಿಂಗ್, ಅಡುಗೆಮನೆ, ಬಾಲ್ಕನಿ ಸೇರಿ ಹಲವು ಕಡೆ ಪರಿಶೀಲನೆ ನಡೆಸಿ, ಸಂತ್ರಸ್ತೆಯಿಂದ ಮಾಹಿತಿ ಪಡೆದಿದ್ದಾರೆ.

ಇದನ್ನೂ ಓದಿ | Prajwal Revanna Case: ಸೋಮವಾರ ರೇವಣ್ಣ ಜಾಮೀನು ಅರ್ಜಿ ವಿಚಾರಣೆ: SIT ವಾದ ಏನು? ವಕೀಲ ನಾಗೇಶ್‌ ಕೌಂಟರ್‌ ಏನು?

ಸಿಐಡಿ ಸೈಬರ್‌ಸೆಲ್‌ನಲ್ಲಿ ದಾಖಲಾಗಿದ್ದ ಅತ್ಯಾಚಾರ ಪ್ರಕರಣದ ಸ್ಥಳವನ್ನು ಎಸ್‌ಐಟಿ ಅಧಿಕಾರಿಗಳು ಮಹಜರು ಮಾಡಿದ್ದಾರೆ. ಈಗಾಗಲೇ ನ್ಯಾಯಾಧೀಶರ ಎದುರು ಕಳೆದ ಶುಕ್ರವಾರ (ಮೇ 3) ಸಿಎಆರ್‌ಪಿಸಿ 164 ಅಡಿಯಲ್ಲಿ ಸಂತ್ರಸ್ತ ಮಹಿಳೆ ತಮ್ಮ ಹೇಳಿಕೆಯನ್ನು ದಾಖಲಿಸಿದ್ದರು. ವಿಚಾರಣೆ ವೇಳೆ ತನ್ನನ್ನು ಹಾಸನದ ಎಂಪಿ ಕ್ವಾರ್ಟರ್ಸ್‌ ಮಾತ್ರವಲ್ಲದೆ ಬೆಂಗಳೂರಿನ ನಿವಾಸದಲ್ಲಿ ಸಹ ಅತ್ಯಾಚಾರ ಎಸಗಿದ್ದಾರೆ ಎಂದು ಹೇಳಿದ್ದರು. ಹೀಗಾಗಿ ಅತ್ಯಾಚಾರ ಪ್ರಕರಣದ ಬಗ್ಗೆ ಬೆಂಗಳೂರಿನಲ್ಲಿರುವ ಎಚ್.ಡಿ. ರೇವಣ್ಣ ಅವರ ಬಸವನಗುಡಿ ನಿವಾಸದಲ್ಲಿ 2ನೇ ಬಾರಿ ಮಹಜರು ಮಾಡಲಾಗಿದೆ.

ಭವಾನಿ ರೇವಣ್ಣಗೆ SIT 2ನೇ ನೋಟಿಸ್‌; ರೇವಣ್ಣ ಫ್ಯಾಮಿಲಿಗೆ ಭಾರಿ ಸಂಕಷ್ಟ!

ಬೆಂಗಳೂರು: ಪ್ರಜ್ವಲ್‌ ರೇವಣ್ಣ (Prajwal Revanna Case) ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹಾಗೂ ಮೈಸೂರಿನ ಕೆ.ಆರ್.‌ ನಗರದ ಸಂತ್ರಸ್ತೆಯನ್ನು ಅಪಹರಣ ಮಾಡಿದ ಕೇಸ್‌ ದಿನೇ ದಿನೆ ಜಟಿಲವಾಗುತ್ತಿದೆ. ಇನ್ನು ಈ ಪ್ರಕರಣಗಳ ಸಂಬಂಧ ಎಚ್‌.ಡಿ. ರೇವಣ್ಣ (HD Revanna) ಅವರ ಪತ್ನಿ ಭವಾನಿ ರೇವಣ್ಣ (Bhavani Revanna) ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಎಸ್‌ಐಟಿ ಎರಡನೇ ನೋಟಿಸ್ ನೀಡಿದೆ.

