ಬೆಂಗಳೂರು: ಲೈಂಗಿಕ ದೌರ್ಜನ್ಯ (Physical abuse) ಆರೋಪ ಎದುರಿಸುತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ (Prajwal Revanna case) ವಿರುದ್ಧ ಒಟ್ಟು ಮೂರು ಅತ್ಯಾಚಾರ ಕೇಸ್‌ಗಳು ದಾಖಲಾಗಿವೆ. ಆದರೆ ಅವರು ವಿದೇಶದಲ್ಲಿ ತಲೆಮರೆಸಿಕೊಂಡು ಇರುವ ಕಾರಣ ಈಗಾಗಲೇ ಬ್ಲ್ಯೂ ಕಾರ್ನರ್ ನೋಟಿಸ್ ನೀಡಲಾಗಿತ್ತು. ಶತಾಯಗತಾಯ ಅವರನ್ನು ಬಂಧಿಸಿ ಕರೆತರಲೇಬೇಕು ಎಂದು ತೀರ್ಮಾನಿಸಿರುವ ಎಸ್‌ಐಟಿ ಈಗ ವಿದೇಶದಿಂದ ಪ್ರಜ್ವಲ್ ಅವರನ್ನು ಕರೆತರಲು ವಿಶೇಷ ತಂಡವನ್ನು ರಚಿಸಿದೆ.
ಓರ್ವ ಎಸ್‌ಪಿ, ಮೂವರು ಇನ್ಸ್‌ಪೆಕ್ಟರ್ ಹಾಗೂ ಮೂವರು ಜನ ಸಬ್ ಇನ್ಸ್‌ಪೆಕ್ಟರ್ ಒಳಗೊಂಡ ತಂಡವನ್ನು ರಚಿಸಲಾಗಿದೆ. ಯೂರೋಪ್ ಬಳಿ ಇರುವ ಹಂಗೇರಿ ತಲುಪಲಿರುವ ಕರ್ನಾಟಕ ಪೊಲೀಸರು ಅಲ್ಲಿ ಹುಡುಕಾಟ ನಡೆಸಲಿದ್ದಾರೆ. ಈಗಾಗಲೇ ಭಾರತ ಹಾಗೂ ಜರ್ಮನಿ ಬಳಿ ಮ್ಯೂಚುಯಲ್ ಲೀಗಲ್ ಅಸಿಸ್ಟೆಂಟ್ ಟ್ರೀಟಿ (MLAT) ಬಗ್ಗೆ ಪರಿಶೀಲನೆ ನಡೆಸಿದ ಅಧಿಕಾರಿಗಳು ಸಿಬಿಐ ಸಹಾಯದಿಂದ ಇಂಟರ್ ಪೋಲ್ ಅಧಿಕಾರಿಗಳ ಜತೆ ಸಹ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ.
ಪ್ರಜ್ವಲ್ ಬಳಿ ರಾಜತಾಂತ್ರಿಕ ಪಾಸ್‌ಪೋರ್ಟ್ ಇರುವುದರಿಂದ ಅವರು ಕೆಲವು ದೇಶಗಳಿಗೆ ವೀಸಾ ಇಲ್ಲದೆ ಪ್ರಯಾಣಿಸಿದ್ದಾರೆ ಎನ್ನಲಾಗಿದ್ದು, ಈ ಬಗ್ಗೆ ಎಸ್ಐಟಿ ವಿಶೇಷ ತನಿಖಾ ದಳ ಮಾಹಿತಿ ಕಲೆ ಹಾಕಿದೆ. ಒಂದು ವೇಳೆ ಇಂಡಿಯನ್ ಎಂಬಸ್ಸಿ ಕಡೆಯಿಂದ ಜರ್ಮನಿ ಎಂಬಸ್ಸಿ ಜತೆಗೆ ಮಾತುಕತೆ ನಡೆದರೆ ಖಂಡಿತವಾಗಲೂ ಪ್ರಜ್ವಲ್ ರೇವಣ್ಣ ಎಸ್ಐಟಿ ತೆಕ್ಕೆಗೆ ಸಿಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ರೆಡ್ ಕಾರ್ನರ್ ನೋಟಿಸ್ ಜಾರಿಗೆ ಚಿಂತನೆ
ಈಗಾಗಲೇ ಪ್ರಜ್ವಲ್ ಪತ್ತೆಗೆ ಬ್ಲ್ಯೂ ಕಾರ್ನರ್ ನೋಟಿಸ್ ಹೊರಡಿಸಿದ ಅಧಿಕಾರಿಗಳು ರೆಡ್ ಕಾರ್ನರ್ ನೋಟಿಸ್ ಜಾರಿಗೆ ಚಿಂತನೆ ನಡೆಸಿದ್ದಾರೆ. ಇಂದು ಅಥವಾ ನಾಳೆ ರೆಡ್ ಕಾರ್ನರ್ ನೋಟಿಸ್ ಸರ್ವ್ ಮಾಡಲು ಸಿದ್ಧತೆ ನಡೆಯುತ್ತಿದೆ. ಕೇಂದ್ರ ಗೃಹ ಸಚಿವಾಲಯದ ಜತೆ ಚರ್ಚೆ ನಡೆಸಿ ಇಂಟರ್ ಪೋಲ್ ಮೂಲಕ ರೆಡ್ ಕಾರ್ನರ್ ನೋಟಿಸ್ ಸರ್ವ್ ಮಾಡಲಾಗುತ್ತದೆ.