ಮೊದಲ ನೋಟಿಸ್ ಉತ್ತರಿಸದ ಹಿನ್ನೆಲೆಯಲ್ಲಿ ಎರಡನೇ ನೋಟಿಸ್ ಜಾರಿ ಮಾಡಲಾಗಿದೆ. ರೇವಣ್ಣ ಮೇಲೆ ಕೇಳಿ ಬಂದಿರುವ ಅಪಹರಣ ಪ್ರಕರಣದಲ್ಲಿ ಕೇಸ್‌ನಲ್ಲಿ ಕುಮ್ಮಕ್ಕು ಕೊಟ್ಟ ಆರೋಪವನ್ನು ಭವಾನಿ ರೇವಣ್ಣ ಹೊತ್ತಿದ್ದಾರೆ. ಈ ಸಂಬಂಧ ಹಲವಾರು ಪ್ರಶ್ನೆಗಳನ್ನು ಕೇಳಲು ಎಸ್‌ಐಟಿ ಸಿದ್ಧವಾಗಿದೆ. ಆದರೆ, ಭವಾನಿ ವಿಚಾರಣೆಗೆ ಹಾಜರಾಗದೆ ತಪ್ಪಿಸಿಕೊಳ್ಳುತ್ತಿದ್ದಾರೆ. ಈ ಬಾರಿಯೂ ಭವಾನಿ ವಿಚಾರಣೆಗೆ ಹಾಜರಾಗದಿದ್ದರೆ ಎಸ್‌ಐಟಿ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಲು ಸಿದ್ಧತೆ ನಡೆಸಿದೆ. ಈ ಹಿನ್ನೆಲೆಯಲ್ಲಿ ರೇವಣ್ಣ ಕುಟುಂಬಕ್ಕೆ ಮತ್ತಷ್ಟು ಸಂಕಷ್ಟ ಎದುರಾಗಲಿದೆ.

ಈಗಾಗಲೇ ಕಿಡ್ನ್ಯಾಪ್ ಪ್ರಕರಣದಲ್ಲಿ ಎಚ್‌.ಡಿ. ರೇವಣ್ಣ ಜೈಲು ಸೇರಿದ್ದಾರೆ. ಜಾಮೀನು ಸಿಗುವವರೆಗೂ ರೇವಣ್ಣಗೆ ಬಿಡುಗಡೆ ಭಾಗ್ಯ ಇಲ್ಲ. ಆದರೆ, ಎಸ್‌ಐಟಿ ಪರ ವಕೀಲರು ಯಾವುದೇ ಕಾರಣಕ್ಕೂ ಎಚ್.ಡಿ. ರೇವಣ್ಣ ಅವರಿಗೆ ಬೇಲ್‌ ಕೊಡಬಾರದು ಎಂದು ಮನವಿ ಮಾಡಿದ್ದಾರೆ. ಇವರು ಪ್ರಭಾವಿ ರಾಜಕಾರಣಿಯಾಗಿದ್ದು, ಬೇಲ್ ಸಿಕ್ಕರೆ ಸಾಕ್ಷಿ ನಾಶ ಮಾಡುತ್ತಾರೆ ಎಂದು ವಾದ ಮಂಡಿಸಿದ್ದಾರೆ.

ಇನ್ನು ಪ್ರಜ್ವಲ್ ರೇವಣ್ಣ ಅವರ ಬಂಧನಕ್ಕೆ ಮೊದಲು ಎಚ್.ಡಿ. ರೇವಣ್ಣ ಅವರ ಬಿಡುಗಡೆ ಅಸಾಧ್ಯ ಎಂದು ಹೇಳಲಾಗುತ್ತಿದೆ. ಪ್ರಜ್ವಲ್ ಎಸ್ಐಟಿಗೆ ಸಿಗುವವರೆಗೂ ರೇವಣ್ಣ ಅವರಿಗೆ ಜಾಮೀನು ಅನುಮಾನವಾಗಿದೆ. ಇನ್ನು ಪ್ರಜ್ವಲ್ ಯಾವುದೇ ಕ್ಷಣದಲ್ಲಿ ದೇಶಕ್ಕೆ ಬಂದರೂ ಎಸ್ಐಟಿ ಬಂಧಿಸುವುದು ಪಕ್ಕಾ ಆಗಿದೆ.

Exit mobile version