ರೆಡ್ ಕಾರ್ನರ್ ನೋಟಿಸ್ ಜಾರಿಯಾದರೆ ಏನಾಗುತ್ತೆ?
ಪ್ರಜ್ವಲ್ ರೇವಣ್ಣ ಬಂಧನಕ್ಕೆ ರೆಡ್ ಕಾರ್ನರ್ ನೋಟಿಸ್ ಹೊರಡಿಸಲು ಮನವಿ ಮಾಡಲು ಎಸ್‌ಐಟಿ ಚಿಂತನೆ ನಡೆಸಿದೆ. ಇದಕ್ಕೆ ಮೊದಲು ಸಿಬಿಐ ಸಂಸ್ಥೆಯು ಇಂಟರ್‌ಪೋಲ್ ಅನ್ನು ಸಂಪರ್ಕಿಸಿ ರೆಡ್ ಕಾರ್ನರ್ ನೋಟಿಸ್‌ಗೆ ಬೇಡಿಕೆ ಸಲ್ಲಿಸಬೇಕು. ರೆಡ್ ಕಾರ್ನರ್ ನೋಟಿಸ್ ಜಾರಿಯಾದರೆ, ಯಾವ ದೇಶದಲ್ಲಿದ್ದರೂ ಆ ದೇಶದ ಪೊಲೀಸರು ಆರೋಪಿಯನ್ನು ಬಂಧಿಸಿ ಸಂಬಂಧಪಟ್ಟ ದೇಶಕ್ಕೆ ಮಾಹಿತಿ ನೀಡುತ್ತಾರೆ. ನಂತರ ಇಲ್ಲಿನ ಪೊಲೀಸರು ಹೋಗಿ ಆತನನ್ನು ಕರೆತರುತ್ತಾರೆ. ಹೀಗಾಗಿ ಪ್ರಜ್ವಲ್ ವಿರುದ್ಧ ಈ ಕ್ರಮಕ್ಕೆ ಎಸ್‌ಐಟಿ ಅಧಿಕಾರಿಗಳು ಮುಂದಾಗಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: Prajwal Revanna case: ಪ್ರಜ್ವಲ್ ಮೇಲೆ ಒಟ್ಟು ಮೂರು FIR; ಮೂರರಲ್ಲೂ ವಾಂಟೆಡ್ ಲಿಸ್ಟ್‌ನಲ್ಲಿ ಸಂಸದ!
ಬ್ಲ್ಯೂ ಕಾರ್ನರ್ ನೋಟಿಸ್ ಜಾರಿಯಾದ ಬಳಿಕ ಇಂಟರ್‌ಪೋಲ್ ಇತರ ಕಡೆಗಳಿಗೂ ಆರೋಪಿಯ ಮಾಹಿತಿಯನ್ನು ಕಳಿಸಿ, ಆರೋಪಿಯ ನೆಲೆಯ ಬಗ್ಗೆ ಮಾಹಿತಿಯನ್ನು ಸಂಗ್ರಹಿಸುತ್ತದೆ. ಆರೋಪಿ ಯಾವ ದೇಶದಲ್ಲಿ ಇದ್ದಾರೆ? ಎಲ್ಲಿ ಲೊಕೇಟ್ ಆಗಿದ್ದಾರೆ ಅನ್ನುವ ಚಲನವಲನಗಳನ್ನು ಈ ಮೂಲಕ ಪತ್ತೆ ಮಾಡುತ್ತಾರೆ. ಬಳಿಕ ಸಿಬಿಐಗೆ ಆರೋಪಿಯ ಚಲನವಲನ ಬಗ್ಗೆ ಮಾಹಿತಿ ನೀಡುತ್ತಾರೆ. ಸಿಬಿಐ ಮೂಲಕ ಎಸ್ಐಟಿಗೆ ಪ್ರಜ್ವಲ್ ಎಲ್ಲಿದ್ದಾರೆ ಅನ್ನುವ ಮಾಹಿತಿ ಸಿಗುತ್ತದೆ. ಹೀಗಾಗಿ ಈ ನೋಟಿಸ್ ನೀಡಲಾಗಿದ್ದು, ಇದು ಸುಳಿವು ಪಡೆಯಲು ಮುಖ್ಯವಾಗಿದೆ. ಆದರೆ ಇದರಿಂದ ಪ್ರಜ್ವಲ್ ಬಗ್ಗೆ ಸರಿಯಾದ ಮಾಹಿತಿ ಸಿಗುತ್ತಿಲ್ಲ ಎನ್ನಲಾಗಿದೆ. ಹೀಗಾಗಿ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಲು ಸಿದ್ಧತೆ ನಡೆಸಲಾಗಿದೆ.